ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿದ್ದರೂ ಶಿವಾಜಿನಗರಕ್ಕೆ ಹಳ್ಳಿಯ ಪಟ್ಟ

‘ಶಿವಾಜಿನಗರ’ ಹೆಸರು ಮುಂದುವರಿಸಲು ಹೈಕೋರ್ಟ್‌ ಆದೇಶ
Last Updated 23 ಜನವರಿ 2017, 9:25 IST
ಅಕ್ಷರ ಗಾತ್ರ

ಬೀದರ್‌: ನಗರಸಭೆಯ ಪರಿಧಿಯಲ್ಲಿರುವ ಶಿವಾಜಿನಗರ ಅತಂತ್ರ ಸ್ಥಿತಿಯಲ್ಲಿದೆ. ಅಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾರಣ ಶಿವಾಜಿನಗರವು ನಗರಸಭೆವ್ಯಾಪ್ತಿಗೆ ಸೇರಿಲ್ಲ. ಮುಂದೊಂದು ದಿನ ಶಿವಾಜಿನಗರವು ಬೀದರ್‌ ನಗರಸಭೆಗೆ ಸೇರಲಿದೆ ಎನ್ನುವ ಒಂದೇ ಕಾರಣಕ್ಕೆ  ಪಂಚಾಯಿತಿಯು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಸಿದ್ಧವಿಲ್ಲ.

ಬೀದರ್‌ ತಾಲ್ಲೂಕಿನ ಅಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರನಳ್ಳಿ (ಬಿ) ಗ್ರಾಮದ ಬಡಾವಣೆಯಾಗಿ ಶಿವಾಜಿನಗರ ಗುರುತಿಸಿ ಕೊಂಡಿದೆ. ಸೇವಾ ನಿವೃತ್ತರು ಇಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅಚ್ಚುಕಟ್ಟಾದ ಕಾಂಕ್ರೀಟ್‌ ಮನೆಗಳಿದ್ದರೂ ಬಡಾವಣೆಯಲ್ಲಿ ಸರಿಯಾದ ರಸ್ತೆಗಳು ಇಲ್ಲ. ಗಟಾರ ಇಲ್ಲದ ಕಾರಣ ಮನೆಯಿಂದ ಹೊರ ಬರುವ ಬಚ್ಚಲು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಅಲ್ಲಲ್ಲಿ ನೀರು ಸಂಗ್ರಹವಾಗಿ ಶಿವಾಜಿನಗರವು ಕೊಳೆಗೇರಿಯ ರೂಪ ಪಡೆಯುತ್ತಿದೆ.

ಗ್ರಾಮ ಪಂಚಾಯಿತಿಯು ಶಿವಾಜಿನಗರದಲ್ಲಿ 10 ಕೊಳವೆಬಾವಿಗಳನ್ನು ತೋಡಿಸಿದ್ದನ್ನು ಬಿಟ್ಟರೆ ಬೇರೆ ಕೆಲಸ ಮಾಡಿಲ್ಲ. ನಗರ ನೀರು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯು ಶಿವಾಜಿನಗರದ ಎಲ್ಲ ಮನೆಗಳಿಗೂ ದಿನದ 24 ಗಂಟೆ ನೀರು ಪೂರೈಸುವ ನಲ್ಲಿಗಳ ಜೋಡಣೆ ಮಾಡಿದೆ. ಆದರೆ ಅದರಲ್ಲಿ ನೀರು ಹರಿಯುತ್ತಿಲ್ಲ. ಬಹುತೇಕ ಮನೆಗಳಿಗೆ ತೆರೆದ ಬಾವಿಗಳಿವೆ. ಆದರೂ ಒಂದು ಕೊಳವೆಬಾವಿ ಕೊರೆದು ನಾಲ್ಕು ತಿಂಗಳ ಹಿಂದೆ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಿ ₹ 60 ಲಕ್ಷ ಪೋಲು ಮಾಡಲಾಗಿದೆ.

ವಾಸ್ತವದಲ್ಲಿ ಅಷ್ಟು ಮೊತ್ತದ ಕಾಮಗಾರಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಓವರ್‌ಹೆಡ್‌ ಟ್ಯಾಂಕ್‌ನಲ್ಲಿ ನೀರು ತುಂಬಿದರೂ ಮನೆಗಳಿಗೆ ನೀರು ಬರುವ ಬಗೆಗೆ ಜನರಿಗೆ ವಿಶ್ವಾಸ ಇಲ್ಲ.

ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ ಖೇಣಿ ಒಮ್ಮೆಯೂ ಇಲ್ಲಿಗೆ ಭೇಟಿ ಕೊಟ್ಟಿಲ್ಲ. ಜಿಲ್ಲೆಯವರೇ ಆದ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರಿಗೆ ಭಾಲ್ಕಿ ಬಿಟ್ಟರೆ ಬೀದರ್‌ ಬಗೆಗೆ ಆಸಕ್ತಿ ಇಲ್ಲ. ಒಟ್ಟಾರೆ ನಮ್ಮ ಗೋಳು ಕೇಳುವವರು ಇಲ್ಲ. ಭೂಗಳ್ಳರ ಬೆಂಬಲಕ್ಕೆ ನಿಲ್ಲುವ ರಾಜಕಾರಣಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಶಿವಾಜಿನಗರದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಶಿವಾಜಿನಗರವು 20 ವರ್ಷಗಳಿಂದ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದೆ. ಆರಂಭದಲ್ಲಿ ಇಬ್ಬರ ವೈಯಕ್ತಿಕ ಜಗಳಕ್ಕಾಗಿ ‘ಶಿವಾಜಿನಗರ’ದ ಹೆಸರು ಹೈಕೋರ್ಟ್‌ ಅಂಗಳಕ್ಕೆ ಬಿತ್ತು. ಜನರು ಬಯಸಿರುವ ‘ಶಿವಾಜಿನಗರ’ ಹೆಸರನ್ನೇ ಮುಂದುವರಿಸುವಂತೆ  2011ರಲ್ಲಿ ಹೈಕೋರ್ಟ್‌ ಕಲಬುರ್ಗಿ ವಿಭಾಗೀಯ ಪೀಠ ತೀರ್ಪು ನೀಡಿತು. ಆದರೆ ಅಮಲಾಪುರ ಗ್ರಾಮ ಪಂಚಾಯಿತಿಯವರು ದಾಖಲೆ ರೂಪದಲ್ಲಿ ಅದನ್ನು ಮುಂದುವರಿಸಲು ಹಿಂದೇಟು ಹಾಕುತ್ತಿದ್ದಾರೆ.

ತೆರಿಗೆ ಪಾವತಿಯಲ್ಲಿ ಶಿವಾಜಿನಗರ ಎಂದು ನಿಖರವಾಗಿ ಬರೆದುಕೊಡದ ಕಾರಣ ಕೆಲವರು ತೆರಿಗೆಯನ್ನೂ ಪಾವತಿಸಿಲ್ಲ. ಕೆಲವರು ತೆರಿಗೆ ಕೊಟ್ಟರೂ ರಸೀದಿ ಮೇಲೆ ತೆರಿಗೆ ಪಾವತಿಸಿದವರ ಹೆಸರು ಹಾಗೂ ಅಮಲಾಪುರ ಎಂದಷ್ಟೇ ಬರೆಯುತ್ತಿದ್ದಾರೆ. ಶಿವಾಜಿನಗರದ ಹೆಸರು ಬರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳುತ್ತಾರೆ ನಿವೃತ್ತ ಪಿಎಸ್‌ಐ ಸುಭಾಷ ಗಜರೆ. ಪಂಚಾಯಿತಿಯವರು ಅಚ್ಚುಕಟ್ಟಾಗಿ ಕೆಲಸ ಮಾಡಲು ಶುರು ಮಾಡಿದರೆ ಬಾಕಿ ಉಳಿದ ತೆರಿಗೆಯನ್ನು ಒಂದೇ ಬಾರಿಗೆ ಕಟ್ಟಲು ಸಿದ್ಧರಿದ್ದೇವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT