ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಿಗೆ ರುಚಿ ತಣಿಸಿದ 100 ದೇಸಿ ಖಾದ್ಯಗಳು

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ನೀರುದೋಸೆ, ರಾಗಿ ರೊಟ್ಟಿ, ಸಜ್ಜೆರೊಟ್ಟಿ, ಅವರೇಕಾಯಿ ಮೇಲೋಗರ, ಉಚ್ಚೆಳ್ಳು ಚಟ್ನಿ, ಜೋಳದ ವಡೆ, ವಿವಿಧ ಬಗೆಯ ಹೋಳಿಗೆಗಳು, ದೋಸೆಗಳು, ಕಡುಬು ಇನ್ನೂ ಹಲವು ಬಗೆಯ ದೇಸಿ ಖಾದ್ಯಗಳು ಎಂ.ಟಿ.ಆರ್. ಆಯೋಜಿಸಿದ್ದ ‘ಕರುನಾಡು ಸ್ವಾದ’ ಆಹಾರ ಉತ್ಸವದಲ್ಲಿ ಆಹಾರ ಪ್ರಿಯರ ನಾಲಿಗೆ ತಣಿಸಿದವು.

ಕೋರಮಂಗಲ ಬಳಿಯ ಸೇಂಟ್ ಜಾನ್ಸ್‌ ಕಾಲೇಜಿನ ಸಭಾಂಗಣದಲ್ಲಿ  ಆಯೋಜಿಸಿದ್ದ ಈ ಆಹಾರ ಮೇಳದಲ್ಲಿ ರಾಜ್ಯದ ಆರು ಪ್ರದೇಶಗಳ ಬರೋಬ್ಬರಿ 100 ಬಗೆಯ ಖಾದ್ಯಗಳನ್ನು ಉಣಬಡಿಸಲಾಯಿತು.

ರಾಜ್ಯದ ಭಿನ್ನ ಭಿನ್ನ ಪ್ರದೇಶಗಳ ಖಾದ್ಯಗಳ ಸವಿಯುತ್ತ ನಿಂತಿದ್ದ ಮಂದಿ,  ರುಚಿಯ ಜೊತೆಗೆ ರಾಜ್ಯದ ವೈವಿಧ್ಯತೆಯನ್ನು ನೋಡಿ ಸಂಭ್ರಮಿಸುತ್ತಿದ್ದರು.
ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಕೊಡಗು, ಬೀದರ್‌, ಗದಗ್‌, ಕಲಬುರ್ಗಿ, ಬೆಳಗಾವಿ, ಧಾರವಾಡ, ಬಿಜಾಪುರ ಜಿಲ್ಲೆಗಳ ಸಾಂಪ್ರದಾಯಿಕ ಆಹಾರಗಳು  ಉತ್ಸವದಲ್ಲಿ ಆಹಾರ ಪ್ರಿಯರ ನಾಲಿಗೆ ತಣಿಸಿದವು.

ಸ್ಥಳೀಯ ಉಡುಪುಗಳನ್ನು ಧರಿಸಿ ತಮ್ಮ ಭಾಗದ ಆಹಾರಗಳನ್ನು ಪ್ರೀತಿಯಿಂದ ಬಡಿಸುತ್ತಿದ್ದ ಮಹಿಳೆಯರು, ಯುವಕರು ಉತ್ಸವಕ್ಕೆ ಹುರುಪು ತಂದಿದ್ದರು. ‘ಈ ಖಾದ್ಯದ ಟೇಸ್ಟ್‌ ನೋಡಿ’ ಎಂದು ಅವರು ಬಡಿಸುತ್ತಿದ್ದ ಉಪಚಾರ ರುಚಿಯ ಜೊತೆಗೆ ಮಾಹಿತಿಯನ್ನೂ ನೀಡುತ್ತಿತ್ತು. ಉತ್ತರ ಕಾರ್ನಾಟಕ ಹಾಗೂ ಕರಾವಳಿ ಪ್ರದೇಶದ ಖಾದ್ಯಗಳಿಗೆ ಹೆಚ್ಚಿನ ಬೇಡಿಕೆ ಉತ್ಸವದಲ್ಲಿ ಕಂಡು ಬಂದಿತು.


ತಮ್ಮಿಷ್ಟದ ಆಹಾರಗಳನ್ನು ಸವಿಯುತ್ತಾ, ಅಲ್ಲಿಯೇ ಸುಳಿದಾಡುತ್ತಿದ್ದ ಎಂ.ಟಿ.ಆರ್‌ನ ವ್ಯವಸ್ಥಾಪಕ ಸಿಬ್ಬಂದಿಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಜನ.

‘ನಮ್ಮ ಊರಿನ ಆಹಾರವನ್ನು ಬೇರೆಯವರಿಗೆ ತಿನ್ನಿಸಲು ಬಹಳ ಖುಷಿ ಎನ್ನಿಸುತ್ತದೆ’ ಎಂದರು ಬೆಳಗಾವಿಯ ರಂಗವ್ವ ರೊಟ್ಟಿ ತಟ್ಟುತ್ತಾ. ‘ಸಾಂಪ್ರದಾಯಿಕ ಆಹಾರ ಪದ್ಧತಿ ಮರೆಯಾಗುತ್ತಿರುವ ಕಾಲದಲ್ಲಿ ಈ ರೀತಿಯ ದೇಸೀ ಆಹಾರ ಉತ್ಸವಗಳು  ಅವಶ್ಯಕ’ ಎಂದವರು ಎಂಟಿಆರ್‌ನ ಸಂಜಯ್‌ ಶರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT