ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಭೂಮಿಯಲಿ ಚಿಕ್ಕು ಘಮಲು

ಅಕ್ಷರ ಗಾತ್ರ

ಬಹುಭಾಗ ಬಂಡೆ ಮತ್ತು ಸುಣ್ಣದ ಕಲ್ಲು ಮಿಶ್ರಿತ ಭೂಮಿಯ ಮೇಲೆ ಫಲವತ್ತಾದ ಮಣ್ಣನ್ನು ಹಾಕಿ ಬೆಳೆಗೆ ಯೋಗ್ಯ ಭೂಮಿಯನ್ನಾಗಿ ಮಾಡಿಕೊಂಡು ಅದರಿಂದಲೇ ಆದಾಯದ ಹಾದಿ ತುಳಿದಿದ್ದಾರೆ ಉಮೇಶಪ್ಪ ಬೆಣ್ಣಿ. ಸದಾ ಬರಗಾಲಕ್ಕೆ ಹೆಸರಾಗಿರುವ ಕೊಪ್ಪಳ ಜಿಲ್ಲೆಯ ಗುಳದಳ್ಳಿ ಗ್ರಾಮದ ಉಮೇಶಪ್ಪ ಇಂಥದ್ದೊಂದು ಸಾಧನೆ ಮಾಡಿದ್ದಾರೆ.

ಮೂರು ಜನ ಅಣ್ಣ ತಮ್ಮಂದಿರ ಪೈಕಿ ಉಮೇಶಪ್ಪ ಅವರ ಪಾಲಿಗೆ ಬಂದಿದ್ದು ನಾಲ್ಕು ಎಕರೆ ಜಮೀನು. ಅದರಲ್ಲಿ ಎರಡೂವರೆ ಎಕರೆ ಜಮೀನು ಕೃಷಿಯೋಗ್ಯವಾಗಿತ್ತು. ಇನ್ನುಳಿದ ಒಂದೂವರೆ ಎಕರೆಗೂ ಅಧಿಕ ಜಮೀನು ಕಲ್ಲು ಬಂಡೆ ಹಾಗೂ ಸುಣ್ಣದ ಕಲ್ಲು ಮಿಶ್ರಿತವಾಗಿದ್ದು, ಯಾವುದೇ ಬೆಳೆ ಬೆಳೆಯಲು ಯೋಗ್ಯವಾಗಿರಲಿಲ್ಲ.

ಇದನ್ನರಿತ ಉಮೇಶಪ್ಪ, ಪತ್ನಿ ಇಂದ್ರಮ್ಮ ಹಾಗೂ ಮಗ ರಮೇಶ ಇವರಿಬ್ಬರ ಸಹಕಾರದಿಂದ ಆ ಭೂಮಿಯನ್ನೂ ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಿದರು. ಬಂಡೆಯ ಮೇಲೆ ಉತ್ತಮ ಫಲವತ್ತತೆಯಿಂದ ಕೂಡಿದ ಮಣ್ಣನ್ನು ಹಾಕುವ ಮೂಲಕ ಆ ಜಾಗವನ್ನೂ ಸದ್ಬಳಕೆ ಮಾಡಿಕೊಳ್ಳಲು ಮುಂದಾದರು.

ಸುಮಾರು ಏಳು ವರ್ಷಗಳ ಹಿಂದೆ ಕೊಪ್ಪಳದ ತೋಟಗಾರಿಕೆ ಇಲಾಖೆಯ ನೆರವು ಪಡೆದು ಸುಮಾರು ನೂರಕ್ಕೂ ಅಧಿಕ ಸಪೋಟ ಸೇರಿದಂತೆ ತೆಂಗು, ಮಾವು ಗಿಡಗಳನ್ನು ತಂದು ಹೊಸದಾಗಿ ತಯಾರು ಮಾಡಿಕೊಂಡ ಜಾಗದಲ್ಲಿ ನೆಟ್ಟು ಇರುವ ಅಲ್ಪಸ್ವಲ್ಪ ನೀರನ್ನೇ ಹರಿಸಿ ಪೋಷಿಸತೊಡಗಿದರು. ಇವರ ಈ ಪ್ರಯತ್ನವನ್ನು ಗಮನಿಸಿದ ಕೆಲವು ರೈತರು ಬಂಡೆಯ ಮೇಲೆ ಮಣ್ಣು ಹಾಕಿ ಬೆಳೆಯುವುದು ಒಂದು ನಿರುಪಯುಕ್ತ ಹುಚ್ಚು ಪ್ರಯತ್ನ ಎಂದು ಅಪಹಾಸ್ಯ ಮಾಡಿದರೂ ಅದನ್ನು ಲೆಕ್ಕಿಸದ ಇವರು, ಪ್ರಯತ್ನ ಮುಂದುವರೆಸಿದರು.

ಪರಿಣಾಮ, ಕಳೆದ ಮೂರು ವರ್ಷಗಳಿಂದ ಭರಪೂರ ಸಪೋಟ ಹಣ್ಣುಗಳ ಫಸಲು ದೊರೆಯುತ್ತಿದ್ದು, ಉತ್ತಮ ಆರ್ಥಿಕ ಲಾಭ ತಂದು ಕೊಡುತ್ತಿವೆ. ಇತ್ತೀಚೆಗೆ ಈ ಮಾರ್ಗವಾಗಿ ಹಾದು ಹೋದ ಮುನಿರಾಬಾದ್-ಮೆಹಬೂಬನಗರ ರೈಲ್ವೆ ಮಾರ್ಗದ ವ್ಯಾಪ್ತಿಗೆ ಈ ತೋಟದ ಕೆಲ ಭಾಗ ಒಳಪಟ್ಟು ಸುಮಾರು 20 ಗಿಡಗಳು ನಾಶವಾಗಿವೆ. ಉಳಿದ 80ಕ್ಕೂ ಅಧಿಕ ಗಿಡಗಳಿಂದ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಆರಂಭದಲ್ಲಿ ಸಸಿಗಳನ್ನು ಪಡೆದಿದ್ದನ್ನು ಹೊರತುಪಡಿಸಿದರೆ ಇದುವರೆಗೂ ಇಲಾಖೆಯಿಂದ ಯಾವುದೇ ನೆರವು ಪಡೆಯದೇ ಸ್ವಂತ ಪ್ರಯತ್ನದಲ್ಲಿ ಮುನ್ನುಗ್ಗುತ್ತಿದ್ದಾರೆ.

ಮಾರುಕಟ್ಟೆ ಪ್ರಕ್ರಿಯೆ
ಸಪೋಟ ಹಣ್ಣುಗಳನ್ನು ಕೊಪ್ಪಳ, ಗಂಗಾವತಿ ಸೇರಿದಂತೆ ಸುತ್ತಮುತ್ತಲ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಖುದ್ದಾಗಿ ಮಾರಾಟ ಮಾಡಿದ್ದುಂಟು. ಗಿಡಗಳು ವರ್ಷಕ್ಕೆ ಎರಡು ಬಾರಿ ಫಲ ನೀಡುತ್ತಿದ್ದು, ವರ್ಷಕ್ಕೆ ಸುಮಾರು 25 ರಿಂದ 30 ಕ್ವಿಂಟಲ್ ಹಣ್ಣುಗಳು ಸಿಗುತ್ತವೆ. ದಲ್ಲಾಳಿ ಮೂಲಕ ಮಾರಿದರೆ ಪ್ರತಿ ಕ್ವಿಂಟಲ್‌ಗೆ ಅಂದಾಜು 2 ಸಾವಿರ ರೂಪಾಯಿ ಆದರೂ ವರ್ಷಕ್ಕೆ ಆದಾಯ 50ಸಾವಿರ ರೂಪಾಯಿ ದಾಟುತ್ತದೆ. ಇನ್ನು ನೇರವಾಗಿ ಮಾರುಕಟ್ಟೆಗೆ ಹೋಗಿ ತಾವೇ ಮಾರಾಟ ಮಾಡಿದರೆ ಇನ್ನೂ ಅಧಿಕ ಲಾಭ ಪಡೆಯಬಹುದು ಎನ್ನುತ್ತಾರೆ ಉಮೇಶಪ್ಪ.

ಮಿಶ್ರಬೆಳೆ ಪದ್ಧತಿ
ಸಪೋಟ ಗಿಡಗಳ ಮಧ್ಯೆ ಇರುವ ಅಂತರದಲ್ಲಿ ಇತರೆ ಉಪ ಬೆಳೆಗಳನ್ನೂ ಬೆಳೆಯುವ ಮೂಲಕ ಮಿಶ್ರಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸಪೋಟ ಗಿಡಗಳ ಮಧ್ಯೆ ಶಾಶ್ವತವಾಗಿ ಉಳಿದುಕೊಳ್ಳುವ ಸ್ಥಳವನ್ನು ಈ ಮೂಲಕ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕರಿಬೇವು, ಮೆಣಸಿನ ಗಿಡ, ಟೊಮೆಟೊ, ಚೆಂಡು ಹೂ ಸೇರಿದಂತೆ ಹಲವು ಬಗೆಯ ಉಪ ಬೆಳೆಗಳನ್ನು ಬೆಳೆಯುವ ಮೂಲಕ ಅದರಿಂದಲೂ ಸೂಕ್ತ ಲಾಭವನ್ನು ಪಡೆಯುತ್ತಿದ್ದಾರೆ. ಈ ಉಪ ಬೆಳೆಯು ಸಾಮಾನ್ಯವಾಗಿ ಕೌಟುಂಬಿಕ ಚಿಲ್ಲರೆ ಹಣಕಾಸು ಕೊರತೆಯನ್ನು ನೀಗಿಸಿಕೊಂಡು ಹೋಗುವಲ್ಲಿ ಸಹಾಯಕಾರಿಯಾಗಿವೆ ಎನ್ನುತ್ತಾರೆ ಪತ್ನಿ ಇಂದ್ರಮ್ಮ. ಜೊತೆಗೆ ಪಶು ಸಂಗೋಪನೆಯನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ.

ಇಂಚು ಭೂಮಿಗೂ ಚಿನ್ನದ ಬೆಲೆ ಇರುವ ಈಗಿನ ಕಾಲದಲ್ಲಿ ಬಂಡೆ ಮತ್ತು ಸುಣ್ಣದ ಕಲ್ಲಿನ ಹೊಲವನ್ನು ನಿರುಪಯುಕ್ತ ಎಂದು ಬಿಡದೇ ಬೆವರು ಸುರಿಸಿ ಕೃಷಿ ಮಾಡುವ ಇವರ ಈ ಕಾರ್ಯ ನಿಜಕ್ಕೂ ಇತರೆ ರೈತರಿಗೆ ಮಾದರಿ. ಇವರ ಈ ಯಶಸ್ಸನ್ನು ಕಂಡು ಹಲವು ರೈತರು ಈ ಸ್ಥಳಕ್ಕೆ ಭೇಟಿಕೊಟ್ಟು ಮಾಹಿತಿ ಪಡೆಯುತ್ತಾರೆ.

ಒಟ್ಟಿನಲ್ಲಿ ದುಡಿಯಬೇಕೆಂಬ ಇಚ್ಛಾಶಕ್ತಿ ಹಾಗೂ ಶ್ರಮಾಗುಣ ಇರುವವರಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎನ್ನುವುದಕ್ಕೆ ಉಮೇಶಪ್ಪ ಅವರ ಈ ಸಾಧನೆಯೇ ಸಾಕ್ಷಿ. ಇವರ ಉತ್ಸಾಹಕ್ಕೆ ಇನ್ನಷ್ಟು ಶಕ್ತಿ ತುಂಬಲು ಸಂಬಂಧಪಟ್ಟ ಇಲಾಖೆ ಹಾಗೂ ಅನುಭವಿಗಳಿಂದ ಸೂಕ್ತ ಸಲಹೆ, ಸಹಕಾರವೂ ಅಗತ್ಯ.

‘ಮೊದ್ಲು ಒಂದೂವರಿ ಎಕ್ರೆ ಹೊಲದಲ್ಲಿ ಬರೀ ಕಲ್ಲುಬಂಡೆ ಇದ್ದಿದ್ದನ್ನ ನೋಡಿ ಇದ್ರಿಂದ ಏನೂ ಲಾಭ ಇಲ್ಲ ಅಂತ ಬಿಟ್ಟಿದ್ವಿ, ಆಮೇಲೆ ಇದು ಶಾಶ್ವತವಾಗಿ ಉಪಯೋಗ ಇಲ್ದಂಗ ಆಗುತ್ತಲ್ಲ ಅಂತ ಯೋಚ್ನೆ ಮಾಡಿ ಆ ಬಂಡೆಯನ್ನೂ ಮಣ್ಣಿನಿಂದ ಮುಚ್ಚಿ ಹೊಲ ಮಾಡ್ಕೊಂಡ್ವಿ. ಸುಮಾರು ಐದಾರು ವರ್ಷ ತುಂಬಾ ಕಷ್ಟಪಟ್ವಿ, ಈಗ ನಮ್ಮ ಶ್ರಮಕ್ಕ ತಕ್ಕ ಪ್ರತಿಫಲ ಸಿಗಾಕತ್ತೈತಿ. ಮನಸ್ಸು ಮಾಡಿ ಕಷ್ಟಪಟ್ಟು ದುಡಿದ್ರ ಎಲ್ಲ ಲಾಭ ಐತಿ.  ದುಡಿಯೋದು ಕಷ್ಟ ಅಂತ ಬರಿ ಸರ್ಕಾರದ ಸಹಾಯಕ್ಕಾಗಿ ಕಾಯುತ್ತ ಕುಂತ್ರ ನಮಗ ಏನೂ ಪ್ರತಿಫಲ ಸಿಗಂಗಿಲ್ಲ’ ಎನ್ನುತ್ತಾರೆ ಉಮೇಶಪ್ಪ.
ಸಂಪರ್ಕಕ್ಕೆ- 9620961681, 8971395256.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT