ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ಆಕ್ರೋಶ

ಸಮಸ್ಯೆ ಬಗೆಹರಿಸದಿದ್ದರೆ ಪಕ್ಷಕ್ಕೆ ಭವಿಷ್ಯವಿಲ್ಲ: ಹಿರಿಯ ನಾಯಕರ ಎಚ್ಚರಿಕೆ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಲಬುರ್ಗಿಯಲ್ಲಿ ಎರಡು ದಿನ ನಡೆದ  ಬಿಜೆಪಿ ಕಾರ್ಯಕಾರಿಣಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ.

ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಬಿಜೆಪಿಯ ಹಿರಿಯ ನಾಯಕರಾದ ಜಗದೀಶ ಶೆಟ್ಟರ್‌, ಪ್ರಹ್ಲಾದ ಜೋಶಿ, ಈಶ್ವರಪ್ಪ ಮತ್ತಿತರರು ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಯಡಿಯೂರಪ್ಪ ಅವರು ಎಲ್ಲ ವಿಷಯಗಳಲ್ಲೂ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಎಲ್ಲವನ್ನೂ ಒಬ್ಬರೇ ನಿರ್ಧರಿಸುವುದಾದರೆ ಪ್ರಮುಖರ ಸಮಿತಿ ಯಾಕೆ ಬೇಕು. ಅದನ್ನು ವಿಸರ್ಜಿಸಿ’ ಎಂದು ನಾಯಕರೊಬ್ಬರು ಮುರಳೀಧರರಾವ್‌ ಮುಂದೆ ಖಾರವಾಗಿಯೇ ಹೇಳಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಒಂದು ವರ್ಷದ ಹಿಂದೆ ಪ್ರಮುಖರ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿ ಪ್ರತಿ ತಿಂಗಳು ಸೇರಬೇಕು. ಎಲ್ಲ ಪ್ರಮುಖ ನಿರ್ಧಾರಗಳನ್ನು ಈ ಸಮಿತಿಯೇ ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೆ, ಆ ರೀತಿ ಆಗುತ್ತಿಲ್ಲ. ಒಂದು ವರ್ಷದಲ್ಲಿ ಎರಡು ಅಥವಾ ಮೂರು ಸಭೆಗಳೂ ನಡೆದಿಲ್ಲ. ಬೇಕಾದರೆ ದಾಖಲೆ ತರಿಸಿಕೊಂಡು ಪರಿಶೀಲಿಸಿ ಎಂದು ಈ ನಾಯಕರು ಒತ್ತಾಯಿಸಿದ್ದಾರೆ.

ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಬಿಜೆಪಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಅವರಿಗೆ ಬೇಕಾದವರಿಗೆ ಸ್ಥಾನ ನೀಡಿದ್ದು ಹಳೆಯ ಸುದ್ದಿ.    ವರಿಷ್ಠರ ಸೂಚನೆ ಬಳಿಕವೂ ಆಗಿರುವ ಲೋಪದೋಷಗಳನ್ನು ಸರಿಪಡಿಸಿಲ್ಲ. ಅಷ್ಟೇ ಅಲ್ಲ, ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ.
ವಿ.ವಿಗಳ  ಸಿಂಡಿಕೇಟ್‌ ಸೇರಿದಂತೆ ವಿವಿಧ ಸಮಿತಿಗಳಿಗೆ  ಬಿಜೆಪಿ ಸದಸ್ಯರಲ್ಲದವರ ಹೆಸರನ್ನು ಶಿಫಾರಸು ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

‘ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಹಿರಿಯ ಅಧಿಕಾರಿಯೊಬ್ಬರ ಪತ್ನಿಯನ್ನು ರಾಜ್ಯಪಾಲರು ನೇಮಿಸಿದ್ದಾರೆ. ಈ ಮಹಿಳೆ ಹೆಸರು ಶಿಫಾರಸು ಮಾಡುವ ಮುನ್ನ  ಯಾರೊಂದಿಗೂ ಚರ್ಚೆ ನಡೆಸಿಲ್ಲ. ಅಲ್ಲದೆ, ಯುವ ಮೋರ್ಚಾ ಉಪಾಧ್ಯಕ್ಷರಾಗಿ ಬೆಳಗಾವಿ ಕನ್ನಡ  ಸಂಘಟನೆಗೆ ಸೇರಿದ ಒಬ್ಬರನ್ನು ನೇಮಿಸಲಾಗಿದೆ. ಅವರು ನಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲ’ ಎಂದೂ ಈ ನಾಯಕರು ಆರೋಪಿಸಿದ್ದಾರೆ.

‘ಕಾಂಗ್ರೆಸ್‌ ಪಕ್ಷ ತ್ಯಜಿಸಿದ ಹಿರಿಯ ನಾಯಕ ವಿ. ಶ್ರೀನಿವಾಸ ಪ್ರಸಾದ್‌ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೊದಲು ಯಾರೊಂದಿಗೂ ಚರ್ಚಿಸಲಿಲ್ಲ.  ನಂಜನಗೂಡು ಉಪ ಚುನಾವಣೆಗೆ ಅವರು ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡುವಾಗಲೂ ಯಾರನ್ನೂ ಕೇಳಲಿಲ್ಲ. ಅವರು ನಮ್ಮ ಪಕ್ಷಕ್ಕೆ ಸೇರುವ ಮೊದಲೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಸರಿಯೇ’ ಎಂಬ ಪ್ರಶ್ನೆಗಳನ್ನು ಅವರು ರಾವ್‌ ಮುಂದೆ ಇಟ್ಟಿದ್ದಾರೆ.

ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕದಿದ್ದರೆ ಪಕ್ಷಕ್ಕೆ ದೊಡ್ಡ ಹಾನಿ ಆಗಲಿದೆ. ನಿಷ್ಠಾವಂತ ಕಾರ್ಯಕರ್ತರು ಪಕ್ಷದಿಂದ ದೂರ ಸರಿಯದಿದ್ದರೂ ತಟಸ್ಥರಾಗಿ ಉಳಿದುಬಿಡುವ ಅಪಾಯವಿದೆ ಎಂದು ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ವರಿಷ್ಠರು ತಕ್ಷಣ ಗಮನಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕರ ಮಾತುಗಳನ್ನು ಆಲಿಸಿದ ಮುರಳೀಧರರಾವ್‌, ಧೋರಣೆ ಸರಿಪಡಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ  ಕಿವಿಮಾತು ಹೇಳುವುದಾಗಿ ಭರವಸೆ ನೀಡಿದ್ದಾರೆ.

‘ಗೊಂದಲಕ್ಕೆ ಬಿಎಸ್‌ವೈ, ಶೋಭಾ ಕಾರಣ’

‘ಬಿಜೆಪಿ ಕಾರ್ಯಕಾರಿಣಿಯಲ್ಲಿ ಶನಿವಾರ ನಡೆದ ಗದ್ದಲಕ್ಕೆ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರೇ ಕಾರಣ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ನಾಯಕರೊಬ್ಬರು ಆರೋಪಿಸಿದ್ದಾರೆ.

ಈಶ್ವರಪ್ಪನವರ ವಿರುದ್ಧ ತಮ್ಮ ಬೆಂಬಲಿಗರನ್ನು ಎತ್ತಿಕಟ್ಟುವ ಕೆಲಸವನ್ನು ಯಡಿಯೂರಪ್ಪ ವೇದಿಕೆಯಿಂದಲೇ ನಿರ್ವಹಿಸುತ್ತಿದ್ದರು. ಆಗಿಂದಾಗ್ಗೆ ಅವರು ತಮ್ಮ ನಿಷ್ಠಾವಂತರಿಗೆ ಕೈಸನ್ನೆ ಮಾಡುತ್ತಿದ್ದರು. ಶೋಭಾ ಅವರು ತಮ್ಮ ಸ್ಥಾನದಿಂದ ಎದ್ದು ಹೋಗಿ ಬೇರೆಯವರ ಜತೆ ಮಾತನಾಡುತ್ತಿದ್ದರು ಎಂದೂ ಅವರು ದೂರಿದ್ದಾರೆ.

ಬ್ರಿಗೇಡ್‌ ವಿರುದ್ಧ ಗದ್ದಲ ಎಬ್ಬಿಸಿದವರ ಹೆಸರುಗಳನ್ನು ನೋಡಿದರೆ ಸಾಕು, ಅವರು ಯಾರೆಂದು ನಿಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT