ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುತ್ತಿರುವ ಸೃಜನಾ ಕಲಾಕೃತಿ

ಹಾಸನಾಂಬ ಕಲಾಕ್ಷೇತ್ರದಲ್ಲಿ ಜ. 24ರವರೆಗೆ ಚಿತ್ರ ಕಲಾಕೃತಿಗಳ ಪ್ರದರ್ಶನ
Last Updated 23 ಜನವರಿ 2017, 10:51 IST
ಅಕ್ಷರ ಗಾತ್ರ

ಹಾಸನ: ಕಲಾಕೃತಿಗಳು ಮನಸ್ಸುಗಳನ್ನು ಅರಳಿಸುತ್ತವೆ ಎಂಬ ಮಾತಿದೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಯುವ ಕಲಾವಿದೆ ಸೃಜನಾ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಭೇಟಿ ನೀಡಿದರೆ ಪರಿಸರ, ಧಾರ್ಮಿಕ ಮತ್ತು ಸಂಸ್ಕೃತಿ ಸಾರುವ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ನಗರದ ಚಿತ್ಕಲಾ ಫೌಂಡೇಷನ್‌, ಚಿತ್ಕಲಾ ಹವ್ಯಾಸಿ ಚಿತ್ರಕಲಾ ಶಾಲೆ ಆಶ್ರಯದಲ್ಲಿ ಸೃಜನಾ ಪಿ. ಧೋತ್ರದ ಅವರ ಕೈ ಚಳಕದಲ್ಲಿ ಮೂಡಿರುವ ಬೆಟ್ಟ, ಗುಡ್ಡ, ಕಾಡು, ಜಲಚರಗಳ ಚಿತ್ರಗಳು ಕಲಾಸಕ್ತರನ್ನು ಆಕರ್ಷಿಸುತ್ತಿವೆ. ಪ್ರಮುಖವಾಗಿ ಪ್ರಾಣಿ, ಪಕ್ಷಿ, ಮನುಷ್ಯ ಒಳಗೊಂಡಂತೆ ಇತರೆ ವಸ್ತುಕೇಂದ್ರಿತವಾಗಿ ಮೂಡಿ ಬರುವ ಪರಿಸರ ವೈವಿಧ್ಯ  ಸಾರುವ ಕಲಾಕೃತಿಗಳು ಮತ್ತೆ ಮತ್ತೆ ನೋಡುವಂತೆ ಮಾಡುತ್ತಿವೆ.

ಪ್ರದರ್ಶನದಲ್ಲಿ ಎಲ್ಲರನ್ನು ಆಕರ್ಷಿಸಬಲ್ಲಂತಹ ಆಮೂರ್ತ ಬಗೆಯ ಕಲಾಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಸಮಕಾಲೀನ ವಾಸ್ತವಿಕ ತಲ್ಲಣಗಳನ್ನು ತಿಳಿಸುವ ಚಿತ್ರಗಳು ಪರಿಣಾಮಕಾರಿಯಾಗಿವೆ. ಸೃಜನಾ ಅವರ ಜಲವರ್ಣಗಳಲ್ಲಿ ರಚಿಸಿರುವ ನಿಸರ್ಗ ಹಾಗೂ ಸಮಾಜದ ದೈನಂದಿನ ಸಾಮಾನ್ಯ ಜೀವನದ ಬಗೆಗಿನ ವಿಷಯಗಳನ್ನು ಆಧರಿಸಿದ ಸುಮಾರು 60 ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಧಾರ್ಮಿಕ, ಸಾಂಸ್ಕೃತಿಕ ಆಚರಣೆ, ಹುಲಿ, ಮೀನು, ಪೆಂಗ್ವಿನ್‌, ಬೇಟೆಯಾಡುವುದು, ನದಿ, ಹುಣಸಿನಕೆರೆ ಹಕ್ಕಿಗಳ ಚಿಲಿಪಿಲಿ, ನರಿ, ತೋಳ, ಬುಡಕಟ್ಟು ಜನಾಂಗದ ಸಂಸ್ಕೃತಿ ಬಿಂಬಿಸುವ ಚಿತ್ರಗಳು, ಮಹಿಳೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ರೀತಿ ಕಣ್ಮನ ಸೆಳೆಯುತ್ತಿವೆ.

ಬುದ್ಧ, ಶಿವ, ಯೇಸು, ರಜನಿಕಾಂತ್‌, ಕೃಷ್ಣ ರಾಧೆ ಹಾಗೂ ಮಹನೀಯರ ಚಿತ್ರಗಳಿದ್ದವು. ಮಕ್ಕಳು, ಹಿರಿಯರು, ಚಿತ್ರಗಳನ್ನು ತದೇಕಚಿತ್ತದಿಂದ ನೋಡುತ್ತ ಆಕರ್ಷಿತರಾಗಿ ಕಲಾವಿದರನ್ನು ಮಾತನಾಡಿಸಿ ಚಿತ್ರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

‘ಚಿತ್ರ ಕಲಾಕೃತಿಗಳ ಬಗ್ಗೆ  ಜನರಲ್ಲಿ ಆಸಕ್ತಿ ಹುಟ್ಟಿಸಬೇಕು ಎಂಬ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ. ಚಿತ್ರಕಲೆ ಮಕ್ಕಳಲ್ಲಿ ಕಲ್ಪನಾ ಶಕ್ತಿ ಹಾಗೂ ಸೃಜನಶೀಲತೆ ಗುಣವನ್ನು ಬೆಳೆಸುತ್ತದೆ. ಸೃಜನಾ ನಾಲ್ಕನೇ ತರಗತಿಯಲ್ಲಿದ್ದಾಗಲೇ ದಿನಪತ್ರಿಗಳಿಗೆ ಬರುವ ಚಿತ್ರಗಳಿಗೆ ಬಣ್ಣ ತುಂಬಿ ಕಲೆಯಲ್ಲಿ ತನ್ನ ಆಸಕ್ತಿ ತೋರಿಸಿದ್ದಳು. ಅಂದಿನ ಅವಳ ಆಸಕ್ತಿ, ಕಲೆಯ ಒಲವು ಇಂದು ಅವಳ ಈ ಸಾಧನೆಗೆ ಕಾರಣ. ಹೇಳಿಕೊಟ್ಟಿದ್ದನ್ನು ಆಸಕ್ತಿಯಿಂದ ಕಲಿತಳು’ ಎನ್ನುತ್ತಾರೆ ಚಿತ್ಕಲಾ ಫೌಂಡೇಷನ್‌ ಅಧ್ಯಕ್ಷ ಕಲಾವಿದ ಬಿ.ಎಸ್‌.ದೇಸಾಯಿ.

ಜ. 24ರವರೆಗೆ ನಡೆಯುವ ಈ ಪ್ರದರ್ಶನಕ್ಕೆ ಕಲಾಸಕ್ತರು ಬೆಳಿಗ್ಗೆ 10 ರಿಂದ ಸಂಜೆ 8ರ ವರೆಗೆ ಭೇಟಿ ನೀಡಬಹುದು. ಪ್ರವೇಶ ಉಚಿತ. ‘ಚಿಕ್ಕವಯಸ್ಸಿನಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಪೋಷಕರು ಓದು ಎಂದು ಒತ್ತಾಯ ಮಾಡದೆ ಚಿತ್ರಕಲೆಗೆ ಸಹಕಾರ ನೀಡಿದರು.

ಆರಂಭದಲ್ಲಿ ದಿನ ಎರಡು ಚಿತ್ರಗಳನ್ನು ರಚಿಸುತ್ತಿದ್ದೆ. ರಜೆ ದಿನಗಳಲ್ಲಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡೆ. ಪರಿಸರ, ಮಾನವಾಸಕ್ತಿ ಚಿತ್ರಗಳ ಕಡೆ ಹೆಚ್ಚು ಗಮನ ಹರಿಸುತ್ತೇನೆ. ಓದಿನ ಜತೆಗೆ ಚಿತ್ರಕಲಾ ಕ್ಷೇತ್ರದಲ್ಲಿ ಮುಂದುವರೆಯಬೇಕು ಅಂದುಕೊಂಡಿದ್ದೇನೆ’ ಎನ್ನುತ್ತಾರೆ ಕಲಾವಿದೆ ಸೃಜನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT