ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿತಪ್ಪಿದ ಹಿರಾಖಂಡ ಎಕ್ಸ್‌ಪ್ರೆಸ್‌: 39 ಸಾವು

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಕುನೇರು (ಆಂಧ್ರಪ್ರದೇಶ): ಜಗದಾಲ್ಪುರ – ಭುವನೇಶ್ವರ ಹಿರಾಖಂಡ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಮತ್ತು ಒಂಬತ್ತು ಬೋಗಿಗಳು ಶನಿವಾರ ರಾತ್ರಿ ಹಳಿತಪ್ಪಿದ್ದರಿಂದ ಸಂಭವಿಸಿದ ಅಪಘಾತದಲ್ಲಿ 39 ಜನ ಪ್ರಾಣ ಕಳೆದುಕೊಂಡಿದ್ದಾರೆ.

ನಕ್ಸಲೀಯರ ಹಾವಳಿ ಇರುವ ಪ್ರದೇಶದಲ್ಲಿ ನಡೆದ ಈ ಅಪಘಾತದಲ್ಲಿ 69 ಜನರಿಗೆ ಗಾಯಗಳಾಗಿವೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದ್ದು, ಇದು ದುಷ್ಕರ್ಮಿಗಳ ವಿಧ್ವಂಸಕ ಕೃತ್ಯ ಆಗಿರಬಹುದು ಎಂದು ರೈಲ್ವೆ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಈಚಿನ ದಿನಗಳಲ್ಲಿ ಸಂಭವಿಸಿರುವ ಮೂರನೆಯ ರೈಲು ಅಪಘಾತ ಇದು.

ಭುವನೇಶ್ವರಕ್ಕೆ ಹೋಗುತ್ತಿದ್ದ ರೈಲಿನ ಒಂಬತ್ತು ಬೋಗಿಗಳು ಕುನೇರು ರೈಲು ನಿಲ್ದಾಣದ ಬಳಿ ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಹಳಿತಪ್ಪಿದವು ಎಂದು ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಪಿ. ಮಿಶ್ರ ತಿಳಿಸಿದರು.

ಗಾಯಗೊಂಡವರ ಪೈಕಿ ಏಳು ಜನರ ಪರಿಸ್ಥಿತಿ ಗಂಭೀರವಾಗಿದೆ. 20 ಜನರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಎರಡು ಎ.ಸಿ. ಬೋಗಿಗಳು, ನಾಲ್ಕು ಸ್ಲೀಪರ್‌ ಬೋಗಿಗಳು, ಎರಡು ಸಾಮಾನ್ಯ ಬೋಗಿಗಳು, ಭದ್ರತಾ ಸಿಬ್ಬಂದಿ ಮತ್ತು  ಪ್ರಯಾಣಿಕರು ಇರುವ ಒಂದು ಬೋಗಿಗೆ ಹಾನಿ ಆಗಿದೆ. ಇವುಗಳಲ್ಲಿ ನಾಲ್ಕು ಬೋಗಿಗಳು ಬುಡಮೇಲಾಗಿವೆ.

‘ರೈಲು ಒಂದೆಡೆ ಜಗ್ಗಿದಂತಾಯಿತು, ದೊಡ್ಡ ಶಬ್ದ ಕೇಳಿತು. ಆಗ ರೈಲು ಚಾಲಕ ತುರ್ತು ಬ್ರೇಕ್‌ ಹಾಕಿದ. ನಕ್ಸಲ್‌ ಹಾವಳಿ ಇರುವ ಪ್ರದೇಶ ಇದು. ಗಣರಾಜ್ಯೋತ್ಸವಕ್ಕೆ ಕೆಲವೇ ದಿನ ಇರುವಾಗ ಈ ಅಪಘಾತ ಸಂಭವಿಸಿದೆ’ ಎಂದು ರೈಲ್ವೆ ವಕ್ತಾರ ಅನಿಲ್ ಸಕ್ಸೇನಾ ಹೇಳಿದರು.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿ, ವೈದ್ಯರು ಮತ್ತು ಸ್ಥಳೀಯ ಪೊಲೀಸರು ಪರಿಹಾರ ಕಾರ್ಯಾಚರಣೆಯನ್ನು ರಾತ್ರಿಯಿಡೀ ನಡೆಸಿದ್ದಾರೆ.

ಗಾಯಾಳುಗಳನ್ನು ವಿಜಯನಗರಂ ಜಿಲ್ಲೆಯ ರಾಯಗಡ ಮತ್ತು ಪಾರ್ವತಿಪುರಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಗಣರಾಜ್ಯೋತ್ಸವ ಹತ್ತಿರವಾಗುವ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ರೈಲ್ವೆ ಸುರಕ್ಷಾ ದಳ ತಪಾಸಣೆ ಹೆಚ್ಚಿಸಿತ್ತು. ಈ ಹೊತ್ತಿನಲ್ಲೇ ಅಪಘಾತ ಸಂಭವಿಸಿದೆ.

ಅಪಘಾತದಿಂದಾಗಿ ರಾಯಗಡ ಮತ್ತು ವಿಜಯನಗರಂ ಪ್ರದೇಶದಲ್ಲಿ ರೈಲು ಸೇವೆಗಳಿಗೆ ಅಡಚಣೆ ಉಂಟಾಯಿತು.

ಪರಿಸ್ಥಿತಿ ಅವಲೋಕಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚಿಸಿದ್ದಾರೆ.

ಮೃತರ ಪೈಕಿ 18 ಜನರ ಗುರುತು ಪತ್ತೆಯಾಗಿದೆ. ಮೃತರಲ್ಲಿ ಹೆಚ್ಚಿನವರು ಒಡಿಶಾದವರು. 13 ಬೋಗಿಗಳಿಗೆ ಯಾವುದೇ ಹಾನಿ ಆಗಿಲ್ಲ. ಇವು ರಾಯಗಡಕ್ಕೆ ತೆರಳಿವೆ. ಅಲ್ಲಿಂದ ಇವು ಭುವನೇಶ್ವರಕ್ಕೆ ತೆರಳಲಿವೆ.

ಎನ್‌ಐಎಯಿಂದ ತನಿಖೆ ಸಾಧ್ಯತೆ

ವಿಧ್ವಂಸಕ ಕೃತ್ಯದಿಂದಾಗಿ ರೈಲು ಅಪಘಾತದ ಸಂಭವಿಸಿತೇ ಎಂಬುದನ್ನು ಪರಿಶೀಲಿಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸೂಚಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. 150 ಜನರ ಸಾವಿಗೆ ಕಾರಣವಾದ, 2016ರ ನವೆಂಬರ್ 20ರಂದು ಸಂಭವಿಸಿದ ಇಂದೋರ್ – ಪಟ್ನಾ ಎಕ್ಸ್‌ಪ್ರೆಸ್‌ ರೈಲು ಅಪಘಾತದ ಹಿಂದೆ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ ಕೈವಾಡ ಇದೆಯೇ ಎಂಬ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.

ವಿಧ್ವಂಸಕ ಕೃತ್ಯ?
ಪ್ರಯಾಣಿಕ ರೈಲು ಬರುವ ಎರಡು ಗಂಟೆಗಳ ಮೊದಲು ಸರಕು ಸಾಗಣೆ ರೈಲೊಂದು ಇದೇ ಮಾರ್ಗದಲ್ಲಿ ಸಾಗಿದೆ. ಹಾಗಾಗಿ, ಪ್ರಯಾಣಿಕ ರೈಲು ಅಪಘಾತಕ್ಕೆ ತುತ್ತಾಗಿರುವುದರ ಹಿಂದೆ ದುಷ್ಕರ್ಮಿಗಳ ಕೈವಾಡ ಇರುವ ಅನುಮಾನ ಇದೆ ಎಂದು ರೈಲ್ವೆ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದ್ದಾರೆ.

ಅಪಘಾತದ ಹಿಂದೆ ನಕ್ಸಲೀಯರ ಕೈವಾಡವನ್ನು ಒಡಿಶಾ ಪೊಲೀಸರು ಅಲ್ಲಗಳೆದಿದ್ದಾರೆ. ರೈಲ್ವೆ ಹಳಿಯಲ್ಲಿನ ಬಿರುಕು ಈ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಬಿರುಕಿಗೆ ದುಷ್ಕರ್ಮಿಗಳ ಕೃತ್ಯ ಕಾರಣವೇ, ಹಳಿಯನ್ನು ದುರಸ್ತಿ ಮಾಡದಿರುವುದು ಕಾರಣವೇ ಎಂಬುದು ಖಚಿತವಾಗಿಲ್ಲ. ‘ಶನಿವಾರ ಬೆಳಿಗ್ಗೆ ತಪಾಸಣೆ ನಡೆಸಿದ್ದ ರೈಲ್ವೆ ತಂಡ, ರೈಲು ಹಳಿಯಲ್ಲಿ ಸಮಸ್ಯೆ ಇಲ್ಲವೆಂದು ಹೇಳಿತ್ತು. ನೈಜ ಕಾರಣ ಏನು ಎಂಬುದು ತನಿಖೆ ನಡೆಸಿದ ನಂತರವೇ ಗೊತ್ತಾಗಲಿದೆ’ ಎಂದು ಸಕ್ಸೇನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT