ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳಿಗೆ ಹೊಡೆಯುವಂತಿಲ್ಲ

ಕೇಂದ್ರ ಸರ್ಕಾರದ ಹೊಸ ಕರಡು ನಿಯಮ
Last Updated 22 ಜನವರಿ 2017, 20:17 IST
ಅಕ್ಷರ ಗಾತ್ರ

ನವದೆಹಲಿ: ಜಾನುವಾರುಗಳಿಗೆ ಹೊಡೆಯುವುದನ್ನು ನಿಷೇಧಿಸುವ, ಜಾನುವಾರು ಮಾರಾಟಕ್ಕೆ ಸಂತೆಗೆ ತರುವ ವೇಳೆ ಅವುಗಳ ಮೈಗೆ ಬಣ್ಣ ಬಳಿಯುವುದು ಅಥವಾ ಅವುಗಳನ್ನು ಅಲಂಕರಿಸುವುದನ್ನು ನಿಷೇಧಿಸುವ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.
ಕರಡು ನಿಯಮಗಳಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಕೇಂದ್ರ ಪರಿಸರ ಸಚಿವಾಲಯ ಈ ನಿಯಮ ಸಿದ್ಧಪಡಿಸಿದೆ. ಜಾನುವಾರು ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ಒಳಪಡಿಸುವುದು, ಅಲ್ಲಿನ ಸ್ಥಿತಿ ಸುಧಾರಿಸುವುದು ಇದರ ಉದ್ದೇಶ. ಜಾನುವಾರು ಮಾರಾಟ ಮಾಡುವ ವ್ಯಕ್ತಿ ಅಧಿಕಾರಿಗಳ ಎದುರು, ‘ನಾನು ಇದನ್ನು ಕೊಲ್ಲುವ ಉದ್ದೇಶದಿಂದ ಮಾರುತ್ತಿಲ್ಲ’ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎನ್ನುತ್ತದೆ ಕರಡು ನಿಯಮ.

ಪ್ರಾಣಿ ಹಿಂಸೆ ತಡೆ ಕಾಯ್ದೆ – 1960ರ ಅಡಿ ಕರಡು ನಿಯಮ ರೂಪಿಸಲಾಗಿದೆ. ಕಳೆದ ವಾರವೇ ಇದನ್ನು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಲಾಗಿದೆ.

ಜಾನುವಾರು ನಿಯಂತ್ರಿಸಲು ಯಾವುದೇ ಕಾರಣಕ್ಕೂ ಹಿಂಸಾ ಮಾರ್ಗ ಅನುಸರಿಸುವಂತಿಲ್ಲ ಎನ್ನುತ್ತದೆ ನಿಯಮ. ಜಾನುವಾರುಗಳ ಕೊಂಬುಗಳ ಮೇಲ್ಪದರವನ್ನು ಆಯುಧ ಬಳಸಿ ಹೆರೆಯುವಂತಿಲ್ಲ, ಕೊಂಬುಗಳಿಗೆ ಬಣ್ಣ ಬಳಿಯುವಂತಿಲ್ಲ.

‘ಮಾರುಕಟ್ಟೆಯಲ್ಲಿ ಜಾನುವಾರನ್ನು ನಿಯಂತ್ರಿಸಲು ಅತಿಯಾಗಿ ಬಲಪ್ರಯೋಗ ಮಾಡುವಂತಿಲ್ಲ. ಜಾನುವಾರುಗಳ ಬಾಲ ಕತ್ತರಿಸುವಂತಿಲ್ಲ, ಅವುಗಳನ್ನು ಕೋಲಿನಿಂದ ಥಳಿಸುವಂತಿಲ್ಲ, ಅವುಗಳ ಕಣ್ಣು–ಮೂಗುಗಳಿಗೆ ಮೆಣಸಿನ ಪುಡಿ ಎರಚುವಂತಿಲ್ಲ’ ಎಂದು ಹೇಳಲಾಗಿದೆ.

ಜಾನುವಾರು ಮಾರಾಟದ ಮೇಲೆ ಕೂಡ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಕರುವನ್ನು ಮಾರಾಟ ಮಾಡಲು ಅವಕಾಶವೇ ಇಲ್ಲ. ಅಲ್ಲದೆ, ಜಾನುವಾರು ಮಾರಾಟ ಮಾಡುವಾಗ ‘ಇದನ್ನು ಕೃಷಿ ಉದ್ದೇಶಕ್ಕಾಗಿ ಮಾತ್ರ ಮಾರುತ್ತಿದ್ದೇನೆ’ ಎಂಬ ಮುಚ್ಚಳಿಕೆ ಬರೆದುಕೊಡಬೇಕು. ಮಾರಾಟ ಮಾಡಿದವ ಮತ್ತು ಖರೀದಿಸಿದವ ತಮ್ಮ ಸಂಪರ್ಕ ವಿಳಾಸವನ್ನು ಅಧಿಕಾರಿಗಳಿಗೆ ನೀಡಬೇಕು.

ಜಾನುವಾರು ಮಾರುಕಟ್ಟೆ ಸಮಿತಿಗಳು ಈ ನಿಯಮಗಳನ್ನು ಜಾರಿಗೆ ತರಬೇಕು. ಈ ಸಮಿತಿಯಲ್ಲಿ ಪಶುವೈದ್ಯ, ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಈ ಸಮಿತಿಗಳ ಕೆಲಸ ಜಿಲ್ಲಾ ಮಟ್ಟದ ಸಮಿತಿಯೊಂದರ ಉಸ್ತುವಾರಿಯಲ್ಲಿ ನಡೆಯುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಜಿಲ್ಲಾಧಿಕಾರಿಯು ಜಿಲ್ಲಾ ಮಟ್ಟದ ಸಮಿತಿಯ ನೇತೃತ್ವ ವಹಿಸುತ್ತಾರೆ. ಈ ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಫೆಬ್ರುವರಿ 16ರವರೆಗೆ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT