ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಿತ್ತುಕೊಂಡ ನೋಟು ರದ್ದತಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಶಾಂತ್‌ ಭೂಷಣ್ ವಾಗ್ದಾಳಿ
Last Updated 22 ಜನವರಿ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ನೋಟು ರದ್ದತಿ ದೇಶದ ಜನರ ಬದುಕು, ಉದ್ಯೋಗ, ಹಣ ಎಲ್ಲವನ್ನೂ ಕಿತ್ತುಕೊಂಡಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಏಕಪಕ್ಷೀಯ ನಿರ್ಧಾರ’ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಮತ್ತು ಸ್ವರಾಜ್ ಅಭಿಯಾನ ವತಿಯಿಂದ ಏರ್ಪಡಿಸಿದ್ದ ‘ನೋಟು ರದ್ದತಿ ನಿರ್ಧಾರದ ಸಾಧಕ-ಬಾಧಕಗಳ ಕುರಿತ ಮುಕ್ತ ಸಂವಾದ’ದಲ್ಲಿ ಅವರು ಮಾತನಾಡಿದರು.

‘ಮೊದಲು ಕಪ್ಪು ಹಣ ಹಾಗೂ ಭಯೋತ್ಪಾದನೆ ತಡೆಗಾಗಿ ನೋಟು ರದ್ದತಿ ಮಾಡುತ್ತಿರುವುದಾಗಿ ಹೇಳಿದ್ದರು. ಈಗ ನಗದುರಹಿತ ವ್ಯವಸ್ಥೆ ರೂಪಿಸಲು ಎನ್ನುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಯೋಜನೆಗಳು ಬದಲಾಗುತ್ತಿವೆ’ ಎಂದು ಹೇಳಿದರು.

‘ದೇಶದ ಶೇ 50ರಷ್ಟು ಜನರಲ್ಲಿ ಬ್ಯಾಂಕ್ ಖಾತೆಯೇ ಇಲ್ಲ. ಇಂತಹ ಸನ್ನಿವೇಶದಲ್ಲಿ ನಗದುರಹಿತ ಆರ್ಥಿಕತೆ ನಿರ್ಮಿಸಲು ಹೇಗೆ ಸಾಧ್ಯ? ಉತ್ಪಾದನಾ ವಲಯದಲ್ಲೂ ಶೇ 35ರಷ್ಟು ಉದ್ಯೋಗ ಕಡಿತವಾಗಿದೆ. ಮುಂದಿನ ಒಂದು ವರ್ಷದಲ್ಲಿ ದೇಶದ ಅಭಿವೃದ್ಧಿ ದರ ಋಣಾತ್ಮಕವಾಗಲಿದೆ’ ಎಂದು ಎಚ್ಚರಿಸಿದರು.

‘ಕಪ್ಪುಹಣ ಮತ್ತು ಭ್ರಷ್ಟಾಚಾರ  ಖಂಡಿತವಾಗಿ ದೇಶದ ಮುಂದಿರುವ ದೊಡ್ಡ ಸಮಸ್ಯೆಗಳೇ. ಆದರೆ, ಅವರ ನೋಟು ರದ್ದತಿಯ ಕ್ರಮದ ಹಿಂದಿನ ಉದ್ದೇಶ ಈ ಸಮಸ್ಯೆಗಳನ್ನು ನಿವಾರಣೆ ಮಾಡುವುದೇ ಆಗಿತ್ತೇ ಎಂಬುದು ಸದ್ಯ ಎದ್ದಿರುವ ಪ್ರಶ್ನೆ’ ಎಂದು ವಿಶ್ಲೇಷಿಸಿದರು.

‘ಅನಾಮಿಕ ಕಂಪೆನಿಯೊಂದನ್ನು ಹುಟ್ಟುಹಾಕಿ ಅದರಲ್ಲಿ ಹೂಡಿಕೆ ಮಾಡುವುದು. ನಂತರ ಆ ಕಂಪೆನಿಯ ಮೂಲಕ ವಿದೇಶಿ ನೇರ ಹೂಡಿಕೆ ಹೆಸರಿನಲ್ಲಿ ಭಾರತದಲ್ಲಿ ಹೂಡಿಕೆ ಮಾಡುವುದು. ಹೀಗೆ ಹೂಡಿಕೆ ಮಾಡಿದ ನಂತರ ಇಲ್ಲಿ ಗಳಿಸುವ ಯಾವುದೇ ಮೊತ್ತದ ಲಾಭಕ್ಕೆ ತೆರಿಗೆ ಇರುವುದಿಲ್ಲ. ಇಂತಹ ಬೇನಾಮಿ ಕಂಪೆನಿಗಳ ಮೂಲಕ ಹೂಡಿಕೆಯಾಗುವ ಬಂಡವಾಳ ಯಾರದ್ದು ಎಂಬ ಬಗ್ಗೆ ನಮ್ಮ  ಅಧಿಕಾರಿಗಳಿಗೆ ಕನಿಷ್ಠ ಮಾಹಿತಿ ಇಲ್ಲ’ ಎಂದು ದೂರಿದರು.
‘ರಿಲಯನ್ಸ್ ಕಂಪೆನಿ ತನ್ನ ಸಾಗರೋತ್ತರ ಅನಿಲ ಉದ್ಯಮದಲ್ಲಿ ರಿಗ್ಗಿಂಗ್ ಉಪಕರಣ ತರಿಸಲು ಆಮದು ಮಾಡಿದ ವ್ಯವಹಾರದಲ್ಲಿ ಅಕ್ರಮಗಳು ನಡೆದಿರುವುದು ಗಮನಕ್ಕೆ ಬಂದಾಗಲೂ ಪ್ರಧಾನಿ ಏನೂ ಮಾಡಲಿಲ್ಲ. ₹6.81 ಸಾವಿರ ಕೋಟಿಯಷ್ಟು ಹಣ ವಿದೇಶಕ್ಕೆ ಹೋಗಿ ನಂತರ ನೇರ ಬಂಡವಾಳದ ಹೆಸರಿನಲ್ಲಿ ಸಕ್ರಮಗೊಂಡು ಮುಖೇಶ್ ಅಂಬಾನಿ ಕಂಪೆನಿಯಲ್ಲಿ ಹೂಡಿಕೆಯಾಯಿತು’ ಎಂದು ಆರೋಪಿಸಿದರು.

‘ಅನಿಲ್ ಅಂಬಾನಿಯವರ ಎರಡು ಕಂಪೆನಿಗಳಲ್ಲೂ ಸಾವಿರಾರು ಕೋಟಿ ಹಣ ಹೂಡಿಕೆಯಾಗಿದೆ. ಇದರ ಬಗ್ಗೆ ತನಿಖಾ ಸಂಸ್ಥೆಯೂ ಅನುಮಾನ ವ್ಯಕ್ತಪಡಿಸಿತು. ನಾನೂ ಇದನ್ನು ಪ್ರಧಾನಿಯವರ ಗಮನಕ್ಕೆ ತಂದಿದ್ದೇನೆ.  ಆದರೆ, ಏನೂ ಪ್ರಯೋಜನ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಲೋಕಪಾಲ್ ಮಸೂದೆಗೆ 2013 ರಲ್ಲೇ ಸಂಸತ್ತಿನ ಅನುಮತಿ ಸಿಕ್ಕಿದೆ. ಮೋದಿ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಈ ಬಗ್ಗೆ ಚರ್ಚೆ ಆಗಿಲ್ಲ. ಇದಕ್ಕೆ ವಿರೋಧ ಪಕ್ಷದ ನಾಯಕರ ಅನುಮತಿ ಬೇಕು. ಆದರೆ ಅಧಿಕೃತ ವಿರೋಧ ಪಕ್ಷಕ್ಕೆ ಬೇಕಿರುವಷ್ಟು ಸೀಟುಗಳಿಲ್ಲ ಎಂಬ ನೆಪ ನೀಡಿ ಕಾಲಹರಣ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.

‘ಯಾವುದಾದರೂ ಸಂಸ್ಥೆಯನ್ನು ಕೊಲ್ಲಲು ಬಯಸಿದರೆ, ಅದಕ್ಕೆ ಮುಖ್ಯಸ್ಥರನ್ನು ನೇಮಿಸದೆ ತಾನಾಗೇ ಸಾಯಲು ಬಿಡುತ್ತಾರೆ. ಅದೇ ಮೋದಿ ವಿಧಾನ’ ಎಂದು ಆರೋಪಿಸಿದರು.

ನೋಟು ರದ್ದತಿಯಿಂದ  ಬಂಡವಾಳಶಾಹಿಗಳಿಗೆ ಲಾಭವಾಗಿದೆ. ಇದರಿಂದ ಕಪ್ಪುಹಣ ಹೊರಬಂದಿಲ್ಲ. ಮೋದಿ ಸರ್ಕಾರ ದೇಶದ ಇತಿಹಾಸದಲ್ಲೇ ಅತ್ಯಂತ ಸಂವೇದನಾಶೂನ್ಯ ಸರ್ಕಾರವಾಗಿದೆ
ಪ್ರಶಾಂತ್‌ ಭೂಷಣ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT