ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ: ಬಿಗಿ ಪೊಲೀಸ್ ಬಂದೋಬಸ್ತ್

ಕಳಸಾ ಬಂಡೂರಿ ಹೋರಾಟಗಾರರಿಂದ ಇಂದು ಜೈಲ್ ಭರೋ, ಗಡೀಪಾರು ಚಳವಳಿ; ಬಂದ್‌ಗೆ ಕರೆ
Last Updated 23 ಜನವರಿ 2017, 12:24 IST
ಅಕ್ಷರ ಗಾತ್ರ

ನವಲಗುಂದ: ಜೈಲ್ ಭರೋ ಹಾಗೂ ಗಡೀಪಾರು ಚಳವಳಿಗಾಗಿ ರೈತರು ಸೋಮವಾರ ನೀಡಿರುವ ಬಂದ್ ಕರೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋ­ಬಸ್ತ್‌ ವ್ಯವಸ್ಥೆ ಮಾಡಿದೆ.

ನಗರದಲ್ಲಿ ಪೊಲೀಸರನ್ನು ನಿಯೋ­ಜಿಸಿದ್ದು, ಪೂರ್ವಭಾವಿಯಾಗಿ ಪ್ರಮುಖ ಬೀದಿಗಳಲ್ಲಿ ಭಾನುವಾರ ಸಂಜೆ ಪಥ ಸಂಚಲನ ನಡೆಸಲಾಯಿತು. ‘ನಿಮ್ಮೊಂ­ದಿಗೆ ನಾವಿದ್ದೇವೆ’ ಎಂಬ ಘೋಷ ವಾಕ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ನಾಕಾ ಬಂದಿ ಹಾಕಲಾಗಿದೆ. ದುಷ್ಕರ್ಮಿಗಳು ನಗರಕ್ಕೆ ಬಂದು ಗಲಾಟೆ ಮಾಡುವ ಸಾಧ್ಯತೆಗಳ ಕಾರಣ ಹೊರ ಊರಿನಿಂದ ಬರುವ ಖಾಸಗಿ ವಾಹನ­ಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮತ್ತೊಂದು ನೋಟಿಸ್ ಜಾರಿ: ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿ­ಕರಿಗೆ ಅನಾನುಕೂಲವಾಗುವ ಸಭೆ, ಸಮಾರಂಭ, ಮೆರವಣಿಗೆ, ಹರತಾಳಕ್ಕೆ ಅವಕಾಶ ಇಲ್ಲ.ಪ್ರತಿಭಟನೆ ಅಥವಾ ಮೆರವಣಿಗೆ ಸಂದರ್ಭದಲ್ಲಿ ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾದರೆ ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟವನ್ನು ಹೊಣೆ ಮಾಡ­ಲಾಗು­ವುದು ಎಂದು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬ­ಸೂರ ಅವರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.

ನೋಟಿಸ್‌ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಲೋಕನಾಥ ಹೆಬಸೂರ, ‘ನಾವು ಕುಡಿಯುವ ನೀರಿಗಾಗಿ 532 ದಿನದಿಂದ ಹೋರಾಟ ನಡೆಸುತ್ತಿದ್ದೇವೆ. ಪೊಲೀಸರ ಒದೆ ತಿಂದರೂ ಹೋರಾಟ ಮುಂದು­ವರಿದಿದೆ. ಹೋರಾಟ ನಿರಂತರವಾಗಿ ನಡೆಯುವುದು. ಪೊಲೀಸರ ಬೆದರಿಗೆ ಹೆದರುವುದಿಲ್ಲ’ ಎಂದು ತಿಳಿಸಿದ್ದಾರೆ.

ಹೋರಾಟದಲ್ಲಿ ಪಾಲ್ಗೊಳ್ಳದಂತೆ ಗ್ರಾಮ ಗ್ರಾಮಗಳಿಗೆ ಹೋಗಿ ರೈತರನ್ನು ಹೆದರಿಸುತ್ತಿದ್ದಾರೆ. ಪೊಲೀಸರ ದೌರ್ಜ­ನ್ಯದಿಂದ ನೊಂದಿರುವ ರೈತರು ಕೋರ್ಟ್ ಕಚೇರಿ ಅಲೆಯುವುದು ಬೇಕಾಗಿಲ್ಲ. ಅದಕ್ಕಾಗಿ ನಾವೇ ಸ್ವತಃ ಜೈಲ್ ಭರೋ ಮತ್ತು ಗಡೀಪಾರು ಮಾಡು­ವಂತೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಹೆಬಸೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT