ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯ ಬಂಡವಾಳದ ಸಮಗ್ರ ಕೃಷಿ

Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ಇವರು 1978ರಲ್ಲಿಯೇ ಬಿಎಸ್ಸಿ ಪದವಿ ಪಡೆದವರು. ಮನಸ್ಸು ಮಾಡಿದ್ದರೆ ಉತ್ತಮ ನೌಕರಿಗೆ ಸೇರಬಹುದಿತ್ತು. ಆದರೆ ಕೃಷಿಯೆಡೆಗಿನ ತುಡಿತ ಅವರನ್ನು ಊರಲ್ಲೇ ನಿಲ್ಲಿಸಿತ್ತು.

ಇವರ ಹೆಸರು ರಾಧಾಕೃಷ್ಣ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯ ಇವರು ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಕೃಷಿಯನ್ನು ಲಾಭದಾಯಕವಾಗಿಸಿಕೊಂಡಿದ್ದಾರೆ. ಶೂನ್ಯ ಬಂಡವಾಳದಿಂದ ಕೃಷಿ ಆರಂಭಿಸಿರುವ ಇವರು ಇತರ ರೈತರಿಗೂ ಮಾದರಿ. ಇವರದ್ದು ಪ್ರಕೃತಿ ಕೃಷಿ. ತಂದೆಯಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ತಂದೆಯವರ ಮಾದರಿಯಲ್ಲಿಯೇ ಕೃಷಿಕಾರ್ಯ ನಡೆಸುತ್ತಿದ್ದಾರೆ.

ಒಕ್ಕಲುತನದಲ್ಲಿ ಹಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ. ಇವರ ಈ ಲಾಭದಾಯಕ ಯಶಸ್ಸಿನ ಗುಟ್ಟು ಸಾವಯವ ಕೃಷಿ. ಜಮೀನಿಗೆ ರಾಸಾಯನಿಕ ಸೋಕಿಸದೇ ಕೃಷಿ ಮಾಡುತ್ತಾರೆ. ಹೊಲದಲ್ಲಿಯೇ ಜೀವಾಮೃತ ತಯಾರಿಸಿಕೊಳ್ಳುತ್ತಾರೆ. ಆಧುನಿಕ ರೀತಿಯಲ್ಲಿ ಫಲವತ್ತಾದ ತಿಪ್ಪೆಗೊಬ್ಬರ ತಯಾರಿಸಿಕೊಳ್ಳುತ್ತಾರೆ.

‘ಕೃಷಿಗೆ ಅಗತ್ಯವಾದ ಬೀಜದಿಂದ ಹಿಡಿದು ಗೊಬ್ಬರದವರೆಗೂ ಎಲ್ಲವನ್ನು ನಾವೇ ತಯಾರಿಸಿಕೊಳ್ಳುತ್ತೇವೆ. ಎಲ್ಲದ್ದಕ್ಕೂ ನಮ್ಮ ಮನೆಯಲ್ಲಿಯೇ ಪರಿಹಾರ ಇದೆ. ನಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಹಣ ತರುತ್ತೇವೆಯೇ ಹೊರತು, ಕೃಷಿಗಾಗಿ ಒಂದು ಪೈಸೆಯನ್ನೂ ಅಂಗಡಿಗೆ ನೀಡುವುದಿಲ್ಲ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ.

ಏಕಬೆಳೆ ಪದ್ಧತಿಯಿಂದ ಅಥವಾ ಅಧಿಕ ಉತ್ಪನ್ನದ ಆಸೆಯಿಂದ ರಾಸಾಯನಿಕ ಗೊಬ್ಬರವನ್ನು ಕೃಷಿಗೆ ಉಪಯೋಗಿಸಿದರೆ ಭವಿಷ್ಯದಲ್ಲಿ ಅದು ತುಂಬಾ ಮಾರಕ ಎನ್ನುವುದು ಅವರ ಅನಿಸಿಕೆ. ಉಪ ಕೃಷಿ ಉಪಯುಕ್ತವಲ್ಲ. ತಾತ್ಕಾಲಿಕವಾಗಿ ಲಾಭದಾಯಕವಾಗಿ ಕಂಡರೂ ಕೊನೆಗೆ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ.

ನೈಸರ್ಗಿಕ ಮತ್ತು ಸಾವಯವ ಕೃಷಿ ಕೈಗೊಂಡರೆ ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಸಂತೃಪ್ತ ಜೀವನ ನಡೆಸಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಕೃಷಿಗೆ ಅಗತ್ಯಮಿತ್ರರಾದ ಎರೆಹುಳು, ದುಂಬಿಗಳು, ಪ್ರಾಣಿಪಕ್ಷಿಗಳನ್ನು ಸಾಕಬೇಕು. ಇವರ ಕುಟುಂಬದಲ್ಲಿ ಎಮ್ಮೆ, ಹಸು, ಕುರಿ, ಮೇಕೆ ಸಾಕಿದ್ದಾರೆ. ಪರಾಗಸ್ಪರ್ಶಕ್ಕಾಗಿ ಸುಮಾರು 2.30 ಲಕ್ಷ ಜೇನು ನೊಣಗಳನ್ನು ಸಾಕಿದ್ದಾರೆ.

ಭೂಮಿಯಲ್ಲಿ ತೇವಾಂಶ ಉಳಿಸಿ ಮಣ್ಣಿನ ಸಂರಕ್ಷಣೆ ಮಾಡಲು ಹೊದಿಕೆ ಪದ್ಧತಿ ಅನುಸರಿಸಿದ್ದಾರೆ. ಬದುಗಳ ನಿರ್ಮಾಣ, ಅಂತರ್ಜಲ ಅಭಿವೃದ್ಧಿಗಾಗಿ ಸುಮಾರು ವರ್ಷಗಳ ಹಿಂದೆಯೇ ಇಂಗುಗುಂಡಿಗಳ ನಿರ್ಮಾಣ ಮಾಡಿಕೊಂಡಿದ್ದಾರೆ.

ತೋಟಗಾರಿಕೆ ಬೆಳೆಗಳಾದ ಸೀಬೆ, ಸಪೋಟಾ, ಜಂಬುನೇರಳೆ, ನುಗ್ಗೆ, ತೆಂಗು, ಹಲಸು, ಹುಣಸೆ, ಮಾವು, ಹೀರೆಕಾಯಿ, ಗೋಡಂಬಿ, ಬೀಟ್‌ರೂಟ್‌ ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ. ಅಂತರ ಬೆಳೆಯಾಗಿ ತೊಗರಿ, ಅಲಸಂದೆ, ಹುರಳಿ, ರಾಗಿ ಕಳ್ಳೆಕಾಯಿ ಬೆಳೆ ಬೆಳೆಯುತ್ತಾರೆ. ಪಶುಸಂಗೋಪನೆಗೆ ಪೂರಕವಾಗಿ ಜೋಳ, ಹುಲ್ಲು, ಗ್ಲಿರಿಸೀಡಿಯಾ, ಹೆಬ್ಬೇವು ಬೆಳೆಸಿದ್ದಾರೆ.

ಇವರ ಕೃಷಿಯನ್ನು ಗಮನಿಸಿ 2010 ರಲ್ಲಿ ಬೆಂಗಳೂರಿನ ಜಿಕೆವಿಕೆ ‘ಪ್ರಗತಿಪರ ರೈತ’ ಎಂದು ಪ್ರಶಂಸನಾಪತ್ರ ನೀಡಿ ಸನ್ಮಾನಿಸಿತ್ತು. 2014ರಲ್ಲಿ ‘ಜಿಲ್ಲಾಮಟ್ಟದ ಪ್ರಗತಿಶೀಲ ರೈತ’ ಪ್ರಶಸ್ತಿ ಪಡೆದಿದ್ದರು. ಇತ್ತೀಚೆಗೆ ದೂರದ ಬಾಗಲಕೋಟೆಯಲ್ಲಿ ನಡೆದ ತೋಟಗಾರಿಕಾ ವಿಶ್ವವಿದ್ಯಾಲಯದ ‘ತೋಟಗಾರಿಕಾ ಮೇಳ’ದಲ್ಲಿ ‘ಶ್ರೇಷ್ಠ ತೋಟಗಾರಿಕೆ ರೈತ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ನಮ್ಮ ಪೂರ್ವಿಕರಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ, ಕುಕ್ಕುಟ ಸಾಕಾಣಿಕೆಯ ಸಮಗ್ರ ಕೃಷಿ ಪದ್ಧತಿಯನ್ನು ಶ್ರದ್ಧೆ ಮತ್ತು ಶ್ರಮದಿಂದ ನಿರ್ವಹಿಸಿದರೆ ಖಂಡಿತ ರೈತರು ಯಶಸ್ವಿಯಾಗಿ, ಸ್ವಾಭಿಮಾನದ ಜೀವನ ನಡೆಸಬಹುದೆಂದು ರಾಧಾಕೃಷ್ಣ ಅಭಿಪ್ರಾಯಪಡುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT