ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಕರಾವಳಿ ದರ್ಶನ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಅಲ್ಲಿ ಇಡೀ ಕರಾವಳಿಯೇ ನಗರಕ್ಕೆ ಬಂದಂತಿತ್ತು. ಒಂದೆಡೆ ಕರಾವಳಿಯ ಸಾಂಪ್ರದಾಯಿಕ ಆಟಗಳಾದ ಕೆರೆ–ದಡ, ಕಾಯಿಮಿಳ್ಳಿ ಆಟ, ಒಂಟಿಕಾಲಿನ ಓಟ, ಗೇರುಬೀಜದ ಆಟ, ಬುಟ್ಟಿ ಓಟ, ಹಗ್ಗಜಗ್ಗಾಟ, ಸಪ್ತಪದಿ ಆಟ, ಹಾಳೆ ಕಡ್ಡಿ ಎಳೆಯುವುದು, ಹನಿಬೊಂಡ ಹಿಡಿಯುವುದು, ಕಂಬಳದ ಓಟ ಮುಂತಾದ ಸ್ಪರ್ಧೆಗಳು ನಡೆಯುತ್ತಿತ್ತು.

ಇನ್ನೊಂದೆಡೆ ಅಪ್ಪಟ ಕರಾವಳಿಯ ತಂಪು ಪಾನೀಯಗಳಾದ  ಪುನರ್‌ಪುಳಿ, ತಂಪಿನಬೀಜ, ಹೆಸರುಕಾಳು, ಎಳ್ಳು, ರಾಗಿ ಜ್ಯೂಸ್‌ಗಳನ್ನು ಕುಡಿದು ಹೊಟ್ಟೆ ತಂಪು ಮಾಡಿಕೊಳ್ಳುತ್ತಿದ್ದ ಜನ.

ಮತ್ತೊಂದೆಡೆ ಕರಾವಳಿಯ ಸಾಂಪ್ರದಾಯಿಕ ತಿಂಡಿಗಳಾದ ಬನ್ಸ್‌, ಗೋಳಿಬಜೆ,  ಬಿಸ್ಕುಟು ರೊಟ್ಟಿ, ನೀರುದೋಸೆ, ಕೊಟ್ಟೆ ಕಡುಬು, ಪತ್ರೊಡೆ, ಒತ್ತು ಶ್ಯಾವಿಗೆ, ಎಳ್ಳಿನುಂಡೆ ಸವಿಯಲು ಮುಗಿಬಿದ್ದ ಜನ.

ಜಯನಗರದ 5ನೇ ಬ್ಲಾಕ್‌ನಲ್ಲಿರುವ  ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್‌ ಆಯೋಜಿಸಲಾಗಿದ್ದ  ಎರಡು ದಿನಗಳ ‘ನಮ್ಮೂರ ಹಬ್ಬ’ ದಲ್ಲಿ ಭಾನುವಾರ  ಕಂಡು ಬಂದ ದೃಶ್ಯಗಳಿವು.

ಉದ್ಯಮ, ಉದ್ಯೋಗ ಎಂದು  ನಾನಾ ಕಾರಣಗಳಿಂದ ಮಂಗಳೂರು, ಉಡುಪಿ, ಉತ್ತರಕನ್ನಡ ಹೀಗೆ ಕರಾವಳಿಯಿಂದ   ನಗರಕ್ಕೆ ಬಂದು ನೆಲೆಸಿರುವ ಸಾವಿರಾರು ಕುಟುಂಬಗಳಿವೆ. ಇಲ್ಲೇ ನೆಲೆಸಿದ್ದರೂ ಅವರು  ತಮ್ಮ ಭಾಷೆ, ಸಂಸ್ಕೃತಿ, ಆಹಾರ, ಪದ್ಧತಿಗಳನ್ನು ಬಿಟ್ಟಿಲ್ಲ.  ‘ನಮ್ಮೂರ ಹಬ್ಬ’ದ ನೆಪದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರು ಎರಡು ದಿನ ತಮ್ಮೂರನ್ನೇ ನಗರಕ್ಕೆ ತಂದಂತೆ ಸಂಭ್ರಮಿಸಿದರು.

ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ‘ಮಕ್ಕಳಾಟ’, ದೊಡ್ಡವರ ಹಗ್ಗಜಗ್ಗಾಟ ಸ್ಪರ್ಧೆ ‘ದೊಡ್ಡಾಟ’, ಆದರ್ಶ ದಂಪತಿ ಸ್ಪರ್ಧೆ ‘ಜೋಡಾಟ’ದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಮ್ಮೂರ ಸಾಂಸ್ಕೃತಿಕ ಹಬ್ಬದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು  ನಿರಂತರವಾಗಿ ನಡೆದುವು.

ಪೆಂಡಾಲ್‌ನ ಪರದೆಯ ಮೇಲೆ ಜೋಡಿಸಿದ್ದ ಯಕ್ಷಗಾನದ ಕಿರೀಟದ ಒಳಗೆ ತಲೆಯಿಟ್ಟು ಫೋಟೊ ತೆಗೆಸಿಕೊಂಡು ಯುವಜನರು ಸಂಭ್ರಮಿಸಿದರು. ದೋಣಿಯ  ಒಳಗೆ ನಿಂತು ಅಲ್ಲೇ ಹುಟ್ಟು ಹಾಕುತ್ತಾ ದೋಣಿಯಲ್ಲಿ ಸಾಗಿದವರು ಅನೇಕರು. ಬತ್ತ ಶೇಖರಿಸುವ ಹುಲ್ಲಿನ ಪುಟ್ಟ ಕಣಜ,  ಹೂವಿನಿಂದ ಶೃಂಗಾರಗೊಂಡ ಜಾತ್ರೆಯ ರಥ... ಇವೆಲ್ಲ ಯುವಕರ ಸೆಲ್ಫಿ ಸೆರೆಹಿಡಿಯುವ ತಾಣವಾಗಿತ್ತು.

ಕಾರ್ಟೂನ್‌ ಹಬ್ಬ
ಹಬ್ಬದ ಮೊದಲ ದಿನ ಶನಿವಾರ ಮೂರು ವರ್ಷದೊಳಗಿನ ಮಕ್ಕಳಿಗಾಗಿ ‘ಮುದ್ದು ರಾಧೆ ಮುದ್ದು ಕೃಷ್ಣ’ ವೇಷಭೂಷಣ ಸ್ಪರ್ಧೆ ನಡೆಯಿತು. ಸಂಜೆ  ‘ಕರಾವಳಿ ವೈಭವ’ ನೃತ್ಯ ರೂಪಕ, ಸುಪ್ರಿಯಾ ರಘುನಂದನ್‌, ಸಾನ್ವಿ ಶೆಟ್ಟಿ, ಅಭಿನವ ಭಟ್‌ ಅವರಿಂದ ‘ಹಾಡುಹಬ್ಬ’, ರಾಘವೇಂದ್ರ ಹೆಗಡೆ ಅವರಿಂದ ‘ಮರಳು ಚಿತ್ರಕಲೆ’, ಚಂದನ್‌ ಶೆಟ್ಟಿ ಅವರಿಂದ ‘ಕನ್ನಡ ರ್‌್ಯಾಪ್‌’ ಕಾರ್ಯಕ್ರಮಗಳು  ನಡೆದುವು.

ನಮ್ಮೂರ ಹಬ್ಬದಲ್ಲಿ ಆಯೋಜಿಸಿದ್ದ ಕಾರ್ಟೂನ್‌ ಹಬ್ಬವನ್ನು ‘ಪ್ರಜಾವಾಣಿ’ಯ ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿ ಉದ್ಘಾಟಿಸಿದರು. ಕುಂದಾಪುರದ 20ಕ್ಕೂ ಹೆಚ್ಚು ಕಲಾವಿದರ ವ್ಯಂಗ್ಯಚಿತ್ರಗಳ ಪ್ರದರ್ಶನ ವೀಕ್ಷಕರ ಮನಸೂರೆಗೊಂಡವು.

ಸ್ಥಳದಲ್ಲಿಯೇ ವ್ಯಂಗ್ಯಚಿತ್ರಕಾರರಿಂದ ತಮ್ಮ ಕ್ಯಾರಿಕೇಚರ್‌ಗಳನ್ನು ಚಿತ್ರಿಸಿಕೊಂಡು  ಜನರು ಸಂಭ್ರಮಿಸಿದರು. ಸೆಲ್ಫಿ ಕಾರ್ನರ್‌, ಕಾರ್ಟೂನ್‌ಗಳಿಗೆ ಅಡಿಬರಹ ಬರೆಯುವ  ಸ್ಪರ್ಧೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT