ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಬೆಂಗಳೂರು ಮತ್ತೆ ಗಾರ್ಡನ್‌ಸಿಟಿ ಆಗಬೇಕು’

ನಾ ಕಂಡ ಬೆಂಗಳೂರು
Last Updated 23 ಜನವರಿ 2017, 9:10 IST
ಅಕ್ಷರ ಗಾತ್ರ

ನಾನು ಬೆಂಗಳೂರಿಗೆ ಬಂದು 20  ವರ್ಷ ಆಗ್ತಾ ಇದೆ. ಲಂಡನ್‌ನಲ್ಲಿ ತರಬೇತಿ ಪಡೆದು ಕೋಲ್ಕತ್ತಾದಲ್ಲಿ ನೆಲೆಸಿದ್ದೆ. ಅಲ್ಲಿ ಬಿ.ಎಂ. ಬಿರ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ನನಗೆ ಬೆಂಗಳೂರಿಗೆ ಬರುವ ಇರಾದೆಯೇ ಇರಲಿಲ್ಲ. ಕೋಲ್ಕತ್ತಾ ನಂಗೆ ತುಂಬಾ ಇಷ್ಟದ ನಗರ. ಹಾಗಾಗಿ ಅಲ್ಲಿಯೇ ಇರಲು ನಿರ್ಧರಿಸಿದ್ದೆ.

ಆದರೆ ನನ್ನ ಹೆಂಡತಿ ಶಕುಂತಲಾಗೆ ಇದು ಬಿಲ್‌ಕುಲ್ ಇಷ್ಟವಿರಲಿಲ್ಲ. ಏನೇ ಸಾಧನೆ ಮಾಡುವುದಾದರೂ ನಮ್ಮ ಊರಿನಲ್ಲಿ ಮಾಡಬೇಕು ಎಂಬುದು ಒಂದು ಕಾರಣ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯ ಕಟ್ಟಿಕೊಳ್ಳುವುದು ಮತ್ತೊಂದು ಕಾರಣ. ‘ಬೆಂಗಳೂರಿಗೆ ಹೋಗೋಣ’ ಎಂದು ಅವಳು ಹೇಳುತ್ತಲೇ ಇದ್ದಳು. ನಾನು ಮುಂದೂಡುತ್ತಲೇ ಇದ್ದೆ. ಕೊನೆಗೊಂದು ದಿನ ಅವಳು ಗಟ್ಟಿ ಮನಸ್ಸು ಮಾಡಿ ಮಕ್ಕಳೊಂದಿಗೆ ಬೆಂಗಳೂರಿಗೆ ಶಿಫ್ಟ್ ಆಗಿಯೇಬಿಟ್ಟಳು. ನಾನು ಅವಳ ಹಿಂದೆ ಬಂದೇ ಬರ್ತೀನಿ ಅಂತ ಅವಳಿಗೆ ಗೊತ್ತಿತ್ತು. ವಿಧಿಯಿಲ್ಲದೆ ನಾನೂ ಇಲ್ಲಿಗೆ ಬಂದೆ.

ನನ್ನ ಮಗಳನ್ನು ಪ್ರಿನ್ಸೆಸ್ ಅಂತಲೇ ಕರೀತೇನೆ. ಅವಳಿಗೆ ಶಾಲೆಗೆ ಪ್ರವೇಶ ಪಡೆಯೋದು ದೊಡ್ಡ ಸಮಸ್ಯೆಯಾಗಿತ್ತು. ನನ್ನ ಮೂವರು ಗಂಡು ಮಕ್ಕಳಿಗೆ ಹೇಗೋ ಬಿಷಪ್ ಕಾಟನ್ ಸ್ಕೂಲ್‌ನಲ್ಲಿ ಸೀಟು ದೊರಕಿಸಿಕೊಂಡೆವು. ಆದರೆ ನಮ್ಮ ಪ್ರಿನ್ಸೆಸ್‌ಗೆ ಸಿಗಲಿಲ್ಲ. ಅವಳನ್ನು ಸಫೈರ್ ಸ್ಕೂಲ್‌ಗೆ ಸೇರಿಸಬೇಕು ಎಂಬುದು ನನ್ನ ಹೆಂಡತಿಯ ಆಸೆ ಆಗಿತ್ತು. ಅಲ್ಲಿಗೆ ಹೋದ್ರೆ ಸೀಟು ಕೊಡೋದಿಲ್ಲ ಅಂದ್ರಂತೆ. ಪ್ರಿನ್ಸಿಪಾಲರಿಗೆ ನನ್ನ ಹೆಂಡತಿ ಫೋನ್ ಮಾಡಿ ಕೇಳಿದಳು.

‘ನೀವು ಕೆಲಸ ಮಾಡುವ ಆಸ್ಪತ್ರೆಯಿಂದ ಒಂದು ಶಿಫಾರಸು ಪತ್ರ ತಂದ್ರೆ ಸೀಟು ಕೊಡ್ತಾರಂತೆ’ ಅಂತ ನನಗೆ ಹೇಳಿದ್ಳು. ನಾನು ಶಿಫಾರಸು ಪತ್ರವನ್ನು ಮೇಲ್ ಮಾಡಿದೆ.

ಆ ಪತ್ರವನ್ನು ತೆಗೆದುಕೊಂಡು ಶಾಲೆಯ ಪ್ರಿನ್ಸಿಪಾಲರನ್ನು ಖುದ್ದಾಗಿ ಶಕುಂತಲಾ ಭೇಟಿಯಾದಾಗ ಅವರಿಗೆ ಶಾಕ್ ಆಯ್ತಂತೆ. ನನ್‌ಗಳು, ಸಿಸ್ಟರ್‌ಗಳೆಲ್ಲ ಆ ಪತ್ರವನ್ನು ನೋಡಲು ಓಡಿಬಂದರಂತೆ... ಆ ಪತ್ರ ಬರೆದವರು ಮದರ್ ತೆರೆಸಾ! ನಂಗೆ ಮದರ್ ತೆರೆಸಾ ದೇವರ ಥರಾ. ಅವರನ್ನು ನಾನು ಮೊದಲು ಭೇಟಿ ಮಾಡಿದ್ದು ವೈದ್ಯನಾಗಿ. ಅವರಿಗೆ ಹೃದಯದ ತೊಂದರೆ ಆದಾಗ ನಾನೇ ಅವರಿಗೆ ಟ್ರೀಟ್‌ಮೆಂಟ್ ಕೊಟ್ಟಿದ್ದೆ. ಆ ಪತ್ರವನ್ನು ಸಫೈರ್ ಸ್ಕೂಲ್‌ನಲ್ಲಿ ಈಗಲೂ ಜೋಪಾನವಾಗಿ ಇಟ್ಟಿದ್ದಾರಂತೆ.

ನನ್ನ ಇಬ್ಬರು ಗಂಡು ಮಕ್ಕಳು ನನ್ನೊಂದಿಗೆ ‘ನಾರಾಯಣ’ದಲ್ಲಿಯೇ ಸರ್ಜನ್‌ಗಳಾಗಿದ್ದಾರೆ. ಇನ್ನೊಬ್ಬ ಮಗ ಆಸ್ಪತ್ರೆಯ ಆಡಳಿತದಲ್ಲಿ ನೆರವಾಗ್ತಾನೆ. ನಮ್ಮ ‘ಪ್ರಿನ್ಸೆಸ್’ ಪತಿ ಜತೆ ವಿದೇಶದಲ್ಲಿದ್ದಾಳೆ.

ನಾನು ಮನಸಿಲ್ಲದ ಮನಸಿನಿಂದ ಬೆಂಗಳೂರಿಗೆ ಬಂದೆ. ಹೃದಯ ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾದದ್ದು ಬೆಂಗಳೂರಿಗೆ ಬಂದದ್ದರಿಂದಲೇ ಎಂದು ನಾನು ವಿನೀತನಾಗಿ ಹೇಳಿಕೊಳ್ಳುತ್ತೇನೆ. ಹಾಗೆ ಬೆಂಗಳೂರಿಗೆ ಬಂದು ಮಣಿಪಾಲ ಆಸ್ಪತ್ರೆಯಲ್ಲಿ ಮಣಿಪಾಲ ಹಾರ್ಟ್ ಫೌಂಡೇಶನ್ ಶುರು ಮಾಡಿದೆ, ಅಲ್ಲಲ್ಲ ಮಾಡಿದೆವು. 20 ವರ್ಷಗಳ ಹಿಂದೆಯೂ ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ತುಂಬಾ ಕೆಟ್ಟದಾಗಿತ್ತು. ಆಗಲೇ ಬೆಂಗಳೂರು ಇಕ್ಕಟ್ಟಾಗಲು ಶುರುವಾಗಿತ್ತು.

2000–01ರಲ್ಲಿ ನಾರಾಯಣ ಹೃದಯಾಲಯ ಶುರು ಮಾಡಿದೆವು. ಆಗ ಎಲ್ಲರೂ ನನ್ನನ್ನು ಟೀಕಿಸಿದ್ರು. ‘ಈ ಡಾಕ್ಟ್ರಿಗೆ ತಲೆ ಕೆಟ್ಟಿರಬೇಕು. ರಸ್ತೆ ಇಷ್ಟೊಂದು ಕೆಟ್ಟದಾಗಿದೆ, ಸಂಪರ್ಕ ರಸ್ತೆಗಳೂ ಇಲ್ಲ. ಹಾಗಿರುವಾಗ ಸಿಟಿಯಿಂದ 20 ಕಿ.ಮೀ. ದೂರದ ಹೊಸೂರು ರಸ್ತೆಗೆ ಹೋಗಿ ಯಾರಾದರೂ ಹಾರ್ಟ್ ಆಸ್ಪತ್ರೆ ಕಟ್ತಾರಾ, ಈ ಆಸ್ಪತ್ರೆ ನಡೀತದಾ’ ಅಂತ ಹೇಳ್ತಿದ್ರು. ಅವರು ಎಣಿಸಿದಂತೆ ಏನೂ ಆಗ್ಲಿಲ್ಲ. ಬದಲಾಗಿ ಸಿಟಿಯೇ ಈ ಕಡೆ ಬಂತು!

ಆಗ ಹಾರ್ಟ್ ಆಸ್ಪತ್ರೆಗಳಲ್ಲಿ ದಿನಕ್ಕೆ ಒಂದೋ ಎರಡೋ ಹಾರ್ಟ್ ಆಪರೇಷನ್ ಮಾಡಿದ್ರೆ ದೊಡ್ಡ ಸಂಗತಿ. ನಾವು ‘ನಾರಾಯಣ’ ಶುರುಮಾಡಿದಾಗ, ದಿನಕ್ಕೆ 10ರಿಂದ 12 ಆಪರೇಷನ್ ಮಾಡುವ ಗುರಿ ಇಟ್ಟುಕೊಂಡೆವು. ಅದಕ್ಕೂ ನಮ್ಮನ್ನು ಎಲ್ಲರೂ ಆಡ್ಕೊಂಡ್ರು. ಆಸ್ಪತ್ರೆ ಶುರು ಮಾಡಿ ಎರಡು ವರ್ಷದಲ್ಲಿ ನಮ್ಮ ಈ ಗುರಿ ಮುಟ್ಟಿದೆವು. ನಮ್ಮದು ದುಡ್ಡು ಮಾಡುವ ಉದ್ದೇಶವಾಗಿರಲಿಲ್ಲ. ಬಡವರಿಗೂ ಹಾರ್ಟ್ ಆಪರೇಷನ್ ಕೈಗೆಟಕಬೇಕು ಎಂಬ  ದೂರದೃಷ್ಟಿ. ‘ಯಶಸ್ವಿನಿ’ ಯೋಜನೆ ಅನುಷ್ಠಾನಗೊಂಡ ನಂತರ ಅದೂ ಸಾಧ್ಯವಾಯ್ತು.

ಆಗ ಹೊಸೂರು ರಸ್ತೆಯಲ್ಲಿ ಸಿಂಗಲ್ ಲೇನ್ ರಸ್ತೆ ಇತ್ತು. ಮನೆಯಿಂದ ಇಲ್ಲಿಗೆ ಬರಲು ಎರಡೂವರೆ ಗಂಟೆ ಬೇಕಾಗುತ್ತಿತ್ತು. ಅದಕ್ಕಿಂತ ಬೇಗ ತಲುಪುವ ಮಾತೇ ಇರಲಿಲ್ಲ. ಯಾವಾಗ ಡಬಲ್ ಲೇನ್ ರಸ್ತೆ ಬಂತೋ ಆಗ ಪರಿಸ್ಥಿತಿ ಬದಲಾಯಿತು. ಈಗ ಎಲಿವೇಟೆಡ್ ಹೆದ್ದಾರಿ ಬಂದಿರುವ ಕಾರಣ ಹೊಸೂರು ರಸ್ತೆಯ ಚಿತ್ರಣವೇ ಬದಲಾಗಿದೆ. ನಾನು ಕೋರಮಂಗಲದ ಮನೆಯಿಂದ ಇಲ್ಲಿಗೆ ಬರಲು 15– 20 ನಿಮಿಷ ಸಾಕಾಗುತ್ತದೆ

ಬೆಂಗಳೂರು ಬಹಳ ವಿಶೇಷವಾದ ಸ್ಥಳ. ಬೆಂಗಳೂರಿನಲ್ಲಿ ಏನು ವಿಶೇಷ ಅಂತ ಯಾರಾದ್ರೂ ಕೇಳಿದ್ರೆ ನಾನು ಹೇಳ್ತೇನೆ? ಇಲ್ಲಿನ ಜನ. ಈ ಬೆಂಗಳೂರಿನ ಶಕ್ತಿ ಇಲ್ಲಿನ ಜನರು. ಎಲ್ಲರೂ ಹೇಳ್ತಾರೆ, ಬೆಂಗಳೂರಿನ ವಾತಾವರಣದ ಕಾರಣ ಜನ ಇಲ್ಲಿಗೆ ಬರ್ತಾರೆ ಅಂತ. ಅದು ಹಾಗಲ್ಲ. ಇಲ್ಲಿನ ಜನರ ಕಾಸ್ಮೊಪಾಲಿಟನ್ ಸ್ವಭಾವವೇ ಬೆಂಗಳೂರನ್ನು ಎಲ್ಲರೂ ಇಷ್ಟಪಡುವಂತೆ, ಇಲ್ಲಿ ನೆಲೆಸುವಂತೆ ಮಾಡಿದೆ. ಇಲ್ಲಿನ ಜನರು ಕಾನೂನು ಪರಿಪಾಲಿಸ್ತಾರೆ. ತೆರಿಗೆ ಕಟ್ತಾರೆ.

ಒಮ್ಮೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿ ರಾತ್ರಿ 11.30ಕ್ಕೆ ಮನೆಗೆ ಕಾರಿನಲ್ಲಿ ಹೋಗ್ತಿದ್ದೆ. ಸ್ಟೇಡಿಯಂ ಬಳಿಯ ವೈನ್ ಶಾಪ್‌ವೊಂದರಲ್ಲಿ ನಾಲ್ಕೈದು ಜನ ವಿಸ್ಕಿ ಬ್ರಾಂದಿ ಖರೀದಿಸ್ತಿದ್ರು. ಅವರ ಪೈಕಿ ಒಬ್ಬ ಯುವತಿ ಇದ್ದಳು. ಅವಳು ಕೈಯಲ್ಲಿ ಬಾಟಲಿ ಹಿಡ್ಕೊಂಡು ಹೊರಬಂದ್ಳು. ಶಾರ್ಟ್ಸ್ ಹಾಕ್ಕೊಂಡಿದ್ಳು ಅವಳು.

ಆ ಹುಡುಗಿಯ ಮನೆ ಅಲ್ಲೇ ಇದ್ದಿರಬಹುದು. ಆದರೆ ರಾತ್ರಿ 11.30ಕ್ಕೆ ತಂದೆಯೊಬ್ಬರು ತಮ್ಮ ಮಗಳನ್ನು ವೈನ್ ಶಾಪ್‌ಗೆ ಕಳುಹಿಸುವ ಧೈರ್ಯ ತೋರಿಸ್ತಾರೆ, ಅವಳು ಅಷ್ಟು ಆರಾಮಾಗಿ ಹೋಗಿ ಬರ್ತಾಳೆ ಅಂದ್ರೆ, ಈ ನಗರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಇದು ಸಾಕ್ಷಿ.

ಹೆಣ್ಣು ಮಕ್ಕಳು ರಾತ್ರಿ ವೇಳೆ ಶಾರ್ಟ್ಸ್ ಹಾಕ್ಕೊಂಡು ಹೋಗ್ಬೇಕು ಅನ್ನೋದು ನನ್ನ ಮಾತಿನ ಅರ್ಥ ಅಲ್ಲ. ಬಹಳ ವರ್ಷಗಳಿಂದ ಇಲ್ಲಿ ಬದುಕುತ್ತಿರುವ ನನಗೆ ಬೆಂಗಳೂರು ತುಂಬಾ ಸುರಕ್ಷಿತ ಸ್ಥಳ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗೆಂದು, ಹೊಸ ವರ್ಷಾಚರಣೆ ವೇಳೆ ನಡೆದಂತಹ ಕೆಟ್ಟ ಘಟನೆಗಳೂ ಇಲ್ಲಿ ನಡೆಯುವುದಿಲ್ಲ ಎಂದೂ ಹೇಳಲು ಸಾಧ್ಯವಿಲ್ಲ.


ನಾನು ಇಂಗ್ಲೆಂಡ್, ಅಮೆರಿಕದ ವೈದ್ಯರ ಜತೆ ಮಾತಾಡ್ತಾ ಇರ್ತೇನೆ. ಅವರು ಎಷ್ಟೇ ವರ್ಷ ಯಾವುದೇ ದೇಶದಲ್ಲಿ ಕೆಲಸ ಮಾಡಿದ್ರೂ, ನಿವೃತ್ತಿ ನಂತರ ಎಲ್ಲಿ ನೆಲೆಸಬೇಕು ಎಂದು ಅವರ ಹೆಂಡತಿಯರ ಬಳಿ ಕೇಳಿದ್ರೆ ಅವರ ಆಯ್ಕೆ ಬೆಂಗಳೂರು ಆಗಿರುತ್ತದೆ. ಇದು ಹಿಂದಿನಿಂದಲೂ ಬೆಂಗಳೂರಿನ ಬಗ್ಗೆ ಇರುವ ಮಹತ್ವ.

ನಾನು ಕೋರಮಂಗಲದಿಂದ ಹೊಸೂರು ಕಡೆ ಬರುವ ಹಾದಿಯನ್ನು ‘ನಾಲೆಡ್ಜ್ ಕಾರಿಡಾರ್’ ಅಂತ ಕರೀತೇನೆ. ಮೊದಲು ನಮಗೆ ಎಲೆಕ್ಟ್ರಾನಿಕ್ ಸಿಟಿ ಸಿಗ್ತದೆ. ಅಮೆರಿಕದ ಸಿಲಿಕಾನ್ ವ್ಯಾಲಿ ಥರ. ನಂತರ ಬಯೋಕಾನ್ ಸಂಶೋಧನಾ ಸಂಸ್ಥೆ, ಅದಾದ ಬಳಿಕ ನಮ್ಮ ಈ ಹೆಲ್ತ್ ಸಿಟಿ ಸಿಗ್ತದೆ. ಅದಕ್ಕೆ ನನ್ನ ಪ್ರಕಾರ ಇದು ನಾಲೆಡ್ಜ್ ಕಾರಿಡಾರ್.

17ವರ್ಷಗಳ ಹಿಂದೆ ನಾವು ನಾರಾಯಣ ಹೃದಯಾಲಯ ಶುರು ಮಾಡಿದಾಗ, ಒಂದು ಟೀ ಬೇಕಾದರೆ ಎರಡು ಗಂಟೆಗೂ ಮೊದಲೇ ಆರ್ಡ್‌ರ್‌ ಕೊಡಬೇಕಿತ್ತು. ಅವರು ಹಳ್ಳಿಯಿಂದ ಹಾಲು ತಂದು ನಮ್ಗೆ ಚಾ ಮಾಡಿ ಕೊಡುವಾಗ ಎರಡು ಗಂಟೆ ಆಗ್ತಿತ್ತು. ಇಲ್ಲಿ ಜಾಗ ಖರೀದಿಸಿದಾಗ, ಮುಂದೆ ಖಂಡಿತಾ ಈ ಏರಿಯಾದಲ್ಲಿ ಜಾಗದ ಬೆಲೆ ಹೆಚ್ಚಾಗ್ತದೆ ಅಂತ ನಮಗೆ ಗೊತ್ತಿತ್ತು. ಅದಕ್ಕೆ ಸ್ವಲ್ಪ ಜಾಸ್ತಿಯೇ ಜಾಗ ತಗೊಂಡೆವು.

ಆಗ ಒಂದು ಎಕ್ರೆಗೆ ಆರು ಲಕ್ಷ ರೂಪಾಯಿ ಇತ್ತು. ಈಗ ಎಂಟು ಕೋಟಿ ಕೊಡ್ತೇವೆ ಅಂತ ಹೇಳಿದ್ರೂ ಒಂದು ಎಕ್ರೆ ಜಾಗ ಸಿಗೋದಿಲ್ಲ. ನಾವು ಈ ಆಸ್ಪತ್ರೆ ಶುರು ಮಾಡುವಾಗ 150 ಬೆಡ್ ಇತ್ತು. ಈಗ ನಾಲ್ಕು ಆಸ್ಪತ್ರೆಗಳಿವೆ. ದಿನಕ್ಕೆ 2–3 ಸಾವಿರ ರೋಗಿಗಳು ಬರ್ತಾರೆ. ಒಂದು ಒಳ್ಳೇ ಆಸ್ಪತ್ರೆ ಶುರುವಾದಾಗ ಅದರ ಸುತ್ತ ಒಂದು ನಗರದ ಬೆಳವಣಿಗೆಯಾಗ್ತದೆ.

ನಾರಾಯಣ ಹೃದಯಾಲಯ ಶುರು ಮಾಡಲು ನನ್ನ ಮಾವ ನಾರಾಯಣ ಶೆಟ್ಟಿ ಮತ್ತು ನಮ್ಮ ಕುಟುಂಬ ಕಾರಣ. ಅವರು ಆಗಲೇ ಕನ್‌ಸ್ಟ್ರಕ್ಷನ್ ಕಂಪೆನಿ ನಡೆಸ್ತಾ ಇದ್ದರು. ನಾನು ಕಲ್ಕತ್ತಾದಲ್ಲಿ ಆರು ವರ್ಷ ಸೀನಿಯರ್‌ ಹಾರ್ಟ್‌ ಸರ್ಜನ್‌ ಆಗಿ ಕೆಲಸ ಮಾಡಿದ್ರೂ   ನನ್ನ ಉದ್ದೇಶ ಒಳ್ಳೆಯ ಆಪರೇಷನ್‌ ಮಾಡುವುದಷ್ಟೇ ಆಗಿತ್ತು.

ದುಡ್ಡುಮಾಡಲು ನಾನು ದುಡೀತಿರಲಿಲ್ಲ. ಹಾಗಾಗಿ ನನ್ನಲ್ಲಿ ಆಸ್ಪತ್ರೆ ಕಟ್ಟುವಷ್ಟೆಲ್ಲಾ ದುಡ್ಡು ಇರಲಿಲ್ಲ. ಹಾಗೆ ಅವರ ಸಹಾಯ ಅಗತ್ಯವಿತ್ತು. ಆಸ್ಪತ್ರೆಯನ್ನು ದೂರದೃಷ್ಟಿಯೊಂದಿಗೆ ಕಟ್ಟಿದ್ದು ಇವತ್ತಿಗೆ ತುಂಬಾ ಸಹಕಾರಿಯಾಯ್ತು. ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ಹೆಸರಿಗೆ ಮಹತ್ವದ ಸ್ಥಾನವಿದೆ.

ಡಾ. ದೇವಿಪ್ರಸಾದ್‌ ಶೆಟ್ಟಿ
ಡಾ.ದೇವಿಪ್ರಸಾದ್ ಶೆಟ್ಟಿ ಅವರು ಹೃದಯ ಶಸ್ತ್ರಚಿಕಿತ್ಸಕ, ನಾರಾಯಣ ಹೆಲ್ತ್ ಸಿಟಿಯ ಸ್ಥಾಪಕ ಅಧ್ಯಕ್ಷ. ಹೃದಯ ಶಸ್ತ್ರಚಿಕಿತ್ಸೆಗಳು ಬಡವರಿಗೂ ಕೈಗೆಟಕುವಂತೆ ಮಾಡಿದ ಹೆಗ್ಗಳಿಕೆ ಅವರದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವೈದ್ಯಕೀಯ ಪದವಿ ಪಡೆದ ಅವರು 1983ರಿಂದ 89ರವರೆಗೆ ಲಂಡನ್‌ನ ಪ್ರತಿಷ್ಠಿತ ಗೈಯ್ಸ್ ಕಾರ್ಡಿಯೊ ಥೊರಾಸಿಕ್ ಘಟಕ ಹಾಗೂ ವೆಸ್ಟ್ ಮಿಡ್‌ಲ್ಯಾಂಡ್ಸ್ ಕಾರ್ಡಿಯೊ ಥೊರಾಸಿಕ್ ರೊಟೇಶನ್ ಪ್ರೋಗ್ರಾಂ ಮೂಲಕ ಹೃದಯದ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಬಗ್ಗೆ ಹೆಚ್ಚಿನ ವ್ಯಾಸಂಗ ಮಾಡಿದರು.

ನವಜಾತ ಶಿಶುಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಮಾಡಿ ಯಶಸ್ವಿಯಾದವರು ಡಾ.ಶೆಟ್ಟಿ. ಅಲ್ಲದೆ, ರಾಜ್ಯ ಸರ್ಕಾರದ ‘ಯಶಸ್ವಿನಿ’ ಯೋಜನೆ ಅನುಷ್ಠಾನಗೊಳ್ಳಲು ಅವರ ದೂರದೃಷ್ಟಿಯೇ ಕಾರಣ.

ಗಾರ್ಬೇಜ್ ಸಿಟಿ ಎಂಬ ಅಪವಾದ ಬೇಡ
ಬೆಂಗಳೂರಿನ ಬಗ್ಗೆ ಕೆಟ್ಟದ್ದೇನು ಅಂತ ಕೇಳಿದ್ರೆ, ತ್ಯಾಜ್ಯ ಎಂದು ಹೇಳಬೇಕಾಗುತ್ತದೆ. ಒಂದು ಕಾಲದಲ್ಲಿ ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಈಗ ಗಾರ್ಬೇಜ್ ಸಿಟಿ ಆಗಿದೆ ಎಂದರೆ ನಾಚಿಕೆಗೇಡಿನ ಸಂಗತಿ. ಬಾಂಬೆಯಲ್ಲಿ ಎಷ್ಟು ಜಾಗದಲ್ಲಿ ಕಸ ನೋಡ್ತೀರಿ? ಅಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಮಾಡಲು ಸಾಧ್ಯವಾದರೆ ಬೆಂಗಳೂರಲ್ಲಿ ತ್ಯಾಜ್ಯ ಯಾಕೆ ಸಾಧ್ಯವಾಗುವುದಿಲ್ಲ. ಸರ್ಕಾರ ಮತ್ತು ಕಾರ್ಪೊರೇಷನ್‌ಗೆ ನನ್ನದೊಂದೇ ಮನವಿ, ಬೆಂಗಳೂರನ್ನು ಗಾರ್ಬೇಜ್ ಸಿಟಿ ಎಂಬ ಅಪವಾದದಿಂದ ಮುಕ್ತಗೊಳಿಸಿ ಮತ್ತೆ ಗಾರ್ಡನ್ ಸಿಟಿ, ಕ್ಲೀನ್ ಸಿಟಿ ಮಾಡಿ.

ಪರಿಚಯ

* ಜನನ: ಮೇ 8, 1953
* ಸ್ಥಳ: ಕಿನ್ನಿಗೋಳಿ, ಮಂಗಳೂರು
* ಪತ್ನಿ: ಶಕುಂತಲಾ
* ಮಕ್ಕಳು: ಒಂದು ಹೆಣ್ಣು, ಮೂವರು   ಗಂಡುಮಕ್ಕಳು
* ಪ್ರಾವೀಣ್ಯ: ಕಾರ್ಡಿಯೊ ವಾಸ್ಕ್ಯುಲರ್ ಥೊರಾಸಿಕ್ ಸರ್ಜರಿ ಮತ್ತು ನವಜಾತ ಶಿಶುಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ
* ನಿವಾಸ: ಕೋರಮಂಗಲ
ಸಂಪರ್ಕಕ್ಕೆ: devishetty@nhhospita*s.org
www.narayanahea*th.orgc

*
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ನಾರಾಯಣ ಹೃದಯಾಲಯಕ್ಕೆ ಈಗ 70 ದೇಶಗಳಿಂದ ರೋಗಿಗಳು ಬರ್ತಾರೆ. ವ್ಯಾಪಾರ, ಉದ್ಯಮ, ಶಿಕ್ಷಣ ಮತ್ತು ನಗರದ ಒಟ್ಟಾರೆ ಅಭಿವೃದ್ಧಿಯಲ್ಲಿ ನಮ್ಮ ಆಸ್ಪತ್ರೆಯ ಪಾಲೂ ಇದೆ ಎಂದು ನಾನು ಹೆಮ್ಮೆಯಿಂದ ಹೇಳ್ತೇನೆ
-ಡಾ.ದೇವಿಪ್ರಸಾದ್ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT