ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಕ್ಕೆ ಕರಾವಳಿಗರ ಪಟ್ಟು

ತಮಿಳುನಾಡಿನ ನಂತರ ತುಳುನಾಡಿನ ಸರದಿ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅನುಮತಿ ನೀಡಿರುವ ಬೆನ್ನಲ್ಲೇ ತುಳುನಾಡಿನಲ್ಲೂ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಆಚರಣೆಗೆ ಬೇಡಿಕೆ ವ್ಯಾಪಕವಾಗುತ್ತಿದೆ.

ತಮಿಳುನಾಡಿನ ಜನರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದ್ದು, ಅದೇ ರೀತಿಯ ಹೋರಾಟಕ್ಕೆ ತುಳುನಾಡಿನಲ್ಲೂ ಸಿದ್ಧತೆಗಳು ನಡೆದಿವೆ.

ಜಲ್ಲಿಕಟ್ಟಿಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಕಂಬಳ ಕುರಿತ ಮುಂದಿನ ಹೋರಾಟ-ನಡೆ ಕುರಿತು ನಿರ್ಧರಿಸಲು ಮೂಡುಬಿದಿರೆಯಲ್ಲಿ ಕಂಬಳ ಸಮಿತಿ ತುರ್ತು ಸಭೆ ನಡೆಸಲಾಗಿದೆ.  ‘ತಮಿಳುನಾಡಿನಲ್ಲಿ ನಡೆದ ವ್ಯಾಪಕ ಹೋರಾಟ ಹಾಗೂ ಅದಕ್ಕೆ ವ್ಯವಸ್ಥೆಯೇ ಮಣಿದಿರುವ ಪರಿಣಾಮದ ಲಾಭ ಕರಾವಳಿ ಕರ್ನಾಟಕದ ಜನಪದ ಆಚರಣೆಯಾಗಿರುವ ಕಂಬಳಕ್ಕೂ ಸಿಗುವ ಸಾಧ್ಯತೆಗಳಿವೆ.

ಜಲ್ಲಿಕಟ್ಟು ಸಂಸ್ಕೃತಿಯ ಭಾಗವಾಗಿರುವುದು ಹೌದಾದರೆ, ಕಂಬಳವೂ ಅದೇ ಸಾಲಿಗೆ ಸೇರುತ್ತದೆ’ ಎಂದು ಕಂಬಳ ಸಮಿತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಬಾರ್ಕೂರು ಹಾಗೂ ಕಂಬಳ ತಜ್ಞ ಗುಣಪಾಲ ಕಡಂಬ ಹೇಳಿದ್ದಾರೆ.

ಸದ್ಯದ ಬೆಳವಣಿಗೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವರೊಂದಿಗೆ ಮಾತುಕತೆ ಮಾಡುತ್ತೇನೆ. ಸದ್ಯದಲ್ಲೇ  ಹೊರಬೀಳುವ ಹೈಕೋರ್ಟ್ ತೀರ್ಪಿಗೆ ಕಾಯಲಾಗುವುದು. ಒಂದು ವೇಳೆ ಅಗತ್ಯ ಎನಿಸಿದರೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಈ ಬಗ್ಗೆ ಕಾನೂನು ರಚಿಸಲಾಗುವುದು’ ಎಂದು ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ ಹೇಳುತ್ತಾರೆ.

ಇನ್ನೊಂದೆಡೆ ರಾಜಕೀಯ ಪಕ್ಷಗಳಲ್ಲೂ ಒಮ್ಮತ ವ್ಯಕ್ತವಾಗುತ್ತಿದ್ದು, ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಕಂಬಳದ ಪರವಾಗಿ ಮಾತನಾಡುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಕೂಡ ಹೋರಾಟವನ್ನು ಆರಂಭಿಸಿದೆ.

******

ಕರಾವಳಿಯ ಜನಪದ ಕಲೆಯಾಗಿರುವ ಕಂಬಳವನ್ನು ಉಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಕಂಬಳ ಆಚರಣೆಗೆ ಬೆಂಬಲ ನೀಡಲಿದೆ.
ಐವನ್‌ ಡಿಸೋಜ
ವಿಧಾನ ಪರಿಷತ್ ಮುಖ್ಯ ಸಚೇತಕ

ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ ಹೊರಡಿಸುವುದಾದರೆ ಕಂಬಳಕ್ಕೆ ಯಾಕೆ ಸಾಧ್ಯವಿಲ್ಲ? ಒಟ್ಟಾರೆ ಬೆಳವಣಿಗೆಗಳಿಂದ ಕಂಬಳ ಪರ ಹೋರಾಟಕ್ಕೆ ಬಲ ಸಿಕ್ಕಿದೆ.
ಶಾಂತಾರಾಮ ಶೆಟ್ಟಿ ಬಾರ್ಕೂರು
ಕಂಬಳ ಸಮಿತಿ ಅಧ್ಯಕ್ಷ

ಕಂಬಳದ ಮೇಲಿನ ನಿಷೇಧ ಹಿಂತೆಗೆತಕ್ಕೆ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಕಾನೂನು ಸಚಿವರು ಕೇಂದ್ರ ಸರ್ಕಾರಕ್ಕೆ ಪ್ರಬಲ ಬೇಡಿಕೆ ಸಲ್ಲಿಸಬೇಕು.
ನಳಿನ್‌ಕುಮಾರ್‌ ಕಟೀಲು
ಸಂಸದ

ಕಂಬಳದ ಮೇಲಿನ ನಿರ್ಬಂಧದ ವಿಚಾರ ಇನ್ನೂ ಹೈಕೋರ್ಟ್‌ನಲ್ಲಿದೆ. ಕಂಬಳದ ಬಗ್ಗೆ ತೀರ್ಪು ಹೊರಬಿದ್ದ ಬಳಿಕ ಸಾಧಕ ಬಾಧಕಗಳ ಬಗ್ಗೆ ಚರ್ಚಿಸೋಣ.
ಆಸ್ಕರ್‌ ಫರ್ನಾಂಡಿಸ್‌
ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT