ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗಳ ದಾಳಿ: ಬೆಳೆ ನಾಶದ ಭೀತಿ

ಜೋಳದ ಬೆಳೆ ರಕ್ಷಿಸಲು ಹಳೆಯ ಸೀರೆಗಳೇ ಬೇಲಿ, ಹಕ್ಕಿಗಳ ಕಾಟ
ಅಕ್ಷರ ಗಾತ್ರ

ಗುರುಮಠಕಲ್: ಹೆಸರು, ಉದ್ದು, ತೊಗರಿ ಬೆಳೆ ನಿರೀಕ್ಷಿಸಿದಷ್ಟು ಫಸಲು ಬರಲಿಲ್ಲ. ಅಲ್ಲದೆ, ಉತ್ತಮ ಬೆಲೆಯೂ ಸಿಗದೆ ರೈತ ಕಂಗಾಲಾಗಿದ್ದಾನೆ. ಇದರ ನಡುವೆ ಬೆಳೆದು ನಿಂತಿರುವ ಜೋಳದ ಬೆಳೆಗೆ ಹಂದಿಗಳು ದಾಳಿ ಮಾಡುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.

ಚಳಿಗಾಲದಲ್ಲಿ ಕಾಡಿನಲ್ಲಿರುವ ಮರ, ಗಿಡಗಳ ಎಲೆಗಳು ಉದುರಲು ಆರಂಭವಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಾಡಿನ ಹಸಿರು ಇಲ್ಲವಾಗುತ್ತದೆ. ಕಾಡಿನಲ್ಲಿ ಆಹಾರ ಸಿಗದೆ ಹೊಲಗಳಿಗೆ ನುಗ್ಗುವ ಹಂದಿಗಳು ಹುಲುಸಾಗಿ ಬೆಳೆದು ನಿಂತಿರುವ ಜೋಳದ ಬೆಳೆ ಮೇಲೆ ದಾಳಿ ನಡೆಸಿ ತಿಂದು ನಾಶ ಮಾಡುತ್ತಿವೆ.

ಜೋಳದ ಸಸಿಗಳು ಸಮಯದಲ್ಲಿ ಸಿಹಿಯಾಗಿರುವುದರಿಂದಾಗಿ ಕಾಡು ಹಂದಿಗಳು ಹೊಲಗಳಿಗೆ ನುಗ್ಗುತ್ತವೆ, ಒಮ್ಮೆಲೆ 10 ರಿಂದ 15 ಹಂದಿಗಳ ಗುಂಪು ಹೊಲಕ್ಕೆ ನುಗ್ಗಿದರೆ ಒಂದು ರಾತ್ರಿಯಲ್ಲಿ ಕಾಲು ಎಕರೆಯಷ್ಟು ಬೆಳೆಯನ್ನು ಹಾಳು ಮಾಡುತ್ತವೆ. ಜೋಳದ ಸಸಿಗಳು ಸಮಯದಲ್ಲಿ ಸಿಹಿಯಾಗಿರುತ್ತವೆ.

ಸಸಿಯ ಕಾಂಡದಿಂದ ಒಂದೆರಡು ಗಣಿಕೆಯಷ್ಟನ್ನು ಮಾತ್ರ ತಿಂದು ಉಳಿದ ಸಸಿಯನ್ನು ಹಾಗೇ ಬಿಟ್ಟು ಮತ್ತೊಂದು ಸಸಿಗೆ ಬಾಯಿ ಹಾಕುವುದರಿಂದಾಗಿ ಬೆಳೆ ಹೆಚ್ಚು ಹಾಳಾಗುತ್ತವೆ ಎನ್ನುತ್ತಾರೆ ಕೃಷಿಕ ಮಹಾದೇವಪ್ಪ ಕೊಂಕಲ್.

ಹೊಲಗಳಲ್ಲಿ ಹಂದಿಗಳು ನುಗ್ಗದಂತೆ ರೈತರು ಹೊಲದ ಸುತ್ತಲೂ ಸೀರೆಗಳನ್ನು ಕಟ್ಟುತ್ತಾರೆ. ಒಂದು ಎಕರೆ ಜಮೀನಿಗೆ ಸುಮಾರು 40 ರಿಂದ 45 ಸೀರೆಗಳು ಬೇಕಾಗುತ್ತವೆ.ಜಮೀನಿಗೆ ಕಟ್ಟಲೆಂದೇ ಹಳೆಯ ಸೀರೆಗಳನ್ನು ₹ 25 ರಿಂದ 30 ಗೆ ರೈತರು ಖರೀದಿಸುತ್ತಾರೆ.

ಅಷ್ಟು ಹಣ ಕೊಟ್ಟು ಸೀರೆಗಳನ್ನು ಖರೀದಿಸಲು ಆಗುವುದಿಲ್ಲ. ಹೀಗಾಗಿ ಹೊಲಗಳಲ್ಲಿ ಕಾಯುತ್ತಾ ಕುಳಿತು ಹಂದಿಗಳು ಬಂದಾಗ ಪಟಾಕಿ ಸಿಡಿಸುವುದು ಇಲ್ಲವೇ ಹಲಗೆ ಬಡಿಯುವ ಅಥವಾ ಜೋರಾಗಿ ಚೀರುವ ಮೂಲಕ ಬೆಳೆ ರಕ್ಷಿಸಿಕೊಳ್ಳುತಿದ್ದೇವೆ ಎಂದು ರೈತ ಮಾಣಿಕ್ಯಪ್ಪ  ಅಸಹಾಯಕತೆ ತೋಡಿಕೊಂಡರು.

ರಾತ್ರಿ ವೇಳೆ ಹಂದಿಗಳ ಕಾಟವಾದರೆ ಬೆಳಿಗ್ಗೆ 5 ಗಂಟೆ ನಂತರ ಬೆಳ್ಳಕ್ಕಿಗಳು ಹೊಲಕ್ಕೆ ಬರುತ್ತವೆ. ಜೋಳದ ತೆನೆಯಲ್ಲಿ ಬಲಿತ ಕಾಳುಗಳನ್ನು ತಿನ್ನುತ್ತವೆ. ಇದರಿಂದಲೂ ಬೆಳೆ ನಾಶವಾಗುತ್ತಿದೆ. ಹಕ್ಕಿಗಳ ಕಾಟ ತಪ್ಪಿಸಲು ಬೆಳಿಗ್ಗೆ 10 ಗಂಟೆವರೆಗೆ ಶಬ್ದ ಮಾಡುತ್ತಾ ಹೊಲದಲ್ಲಿ ಕೂರುವುದು ಅನಿವಾರ್ಯವಾಗಿದೆ ಎಂದು ಸುತ್ತಮುತ್ತಲ ಊರುಗಳ ರೈತರು ಅಳಲು ತೋಡಿಕೊಂಡರು.

ಹೊಲದಲ್ಲಿ ಅಲ್ಲಲ್ಲಿ ಗಾಜಿನ ಬಾಟಲಿಗಳನ್ನು ನೇತುಹಾಕಿ ಸುತ್ತಲೂ ರಟ್ಟುಗಳಿಗೆ ಚಿಕ್ಕ ಕಲ್ಲುಗಳನ್ನು ಕಟ್ಟಿ ನೇತು ಹಾಕಿದ್ದೇವೆ. ಇದರಿಂದ ಶಬ್ದ ಬರುವುದರಿಂದ ಹಕ್ಕಿಗಳು ಬರುವುದಿಲ್ಲ ಎಂದ ರೈತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT