ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಭಾವನೆಗಾಗಿ ಜನಾಂದೋಲನ ನಡೆಯಲಿ

‘ಸದ್ಭಾವನಾ ಮಂಚ್‌’ ಉದ್ಘಾಟನಾ ಸಮಾರಂಭದಲ್ಲಿ ಅರವಿಂದ ಜತ್ತಿ ಹೇಳಿಕೆ
Last Updated 23 ಜನವರಿ 2017, 9:24 IST
ಅಕ್ಷರ ಗಾತ್ರ

ಬೀದರ್: ‘ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸಮಾನತೆ ಸಮಾಜ ಕಟ್ಟಲು ಸಾಮಾಜಿಕ ಕ್ರಾಂತಿಯನ್ನೇ ನಡೆಸಿದ್ದರು. ಈಗ ಅದೇ ಮಾದರಿಯಲ್ಲಿ ಪ್ರತಿಯೊಬ್ಬರಲ್ಲೂ ಸದ್ಭಾವನೆ ಮೂಡಿಸಲು ಬೃಹತ್‌ ಆಂದೋಲನ ನಡೆಸಬೇಕಾದ ಅಗತ್ಯವಿದೆ’ ಎಂದು ಬಸವ ಸಮಿತಿಯ ಅಧ್ಯಕ್ಷರಾದ ಸದ್ಭಾವನಾ ಮಂಚ್ ರಾಜ್ಯ ಘಟಕದ ಸಂಚಾಲಕ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಸದ್ಭಾವನಾ ಮಂಚ್‌’ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸದ್ಭಾವನೆ ಕುರಿತು ಕೇವಲ ಮಾತುಗಳನ್ನಾಡಿದರೆ ಅದು ಆಚರಣೆಯಲ್ಲಿ ಬರುವುದಿಲ್ಲ. ಪ್ರತಿಯೊಬ್ಬರು ಸಾಮರಸ್ಯ ಹಾಗೂ ಸಮಾನತೆಯಿಂದ ಬದುಕು ನಡೆಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದ ಭಾವನೆ ಬೆಳೆಯಲು ಸಾಧ್ಯ’ ಎಂದು ಹೇಳಿದರು.

‘ಒಂದು ಧರ್ಮ, ಧರ್ಮಗುರು ಹಾಗೂ ಮಹಾತ್ಮರನ್ನು ಅಪಮಾನಿಸುವ ಘಟನೆಗಳು ನಡೆದಾಗ ಅದನ್ನು ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಖಂಡಿಸಿದಾಗ ಮಾತ್ರ ಎಲ್ಲರಲ್ಲೂ ಸದ್ಭಾವನೆ ಮೂಡಲು ಸಾಧ್ಯ. ಈಚೆಗೆ ವಿಜಯಪುರ ಜಿಲ್ಲೆಯ ನಿಡೋಣಿಯಲ್ಲಿ ಕಿಡಿಗೇಡಿಗಳು ಬಸವೇಶ್ವರ ಪ್ರತಿಮೆಗೆ ಅವಮಾನ ಮಾಡಿರುವ ಘಟನೆ ನಡೆದಿದೆ. ಈ ಘಟನೆಯನ್ನು ಸದ್ಭಾವನಾ ಮಂಚ್‌ ಮೂಲಕ ಖಂಡಿಸಬೇಕು ಎಂದರು.

‘ಸಮಾನತೆ ಹಾಗೂ ಸದ್ಭಾವನಾ ಸಮಾಜ ನಿರ್ಮಿಸಬೇಕು ಅಂದರೆ ಮೊದಲು ಪ್ರತಿಯೊಬ್ಬರ ಮನಸ್ಸು ಮತ್ತು ಭಾವನೆ ಪರಿವರ್ತನೆಯಾಗಬೇಕು. ಯಾವಾಗಲೂ ಸತ್ಯಕ್ಕೆ ಮಾತ್ರ ಸಂಪೂರ್ಣ ಬೆಂಬಲ ನೀಡಬೇಕು. ದೇಶದ ಎಲ್ಲೆಡೆ ಭಾವೈಕ್ಯದ ವಾತಾವರಣ ನಿರ್ಮಾಣವಾಗಬೇಕು’ ಎಂದು ಹೇಳಿದರು.

‘ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ ಹಾಗೂ ಸಮಾನತೆಯ ವಾತಾವರಣ ನಿರ್ಮಿಸುವುದೇ ಎಲ್ಲಾ ಧರ್ಮಗಳ ಮುಖ್ಯ ಗುರಿಯಾಗಿದೆ. ಆದರೆ ಕೆಲವೊಂದು ಕೋಮು ಗಲಭೆ ಘಟನೆಗಳಿಂದ ಮಾತ್ರ ಧರ್ಮಗಳ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಅಂಥ ಘಟನೆಗಳನ್ನು ತಡೆಗಟ್ಟುವ ಕಾರ್ಯ ನಡೆಸಬೇಕು’ ಎಂದು ರಾಜ್ಯ ಧಾರ್ಮಿಕ ಸೌಹಾರ್ದ ವೇದಿಕೆಯ ಸಂಚಾಲಕ ಮಹಮ್ಮದ್‌ ಯೂಸುಫ್‌ ಕುನ್ನಿ ತಿಳಿಸಿದರು.

‘ಭಾರತಕ್ಕೆ ಸಾವಿರಾರೂ ವರ್ಷದ ಇತಿಹಾಸ ಇದೆ. ನಮ್ಮ ರಾಷ್ಟ್ರದಲ್ಲಿ ಯಾವಾಗಲೂ ಒಳ್ಳೆಯದನ್ನೇ ಪಾಲಿಸಿಕೊಂಡು ಬಂದಿದ್ದೇವೆ. ಇಲ್ಲಿ ಎಂದೂ ಧರ್ಮದ ಹೆಸರಿನಲ್ಲಿ ಯುದ್ಧಗಳು ನಡೆದಿಲ್ಲ. ಬಾಬರ್‌, ಇಬ್ರಾಹಿಂ ಲೋದಿ, ಟಿಪ್ಪು ಹಾಗೂ ಶಿವಾಜಿ ಅವರು ಕೇವಲ ತಮ್ಮ ಸಾಮ್ರಾಜ್ಯದ ರಕ್ಷಣೆ ಹಾಗೂ ವಿಸ್ತರಣೆ ಮಾಡುವ ಉದ್ದೇಶದಿಂದ ಯುದ್ಧಗಳನ್ನು ಮಾಡಿದ್ದಾರೆ. ದೇಶಕ್ಕೆ ಬ್ರಿಟಿಷರು ಬಂದ ನಂತರವೇ ಧರ್ಮಗಳ ನಡುವೆ ದ್ವೇಷ ಭಾವನೆ ಬೆಳೆಯಲು ಆರಂಭವಾಯಿತು’ ಎಂದು ವಿವರಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಸದ್ಭಾವನಾ ಮಂಚ್‌ ಜಿಲ್ಲಾ ಘಟಕದ ಸಂಚಾಲಕ ಗುರುನಾಥ ಗಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಮಾಮ್‌ ಮತ್ತು ಖತೀಬ್‌ ಜಾಮಾ ಮಸೀದಿಯ ಮೌಲಾನಾ ಮುಫ್ತಿ ಮಹಮ್ಮದ್‌ ಗುಲಾಮ್‌ ಯಝದಾನಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ, ಗುರುನಾನಕ ದೇವ ಪ್ರಬಂಧ ಕಮಿಟಿಯ ಗ್ಯಾನಿ ದರ್ಬಾರ್‌ಸಿಂಗ್‌, ಆಣದೂರು ಧಮ್ಮದರ್ಶನ ಭೂಮಿಯ ಭಂತೆ ಧಮ್ಮಾನಂದ, ಫಾಧರ್‌ ವಿಲ್ಸ್‌ನ್  ಫರ್ನಾಂಡಿಸ್‌, ಮೌಲಾನಾ ಮಹಮ್ಮದ್‌ ಫಹಿಮೊದ್ದೀನ್‌, ಸದ್ಭಾವನಾ ಮಂಚ್‌ ಜಿಲ್ಲಾ ಘಟಕದ ಸದಸ್ಯರಾದ ಅಬ್ದುಲ್‌ ಖದೀರ, ಕವಿತಾ ಹುಷಾರೆ, ಚನ್ನಬಸಪ್ಪ ಹಾಲಹಳ್ಳಿ, ಈಶ್ವರಪ್ಪ ಚಕೋತೆ, ಶಾಂತಲಿಂಗ ಸಾವಳಗಿ, ವೀಣಾ ದೇಸಾಯಿ ಉಪಸ್ಥಿತರಿದ್ದರು.

ಐವರಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಜಿಲ್ಲೆಯ ಐವರು ಸಾಧಕರಿಗೆ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾಲ್ಕಿಯ ಹಿರಾಚಂದ್ರ ವಾಘಮಾರೆ, ಔರಾದ್‌ ತಾಲ್ಲೂಕಿನ ಲಾಧಾ ಗ್ರಾಮದ ವಿಠ್ಠಲರಾವ್‌ ಯೋಗಿ, ಬೀದರ್‌ ತಾಲ್ಲೂಕಿನ ಮನ್ನಳ್ಳಿಯ ಎನ್‌.ಎ. ಷಾ ಖಾದ್ರಿ, ಸಿಸ್ಟರ್‌ ಕ್ರಿಸ್ಟಿನಾ, ಜನವಾದಿ ಸಂಘಟನೆಯ ಕೆ. ನೀಲಾ ಅವರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT