ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘೋಷಿತ ಹಣ ಮುಚ್ಚಿಡಲಾಗದು

ಕಪ್ಪು ಹಣ ಬಚ್ಚಿಟ್ಟವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಕಾಳಧನಿಕರು ಸಂಪತ್ತಿನ ಬಗ್ಗೆ ಮಾಹಿತಿ ಬಹಿರಂಗಪಡಿಸದಿದ್ದರೂ ನಮ್ಮಿಂದ ಅದನ್ನು ಬಚ್ಚಿಡಲು ಸಾಧ್ಯವಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
 
ಜೊತೆಗೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (ಪಿಎಂಜಿಕೆವೈ) ಮೂಲಕ ತೆರಿಗೆ ಪಾವತಿಸದಿರುವ ಸಂಪತ್ತಿನ ಮಾಹಿತಿ ಬಹಿರಂಗಪಡಿಸುವಂತೆ ಸಲಹೆ ನೀಡಿದೆ.
 
ಈ ವಿಚಾರವಾಗಿ ರಾಷ್ಟ್ರಮಟ್ಟದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನೂ ಇಲಾಖೆ ಪ್ರಕಟಿಸಿದೆ. ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಿದ ನಂತರ ಸರ್ಕಾರ ಘೋಷಿಸಿರುವ ಪಿಎಂಜಿಕೆ ಯೋಜನೆಯ ಕುರಿತು ಮಾಹಿತಿಯನ್ನೂ ಜಾಹೀರಾತಿನಲ್ಲಿ ನೀಡಿದೆ.
 
‘ಮಾಹಿತಿ ಬಹಿರಂಗಪಡಿಸದ ನಿಮ್ಮ ಸಂಪತ್ತನ್ನು ಪಿಎಂಜಿಕೆ ಯೋಜನೆಯಲ್ಲಿ ಹೂಡಿಕೆ ಮಾಡಿ. ಬಡವರ ಸಾಮಾಜಿಕ – ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿ’ ಎಂದು ಜಾಹೀರಾತಿನಲ್ಲಿ ಇಲಾಖೆ ಕರೆ ನೀಡಿದೆ. ಇದರ ಜೊತೆ ₹500 ಮತ್ತು ಸಾವಿರ ಮುಖ ಬೆಲೆಯ ಹಳೆಯ ನೋಟುಗಳ ಚಿತ್ರವನ್ನೂ ಪ್ರಕಟಿಸಲಾಗಿದೆ.
 
‘ಬಚ್ಚಿಟ್ಟ ಆದಾಯಕ್ಕೆ ತೆರಿಗೆ, ಹೆಚ್ಚುವರಿ ತೆರಿಗೆ ವಿಧಿಸಲಾಗುವುದು. ಇದರ ಒಟ್ಟು ಪ್ರಮಾಣ ಸಂಪತ್ತಿನ ಶೇ 77.25ರಷ್ಟಾಗುತ್ತದೆ. ಇದಲ್ಲದೆ, ದಂಡ ಮತ್ತು ಶಿಕ್ಷೆಯನ್ನೂ ವಿಧಿಸಲಾಗುವುದು. ಪಿಎಂಜಿಕೆ ಯೋಜನೆ ಮಾರ್ಚ್ 31ರವರೆಗೂ ಜಾರಿಯಲ್ಲಿರುತ್ತದೆ. ಇದರ ಪ್ರಯೋಜನ ಪಡೆದು ಸಂಪತ್ತಿನ ಮಾಹಿತಿ ನೀಡಿದರೆ ಗೋಪ್ಯತೆ ಕಾಪಾಡುವ ಖಾತರಿ ನೀಡುತ್ತೇವೆ’ ಎಂದೂ ಇಲಾಖೆ ಹೇಳಿದೆ.
 
ಇದುವರೆಗೆ ದೇಶದಾದ್ಯಂತ ಸುಮಾರು ₹300 ಕೋಟಿ ಅಕ್ರಮ ಸಂಪತ್ತಿನ ಬಗ್ಗೆ ಮಾಹಿತಿ ಬಹಿರಂಗಪಡಿಸಿರುವುದನ್ನು ದೃಢೀಕರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
 
**
ತನಿಖಾ ಸಂಸ್ಥೆಗಳಿಗೆ ನೋಟು ರದ್ದತಿಯ ಇಕ್ಕಟ್ಟು
ನವದೆಹಲಿ: ಸಿಬಿಐ ಮತ್ತು ಎನ್‌ಐಎಯಂತಹ ತನಿಖಾ ಸಂಸ್ಥೆಗಳು ₹500 ಮತ್ತು ₹1,000 ಮುಖಬೆಲೆಯ ನೋಟುಗಳ ರದ್ದತಿ ನಂತರ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿವೆ.
 
ವಶಕ್ಕೆ ಪಡೆದಿರುವ ಅಕ್ರಮ ಹಣವನ್ನು ಪುರಾವೆಯಾಗಿ ಸಂರಕ್ಷಿಸಿ ಇರಿಸಬೇಕೇ ಅಥವಾ ಈ ನೋಟುಗಳು ಬೆಲೆ ಕಳೆದುಕೊಳ್ಳುವ ಮೊದಲು ಅವುಗಳನ್ನು ಬ್ಯಾಂಕುಗಳಲ್ಲಿ ಜಮೆ ಮಾಡಬೇಕೇ ಎಂಬ ದ್ವಂದ್ವ ಮೂಡಿದೆ. ಆರೋಪಿಗಳಿಗೂ ಇದೇ ದ್ವಂದ್ವ ಇದೆ. ವಶಪಡಿಸಿಕೊಂಡ ಹಣವನ್ನು ತನಿಖಾ ಸಂಸ್ಥೆಗಳು ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಕ್ಕೆ ಅವರು ಒಪ್ಪಿಗೆ ನೀಡಬೇಕು. ಇಂತಹ ಒಪ್ಪಿಗೆ ನೀಡಿದರೆ ಮುಂದೆ ತನಿಖಾ ಸಂಸ್ಥೆಗಳು ಹಣ ವಶಪಡಿಸಿಕೊಂಡೇ ಇಲ್ಲ ಎಂಬ ವಾದವನ್ನು ಅವರು ಮಂಡಿಸುವಂತಿಲ್ಲ. ಹಾಗೆಯೇ ವಶಪಡಿಸಿಕೊಂಡ ನೋಟುಗಳು ಯಾವುವು ಎಂಬುದನ್ನು ಮುಂದೆ ಗುರುತಿಸುವುದಕ್ಕೂ ಸಾಧ್ಯವಾಗುವುದಿಲ್ಲ.
 
ಭಾರತೀಯ ಕರಕುಶಲ ವಸ್ತುಗಳು ಮತ್ತು ಕೈಮಗ್ಗ ರಫ್ತು ನಿಗಮದ ಉಪಪ್ರಧಾನ ವ್ಯವಸ್ಥಾಪಕ ಅಷುತೋಷ್‌ ಕುಮಾರ್‌ ಸಿಂಗ್‌ ಅವರಿಂದ ವಶಪಡಿಸಿಕೊಳ್ಳಲಾದ ₹3 ಲಕ್ಷವನ್ನು ಬ್ಯಾಂಕ್‌ಗೆ ಜಮೆ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಇದಕ್ಕೆ ಸಿಂಗ್‌ ಅವರೂ ಒಪ್ಪಿಗೆ ನೀಡಿದ್ದರು. ವಶಪಡಿಸಿಕೊಂಡ ಹಣ ಅಮೌಲಿಕವಾಗುವುದನ್ನು ತಡೆಯಲು ಅದನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಅವಕಾಶ ನೀಡುವಂತೆ ಸಿಬಿಐ ಕೋರಿತ್ತು.
 
ಭಾರತೀಯ ವೈದ್ಯಕೀಯ ಮಂಡಳಿಯ ಮಾಜಿ ಅಧ್ಯಕ್ಷ ಕೇತನ್‌ ದೇಸಾಯಿ ಅವರಿಂದ ಆರು ವರ್ಷಗಳ ಹಿಂದೆ ವಶಪಡಿಸಿಕೊಳ್ಳಲಾದ ₹2 ಕೋಟಿಯನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಸಿಬಿಐ ನಿರಾಕರಿಸಿದೆ. 
 
ಇದು ಲಂಚದ ಹಣ. ಹಾಗಾಗಿ ಇವು ಮುಖ್ಯ ಪುರಾವೆಗಳು ಸಿಬಿಐ ಹೇಳಿದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT