ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿ–ಕಾಂಗ್ರೆಸ್‌ ಮೈತ್ರಿ ಕೊನೆಗೂ ಅಂತಿಮ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಲಖನೌ: ಹಲವು ದಿನಗಳ ಅನಿಶ್ಚಿತತೆ ಮತ್ತು ಸೀಟು ಹಂಚಿಕೆಗಾಗಿ ಭಾರಿ ಚೌಕಾಶಿಯ ನಂತರ ಕೊನೆಗೂ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿವೆ.

ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ಮತ್ತು ಅಭಿವೃದ್ಧಿಗಾಗಿ ಇದೊಂದು ‘ಚಾರಿತ್ರಿಕ’ ಮೈತ್ರಿ ಎಂದು ಎರಡೂ ಪಕ್ಷಗಳು ಹೇಳಿಕೊಂಡಿವೆ.

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 298ರಲ್ಲಿ ಎಸ್‌ಪಿ ಸ್ಪರ್ಧಿಸಲಿದೆ. ಉಳಿದ 105 ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ ಎಂದು ಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಉತ್ತಮಚಂದ್‌ ಪಟೇಲ್‌ ಮತ್ತು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ರಾಬ್‌ಬಬ್ಬರ್‌ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಯಾವ ಕ್ಷೇತ್ರಗಳು ಯಾವ ಪಕ್ಷಕ್ಕೆ ಎಂಬುದನ್ನು ಅವರು ತಿಳಿಸಿಲ್ಲ.

‘ಬಿಜೆಪಿ ಮತ್ತು ಬಿಎಸ್‌ಪಿಯನ್ನು ಬುಡಮೇಲುಗೊಳಿಸಲು ಇದೊಂದು ಚಾರಿತ್ರಿಕ ಆರಂಭ. ಉತ್ತರ ಪ್ರದೇಶದಲ್ಲಿ ಹೊಸ ಯುಗಾರಂಭಕ್ಕೆ ಇದು ಕಾರಣವಾಗಲಿದೆ. ಕೋಮು ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಗೆ ನಮ್ಮ ಬದ್ಧತೆಯನ್ನು ಇದು ತೋರುತ್ತದೆ’ ಎಂದು ಪಟೇಲ್‌ ಮತ್ತು ರಾಜ್‌ಬಬ್ಬರ್‌ ಹೇಳಿದ್ದಾರೆ.

ಅಖಿಲೇಶ್‌ ಯಾದವ್‌ ಅವರೇ ಮೈತ್ರಿಕೂಟದ ನಾಯಕ. ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ತಮ್ಮ ಉದ್ದೇಶ ಎಂದು ರಾಜ್‌ಬಬ್ಬರ್‌ ತಿಳಿಸಿದ್ದಾರೆ.

ಮುಂದಿನ ಸರ್ಕಾರ ರಚನೆಯಾಗಿ ಒಂದು ವಾರದೊಳಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಎಸ್‌ಪಿ ಕೇಂದ್ರ ಕಚೇರಿಯಲ್ಲಿಯೇ ಪತ್ರಿಕಾಗೋಷ್ಠಿ ನಿಗದಿಯಾಗಿತ್ತು. ಆದರೆ ಕಾಂಗ್ರೆಸ್‌ ಆಕ್ಷೇಪದಿಂದಾಗಿ ಹೋಟೆಲೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಸೀಟು ಹಂಚಿಕೆಗೆ ಸಂಬಂಧಿಸಿ ಒಮ್ಮತ ಸಾಧ್ಯವಾಗದ ಕಾರಣ ಮೈತ್ರಿಗೆ ಏರ್ಪಡುವುದಕ್ಕೆ ಹಲವು ತೊಡಕುಗಳು ಎದುರಾಗಿದ್ದವು. ಮೊದಲ ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ಬಹುತೇಕ ಎಲ್ಲ ಕ್ಷೇತ್ರಗಳಿಗೆ ಎರಡೂ ಪಕ್ಷಗಳು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದವು.

ಎರಡೂ ಪಕ್ಷಗಳ ಮುಖಂಡರ ನಡುವೆ ಹಲವು ಸುತ್ತುಗಳ ಮಾತುಕತೆ ನಂತರ ಒಮ್ಮತಕ್ಕೆ ಬರುವುದು ಸಾಧ್ಯವಾಯಿತು. 120 ಕ್ಷೇತ್ರಗಳಿಗೆ ಕಾಂಗ್ರೆಸ್‌ ಬೇಡಿಕೆ ಇರಿಸಿತ್ತು. 85 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡಲು ಸಾಧ್ಯ ಎಂದು ಎಸ್‌ಪಿ ಪಟ್ಟು ಹಿಡಿದಿತ್ತು.

ಮೈತ್ರಿ ಏರ್ಪಡದೆ ಮುಸ್ಲಿಂ ಸಮುದಾಯದ ಮತಗಳು ಹಂಚಿಹೋಗುವುದು ಎರಡೂ ಪಕ್ಷಗಳಿಗೆ ಬೇಕಿಲ್ಲ. 125 ಕ್ಷೇತ್ರಗಳಲ್ಲಿ ಮುಸ್ಲಿಮರ ಮತಗಳು ನಿರ್ಣಾಯಕ. ಹಾಗಾಗಿ ಎರಡೂ ಪಕ್ಷಳು ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬಂದವು ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕಾ ಮುಖ್ಯ ಪಾತ್ರ

ಸಾಮಾನ್ಯವಾಗಿ ತೆರೆ ಮರೆಯಲ್ಲಿಯೇ ಕೆಲಸ ಮಾಡುವ ಪ್ರಿಯಾಂಕಾ ವಾದ್ರಾ (ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಮಗಳು) ಎಸ್‌ಪಿ ಜತೆಗಿನ ಮೈತ್ರಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಎಸ್‌ಪಿ ಜತೆಗೆ ಮೈತ್ರಿ ಏರ್ಪಡುವಲ್ಲಿ ಪ್ರಿಯಾಂಕಾ ಮಹತ್ವದ ಪಾತ್ರ ವಹಿಸಿದ್ದಾರೆ ಎಂಬುದನ್ನು ಕಾಂಗ್ರೆಸ್‌ ಇದೇ ಮೊದಲ ಬಾರಿ ಬಹಿರಂಗವಾಗಿ ಒಪ್ಪಿಕೊಂಡಿದೆ. ಪ್ರಿಯಾಂಕಾ ಅವರು ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ ಎಂಬುದಕ್ಕೆ ಇದು ಸೂಚನೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಹಿಂದೆ ಪ್ರಿಯಾಂಕಾ ಅವರು ತಮ್ಮ ತಾಯಿ ಸೋನಿಯಾ ಮತ್ತು ಸಹೋದರ ರಾಹುಲ್‌ ಗಾಂಧಿ ಅವರು ಪ್ರತಿನಿಧಿಸುವ ರಾಯ್‌ಬರೇಲಿ
ಮತ್ತು ಅಮೇಠಿ ಲೋಕಸಭಾ ಕ್ಷೇತ್ರಗಳಿಗೆ ಮಾತ್ರ ಗಮನ ಹರಿಸುತ್ತಿದ್ದರು. 

2014ರ ಲೋಕಸಭಾ ಚುನಾವಣೆ ನಂತರ ಅವರು ಕಾಂಗ್ರೆಸ್‌ನ ಕಾರ್ಯತಂತ್ರ ರೂಪಿಸುವಿಕೆಯಲ್ಲಿಯೂ ಅವರು ಭಾಗಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT