ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಮೀರಿದವರಿಗೆ ‘ಅನ್ವೇಷಣೆ’ಗೊಂದು ವೇದಿಕೆ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ವಿವಾಹ ಪ್ರತಿಯೊಬ್ಬರ ಜೀವನದ ತಿರುವು. ಹಲವರು ಮದುವೆಯ ಸಹವಾಸವೇ ಬೇಡ ಎಂದೋ, ಸೂಕ್ತ ವಯಸ್ಸಿನಲ್ಲಿ ವಧು/ವರ ಹೊಂದಾಣಿಕೆಯಾಗದೆಯೋ, ಕೌಟುಂಬಿಕ ಕಾರಣಕ್ಕೋ ಮದುವೆಯಾಗದೆ ಉಳಿಯುವುದುಂಟು.

ಹೀಗೆ, ವಯಸ್ಸು ಮೀರಿದರೂ ಮದುವೆಯಾಗದೆ ಉಳಿದವರಿಗಾಗಿ ಬಾಳಸಂಗಾತಿಯನ್ನು ಹುಡುಕಿಕೊಡುವ ಉದ್ದೇಶದಿಂದ ಕರ್ನಾಟಕ ಸಹೃದಯರ ಸೇವಾ ಪ್ರತಿಷ್ಠಾನ ಮತ್ತು ರಾಜಧಾನಿ ಮ್ಯಾರೇಜ್‌ ಬ್ಯೂರೊ ಇದೇ 25ರಂದು ‘50 ದಾಟಿದವರಿಗೆ ಮದುವೆ ಸಂಬಂಧ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ.

ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಈ ಎರಡೂ ಸಂಘಟನೆಗಳು ಕಳೆದ ವರ್ಷ ಇಂತಹುದೊಂದು ಪ್ರಯತ್ನವನ್ನು ಶುರು ಮಾಡಿವೆ. ಈ ಬಾರಿ ರಂಗನಾಥ ಚಾರಿಟೆಬಲ್ ಟ್ರಸ್ಟ್‌ ಸಹಕಾರದಲ್ಲಿ ವಧು ಮತ್ತು ವರರ ಮುಖಾಮುಖಿ  ಕಾರ್ಯಕ್ರಮ ಏರ್ಪಡಿಸಿವೆ.

‘ಬಾಳಸಂಗಾತಿ ಆಯ್ಕೆ ಬಯಸುವ ಯಾವುದೇ ಧರ್ಮ, ಜಾತಿಗಳ  ಆಕಾಂಕ್ಷಿಗಳು ಇದರಲ್ಲಿ ಭಾಗವಹಿಸಬಹುದು. ಸ್ವವಿವರ ಮತ್ತು ಪೂರ್ಣ ಭಾವಚಿತ್ರವನ್ನು ತಂದು ನೋಂದಣಿ ಮಾಡಿಸಿಕೊಳ್ಳಬೇಕು ಎಂದು  ಆಯೋಜಕರು ಹೇಳುತ್ತಾರೆ.

‘ಒಂದೂವರೆ ವರ್ಷದ ಹಿಂದೆ ಪತ್ನಿ  ಮೃತಪಟ್ಟಳು. ನನಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆಯಾಗಿ ಬೇರೆ ಇದ್ದಾರೆ. ನಾನು ನ್ಯಾಯಬೆಲೆ ಅಂಗಡಿಯೊಂದನ್ನು ನಡೆಸುತ್ತೇನೆ. ಏಕಾಂಗಿ ಜೀವನ ಸಾಕಾಗಿದೆ.

ಬದುಕಿಗೆ ಒಂದು ಪೂರ್ಣತೆ ಬೇಕು ಅನಿಸುತ್ತಿದೆ. ನನ್ನ ಕಷ್ಟು ಸುಖ ತಿಳಿಯಬಲ್ಲ ಸಂಗಾತಿಯನ್ನು ಹುಡುಕಿಕೊಳ್ಳಲು  ಹೆಸರು ನೋಂದಣಿ ಮಾಡಿಸಿಕೊಂಡಿದ್ದೇನೆ’ ಎನ್ನುತ್ತಾರೆ 55 ವರ್ಷ ತಮ್ಮಣ್ಣ ಗೌಡ.

ಐದು ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಪತ್ನಿಯನ್ನು ಕಳೆದುಕೊಂಡಿರುವ 66ರ ಷಡಕ್ಷರಯ್ಯ ಇವರೂ ಈ ಕಾರ್ಯಕ್ರಮದಲ್ಲಿ ವಧು ಅನ್ವೇಷಣೆ ಮಾಡಲಿದ್ದಾರೆ.

‘ನಾನು ಸಾತನೂರಿನವನು. ನನ್ನ ಗಂಡು ಮತ್ತು ಹೆಣ್ಣು ಮಗಳಿಗೆ ಮದುವೆಯಾಗಿದೆ. ಮಗ ಮದುವೆಯಾದ ನಂತರ ದೂರವಾಗಿದ್ದಾನೆ.  ಏಕಾಂಗಿಯಾಗಿರುವ ನನಗೆ ಸಂಗಾತಿ ಬೇಕಾಗಿದೆ’ ಎನ್ನುತ್ತಾರೆ ಅವರು.

ಮಂಡ್ಯದ 45 ವರ್ಷದ ಲಕ್ಷ್ಮೀದೇವಿ ಅವರು ತಮ್ಮ ಪತಿಯಿಂದ ದೂರವಾಗಿ 10 ವರ್ಷ ಕಳೆದಿದ್ದು ಮಗನೊಂದಿಗೆ ಮಲ್ಲೇಶ್ವರದಲ್ಲಿ ನೆಲೆಸಿದ್ದಾರೆ. ‘ಒಂಟಿ ಮಹಿಳೆಯ ನೋವು ಏನು ಎಂಬುದು ಅನುಭವಿಸಿದವರಿಗೆ ಗೊತ್ತು. ಯಾವುದಾದರೂ ಮನೆ ಬಾಡಿಗೆಗೆ ಕೇಳಲು ಹೋದರೆ ಗಂಡ ಏನು ಮಾಡುತ್ತಾರೆ ಎಂದು ಕೇಳುತ್ತಾರೆ.

ಗಂಡ ಇಲ್ಲ ಎಂದರೆ ಯಾಕೆ ಇಲ್ಲ ಎಂದು ಪ್ರಶ್ನಿಸುತ್ತಾರೆ. ಆದ್ದರಿಂದ ಮತ್ತೆ ಮದುವೆಯಾಗಬೇಕೆಂದಿದ್ದೇನೆ’ ಎಂಬುದು ಅವರ ವಿವರಣೆ.
ಹೀಗೆ ನಡುವಯಸ್ಸಿನ ಏಕಾಂಗಿಗಳಿಗೆ ಬಾಳಸಂಗಾತಿಗಳನ್ನು ಆರಿಸಿಕೊಳ್ಳಲು ಒಂದು ವೇದಿಕೆಯಾಗಲಿದೆ ‘ಮುಖಾಮುಖಿ’.
ಮಾಹಿತಿಗೆ: 95913 79349.

ಜ. 25ರಂದು ಕಾರ್ಯಕ್ರಮ
ಸ್ಥಳ: ಚಂದ್ರ ಶೇಖರ ಆಜಾದ್‌
ಆಟದ ಮೈದಾನ, ಮಲ್ಲೇಶ್ವರ
ಸಮಯ: ಬೆಳಿಗ್ಗೆ 9 ರಿಂದ ಸಂಜೆ 3.

*
ಇದೊಂದು ಸ್ನೇಹಹಸ್ತ
ಕಳೆದ ವರ್ಷದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಆದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಲವರು ಹೆಸರು ನೋಂದಾಯಿಸಿದ್ದಾರೆ. ಅವರ ಏಕಾಂತದ ಬದುಕು ಕೊನೆಯಾಗಬೇಕು ಎಂಬುದೇ ನಮ್ಮ ಉದ್ದೇಶ. ಹೊಸ ಬಾಳಿಗೆ ಸಂಗಾತಿ ಸಿಕ್ಕಿದರೆ ಬದುಕು ಪೂರ್ಣವಾಗುತ್ತದೆ. ಇದೊಂದು ಸ್ನೇಹ ಹಸ್ತವಷ್ಟೇ.
-ಗುಡಿಬಂಡೆ ಮಧುಸೂಧನ,
ಸಹೃದಯರ ಸೇವಾ ಪ್ರತಿಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT