ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಸ್ವಚ್ಛತಾ ಅಭಿಯಾನ

Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿರುವ ಧಾರ್ಮಿಕ ಕೇಂದ್ರಗಳ ಪಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೊದಲ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತದೆ. ಈ ಮಾತಿಗೆ ಪೂರಕವೆಂಬಂತೆ ಇತ್ತೀಚೆಗೆ ಇಂಡಿಯಾ ಟುಡೆ ನಿಯತಕಾಲಿಕ ಪತ್ರಿಕಾ ಬಳಗದವರು ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಧರ್ಮಸ್ಥಳವು ದೇಶದಲ್ಲಿ ಅತ್ಯಂತ ಸ್ವಚ್ಛ ಧಾರ್ಮಿಕ ಕ್ಷೇತ್ರವೆಂದು ಗುರುತಿಸಿಕೊಂಡು ಇಂಡಿಯಾ ಟುಡೆ ಪತ್ರಿಕಾ ಬಳಗದವರು ನೀಡುತ್ತಿರುವ ಪ್ರಥಮ ರಾಷ್ಟ್ರೀಯ ಸಫಾಯಿಗಿರಿ ಪ್ರಶಸ್ತಿಗೆ ಭಾಜನವಾಗಿದೆ.

ಇದೀಗ ಪ್ರಶಸ್ತಿಯ ಸವಿನೆನಪಿಗಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕೈಗೆತ್ತಿಕೊಂಡ ಸ್ವಚ್ಛ ಶ್ರದ್ಧಾ ಕೇಂದ್ರಗಳು ಎಂಬ ಯೋಜನೆ ಇದೀಗ ರಾಜ್ಯದಾದ್ಯಂತ 5678 ದೇವಾಲಯ, ಚರ್ಚ್, ಮಸೀದಿಗಳಂತಹ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದೆ.

ಏನಿದು ಯೋಜನೆ
ಭಕ್ತರ ಮನಸ್ಸನ್ನು ನಿರ್ಮಲಗೊಳಿಸುವ ಶ್ರದ್ಧಾ ಕೇಂದ್ರಗಳು ಮೊದಲು ಶುಚಿಗೊಳ್ಳಬೇಕು. ಆ ಮೂಲಕ ಪ್ರಧಾನಿಯವರ ಸ್ವಚ್ಛ ಭಾರತದ ಕನಸು ನನಸಾಗಬೇಕೆಂಬ ನಿಟ್ಟಿನಲ್ಲಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮಠಾಧಿಪತಿಗಳ, ರಾಜಕಾರಣಿಗಳ ರಾಜ್ಯದ ಪ್ರಮುಖ ಪತ್ರಿಕೆಗಳ ಸಂಪಾದಕರ ಪೂರ್ವಭಾವಿ ಸಭೆಯನ್ನು ನಡೆಸಿ ಅಲ್ಲಿ ಚರ್ಚೆಗಳು ನಡೆದು ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು.

ಕಾರ್ಯಕ್ರಮ ಅನುಷ್ಠಾನ ಹೇಗೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್. ಎಚ್. ಮಂಜುನಾಥ್‌ರವರ ಮಾರ್ಗದರ್ಶನದಂತೆ ಈಗಾಗಲೇ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ವರ್ಗದ ಮೂಲಕ ಆಯಾ ತಾಲ್ಲೂಕಿನಲ್ಲಿ ಶ್ರದ್ಧಾ ಕೇಂದ್ರಗಳ ಶುಚಿತ್ವದ ಕುರಿತು ಮಾಹಿತಿಯನ್ನು ನೀಡಿ ಅಲ್ಲಿನ ಶ್ರದ್ಧಾ ಕೇಂದ್ರಗಳನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು.

ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ವಿಭಾಗದ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ ಮತ್ತು ಪ್ರತಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಜನೆಯ ಅಧಿಕಾರಿ ವರ್ಗಕ್ಕೆ ವಹಿಸಲಾಯಿತು.

ಹೆಗ್ಗಡೆಯವರ ಪ್ರಯತ್ನಕ್ಕೆ ರಾಜ್ಯದಾದ್ಯಂತ ಇರುವ ಶ್ರದ್ಧಾ ಕೇಂದ್ರಗಳ ಮಠಾಧಿಪತಿಗಳು, ಗಣ್ಯರು, ರಾಜಕೀಯ ನೇತಾರರು ಬೆಂಬಲ ಸೂಚಿಸುವ ಮೂಲಕ ಇದೀಗ ಮೂವತ್ತೊಂದು ಜಿಲ್ಲೆಗಳಲ್ಲಿ ಒಟ್ಟು 5678 ಶ್ರದ್ಧಾ ಕೇಂದ್ರಗಳನ್ನು ಶುಚಿಗೊಳಿಸುವ ಮೂಲಕ ಹೆಗ್ಗಡೆಯವರ ಕನಸನ್ನು ನನಸಾಗಿಸಿದ್ದಾರೆ.

ಶುಚಿತ್ವ ಹೇಗೆ: ಶ್ರದ್ಧಾ ಕೇಂದ್ರಗಳ ಸುತ್ತ ಮುತ್ತ ಉಗುಳುವುದು, ಅಡುಗೆ ಮಾಡುವುದು, ಮಕ್ಕಳಿಗೆ ಸ್ನಾನ ಮಾಡಿಸುವುದು, ಕಲ್ಯಾಣಿ ಕೆರೆಗಳಲ್ಲಿ ಬಟ್ಟೆ ಒಗೆಯುವುದು, ಎಲ್ಲೆಂದರಲ್ಲಿ ಕಸಕಡ್ಡಿಗಳನ್ನು, ಪ್ಲಾಸ್ಟಿಕ್ ಬಾಟಲ್, ತಿಂಡಿ ಕವರ್‌ಗಳನ್ನು ಬಿಸಾಡದಂತೆ ಜನರಿಗೆ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸುವುದು, ಕಸ ಹಾಕಲು ಬುಟ್ಟಿಗಳನ್ನು ಇಡುವುದು, ಜೊತೆಗೆ ಶ್ರದ್ಧಾ ಕೇಂದ್ರಗಳ ಹೊರಾಂಗಣವನ್ನು ಊರಿನ ಜನರೇ ಸೇರಿ ಶುಚಿಗೊಳಿಸುವುದು. ಒಳಾಂಗಣವನ್ನು, ಪೂಜಾ ಸಾಮಗ್ರಿಗಳನ್ನು ಅರ್ಚಕರು ಶುಚಿಗೊಳಿಸುವ ಮೂಲಕ  ಶ್ರದ್ಧಾ ಕೇಂದ್ರಗಳ ಶುಚಿತ್ವವನ್ನು ಕಾಪಾಡುವುದು ಕಾರ್ಯಕ್ರಮದ ಉದ್ದೇಶ.

ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಎನ್ನುವುದು ನಿರಂತರವಾಗಿ ವರ್ಷದುದ್ದಕ್ಕೂ ನಡೆಯುವ ಕಾರ್ಯಕ್ರಮ. ತಿಂಗಳಿಗೊಮ್ಮೆ ಅಥವಾ ಎರಡು ವಾರದಲ್ಲೊಂದು ಬಾರಿ ಹೀಗೆ ಅಲ್ಲಿನ ಪರಿಸರ ಮತ್ತು ಜನತೆಯ ಆಸಕ್ತಿಗೆ ಪೂರಕವಾಗಿ ಮಾಡಬಹುದಾಗಿದೆ. ಆರಂಭದಲ್ಲಿ ಜನವರಿ 13ರೊಳಗೆ ರಾಜ್ಯದೆಲ್ಲೆಡೆ ಒಂದು ಬಾರಿ ಶ್ರದ್ಧಾ ಕೇಂದ್ರಗಳು ಸ್ವಚ್ಛಗೊಳ್ಳಬೇಕೆಂದು ತೀರ್ಮಾನಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಅದರಂತೆ ಈಗಾಗಲೇ ಶ್ರದ್ಧಾ ಕೇಂದ್ರಗಳು ಸ್ವಚ್ಛಗೊಂಡಿವೆ.

ಇದು ವರ್ಷದಲ್ಲೊಂದು ಬಾರಿ ಮಾಡಿ ಮುಗಿಸಿ ಬಿಡುವ ಕಾರ್ಯಕ್ರಮವಲ್ಲ. ವರ್ಷದುದ್ದಕ್ಕೂ ನಡೆಯುತ್ತಿರುತ್ತದೆ. ಕಾರ್ಯಕ್ರಮದ ಅನುಪಾಲನೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮಾಡಲಿದ್ದಾರೆ. ಕಾರ್ಯಕರ್ತರು, ಊರವರ, ಮಠಾಧಿಪತಿಗಳ, ಹಲವು ಸಂಘ ಸಂಸ್ಥೆ, ಇಲಾಖೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಮುಂದುವರಿಯುತ್ತಿದೆ.

ಆರಂಭದ ಯೋಚನೆಗಿಂತಲೂ ಮಿಗಿಲಾದ ಸ್ಪಂದನೆ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಇರುವ ಶ್ರದ್ಧಾ ಕೇಂದ್ರಗಳಿಂದ, ರಾಜಕಾರಣಿಗಳಿಂದ, ಊರಿನ ಪ್ರಮುಖಸ್ಥರಿಂದ ದೊರೆತಿರುವುದು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಇನ್ನಷ್ಟು ಶಕ್ತಿ ತುಂಬಿದೆ ಎನ್ನುವುದು ಕಾರ್ಯಕ್ರಮ ಅನುಷ್ಠಾನದ ಪ್ರೇರಕರಾದ ಡಿ. ವೀರೇಂದ್ರ ಹೆಗ್ಗಡೆಯವರ ಮಾತು.

ಈಗಾಗಲೇ ಕಾರ್ಯಕ್ರಮಕ್ಕೆ ಅಗತ್ಯವಾಗಿ ಬೇಕಾದ ಪ್ಲಾಸ್ಟಿಕ್ ಬಕೆಟ್, ಕೈಗೆ ಗ್ಲೌಸ್, ಕಸ ಹಾಕುವ ಬಕೆಟ್ ಖರೀದಿ ಮುಂತಾದ ಸಣ್ಣಪುಟ್ಟ ಸಾಮಗ್ರಿಗಳ ಖರ್ಚು ವೆಚ್ಚವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಡಲಾಗುತ್ತಿದೆ. ಒಂದು ಹೊತ್ತಿನ ತಿಂಡಿಯ ವ್ಯವಸ್ಥೆಯನ್ನು ಊರವರು, ಗಣ್ಯರು ಮಾಡಿದ್ದಾರೆ. ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ವೀ. ಹೆಗ್ಗಡೆಯವರು, ಸಹೋದರನಾದ ಡಿ. ಹರ್ಷೇಂದ್ರ ಕುಮಾರ್ ಕಾರ್ಯಕ್ರಮದ ಯಶಸ್ಸಿನಲ್ಲಿ ಶ್ರಮಿಸುತ್ತಿರುವುದು ಇಲ್ಲಿ ಉಲ್ಲೇಖನೀಯ.

ಕಾರ್ಯಕ್ರಮದ ಆರಂಭದ ದಿನಗಳಲ್ಲಿ ಹೆಗ್ಗಡೆಯವರು ಕುಂದಾಪುರ, ಕುಮಟಾ, ಹೊನ್ನಾವರ, ಕಾರವಾರ ಹೀಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ತಿರುಗಾಡಿ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆ ಊರಿನ ಜನತೆಗೆ ಮಾಹಿತಿಯನ್ನು ನೀಡಿದ್ದಾರೆ. ಕೆಲವೊಂದೆಡೆ  ಪ್ಲಾಸ್ಟಿಕ್ ಬಕೆಟ್‌ನಂತಹ ಪರಿಕರಗಳನ್ನು ವಿತರಿಸಿದ್ದಾರೆ. ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯ ಬಗ್ಗೆ ಮಾಹಿತಿಗಳಿರುವ ಕರಪತ್ರಗಳನ್ನು ಬಿಡುಗಡೆಗೊಳಿಸಿದ್ದಾರೆ. 

ಈ ಕಾರ್ಯಕ್ರಮ ದೇಶದ ಸ್ವಚ್ಛತಾ ಅಭಿಯಾನಕ್ಕೆ ಹೊಸ ತಿರುವನ್ನು ನೀಡುತ್ತಿರುವುದು ಸತ್ಯ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾದ್ದಲ್ಲಿ ಮುಂದೊಂದು ದಿನ ಸ್ವಚ್ಛ ಭಾರತದ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ನಾವು ಕೈಲಾದ ಪ್ರಯತ್ನವನ್ನು ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT