ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಂಬಳ ಪರ ಅಭಿಯಾನ’

ಸ್ವಾತಂತ್ರ್ಯ ಉದ್ಯಾನದಲ್ಲಿ ‘ಕಂಬಳ’ದ ನಿಷೇಧ ಹಿಂಪಡೆಯಲು ಪ್ರತಿಭಟನೆ
Last Updated 22 ಜನವರಿ 2017, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾನಪದ ಕ್ರೀಡೆ ‘ಕಂಬಳ’ ಮೇಲಿನ ನಿಷೇಧವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಹಲವು ಸಂಘಟನೆಗಳ ಸದಸ್ಯರು, ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಜಲ್ಲಿಕಟ್ಟು ಕ್ರೀಡೆಗೆ ನೀಡಿದ ಅನುಮತಿಯನ್ನು ಕಂಬಳಕ್ಕೂ ನೀಡಬೇಕು ಎಂದು ಆಗ್ರಹಿಸಿದರು.
ತುಳುವೆರೆ ಚಾವಡಿ ಸಂಘಟನೆಯ ಗೌರವ ಅಧ್ಯಕ್ಷ ಸಿ.ಪುರುಷೋತ್ತಮ ಮಾತನಾಡಿ, ‘ನಮ್ಮ ಸಂಸ್ಕೃತಿ ಪ್ರತೀಕವಾದ ಜಾನಪದ ಕ್ರೀಡೆಗಳನ್ನು ಒಂದೊಂದಾಗಿ ನಿಷೇಧಿಸುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು.

‘ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ‘ಕಂಬಳ’ ಪ್ರಸಿದ್ಧ ಕ್ರೀಡೆ. ಇದನ್ನು ಕೆಲ ತಿಂಗಳ ಹಿಂದೆ ನಿಷೇಧಿಸಲಾಗಿತ್ತು. ಅದಕ್ಕೆ ವಿರುದ್ಧ ವ್ಯಕ್ತವಾಗಿದ್ದರಿಂದ ಕೋಣಗಳಿಗೆ ಹೊಡೆಯಬಾರದು ಹಾಗೂ ಗಾಯ ಮಾಡಬಾರದು ಎಂಬ ನಿರ್ಬಂಧ ವಿಧಿಸಿ ಕೆಲವೆಡೆ ಕ್ರೀಡೆ ನಡೆಸಲು ಅನುಮತಿ ನೀಡಲಾಗಿದೆ. ಜತೆಗೆ ಸರ್ಕಾರದ ನಿರಾಕ್ಷೇಪಣಾ ಪತ್ರ  ಪಡೆಯುವಂತೆ ಹೇಳಲಾಗಿದೆ. ಆದರೆ, ಅಧಿಕಾರಿಗಳಿಗೆ ನಮ್ಮ ಸಂಸ್ಕೃತಿಯೇ ಗೊತ್ತಿಲ್ಲ. ಹೀಗಿರುವಾಗ ಅವರಿಂದ  ಪತ್ರ ಪಡೆದು ಏನು ಪ್ರಯೋಜನ’ ಎಂದು ಅವರು ಪ್ರಶ್ನಿಸಿದರು.

ಮುಖಂಡ ವಿಶ್ವನಾಥ್‌ ಶೆಟ್ಟಿ ಮಾತನಾಡಿ, ‘ಕಂಬಳವು ಜೀವಕ್ಕೆ ಹಾನಿ ಮಾಡುವ ಕ್ರೀಡೆಯಲ್ಲ. ಅದು ಜನರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದು. ಅದನ್ನು ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕೋಣಗಳನ್ನು ಮಕ್ಕಳಂತೆ ಬೆಳೆಸುತ್ತೇವೆ. ಅವುಗಳಿಗೆ ಗಾಯವಾದರೆ ನಮಗೂ ನೋವಾಗುತ್ತದೆ. ಆದರೆ, ಕೆಲ ಪ್ರಾಣಿದಯಾ ಸಂಘಟನೆಗಳು ಸುಖಾಸುಮ್ಮನೇ ಇಲ್ಲಸಲ್ಲದ ಆರೋಪ ಮಾಡಿ ಕ್ರೀಡೆ ನಿಷೇಧಕ್ಕೆ ಕಾರಣವಾಗಿದ್ದಾರೆ. ಆ ಮೂಲಕ ಸಾಂಸ್ಕೃತಿಕ ಹಕ್ಕನ್ನು ಕಸಿದುಕೊಳ್ಳಲಾಗಿದೆ’ ಎಂದು ದೂರಿದರು.

ಹೋರಾಟ ನಿರಂತರ: ‘ಕಂಬಳದ ಮೇಲಿನ ನಿಷೇಧವನ್ನು  ಹಿಂಪಡೆಯುವವರೆಗೂ ಹೋರಾಟ ನಡೆಯಲಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.
‘ಜಲ್ಲಿಕಟ್ಟು ವಿಚಾರವಾಗಿ ತಮಿಳುನಾಡು ಒಗ್ಗಟ್ಟು ಪ್ರದರ್ಶಿಸಿದ ರೀತಿಯಲ್ಲೇ ಕನ್ನಡಿಗರು ಕಂಬಳದ ಪರ ಒಗ್ಗಟ್ಟು ಪ್ರದರ್ಶಿಸಬೇಕು’
‘ಕೇಂದ್ರ ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಿ ಕಂಬಳದ ಮೇಲಿನ ನಿಷೇಧ ತೆರವಿಗೆ ಆಸಕ್ತಿ ವಹಿಸಬೇಕು’ ಎಂದು ಅವರು  ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಸಹ ಪಾಲ್ಗೊಂಡು, ಬೆಂಬಲ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಿಂದ ಜನ  ಸೇರಿದರು
ಕಂಬಳ ನಿಷೇಧದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ನಗರದಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಸಂಘಟನೆಗಳ ಸದಸ್ಯರು, ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ ಮೂಲಕ ‘ಕಂಬಳ ಪರ ಅಭಿಯಾನ’ ಸಂದೇಶ ಕಳುಹಿಸಿದ್ದರು.

ಆರಂಭದಲ್ಲಿ ಕಡಿಮೆ ಜನ ಬರಬಹುದು ಎಂದು ತಿಳಿದಿದ್ದ ಆಯೋಜಕರು, ಹಲಸೂರು ಕೆರೆ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, 200ಕ್ಕೂ ಹೆಚ್ಚು ಜನ ಬಂದಿದ್ದರಿಂದ ಪ್ರತಿಭಟನೆಯನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT