ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷಾತ್ಮಕ ಅಧ್ಯಾಯಕ್ಕೆ ಮುನ್ನುಡಿ ಬರೆದ ಟ್ರಂಪ್‌

ಸಂಪಾದಕೀಯ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ
ಅಮೆರಿಕದಲ್ಲಿ  ಡೊನಾಲ್‌್ಡ ಟ್ರಂಪ್‌ ಆಡಳಿತದ ಶಕೆ ಆರಂಭವಾಗಿದೆ. ‘ಅಮೆರಿಕವೇ ಮೊದಲು. ಅಮೆರಿಕದ ಹಿತವನ್ನು ಕಾಯುವುದೇ ನನ್ನ ಆದ್ಯತೆ’  ಎಂದು ಅಧ್ಯಕ್ಷೀಯ ಚುನಾವಣಾ ಪ್ರಚಾರದ ಉದ್ದಕ್ಕೂ ಅವರು ಹೇಳಿಕೊಂಡೇ ಬಂದಿದ್ದರು. ಅಧಿಕಾರ ವಹಿಸಿಕೊಂಡ ನಂತರದ ಮೊದಲ ಭಾಷಣದಲ್ಲಿಯೂ ಅದನ್ನೇ ಪುನರುಚ್ಚರಿಸಿದ್ದಾರೆ. ‘ಇಷ್ಟು ದಿನ ಅಮೆರಿಕಕ್ಕೆ, ಅಮೆರಿಕನ್ನರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕಾಗಿದೆ’ ಎನ್ನುವ ಧೋರಣೆ ಅವರ ಭಾಷಣದಲ್ಲಿ ಎದ್ದು ಕಂಡಿದೆ. ಚುನಾವಣಾ ಪ್ರಚಾರದ ವೇಳೆ ಆಡುವ ಮಾತಿಗಿಂತ ಅಧಿಕಾರದ ಸೂತ್ರ ಹಿಡಿದ ನಂತರ ಆಡುವ ಒಂದೊಂದು ಶಬ್ದಕ್ಕೂ ಬಹಳ ಮಹತ್ವ ಇದೆ.
 
ತೂಕದಿಂದ, ತುಂಬ ಜವಾಬ್ದಾರಿಯಿಂದ ಮಾತನಾಡಬೇಕಾಗುತ್ತದೆ. ‘ಅಮೆರಿಕದ 45ನೇ ಅಧ್ಯಕ್ಷ ಟ್ರಂಪ್‌’ ಅವರ ಭಾಷಣದಲ್ಲಿ ಅಂತಹ ಪ್ರಬುದ್ಧತೆಯನ್ನು ಇಡೀ ವಿಶ್ವ ನಿರೀಕ್ಷಿಸಿತ್ತು. ಅದನ್ನು ಅವರು ಹುಸಿ ಮಾಡಿದ್ದಾರೆ. ವಿವಾದಾತ್ಮಕ, ಸಂಘರ್ಷಾತ್ಮಕ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಇದರಿಂದ ಅಮೆರಿಕದ ಹೊರಗೆ ಮಾತ್ರವಲ್ಲ ಒಳಗೂ ಒಂದು ಬಗೆಯ ಆತಂಕ ಆವರಿಸಿದೆ. ರಾಜಧಾನಿ ವಾಷಿಂಗ್ಟನ್‌ನ ಬೀದಿಗಳಲ್ಲಿ, ಆ ದೇಶದ ಅನೇಕ ನಗರಗಳಲ್ಲಿ ನಡೆಯುತ್ತಿರುವ ಬೃಹತ್‌ ಪ್ರತಿಭಟನೆಗಳೇ ಇದಕ್ಕೆ ಸಾಕ್ಷಿ. ಇವರಲ್ಲಿ ಹೆಚ್ಚಿನವರು ಮಹಿಳೆಯರು. ಚುನಾವಣಾ ಪ್ರಚಾರದ ವೇಳೆ ಟ್ರಂಪ್‌ ಅವರು ಮಹಿಳೆಯರ ಬಗ್ಗೆ ಆಡಿದ್ದ ಅಶ್ಲೀಲ, ಕೆಟ್ಟ ಮಾತುಗಳ ಬಗ್ಗೆ ಜನ ಸಮುದಾಯದ ಕೋಪ ಇನ್ನೂ ತಣ್ಣಗಾಗಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.
 
ಲಂಡನ್‌ನಲ್ಲಿ ಕೂಡ ಲಕ್ಷಕ್ಕೂ ಹೆಚ್ಚು ಜನ ಟ್ರಂಪ್‌ ಅವರ ಮಹಿಳಾ ವಿರೋಧಿ ನಿಲುವು ಖಂಡಿಸಿ ಬೀದಿಗಿಳಿದಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿ ಲಿಂಗ ಸಮಾನತೆ, ಮಹಿಳೆಯರ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗೆ ಧಕ್ಕೆ ಬರುತ್ತದೆ ಎಂಬ ಆತಂಕ ಎಲ್ಲೆಡೆ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಟ್ರಂಪ್‌ ಅವರಿಂದ ನಡೆದಿಲ್ಲ. ಅವರ ಮಾತಿನಲ್ಲಿ ಪಶ್ಚಾತ್ತಾಪದ ದನಿಯೂ ಇಲ್ಲ. ಇದು ಕಳವಳ ಹೆಚ್ಚಿಸಿದೆ.
 
ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್‌ ಸಹಿ ಹಾಕಿದ ಮೊದಲ ಆದೇಶ, ‘ಒಬಾಮಕೇರ್‌’ ಆರೋಗ್ಯ ವಿಮಾ ಯೋಜನೆ ರದ್ದುಗೊಳಿಸಿದ್ದು.  ಇದು ನಿರೀಕ್ಷಿತ. ಏಕೆಂದರೆ ಈ ಬಗ್ಗೆ ಅವರು ಮೊದಲೇ ಹೇಳಿದ್ದರು. ಒಬಾಮಕೇರ್‌ಗೆ  ಪರ್ಯಾಯವಾಗಿ, ಜನಸಾಮಾನ್ಯರಿಗೆ  ಕೈಗೆಟಕುವ ದರದ ಆರೋಗ್ಯ ಯೋಜನೆ ಜಾರಿಗೆ ಬರಲಿದೆ ಎಂದು ಅವರ ಸಹಾಯಕರೇನೋ ಹೇಳಿದ್ದಾರೆ. ವಿಶ್ವದೆಲ್ಲೆಡೆ ರಾಜಕಾರಣಿಗಳಿಗೊಂದು ಚಾಳಿ ಇದೆ.  ಹಿಂದಿನವರು ಮಾಡಿದ್ದರಲ್ಲಿ ಕೆಲವನ್ನಾದರೂ ರದ್ದು ಮಾಡುವುದು ಅಥವಾ ಒಂದಿಷ್ಟು ಬದಲಾವಣೆ ಮಾಡಿ  ಹೊಸ ಹೆಸರು ಕೊಟ್ಟು ತಮ್ಮದು ಎಂಬಂತೆ ಬಿಂಬಿಸುವುದು. ಇದನ್ನು ನೋಡಿದರೆ ಅಂತಹ ವ್ಯಾಮೋಹದಿಂದ ಟ್ರಂಪ್‌ ಕೂಡ ಹೊರತಾಗಿಲ್ಲ.
 
ಅವರ ‘ಅಮೆರಿಕ ಮೊದಲು’ ನೀತಿ ಅಮೆರಿಕಕ್ಕಿಂತ ಹೆಚ್ಚಾಗಿ ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ಬೀರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಎಲ್ಲೆಡೆ ಆತಂಕಗಳಿವೆ. ಜಾಗತೀಕರಣ ವಿರೋಧಿ ಮತ್ತು ಪ್ರಖರ ರಾಷ್ಟ್ರೀಯತೆಗೆ ಹೆಸರಾದ ಅವರು, ‘ವ್ಯಾಪಾರ, ತೆರಿಗೆ, ವಲಸೆ, ವಿದೇಶಾಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಮೆರಿಕದ ಉದ್ಯೋಗಿಗಳು ಮತ್ತು ಕುಟುಂಬಗಳಿಗೆ ಅನುಕೂಲ ಆಗುವ ನಿರ್ಧಾರಗಳನ್ನಷ್ಟೇ ಇನ್ನು ತೆಗೆದುಕೊಳ್ಳಲಾಗುವುದು’ ಎಂಬ ಮಾತನ್ನು ಮೊದಲ ಭಾಷಣದಲ್ಲಿಯೇ ಮತ್ತೆ ಒತ್ತಿ ಹೇಳಿದ್ದಾರೆ. ಇದರಿಂದ ಭಾರತಕ್ಕೆ ಏನಾಗಬಹುದು ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಏಕೆಂದರೆ ಅಮೆರಿಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಪರಿಣತ ತಂತ್ರಜ್ಞರಿದ್ದಾರೆ. ನಮ್ಮ ಸಾಫ್ಟ್‌ವೇರ್‌ ಸೇರಿದಂತೆ ಮಾಹಿತಿ ತಂತ್ರಜ್ಞಾನದ ರಫ್ತು  ಮತ್ತು ಪ್ರಗತಿ ಅಮೆರಿಕವನ್ನೇ ಬಹುಪಾಲು ಅವಲಂಬಿಸಿದೆ. ನುರಿತ ವಿದೇಶಿ ವೃತ್ತಿಪರರಿಗೆ ಅಮೆರಿಕದಲ್ಲಿ ನೌಕರಿಯ  ಅವಕಾಶ ಕಲ್ಪಿಸುವ ಎಚ್‌1ಬಿ ವೀಸಾದ ಅತಿ ದೊಡ್ಡ ಫಲಾನುಭವಿಗಳು ಭಾರತೀಯರು.
 
ಆದ್ದರಿಂದ ಟ್ರಂಪ್‌ ಅವರ ನೀತಿಗಳ ಬಗ್ಗೆ ನಾವು ಎಚ್ಚರದಿಂದಲೇ ಇರಬೇಕಾಗುತ್ತದೆ. ಆದರೆ ಅಮೆರಿಕದಲ್ಲಿ ಪ್ರಜಾಪ್ರಭುತ್ವದ ಬೇರುಗಳು ತುಂಬ ಬಲಿಷ್ಠವಾಗಿವೆ. ಮೂಲತಃ ಅದು ಬಹುಪಾಲು ವಲಸಿಗರ ದೇಶ. ಆ ದೇಶದ ಸಾಧನೆ, ಅಭಿವೃದ್ಧಿಯಲ್ಲಿ ವಲಸಿಗರ ಕೊಡುಗೆಯೇ ದೊಡ್ಡದು. ಆದ್ದರಿಂದ ಟ್ರಂಪ್‌ ಅವರ ನೀತಿ, ಮಾತುಗಳನ್ನು ಆ ದೇಶ ಹೇಗೆ ಜೀರ್ಣಿಸಿಕೊಳ್ಳುತ್ತದೆ ಎಂಬುದನ್ನೂ ಕಾದು ನೋಡಬೇಕು.
 
‘ಅಕ್ರಮ ವಲಸೆ ತಡೆಯಲು ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುತ್ತೇವೆ, ಹೊರಗುತ್ತಿಗೆ ನಿಲ್ಲಿಸಿಬಿಡುತ್ತೇವೆ, ನಮ್ಮಿಂದಾಗಿ ಬೇರೆಯವರು ಶ್ರೀಮಂತರಾಗಿದ್ದಾರೆ; ಆದರೆ ನಾವು ಬಡವರಾಗಿ ಬಿಟ್ಟಿದ್ದೇವೆ’  ಎನ್ನುವಂತಹ ಭಾವೋದ್ವೇಗದ ಮಾತುಗಳಿಂದ ಪ್ರಯೋಜನ ಇಲ್ಲ. ಅವು ಚುನಾವಣೆಯಲ್ಲಿ ಮತ ತಂದು ಕೊಡಬಹುದು;  ಆದರೆ ದೇಶ ಕಟ್ಟಲು, ಬೆಳೆಸಲು ಸಹಾಯ ಮಾಡುವುದಿಲ್ಲ ಎಂಬುದಕ್ಕೆ ವಿಶ್ವದಲ್ಲಿ ಬೇಕಾದಷ್ಟು ನಿದರ್ಶನಗಳು ಸಿಗುತ್ತವೆ. ಇಡೀ ವಿಶ್ವವೇ ಒಂದು ಮನೆಯಂತೆ ಪುಟ್ಟದಾಗಿರುವ ಈಗಿನ ಕಾಲಘಟ್ಟದಲ್ಲಿ ಪರಸ್ಪರ ಅವಲಂಬನೆ ಅನಿವಾರ್ಯ. ಅದನ್ನು ಟ್ರಂಪ್‌ ಅರ್ಥ ಮಾಡಿಕೊಂಡರೆ ಸಾಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT