ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ಕಪ್‌: ಗುಜರಾತ್‌ ಹಿಡಿತದಲ್ಲಿ ಪಂದ್ಯ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ
ಮುಂಬೈ: ರಣಜಿ ಟ್ರೋಫಿ ಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿರುವ ಗುಜರಾತ್‌ ತಂಡ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಳ್ಳುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
 
ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇರಾನಿ ಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ಇತರೆ ತಂಡವನ್ನು ಬೇಗನೆ ಕಟ್ಟಿಹಾಕಿರುವ ಪಾರ್ಥಿವ್‌ ಪಟೇಲ್‌ ಪಡೆ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿದೆ.
 
9 ವಿಕೆಟ್‌ಗೆ 206ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ಚೇತೇಶ್ವರ ಪೂಜಾರ ಬಳಗ ಮೊದಲ ಇನಿಂಗ್ಸ್‌ನಲ್ಲಿ  75 ಓವರ್‌ಗಳಲ್ಲಿ 226 ರನ್‌ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
 
132ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ  ಗುಜರಾತ್‌ ದಿನದಾಟದ ಅಂತ್ಯಕ್ಕೆ 79 ಓವರ್‌ಗಳಲ್ಲಿ 8 ವಿಕೆಟ್‌ಗೆ 227ರನ್ ಸಂಗ್ರಹಿಸಿದೆ. ಈ ಮೂಲಕ ಪಾರ್ಥಿವ್‌ ಪಟೇಲ್‌ ಪಡೆ ಒಟ್ಟು ಮುನ್ನಡೆಯನ್ನು 359ಕ್ಕೆ ಹೆಚ್ಚಿಸಿಕೊಂಡಿದೆ.
 
ಆರಂಭಿಕ ಸಂಕಷ್ಟ: ಎದುರಾಳಿಗಳನ್ನು ಬೇಗನೆ ಕಟ್ಟಿಹಾಕಿದ ಖುಷಿಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ರಣಜಿ ಚಾಂಪಿಯನ್ನರಿಗೆ ಆರಂಭಿಕ ಆಘಾತ ಎದುರಾಯಿತು. ಸಮಿತ್‌ ಗೊಹೆಲ್‌ (1), ಪಂಕಜ್‌ ಸಿಂಗ್‌ ಬೌಲ್‌ ಮಾಡಿದ ಇನಿಂಗ್ಸ್‌ನ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಅಭಿನವ್‌ ಮುಕುಂದ್‌ಗೆ ಕ್ಯಾಚ್‌ ನೀಡಿ ಹೊರನಡೆದರು.
 
ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಗೊಹೆಲ್‌ ಮತ್ತೊಮ್ಮೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲು ವಿಫಲರಾದರು. ಇದರ ಬೆನ್ನಲ್ಲೇ ಧ್ರುವ ರಾವಲ್‌ (23; 64ಎ, 4ಬೌಂ) ಕೂಡಾ ಪೆವಿಲಿಯನ್‌ ಸೇರಿಕೊಂಡರು.
 
ಆದರೆ ಪ್ರಿಯಾಂಕ್‌ ಪಾಂಚಾಲ್‌ (73; 135ಎ, 9 ಬೌಂ) ಮತ್ತು ನಾಯಕ ಪಾರ್ಥಿವ್‌ ಪಟೇಲ್‌ (32; 53ಎ, 3ಬೌಂ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಇವರು ಮೂರನೇ ವಿಕೆಟ್‌ಗೆ 17.2 ಓವರ್‌ಗಳಲ್ಲಿ 85ರನ್‌ ಕಲೆಹಾಕಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು.
 
 ತಂಡದ ಮೊತ್ತ 127ರನ್‌ ಆಗಿದ್ದ ವೇಳೆ ಪಾಂಚಾಲ್‌, ಸಿದ್ದಾರ್ಥ್‌ ಕೌಲ್‌ಗೆ ವಿಕೆಟ್‌ ಒಪ್ಪಿಸಿದರು. 48ನೇ ಓವರ್‌ನಲ್ಲಿ ಪಾರ್ಥಿವ್‌ ಕೂಡಾ ಔಟಾದರು. ಇವರ ವಿಕೆಟ್‌ ಪತನದ ಬಳಿಕ ಗುಜರಾತ್‌ ತಂಡ ಕುಸಿತದ ಹಾದಿ ಹಿಡಿಯಿತು. ಮನ್‌ಪ್ರೀತ್‌ ಜುನೇಜ (12), ಕರಣ್‌ ಪಟೇಲ್‌ (15), ಮೋಹಿತ್‌ ತದಾನಿ (11) ಮತ್ತು ಚಿಂತನ್‌ ಗಜ (2) ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು.
 
ದಿಟ್ಟ ಆಟ: ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕೂಡಾ ಚಿರಾಗ್‌ ಗಾಂಧಿ (ಬ್ಯಾಟಿಂಗ್‌್ 55; 96ಎ, 7ಬೌಂ) ಎದೆಗುಂದಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಮಿಂಚಿದ್ದ ಅವರು ಮತ್ತೊಮ್ಮೆ ಭಾರತ ಇತರೆ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು.
 
ಸಂಕ್ಷಿಪ್ತ ಸ್ಕೋರ್‌:
ಗುಜರಾತ್‌: ಮೊದಲ ಇನಿಂಗ್ಸ್‌: 102.5 ಓವರ್‌ಗಳಲ್ಲಿ 358 ಮತ್ತು 79 ಓವರ್‌ಗಳಲ್ಲಿ 8 ವಿಕೆಟ್‌ಗೆ 227 (ಪ್ರಿಯಾಂಕ್‌ ಪಾಂಚಾಲ್‌ 73, ಧ್ರುವ ರಾವಲ್‌ 23, ಪಾರ್ಥಿವ್‌ ಪಟೇಲ್‌ 32, ಮನ್‌ಪ್ರೀತ್‌ ಜುನೇಜ 12, ಚಿರಾಗ್‌ ಗಾಂಧಿ ಬ್ಯಾಟಿಂಗ್‌ 55, ಕರಣ್‌ ಪಟೇಲ್‌ 15, ಮೋಹಿತ್‌ ತದಾನಿ 11; ಶಹಬಾಜ್‌ ನದೀಮ್‌ 53ಕ್ಕೆ4, ಮಹಮ್ಮದ್‌ ಸಿರಾಜ್‌ 39ಕ್ಕೆ2, ಪಂಕಜ್‌ ಸಿಂಗ್‌ 43ಕ್ಕೆ1, ಸಿದ್ದಾರ್ಥ್‌ ಕೌಲ್‌ 66ಕ್ಕೆ1).
 
ಭಾರತ ಇತರೆ : ಪ್ರಥಮ ಇನಿಂಗ್ಸ್‌: 75 ಓವರ್‌ಗಳಲ್ಲಿ 226 (ಪಂಕಜ್‌ ಸಿಂಗ್‌ ಔಟಾಗದೆ 9, ಮಹಮ್ಮದ್‌ ಸಿರಾಜ್‌ 26; ಚಿಂತನ್‌ ಗಜ 60ಕ್ಕೆ4, ಮೋಹಿತ್‌ ತದಾನಿ 48ಕ್ಕೆ2, ಹಾರ್ದಿಕ್‌ ಪಟೇಲ್‌ 79ಕ್ಕೆ3, ಈಶ್ವರ್‌ ಚೌಧರಿ 28ಕ್ಕೆ1).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT