ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣ: ಬಾಕಿ ಕೊಳವೆಬಾವಿ ಕೊರೆಸಲು ಸೂಚನೆ

ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ
Last Updated 23 ಜನವರಿ 2017, 9:18 IST
ಅಕ್ಷರ ಗಾತ್ರ

ಬೀದರ್: 2015–16ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯ ವೈಯಕ್ತಿಕ ನೀರಾವರಿ ಕೊಳವೆಬಾವಿಗಳು ಕೊರೆಸುವ ಪ್ರಕ್ರಿಯೆ ಫೆಬ್ರುವರಿ ಒಳಗೆ ಪೂರ್ಣಗೊಳಿಸಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಭಾನುವಾರ ನಡೆದ ಬೀದರ್‌, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಅಧಿಕಾರಿಗಳ ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಳವೆಬಾವಿಗಳು ಕೊರೆಸಲು ನಿಷ್ಕಾಳಜಿ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಅನಗತ್ಯ ವಿಳಂಬ ಮಾಡುವುದು ಕಂಡು ಬಂದರೆ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗಂಗಾಕಲ್ಯಾಣ ಯೋಜನೆ ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಬೀದರ್‌ ಜಿಲ್ಲೆಯಲ್ಲಿ  2013–14 ನೇ ಸಾಲಿನಿಂದ 2014ಈವರೆಗೆ ಪರಿಶಿಷ್ಟ ಪಂಗಡದ ಯೋಜನೆಗಳ ಅಡಿಯಲ್ಲಿ 1,254, ಯಾದಗಿರಿ ಜಿಲ್ಲೆಯಲ್ಲಿ 800, ಕಲಬುರ್ಗಿ ಜಿಲ್ಲೆಯಲ್ಲಿ 1,511 ಕೊಳವೆಬಾವಿ ಕೊರೆಸುವ ಕೆಲಸ ಬಾಕಿ ಇದೆ  ಎಂದು ತಿಳಿಸಿದರು.

ಕ್ರಿಯಾಯೋಜನೆ ರೂಪಿಸಿಕೊಂಡರೆ 2015–16ನೇ ಸಾಲಿನ ಬಾಕಿ ಕೆಲಸ ಫೆಬ್ರುವರಿ ಒಳಗೆ ಪೂರ್ಣಗೊಳ್ಳುತ್ತದೆ. ಬಳಿಕ ಮೂರು ತಿಂಗಳಿನ ಅವಧಿಯಲ್ಲಿ 2016–17ನೇ ಸಾಲಿನ ಬಾಕಿ ಕೆಲಸ ಪೂರ್ಣಗೊಳಿಸಬಹುದು. ಜೊತೆಗೆ 2017–18ನೇ ಸಾಲಿನ ಹೊಸ ಪ್ರಸ್ತಾವನೆಗೆ ಸಿದ್ಧತೆ ಮಾಡಿಕೊಳ್ಳಬಹುದು. ಈ ಬಗ್ಗೆ ಎಲ್ಲ ಜಿಲ್ಲೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಒಂದು ವೇಳೆ ನಿಗದಿತ ಗುರಿ ತಲುಪಲು ಅಧಿಕಾರಿಗಳು ವಿಫಲರಾದಲ್ಲಿ ಅಂತವರಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು.

ಕಲಬುರ್ಗಿ ಜಿಲ್ಲೆಯಲ್ಲಿ 2,748 ಕೊಳವೆಬಾವಿಗಳು ಕೊರೆಸುವ ಗುರಿ ಇತ್ತು. ಈ ಪೈಕಿ 1,471 ಮಾತ್ರ ಕೊರೆಸಿದ್ದೀರಿ. ಬಾಕಿ ಉಳಿಸಿಕೊಂಡ ಕೊಳವೆಬಾವಿಗಳನ್ನು ಯಾವಾಗ ಪೂರ್ಣಗೊಳಿಸುತ್ತಿರಿ ಎಂದು ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರನ್ನು ಪ್ರಶ್ನಿಸಿದರು.ಫೆಬ್ರುವರಿ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಸಭೆಯಲ್ಲಿ ಸ್ವಯಂ ಉದ್ಯೋಗ ಯೋಜನೆ, ಐಎಸ್‌ಬಿ ಯೋಜನೆ, ಭೂ ಒಡೆತನ, ನೇರ ಸಾಲ, ಮಹಿಳಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಯಿತು. 

ಫಲಾನುಭವಿಗಳಿಗೆ ಪಂಪಸೆಟ್ ವಿತರಣೆ: ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ನಗರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಭಾನುವಾರ ಪಂಪ್‌ಸೆಟ್‌ ಮತ್ತಿತರ ಸಾಮಗ್ರಿಗಳನ್ನು  ಅಂಬೇಡ್ಕರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಲು ವಿತರಿಸಿದರು. ಇದೇ ವೇಳೆ ಸ್ವಯಂ ಉದ್ಯೋಗ ಯೋಜನೆಯ ಫಲಾನುಭವಿಗಳಾದ ಮನೋಹರ ರಾಮಣ್ಣ, ಶಿವಕುಮಾರ ಪುಂಡಲೀಕ, ಶೋಭಾವತಿ ಯೋಗೇಂದ್ರ, ಅಮೃತ ಗುಂಡಪ್ಪ ಅವರಿಗೆ ಚೆಕ್‌ಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT