ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿನಲ್ಲೇ ಹತ್ಯೆ: 14 ಮಂದಿ ವಶಕ್ಕೆ

Last Updated 22 ಜನವರಿ 2017, 19:48 IST
ಅಕ್ಷರ ಗಾತ್ರ

ಬೆಂಗಳೂರು: ವರ್ತೂರು ಕೋಡಿ ರಸ್ತೆಯಲ್ಲಿ ಜ.12ರಂದು ಗಿರಿಧರ್ ಎಂಬುವರನ್ನು ಕಾರಿನಲ್ಲೇ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್‌ಫೀಲ್ಡ್ ಪೊಲೀಸರು 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

‘ಎಚ್‌ಎಎಲ್‌ ಠಾಣೆ ರೌಡಿ ಶೀಟರ್ ರೋಹಿತ್‌, ಆತನ ಸಹಚರರಾದ ಗಿರೀಶ್, ಭರತ್, ವಿಕ್ಕಿ, ಶಿವ ಅಲಿಯಾಸ್ ಪಟೇಲ, ಮಧು ಸೇರಿದಂತೆ 14 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇವರೇ ಗಿರಿಧರ್ ಅವರನ್ನು ಕೊಲೆಗೈದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಂತಿಮ ಹಂತದ ವಿಚಾರಣೆ ನಡೆಯುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟಾರ್ಗೆಟ್ ಸೋಮ: ‘ಆರೋಪಿಗಳು ಆ ದಿನ ಗಿರಿಧರ್‌ನನ್ನು ಹತ್ಯೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಬದಲಾಗಿ ಆತನ ಸ್ನೇಹಿತ ಸೋಮನನ್ನು ಕೊಲ್ಲಲು ಹೋಗಿದ್ದರು. ಆದರೆ, ಸೋಮ ತಪ್ಪಿಸಿಕೊಂಡು ಓಡಿದಾಗ ಗಿರಿಧರ್‌ನನ್ನು  ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದರು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
‘ಸೋಮ ಕೂಡ ಎಚ್‌ಎಎಲ್ ಠಾಣೆಯ ರೌಡಿಶೀಟರ್. 2008ರಲ್ಲಿ ಆತ ಸಹಚರರ ಜತೆ ಸೇರಿಕೊಂಡು ದಿನೇಶ್ ಎಂಬುವರನ್ನು ಕದಿರೇನಹಳ್ಳಿಯಲ್ಲಿ ಹತ್ಯೆಗೈದಿದ್ದರು. ಆ ದಿನೇಶ್, ಈಗ ಪೊಲೀಸರ ವಶದಲ್ಲಿರುವ ರೋಹಿತ್‌ನ ಅಣ್ಣ.’

‘ಸೋದರನ ಕೊಲೆಗೆ ಪ್ರತೀಕಾರವಾಗಿ ರೋಹಿತ್ ಹಲವು ದಿನಗಳಿಂದ ಸೋಮನ ಹತ್ಯೆಗೆ ಸಂಚು ರೂಪಿಸಿದ್ದ. ಮೂರ್ನಾಲ್ಕು ಬಾರಿ ನಡೆಸಿದ ಯತ್ನಗಳೂ ವಿಫಲವಾಗಿದ್ದವು. ಈ ಬಾರಿ ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡ ಆತ, ಅದಕ್ಕೆ ಸಹಚರರ ದೊಡ್ಡ ಗುಂಪನ್ನೇ ಕಟ್ಟಿಕೊಂಡಿದ್ದ. ಜ.12ರಂದು ಸೋಮ ಹಾಗೂ ಗಿರಿಧರ್ ಕಾರಿನಲ್ಲಿ ತೆರಳಿದ್ದನ್ನು ನೋಡಿದ ಒಬ್ಬಾತ, ಆ ವಿಚಾರವನ್ನು ಗುಂಪಿನ ಸದಸ್ಯರಿಗೆ ತಿಳಿಸಿದ್ದ.’

‘ಕೂಡಲೇ ಎಲ್ಲರೂ ಕಾರು ಹಾಗೂ ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿದ್ದರು. ವರ್ತೂರು ಕೋಡಿ ರಸ್ತೆಯಲ್ಲಿ ಸೋಮನ ವಾಹನಕ್ಕೆ ಕಾರು ಗುದ್ದಿಸಿದ ಹಂತಕರು, ಮಚ್ಚು–ಲಾಂಗುಗಳಿಂದ ದಾಳಿ ಮಾಡಿದ್ದರು. ಆಗ ಹಿಂದೆ ಕುಳಿತಿದ್ದ ಸೋಮ, ಕಾರಿನಿಂದ ಇಳಿದು ಕೂದಲೆಳೆ ಅಂತರದಿಂದ ಪರಾರಿಯಾಗಿದ್ದ.’

‘ಈ ಅನಿರೀಕ್ಷಿತ ದಾಳಿಯಿಂದ ಬೆದರಿದ ಗಿರಿಧರ್, ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ಕಾರನ್ನು ಮಳಿಗೆಯೊಂದಕ್ಕೆ ನುಗ್ಗಿಸಿದ್ದ. ಆಗ ಹಂತಕರು ಆತನನ್ನು ಹತ್ಯೆಗೈದಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಬೆಚ್ಚಿ ಬಿದ್ದ ಸ್ಥಳೀಯರು
ಆ ದಿನ ಆರೋಪಿಗಳು ದಾಳಿ ನಡೆಸಿದ್ದ ರೀತಿ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಸಿಕ್ಕ ಸಿಕ್ಕವರ ಕಣ್ಣಿಗೆಲ್ಲ ಖಾರದ ಪುಡಿ ಎರಚಿದ್ದ ಹಂತಕರು, ಗಿರಿಧರ್ ಅವರನ್ನು ಮಚ್ಚು ಲಾಂಗುಗಳಿಂದ ಕೊಚ್ಚಿ ಹಾಕಿದ್ದರು. ಅಲ್ಲದೆ, ಯಾರಾದರೂ ಬಾಯ್ಬಿಟ್ಟರೆ ಕೊಲ್ಲುವುದಾಗಿ ಸ್ಥಳೀಯರನ್ನೂ ಬೆದರಿಸಿ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT