ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿಭಾ ಅನಾವರಣಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ’

Last Updated 22 ಜನವರಿ 2017, 20:05 IST
ಅಕ್ಷರ ಗಾತ್ರ

ರಾಮನಗರ: ‘ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಬೀದಿನಾಟಕ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಲಿವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಪ್ರಭಾರ ನಿರ್ದೇಶಕ ಎಚ್.ಕೆ.ರೇವಣೇಶ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಬಾಲಭವನದ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಹಮ್ಮಿಕೊಂಡಿದ್ದ  ಅಭಿರಂಗ ಮಕ್ಕಳ ಬೀದಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಕ್ಕಳನ್ನು ನಾಲ್ಕು ಕೋಣೆಗಳ ಮಧ್ಯೆ ಕೂಡಿ ಹಾಕಿ ವಿದ್ಯೆ ಕಲಿಸುವುದು ಒಂದು ರೀತಿಯಲ್ಲಿ ಉಸಿರುಗಟ್ಟಿದ ವಾತಾವರಣವನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆ ಹೊರಬರಲು ಸಾಂಸ್ಕೃತಿಕ ಕಾರ್ಯಕ್ರಮ  ನೆರವಾಗಲಿವೆ. ಇಲಾಖೆಯಲ್ಲಿ  ಇದಕ್ಕಾಗಿ ಹಲವಾರು ಯೋಜನೆಗಳಿದ್ದು, ಇದನ್ನು ಶಾಲೆಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು’ ಎಂದರು.

ಬಾಲಭವನದ ಜಿಲ್ಲಾ ಸಂಯೋಜಕ ಪುಟ್ಟಸ್ವಾಮಿ ಮಾತನಾಡಿ ‘ನಾಟಕವೆಂದರೆ ಮಕ್ಕಳಿಗೆ ಅಚ್ಚುಮೆಚ್ಚು.  ಹಾಗಾಗಿ, ನಾನಾ ಶಾಲೆ ಹಾಗೂ ವಂದರಾಗುಪ್ಪೆಯಲ್ಲಿರು ಮಕ್ಕಳ ರಕ್ಷಣಾ ಸಮಿತಿಯಲ್ಲಿನ ಮಕ್ಕಳನ್ನು ಒಳಗೊಂಡ ತಂಡಗಳನ್ನು ರಚಿಸಿ, ವೇದಿಕೆ ಹಾಗೂ ಬೀದಿ ನಾಟಕಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಾಗಿದೆ’ ಎಂದು ತಿಳಿಸಿದರು.

ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಮಾತನಾಡಿ ‘ಲಭಿಸಿದ ಸೀಮಿತ ಅವಧಿಯಲ್ಲಿಯೇ ಮಕ್ಕಳಿಗೆ ರಂಗ ತರಬೇತಿ ನೀಡಿ, ರಂಗ ಪ್ರದರ್ಶನ ನೀಡಲು ತಯಾರು ಮಾಡಲಾಯಿತು.

ನಾಟಕದ ಕಥಾವಸ್ತುವಿನಲ್ಲಿ ಮುಖ್ಯವಾಗಿ ಪರಿಸರ ಜಾಗೃತಿ, ಬಾಲ್ಯವಿವಾಹ, ಮಹಿಳಾ ಸಬಲೀಕರಣ, ಭ್ರಷ್ಟಾಚಾರ, ಪ್ರಚಲಿತ ವಿದ್ಯಮಾನಗಳ ಬಗ್ಗೆ  ಮಕ್ಕಳು ನಾಟಕ ಪ್ರದರ್ಶಿಸಿದರು.

ವಿವಿಧ ರಂಗ ನಿರ್ದೇಶಕರ ನಿರ್ದೇಶನದಲ್ಲಿ ಪಳಗಿದ ನಾನಾ ಶಾಲೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಮಕ್ಕಳು ತಮ್ಮ ಅಭಿನಯ ಸಾಮರ್ಥ್ಯವನ್ನು ಓರೆಗೆ ಹಚ್ಚಿ ಸಾರ್ವಜನಿಕರು ಮತ್ತು ವಿಶೇಷವಾಗಿ ತಮ್ಮದೇ ವಾರಿಗೆಯ ಮಕ್ಕಳಿಂದಲೇ ಶಹಬ್ಬಾಸ್ ಗಿರಿ ಪಡೆದರು. ತಮ್ಮದೇ ವಯಸ್ಸಿನ ಮಕ್ಕಳು ಹಾವಭಾವ, ಅಭಿನಯ ಚತುರತೆ ಪ್ರದರ್ಶಿಸಿದರು.

ರಂಜಿಸಿದ ನಾಟಕಗಳು:  ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡ ರಚನೆಯ ‘ನಾರದ ವಿಜಯ’, ಹಿ.ಶಿ.ರಾಮಚಂದ್ರೇಗೌಡ ರಚನೆಯ ‘ಕೊಡ್ಲಿ ಬೋರ’ ನಾಟಕಗಳು ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಅವರ ನಿರ್ದೇಶನದಲ್ಲಿ ವೇದಿಕೆಯಲ್ಲಿ ಪ್ರದರ್ಶನಗೊಂಡವು.

ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಪ್ರದರ್ಶನಗೊಂಡ ಜಯತೀರ್ಥ ರಚನೆ, ಆನಂದ್ ನಿರ್ದೇಶನದ ಪ್ರವರ್ಧಿನಿ, ಐ.ಕೆ.ಬೊಳುವಾರ ರಚನೆ, ಮಲ್ಲಣ್ಣಗೌಡರ ನಿರ್ದೇಶನದ ಮುದುಕಶೆಟ್ಟಿ ಮತ್ತು ಮೂರು ಮೊಮ್ಮಕ್ಕಳು ಬೀದಿ ನಾಟಕಗಳು ಸಾಮಾಜಿಕ ಸಂದೇಶದೊಂದಿಗೆ ಸೇರಿದ್ದ              ಸಾರ್ವಜನಿಕರು ಹಾಗೂ ಮಕ್ಕಳನ್ನು ರಂಜಿಸಿದವು. 
ಮಹಿಳಾ ಅಭಿವೃದ್ಧಿ ನಿಗಮದ ಸಂಯೋಜಕ ದಿನೇಶ್ ನಾಗವಾರ, ಬಾಲಭವನ ಸಿಬ್ಬಂದಿ ಬಿಂದುಶ್ರೀ, ಕೃಷ್ಣವೇಣಿ ಮತ್ತಿತರರು
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT