ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಗುಪ್ಪಿ ಎಂಬ ಆದರ್ಶ ಗ್ರಾಮ

Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು, ಎಲ್ಲ ಕಾಲದಲ್ಲೂ ಕೋಲ್ಡ್‌ವಾಟರ್‌ ಲಭ್ಯ, ಗಲ್ಲಿಗಲ್ಲಿಯಲ್ಲೂ ಕಸ ಸಂಗ್ರಹಿಸಲು ವಾಹನ, ವಿಶಾಲ ರಸ್ತೆಗಳು, ಮನೆಗಳ ಮುಂದಿನ ರಸ್ತೆಗಳಲ್ಲಿ ಟೈಲ್ಸ್‌ ಅಳವಡಿಕೆ, ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ನಡೆಯುವ ಸಭೆ ಟಿ.ವಿ.ಯಲ್ಲಿ ನೇರಪ್ರಸಾರ, ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲ ವಿಷಯ ಧ್ವನಿವರ್ಧಕದ ಮೂಲಕ ಅನೌನ್ಸ್‌ಮೆಂಟ್‌, ಬ್ಯಾಂಕ್‌ನಂತಿರುವ ಪಂಚಾಯ್ತಿ ಕಚೇರಿ, ಎಲ್ಲ ವ್ಯವಹಾರವೂ ಗಣಕೀಕೃತ. ಜನಪ್ರತಿನಿಧಿಗಳು, ನೌಕರರು ಹಾಗೂ ಸಿಬ್ಬಂದಿಯ ದೂರವಾಣಿ ಸಂಖ್ಯೆಯ ಮಾಹಿತಿ ಫಲಕ.

–ಇದು ಯಾವುದೋ ನಗರದ ಬಡಾವಣೆಯೊಂದರ ನೋಟವಲ್ಲ. ರಾಜ್ಯದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಚಿತ್ರಣ.

ಗ್ರಾಮದ ಜನರು, ಜನಪ್ರತಿನಿಧಿಗಳು, ಪಂಚಾಯ್ತಿಯ ಅಧಿಕಾರಿ–ಸಿಬ್ಬಂದಿ ಸಹಕಾರ ಹಾಗೂ ಶ್ರಮದಿಂದ ಶಿರಗುಪ್ಪಿ ಗ್ರಾಮವಿಂದು ನಗರದ ಮಟ್ಟಕ್ಕೆ ಬೆಳೆದ ಮಾದರಿಯಾಗಿದೆ. ರಾಜ್ಯದ ಗ್ರಾಮಾಭಿವೃದ್ಧಿ ಸಂಸ್ಥೆಗಳು, ಅಂತರರಾಜ್ಯ ಸ್ಥಳೀಯ ಸಂಸ್ಥೆಗಳಷ್ಟೇ ಅಲ್ಲದೇ ವಿದೇಶಿಯರ ಗಮನ ಸೆಳೆದುಕೊಂಡಿದೆ.

ಹತ್ತನ್ನೊಂದು ವರ್ಷಗಳ ಹಿಂದಿನ ಮಾತು. ಗ್ರಾಮದ ಎಲ್ಲೆಂದರಲ್ಲಿ ತಿಪ್ಪೆಗಳು, ಮಣ್ಣಿನಿಂದ ಕೂಡಿದ ಕಿರಿದಾದ ರಸ್ತೆಗಳು, ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆಯೇ ಹರಿಯುತ್ತಿರುವ ಕೊಳಚೆ ನೀರು, ಕುಡಿಯುವ ನೀರಿಗೆ ತತ್ವಾರವಿತ್ತು. ಹಂತ ಹಂತವಾಗಿ ಸುಧಾರಣೆ ‘ನೆಲೆ’ ಕಂಡಿರುವ ಈ ಗ್ರಾಮದಲ್ಲಿ ಈಗಿನ ಪರಿಸ್ಥಿತಿಯೇ ಬದಲಾಗಿದೆ.

ಆದರ್ಶ ಗ್ರಾಮಕ್ಕೆ ನಿದರ್ಶನವಾಗಿ ಮತ್ತು ಮನಸ್ಸು ಮಾಡಿದರೆ ಸಹಕಾರ ತತ್ವದ ಮೇಲೆ ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಬಹುದು ಎನ್ನುವುದನ್ನು ಸಾಬೀತುಪಡಿಸಲಾಗಿದೆ. ತಂತ್ರಜ್ಞಾನ ಬಳಕೆ ಮೂಲಕ, ಜನರ ಬವಣೆಗಳಿಗೆ ಪರಿಹಾರ ದೊರಕಿಸುವ ಪ್ರಯತ್ನ ಮಾಡಲಾಗಿದೆ.

ಜಿಲ್ಲೆಯಿಂದಲೂ, ತಾಲ್ಲೂಕಿನಿಂದಲೂ ದೂರ
ಜಿಲ್ಲಾ ಕೇಂದ್ರ 102 ಕಿ.ಮೀ. ಹಾಗೂ ಅಥಣಿ ತಾಲ್ಲೂಕು ಕೇಂದ್ರದಿಂದ 45 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಅಚ್ಚರಿ ಮೂಡಿಸುತ್ತವೆ. 5623.36 ಚ.ಕಿ.ಮೀ. ವಿಸ್ತೀರ್ಣ ಹೊಂದಿರುವ ಇಲ್ಲಿ 9,683 ಜನಸಂಖ್ಯೆ ಇದೆ. ಹಿಂದೂ, ಮುಸ್ಲಿಮರು ಹಾಗೂ ಜೈನರು ಇಲ್ಲಿ ಸೌಹಾರ್ದಯುತ ಜೀವನ ನಡೆಸುತ್ತಿದ್ದಾರೆ. 2870 ಕುಟುಂಬಗಳಿದ್ದು, ಈ ಪೈಕಿ 1983 ಬಡತನ ರೇಖೆಗಿಂತ ಕೆಳಗಿರುವವರು ಎಂದು ಗುರುತಿಸಲಾಗಿದೆ.

ದೊಡ್ಡದಾದ ಈ ದೊಡ್ಡ ಕಂದಾಯ ಗ್ರಾಮಕ್ಕೆಂದೇ ಪಂಚಾಯ್ತಿ ಇದೆ. 25 ಗ್ರಾಮ ಪಂಚಾಯ್ತಿ ಸದಸ್ಯರಿದ್ದು, 16 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ! ಚಾವಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂಚಾಯ್ತಿಗೆ 2005–06ನೇ ಸಾಲಿನಲ್ಲಿ 11ನೇ ಹಣಕಾಸು ಯೋಜನೆಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಅಂಚೆ ಕಚೇರಿ, ದೂರವಾಣಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಕರ ವಸೂಲಿಯಲ್ಲಿ ಶೇ 100ರಷ್ಟು ಸಾಧನೆಯಾಗುತ್ತಿದೆ.

ಕನ್ನಡ, ಮರಾಠಿ, ಉರ್ದು, ಇಂಗ್ಲಿಷ್‌ ಪ್ರಾಥಮಿಕ ಶಾಲೆಗಳಿದ್ದು 1ರಿಂದ10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಕೆಎಲ್‌ಇ ಸಂಸ್ಥೆಯು ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಿಂದ ಕಾಲೇಜು ಶಿಕ್ಷಣವೂ ದೊರೆಯುತ್ತಿದ್ದು, ಇದರಿಂದ ಮಕ್ಕಳಿಗೆ ಗ್ರಾಮದಲ್ಲಿಯೇ ಪೂರ್ಣ ಶಿಕ್ಷಣ ಮುಗಿಸುವ ಅವಕಾಶ ದೊರೆತಂತಾಗಿದೆ.

ಕ್ರೀಡೆಯಲ್ಲೂ ಎತ್ತಿದ ಕೈ: ಕಬಡ್ಡಿ ಆಟಕ್ಕೆ ಪ್ರಸಿದ್ಧಿಯಾಗಿರುವ ಶಿರಗುಪ್ಪಿಯಲ್ಲಿ ರಾಷ್ಟ್ರಮಟ್ಟದ, ರಾಜ್ಯಮಟ್ಟದ ಮಹಿಳಾ ಹಾಗೂ ಪುರುಷರ ಪಂದ್ಯಾವಳಿ ನಡೆಸಲಾಗುತ್ತದೆ. ಜೈಭಾರತ, ನವಭಾರತ, ಸುದರ್ಶನ ಯುವಕ ಮಂಡಳ, ಕಲಾ, ಕ್ರೀಡಾ ಹಾಗೂ ಸಾಂಸ್ಕೃತಿಕ ವ್ಯಾಯಾಮ ಮಂಡಳದಿಂದ ಪ್ರತಿ ವರ್ಷವೂ ಪಂದ್ಯಾವಳಿ ಆಯೋಜಿಸಲಾಗುತ್ತದೆ. ವಾಲಿಬಾಲ್‌ನಲ್ಲೂ ಹೆಸರು ಮಾಡಿರುವ ಇಲ್ಲಿ ಪಂಚಾಯ್ತಿ ಆವರಣದಲ್ಲಿಯೇ ಉತ್ತಮ ವಾಲಿಬಾಲ್‌ ಅಂಕಣವಿದೆ.

ಮುಸ್ಲಿಂ ದೇವರು ಇಲ್ಲಿ ಗ್ರಾಮದೇವತೆ!
ಭಾವೈಕ್ಯದ ಗ್ರಾಮವೆಂದು ಗುರುತಿಸಲ್ಪಡುವ ಈ ಗ್ರಾಮದಲ್ಲಿ ಹರಜತ ಮಾಸಾಹೇಬಿದೇವಿ ಉರುಸ್‌ ಪ್ರಮುಖ ಜಾತ್ರೆಯಾಗಿ ಮೂರು ದಿನಗಳವರೆಗೆ ನಡೆಯುತ್ತದೆ. ವಿಶೇಷವೆಂದರೆ, ಮುಸ್ಲಿಮರ ದೇವರಾದ ಹಜರತ ಮಾಸಾಹೇಬಿ ದೇವಿಯನ್ನು ಗ್ರಾಮದೇವತೆಯಾಗಿ ಪೂಜಿಸುತ್ತಾರೆ! ಇಲ್ಲಿನ ಮಹಾವೀರ ಚೌಕದಲ್ಲಿ ಮಸೀದಿ, ಜೈನ ಬಸದಿ ಹಾಗೂ ಹನುಮಾನ ಮಂದಿರ ಅಕ್ಕ ಪಕ್ಕದಲ್ಲಿಯೇ ಇವೆ! ಇವು ಈ ಊರಿನ ಜನರ ಸೌಹಾರ್ದತೆಯ ಪ್ರತೀಕದಂತಿವೆ.

ಮಾಯಕ್ಕ ಜಾತ್ರೆ, ಮೆರಗುಬಾಯಿ ಜಾತ್ರೆ, ನರಸಿಂಹ ದೇವರ ಜಾತ್ರೆಗಳು ಇಲ್ಲಿನ ವಿಶೇಷ. ಇವುಗಳಲ್ಲಿ ಉತ್ತರಾನಕ್ಷತ್ರದಲ್ಲಿ ಆಚರಿಸುವ ಲಕ್ಷ್ಮಿ ಜಾತ್ರೆಯನ್ನು ‘ಮಳೆಜಾತ್ರೆ’ ಎಂದೇ ಕರೆಯಲಾಗುತ್ತಿದೆ. ಮಳೆಯನ್ನು ಆರಾಧಿಸುವ ದೃಷ್ಟಿಯಿಂದ ಈ ಜಾತ್ರೆ ನಡೆಸಲಾಗುತ್ತದೆ.

ಎಲ್ಲ ಮಹಾಪುರುಷರ ಜಯಂತಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣಕ್ಕೂ ಆದ್ಯತೆ ನೀಡಲಾಗಿದೆ. ಸ್ತ್ರೀಶಕ್ತಿ ಗುಂಪು, ಯುವಕ ಮಂಡಳ, ಸ್ವಸಹಾಯ ಸಂಘಗಳು ಸೇರಿ  54 ಗುಂಪುಗಳಿವೆ. 13 ಸ್ವಸಹಾಯ ಸಂಘಗಳಿಗೆ ಸಹಾಯಧನ ಒದಗಿಸಲಾಗಿದೆ. 35 ಸಂಘಗಳಿಗೆ ಸುತ್ತಿನಿಧಿ ನೀಡಲಾಗಿದೆ.

ಈ ಗುಂಪುಗಳು ಆರೋಗ್ಯ ಕಾರ್ಯಕ್ರಮ, ಗ್ರಾಮಸಭೆ, ಉದ್ಯೋಗ ಖಾತ್ರಿ ಯೋಜನೆ ಮೊದಲಾದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.

ಗ್ರಾಮ ನೈರ್ಮಲ್ಯ ಹಾಗೂ ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 2741 ಕುಟುಂಬಗಳ ಪೈಕಿ ಬಹುತೇಕರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಉಳಿದವರಿಗೆ ಈಚೆಗಷ್ಟೇ ಕಾರ್ಯಾದೇಶ ನೀಡಲಾಗಿದ್ದು, ಈ ಗ್ರಾಮ ಬಯಲು ಬಹಿರ್ದೆಸೆ ಮುಕ್ತ ಎನಿಸಿಕೊಳ್ಳುವ ದಿನಗಳು ದೂರವಿಲ್ಲ.

ನೀರಿಗಾಗಿ ‘ಭಗೀರಥ’ ಯತ್ನ: ಇಲ್ಲಿನ ಜನರು ಶುದ್ಧ ಕುಡಿಯುವ ನೀರು ಪಡೆಯಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸರ್ಕಾರದಿಂದ ಕೊರೆಸಿದ ಕೊಳವೆಬಾವಿಗಳಿದ್ದರೂ ಒಳ್ಳೆಯ ನೀರು ಸಿಗುತ್ತಿರಲಿಲ್ಲ. ಕೇವಲ ಸವಳು ನೀರು ದೊರೆಯುತ್ತಿತ್ತು. ಮೈಲುಗಟ್ಟಲೆ ಹೋಗಿ ಹೊಲ ಅಥವಾ 3 ಕಿ.ಮೀ. ದೂರದ ಖೋತವಾಡಿ ಗ್ರಾಮದಿಂದ ಕುಡಿಯುವ ನೀರನ್ನು ಹೊತ್ತು ತರಬೇಕಾಗಿತ್ತು. ಕುಡಿಯುವ ನೀರು ಪೂರೈಸಲು ಕೃಷ್ಣಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರು ತರಲಾಗುತ್ತಿದ್ದರೂ ಸಾಲುತ್ತಿರಲಿಲ್ಲ.

ನದಿಯ ಈ ನೀರು ರಾಸಾಯನಿಕ ತುಂಬಿದ ರಾಡಿಯಂತಿತ್ತು. ನೀರನ್ನು ಶುದ್ಧೀಕರಿಸದೆ ಪೂರೈಸುತ್ತಿದ್ದುದ್ದರಿಂದ, ಕುಡಿಯುವ ನೀರಿಗೆ ಬವಣೆ ತೀವ್ರಗೊಂಡಿತ್ತು.

ಈ ನಡುವೆ, ವಿಶ್ವಬ್ಯಾಂಕ್‌ ನೆರವಿನ ಕುಡಿಯುವ ನೀರಿನ ಪ್ರಸ್ತಾಪ ಬಂದಿತು. ಐಡಿಎಸ್‌ ಸ್ವಯಂಸೇವಾ ಸಂಸ್ಥೆ ವಿಶ್ವ ಬ್ಯಾಂಕ್‌ ನೆರವಿನ ಬಗ್ಗೆ ತಿಳಿಸಲು ಬಂದಿತ್ತು. ನೀರಿನ ಸಮಸ್ಯೆ ಪರಿಹಾರಕ್ಕೆ ವಿಶ್ವಬ್ಯಾಂಕ್‌ ನೆರವು ಪಡೆಯಲು ಗ್ರಾಮ ಪಂಚಾಯ್ತಿಯವರು ಆಸಕ್ತಿ ತೋರಿದರು. ಆದರೆ, ನೈರ್ಮಲ್ಯೀಕರಣದ ಸಲುವಾಗಿ ಯೋಜನೆಯ ಶೇ 30ರಷ್ಟು ವಂತಿಗೆ ಭರಿಸಬೇಕು ಎಂಬ ನಿಯಮವಿತ್ತು. ಬಹಳ ಮಂದಿ ವಂತಿಗೆ ಕಟ್ಟಲು ನಿರಾಕರಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ರಾಮಗೌಡ ಪಾಟೀಲ ಯೋಜನೆ ಕೈತಪ್ಪಿ ಹೋಗದಂತೆ ನೋಡಿಕೊಂಡರು.

ವಂತಿಗೆ ಸಂಗ್ರಹಿಸಿದರೂ...: ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮವನ್ನು ಹಾಗೂ ನೀರಿನ ಮಹತ್ವ ಜನರಿಗೆ ಮನವರಿಕೆ ಮಾಡಿಕೊಟ್ಟರು. ದೂರದಿಂದ ನೀರು ತರಬೇಕಾದ ಬವಣೆ ತಪ್ಪಿಸಬೇಕಾದರೆ, ಸ್ವಲ್ಪ ವಂತಿಗೆ ಕೊಡಬೇಕಾಗುತ್ತದೆ ಎಂದು ಅರಿವು ಮೂಡಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಮುಖಂಡರ ಮನವೊಲಿಸಿದರು. ಮನೆಮನೆಗೆ ತೆರಳಿ ಜನರಿಂದ ಹಣ ಸಂಗ್ರಹಿಸಿ, ₹1ಲಕ್ಷ ಸಮುದಾಯ ವಂತಿಗೆ ಸೇರಿಸಲಾಯಿತು. ಇದರಿಂದ ವಿಶ್ವಬ್ಯಾಂಕ್‌ ನೆರವಿನ ಯೋಜನೆ ಬಂದಿತು. ಆದರೆ, ಈ ಯೋಜನೆ ಸದ್ಬಳಕೆಯಾಗಲಿಲ್ಲ.

ಜಿಲ್ಲಾ ಪಂಚಾಯ್ತಿಯು ಕುಡಿಯುವ ನೀರಿನ ಯೋಜನೆಯ ಅನುಷ್ಠಾನವನ್ನು ಖಾಸಗಿ ಸಂಸ್ಥೆಗೆ ವಹಿಸಿತ್ತು. ಈ ಸಂಸ್ಥೆಯೂ ಕಳಪೆ ಕಾಮಗಾರಿಯಿಂದ ಜನರ ಕೋಪಕ್ಕೆ ಗುರಿಯಾಯಿತು. ಗ್ರಾಮದ ಎಲ್ಲ ಪ್ರದೇಶಗಳಿಗೂ ಪೈಪ್‌ಲೈನ್ ಅಳವಡಿಸಿರಲಿಲ್ಲ. ಕೇವಲ 100 ವೈಯಕ್ತಿಕ ನಳಗಳನ್ನು ಹಾಕಲಾಗಿತ್ತು. ಪರಿಶಿಷ್ಟರ ಕಾಲೊನಿಗೆ ಸಂಪರ್ಕ ಒದಗಿಸಿರಲಿಲ್ಲ. ಹೀಗಾಗಿ, ರಾಮಗೌಡ ಪಾಟೀಲ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ, ಹೋರಾಟವೇ ನಡೆಯಿತು.

ವಿಶ್ವಬ್ಯಾಂಕ್‌ ನೆರವಿನ ಕುಡಿಯುವ ನೀರಿನ ಯೋಜನೆ ಸರಿಪಡಿಸಬೇಕು ಹಾಗೂ ಹೆಚ್ಚುವರಿ ಜಲನಿರ್ಮಲ ಯೋಜನೆ ಮಂಜೂರು ಮಾಡಬೇಕು ಎನ್ನುವುದು ಆಗ್ರಹವಾಗಿತ್ತು. ಒಂಟಿ ಧ್ವನಿಯಾಗಿದ್ದ ರಾಮಗೌಡ ಪಾಟೀಲರ ಜೊತೆಗೆ ಇಡೀ ಗ್ರಾಮವೇ ನಿಂತಿತು. ಪರಿಣಾಮ, ಇಲ್ಲಿಗೆ ಜಲನಿರ್ಮಲ ಯೋಜನೆ ದೊರೆಯಿತು. ಇದರಲ್ಲಿ 2.5 ಲಕ್ಷ ಲೀಟರ್‌ ಸಾಮರ್ಥ್ಯ ಹೊಂದಿರುವ ಎರಡು ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ನದಿಯ ನೀರನ್ನು ಶುದ್ಧೀಕರಿಸಲು, ಪೂರೈಸಲು ಎರಡು ಪಂಪ್‌ಹೌಸ್‌ಗಳನ್ನು ನಿರ್ಮಿಸಲಾಗಿದೆ.

ಶುದ್ಧೀಕರಿಸುವ ಮುತುವರ್ಜಿ: 3.5 ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರನ್ನು ತೊಟ್ಟಿಗಳಲ್ಲಿ ‘ಸ್ಲೋ ಸ್ಯಾಂಡ್‌ ಫಿಲ್ಟರ್‌’ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಲಾಗುತ್ತಿದೆ. ಇದಕ್ಕಾಗಿ ಎರಡು ತೊಟ್ಟಿ ನಿರ್ಮಿಸಲಾಗಿದೆ. ಹಳೆ ಪೈಪ್‌ಲೈನ್‌ ದುರಸ್ತಿ, ಗ್ರಾಮದ ಎಲ್ಲ ವಸತಿ ಬಡಾವಣೆಗಳಿಗೂ ಪೈಪ್‌ಲೈನ್‌ ಜೋಡಣೆ, ಎಲ್ಲ ಮನೆಗಳಿಗೂ ವೈಯಕ್ತಿಕ ನಲ್ಲಿ ಸಂಪರ್ಕ ಜೋಡಿಸಲಾಗಿದೆ.

25–30 ನಲ್ಲಿಗಳಿಗೊಂದು ವಾಲ್ವ್‌ ಅಳವಡಿಸಲಾಗಿದೆ. ಇದರಿಂದ, ಮೊದಲ, ಎರಡನೇ ಮಹಡಿಗೂ ನೀರು ಏರುವಷ್ಟು ಒತ್ತಡ ಇರುವುದು ಸಾಧ್ಯವಾಗಿದೆ. ಮನೆಗೆ ಸಕಾಲದಲ್ಲಿ ಶುದ್ಧ ನೀರು ದೊರೆಯುತ್ತಿರುವುದರಿಂದ ಜನರೂ ನೀರಿನ ಕರವನ್ನು ತಪ್ಪದೆ ನೇರವಾಗಿ ಬ್ಯಾಂಕ್‌ ಖಾತೆ ಮೂಲಕ ಪಾವತಿಸುತ್ತಿದ್ದಾರೆ!

ಜನಶಕ್ತಿ ಪ್ರತಿಷ್ಠಾನದಿಂದ ಮುಖಂಡ ಅಮಿತಕೋರೆ ಅವರು ಗ್ರಾಮಕ್ಕೆ ಆರ್‌ಒ ಫಿಲ್ಟರ್‌ ಘಟಕ ದೇಣಿಗೆ ನೀಡಿದ್ದಾರೆ. ಇದರ ಮೂಲಕ ಜನರಿಗೆ ಶುದ್ಧೀಕರಿಸಿದ ನೀರು ಒದಗಿಸಲಾಗುತ್ತಿದೆ. ಎಟಿಡಬ್ಲ್ಯು (ಎನಿ ಟೈಮ್‌ ವಾಟರ್‌) ಕಾರ್ಡ್ ಸಿದ್ಧಪಡಿಸಿ ವಿತರಿಸಲಾಗಿದೆ. ಘಟಕದ ಬಳಿ ₹2ಕ್ಕೆ 20 ಲೀಟರ್‌ ಹಾಗೂ ವಾಹನದ ಮೂಲಕ ಮನೆ ಬಾಗಿಲಲ್ಲಿ ಪಡೆದರೆ ₹5ಕ್ಕೆ 20 ಲೀಟರ್‌ ನೀರು ಪೂರೈಸಲಾಗುತ್ತಿದೆ.

‘ಜಲಧೂತ ವಾಹನ’ ನಿತ್ಯ 8ರಿಂದ 10 ಬಾರಿ ಬಡಾವಣೆಗಳಲ್ಲಿ ಓಡಾಡುತ್ತದೆ. ಅಗತ್ಯವಿದ್ದವರು ಎಟಿಡಬ್ಲ್ಯು ಕಾರ್ಡ್‌ ರೀಡ್ ಮಾಡಿಸಿ ನೀರು ಪಡೆಯಬಹುದು. ಘಟಕದ ಬಳಿ ಕೋಲ್ಡ್‌ ವಾಟರ್‌ ಕೂಡ ಲಭ್ಯವಿದ್ದು, ಪಂಚಾಯ್ತಿಯಿಂದ ನೀಡುವ ಜಾರ್‌ನಲ್ಲಿ ಸಂಗ್ರಹಿಸಿದರೆ 30 ಗಂಟೆ ಕಾಲ ನೀರು ತಣ್ಣಗೆ ಇರುತ್ತದೆ. ಬೇಸಿಗೆ ಸಂದರ್ಭದಲ್ಲಿ ತಣ್ಣಗಿನ ನೀರಿಗೆ ಬಹಳ ಬೇಡಿಕೆ ಇರುತ್ತದೆ. ಇಂಥ ವ್ಯವಸ್ಥೆ ಮಾಡಿರುವ ರಾಜ್ಯದ ಪ್ರಥಮ ಗ್ರಾಮವಿದು ಎನ್ನಬಹುದು.

ಗ್ರಾಮದ ವಿಶೇಷ
*ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ.
*ಪಂಚಾಯ್ತಿಯ ಸಾಮಾನ್ಯ ಸಭೆ ಹಾಗೂ ಗ್ರಾಮಸಭೆಗಳನ್ನು ಸ್ಥಳೀಯ ಟಿ.ವಿ. ಚಾನಲ್‌ ಮೂಲಕ ನೇರಪ್ರಸಾರ ಮಾಡಲಾಗುತ್ತಿದೆ! ಸಮಸ್ಯೆಗಳನ್ನು ದೂರವಾಣಿ ಮೂಲಕವೂ ಸ್ವೀಕರಿಸಿ (ಫೋನ್‌ಇನ್‌), ಸ್ಥಳದಲ್ಲಿಯೇ ಉತ್ತರಿಸುವುದನ್ನೂ ನೇರಪ್ರಸಾರ ಮಾಡಲಾಗುತ್ತದೆ.
*ಕರವನ್ನು ಚಲನ್‌ನಲ್ಲಿ ಬ್ಯಾಂಕ್‌ಗೆ ಪಾವತಿಸಬೇಕು.
*ಗ್ರಾಮದ ಎಲ್ಲ ಆಸ್ತಿಗಳನ್ನು ಸರ್ವೆ ಮಾಡಿ ಚಕ್‌ಬಂದಿ ಸಹಿತಿ ಅಳತೆಗಳುಳ್ಳ ಆಕರಣೆ ಪಟ್ಟಿ ನಮೂನೆ 9ನ್ನು ಗಣಕೀಕೃತಗೊಳಿಸಿ ಕಂಪ್ಯೂಟರ್‌ ಮೂಲಕ ಒದಗಿಸಲಾಗುತ್ತಿದೆ
*ಪಂಚಾಯ್ತಿ ಕಚೇರಿಯನ್ನು ಸಂಪೂರ್ಣ ಪಾರದರ್ಶಕ ಹಾಗೂ ಉತ್ತರದಾಯಿತ್ವದೊಂದಿಗೆ ನಿರ್ವಹಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸಭೆಯ ನೋಟಿಸ್‌ನೊಂದಿಗೆ ಗ್ರಾಮ ಪಂಚಾಯ್ತಿಯಲ್ಲಿ ಆಯಾ ತಿಂಗಳು ನಡೆದಂಥ ಎಲ್ಲ ಯೋಜನೆ –ಕಾರ್ಯಕ್ರಮಗಳ ಜಮಾ–ಖರ್ಚು ಷೋಷಣೆಯ ಪ್ರತಿಯನ್ನು ನೀಡಲಾಗುತ್ತದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
*ಹಳೆ ಕಾಲದ ಡಂಗೂರ ಸಾರುವ ಪದ್ಧತಿ ಬಿಟ್ಟು, ತಾಂತ್ರಿಕತೆ ಒಳಗೊಂಡ ಸೌಂಡ್‌ ಸಿಸ್ಟಂ ಮೂಲಕ ಕಾರ್ಯಕ್ರಮದ ಪ್ರಚಾರ, ತಿಳಿವಳಿಕೆ, ತುರ್ತು ಸಂಗತಿಗಳನ್ನು ಗ್ರಾಮಸ್ಥರಿಗೆ ತಿಳಿಸಲಾಗುತ್ತದೆ.
*ಜಾತಿ, ಪಕ್ಷ ತಾರತಮ್ಯವಿಲ್ಲದೆ ಗ್ರಾಮವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲು ಗ್ರಾಮಸ್ಥರು ಅವಿರೋಧ ಆಯ್ಕೆ ಮಾರ್ಗ ಅನುಸರಿಸುತ್ತಿದ್ದಾರೆ. ಈ ಬಾರಿ 16 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ.
ಉದ್ದೇಶಿತ ಯೋಜನೆಗಳು...
*ಮಾಹಿತಿ ನೀಡುವ ಸಲುವಾಗಿ ಬೀದಿಬೀದಿಯಲ್ಲೂ ಸ್ಪೀಕರ್‌ ಅಳವಡಿಕೆ. ಈಗಾಗಲೇ 50 ಸ್ಪೀಕರ್‌ ಖರೀದಿ.
*ಗ್ರಾಮ ಪಂಚಾಯ್ತಿಗೆಂದೇ ಚಾನೆಲ್‌ ಆರಂಭಿಸುವ ಯೋಜನೆ.
*ಕಾಗೆ ನಗರದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಬಳಕೆ. ಹಸಿ ಕಸ– ಒಣಕಸ ವಿಂಗಡಿಸಿ ವಿಲೇವಾರಿ ಮಾಡುವುದು .
*ಉಳಿದ 95 ಮನೆಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ‘ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ ಘೋಷಣೆ.
*ಗಲ್ಲಿಗಲ್ಲಿಗೂ ಕಸ ಸಂಗ್ರಹಿಸಲು 250 ಬ್ಯಾರಲ್‌ ಇಡಲು ನಿರ್ಧಾರ.
*ಗ್ರಾಮದ ಅಲ್ಲಲ್ಲಿ ಕಿರು ನೀರು ಶುದ್ಧೀಕರಣ ಘಟಕದ ಅಳವಡಿಕೆ.
*ಶುದ್ಧೀಕರಣ ಘಟಕದ ಬಳಿ ಬಿಸಿನೀರಿನ ವ್ಯವಸ್ಥೆ ಮಾಡಲು ಹಾಗೂ ಸ್ನಾನದ ಮನೆ ನಿರ್ಮಾಣ.
*ಬೀದಿ ದೀಪಗಳಿಗೆ ಹಂತಹಂತವಾಗಿ ಎಲ್‌ಇಡಿ ಬಲ್ಬ್‌ ಅಳವಡಿಕೆ.

‘ಹಿಂದೆ ನದಿ ನೀರನ್ನು ನೇರವಾಗಿ ಕುಡಿಯುತ್ತಿದ್ದುದ್ದರಿಂದ ಬಹಳ ಆರೋಗ್ಯದ ತೊಂದರೆ ಕಂಡುಬರುತ್ತಿತ್ತು. ಶುದ್ಧೀಕರಿಸಿದ ನೀರು ಕುಡಿಯುತ್ತಿರುವುದರಿಂದ, ದವಾಖಾನೆಗೆ ಹೋಗುವುದು ತಪ್ಪಿದೆ. ಶಿರಗುಪ್ಪಿಗೆ ಹೆಣ್ಣು ಕೊಡೋಕೆ ಯಾರೂ ಮುಂದಾಗುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ನಗರದ ರೀತಿಯ ಮೂಲಸೌಲಭ್ಯಗಳು ಇಲ್ಲಿರುವುದೇ ಇದಕ್ಕೆ ಕಾರಣ’ ಎಂದರು ಗ್ರಾಮಸ್ಥರಾದ ಚಂದ್ರಕಾಂತ ಗದಾಳೆ, ನಂದಕುಮಾರ ಪಾಟೀಲ.

ಗ್ರಾಮದೊಳಗಿನ ತಿಪ್ಪೆಗಳನ್ನು ಊರಿನ ಹೊರಗೆ ಸ್ಥಳಾಂತರಿಸಲಾಗಿದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವುದಕ್ಕಾಗಿ ನಿರ್ಮಲ ಭಾರತ ಅಭಿಯಾನದಲ್ಲಿ ₹3 ಲಕ್ಷ ವೆಚ್ಚದಲ್ಲಿ ವಾಹನ ಖರೀದಿಸಲಾಗಿದೆ. ಗ್ರಾಮದ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದೆ.

ಇಲ್ಲಿನ ಶುದ್ಧೀಕರಣ ಘಟಕದಿಂದ ಗ್ರಾಮದವರು ಮಾತ್ರವಲ್ಲದೇ ಬೇರೆ ಊರಿನವರೂ ನೀರು ತೆಗೆದುಕೊಂಡು ಹೋಗಲು ಬರುತ್ತಾರೆ. ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದಲೂ ಎರಡು ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲಾಗಿದೆ. ಶೀಘ್ರವೇ ಇದಕ್ಕೆ ಚಾಲನೆ ದೊರೆಯಲಿದ್ದು, ಮತ್ತಷ್ಟು ಅನುಕೂಲವಾಗಲಿದೆ. ಇಂಗಳಿ, ಮಡಿಮಾಳ, ಕುಸನಾಳ, ಮಂಗಾವತಿ, ಜುಗುಳ, ಶಹಾಪುರ ಮಾತ್ರವಲ್ಲದೇ, ಮಹಾರಾಷ್ಟ್ರದ ರಾಜಾಪುರ, ಮಾಯಿಸಾಳದಿಂದಲೂ ಇಲ್ಲಿಗೆ ಬಂದು ನೀರು ತೆಗೆದುಕೊಂಡು ಹೋಗುತ್ತಾರೆ.

‘ನಮ್ಮೂರಿನಲ್ಲಿ ದೊರೆಯುವ ನೀರು ಚೆನ್ನಾಗಿರುವುದಿಲ್ಲ. ಘಟಕವಿದ್ದರೂ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ, ಒಂದು ವರ್ಷದಿಂದಲೂ ಇಲ್ಲಿಂದಲೇ ನೀರು ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದರು 8 ಕಿ.ಮೀ. ದೂರದಿಂದ ನೀರಿಗೆ ಬಂದಿದ್ದ ದೇಸಾಯಿ ಇಂಗಳಿ ಗ್ರಾಮದ ಸಂದೀಪ ಶಿಂಧೆ.
ಪಂಚಾಯ್ತಿಯ ಸಭೆಯ ನೇರಪ್ರಸಾರಕ್ಕೆ ಅನುಕೂಲವಾಗುವಂತೆ 4 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಪಂಚಾಯ್ತಿಯಿಂದಲೇ ಕ್ಯಾಮೆರಾ ಖರೀದಿಸಲಾಗಿದೆ. ಸಭೆ ಸಮಾರಂಭಗಳ ಅಗತ್ಯ ಪರಿಕರಗಳನ್ನೂ ಪಂಚಾಯ್ತಿ ಹೊಂದಿದೆ. ಸಭಾಂಗಣವನ್ನು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ನವೀಕರಿಸಲಾಗುತ್ತಿದೆ. ಮತ್ತಷ್ಟು ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಲಾಗಿದೆ.

ಸಚಿವರೇ ಇತ್ತ ಗಮನಿಸಿ
‘ಮೂರು ತಿಂಗಳಿಗೊಮ್ಮೆ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತದೆ. ₹80 ಲಕ್ಷದ ಅಭಿವೃದ್ಧಿ ಕಾಮಗಾರಿಗಳು ಮಾರ್ಚ್‌ ವೇಳೆಗೆ ನಡೆಯಬೇಕಾಗಿದೆ. ರಸ್ತೆ ಹಾಗೂ ಚರಂಡಿಗಳನ್ನು ನಿರ್ಮಿಸಿ 10 ವರ್ಷವಾಗಿದೆ. ಹೀಗಾಗಿ, ಅಲ್ಲಲ್ಲಿ ನಿರ್ವಹಣೆಗೆ ತೊಂದರೆ ಇದೆ. ಎಲ್ಲ ರೀತಿಯಲ್ಲೂ ಮಾದರಿಯಾಗಿರುವ ಈ ಗ್ರಾಮಕ್ಕೆ ಸರ್ಕಾರದಿಂದ ವಿಶೇಷ ಅನುದಾನ ನೀಡಬೇಕು.

ಒಳಚರಂಡಿ ಯೋಜನೆ ಮಂಜೂರು ಮಾಡಬೇಕು.ರಸ್ತೆಯನ್ನು ಮತ್ತಷ್ಟು ಸುಧಾರಿಸಲು ಅನುದಾನ ನೀಡಬೇಕು. ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಪಂಚಾಯ್ತಿ ಸದಸ್ಯರು ಬಂದು ವೀಕ್ಷಿಸುತ್ತಾರೆ. ಗ್ರಾಮೀಣಾಭಿವೃದ್ಧಿ ಸಚಿವರೂ ಬಂದು ವೀಕ್ಷಿಸಿ, ನಮ್ಮ ಬೆನ್ನು ತಟ್ಟಬೇಕು’ ಎನ್ನುವುದು ಇಲ್ಲಿನ ಪಂಚಾಯ್ತಿ ಸದಸ್ಯರ ಕೋರಿಕೆಯಾಗಿದೆ.

ಅಧ್ಯಯನದ ‘ಪಂಚಾಯ್ತಿ’!
ಮಾದರಿಯಾಗಿರುವ ಶಿರಗುಪ್ಪಿ ಗ್ರಾಮದ ವೀಕ್ಷಣೆ ಹಾಗೂ ಪಂಚಾಯ್ತಿಯ ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡಲು ಆಗಾಗ್ಗೆ ಪಂಚಾಯ್ತಿ ಸದಸ್ಯರು ಇಲ್ಲಿಗೆ ಭೇಟಿ ನೀಡುವುದು ಸಾಮಾನ್ಯ.

ಎಲ್ಲ ತಂಡಗಳಿಗೂ ಆದರದ ಆತಿಥ್ಯದೊಂದಿಗೆ ಮಾಹಿತಿ ನೀಡುವ ಕೆಲಸವನ್ನು ಇಲ್ಲಿನ ಸಿಬ್ಬಂದಿ ಹಾಗೂ ಲಭ್ಯವಿರುವ ಸದಸ್ಯರು ಮಾಡುತ್ತಾರೆ. ಇಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕ್ಲರ್ಕ್‌ ಪದ್ಮನಾಭ ಕುಂಬಾರ ‘ಗೈಡ್‌’ನಂತೆ ಆಗಿದ್ದಾರೆ! ಸತತ 4 ಬಾರಿಗೆ ಗೆದ್ದಿರುವ ಸದಸ್ಯ ರಾಮಗೌಡ ಪಾಟೀಲ ಅವರು ಎಲ್ಲ ಯೋಜನೆಗಳ ಮಾಹಿತಿ ಒದಗಿಸುತ್ತಾರೆ.

ಇಲ್ಲಿಗೆ ರಾಜ್ಯ, ಅಂತರರಾಜ್ಯದ ಸ್ಥಳೀಯ ಸಂಸ್ಥೆಯ ಸದಸ್ಯರಲ್ಲದೇ ಇಂಗ್ಲೆಂಡ್‌ನ ಕೆಲ ಸದಸ್ಯರ ತಂಡವೂ ಭೇಟಿ ನೀಡಿ ವೀಕ್ಷಿಸಿ, ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದೆ. ಗ್ರಾಮದಲ್ಲಿನ ಗ್ರಂಥಾಲಯ ಅತ್ಯಾಧುನಿಕಗೊಳಿಸಲು ಕಟ್ಟಡ ನಿರ್ಮಿಸಲು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ₹15 ಲಕ್ಷ, ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ₹5 ಲಕ್ಷ ಅನುದಾನ ಒದಗಿಸಿದ್ದಾರೆ.

ಸಂಸದ ಪ್ರಕಾಶ ಹುಕ್ಕೇರಿ ಅವರು ಸುಸಜ್ಜಿತ ಗರಡಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಶಾಸಕ ರಾಜು ಕಾಗೆ ಅವರ ನೆರವಿನಿಂದ ಹಲವು ಯೋಜನೆಗಳು ಗ್ರಾಮಕ್ಕೆ ದೊರೆತಿವೆ ಎಂದು ಸದಸ್ಯರು ನೆನೆಯುತ್ತಾರೆ.

ಪ್ರಶಸ್ತಿಗಳಿಂದ ದೊರೆತದ್ದು ₹45.40 ಲಕ್ಷ!
ಗ್ರಾಮಕ್ಕೆ ಹಾಗೂ ಗ್ರಾಮ ಪಂಚಾಯ್ತಿಗೆ ಪ್ರಶಸ್ತಿಯಾಗಿ ದೊರೆತಿರುವ ಮೊತ್ತವೇ ₹45.40 ಲಕ್ಷ ಮೀರುತ್ತದೆ! ಗ್ರಾಮದಲ್ಲಿರುವ ಸೌಲಭ್ಯ, ನೈರ್ಮಲ್ಯ ಹಾಗೂ ವ್ಯವಸ್ಥೆಗಾಗಿ 2010ರಿಂದ ಈವರೆಗೆ ಒಟ್ಟು ಎಂಟು ಪ್ರಶಸ್ತಿಗಳು ದೊರೆತಿವೆ. ಅಂತರರಾಷ್ಟ್ರೀಯ ಗೂಗಲ್‌ ಪ್ರಶಸ್ತಿ (₹5 ಲಕ್ಷ), ರಾಷ್ಟ್ರೀಯ ಸುರಕ್ಷಾ ಗ್ರಾಮ ಸಭಾ ಪ್ರಶಸ್ತಿ (₹10 ಲಕ್ಷ), ನಿರ್ಮಲ ಗ್ರಾಮ ಪುರಸ್ಕಾರ (₹4.40 ಲಕ್ಷ), ನೈರ್ಮಲ್ಯ ಪ್ರಶಸ್ತಿ (₹1 ಲಕ್ಷ), ರಜತ ನೈರ್ಮಲ್ಯ ಪ್ರಶಸ್ತಿ (₹2 ಲಕ್ಷ), ಗಾಂಧಿ ಗ್ರಾಮ ಪುರಸ್ಕಾರ (₹5 ಲಕ್ಷ), ಪಂಚಾಯ್ತಿ ಸಶಕ್ತೀಕರಣ ಪುರಸ್ಕಾರ (₹12 ಲಕ್ಷ) ಹಾಗೂ ಗಾಂಧಿ ಗ್ರಾಮ ಪುರಸ್ಕಾರ (₹5 ಲಕ್ಷ) ದೊರೆತಿದೆ.

ಇಲ್ಲಿ ಹಿಂದಿನಿಂದಲೇ ನಗದು ರಹಿತ ವ್ಯವಹಾರ
ದೇಶದಲ್ಲಿ ₹500 ಹಾಗೂ ₹1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ನಂತರ ನಗದುರಹಿತ ವ್ಯವಹಾರಕ್ಕೆ ಮಹತ್ವ ಬಂದಿದೆ. ಆದರೆ, ಶಿರಗುಪ್ಪಿ ಗ್ರಾಮದ ಪಂಚಾಯ್ತಿಯಲ್ಲಿ ಹಲವು ವರ್ಷಗಳ ಹಿಂದಿನಿಂದಲೇ ನಗದುರಹಿತ ವ್ಯವಹಾರವನ್ನು ಜಾರಿಗೆ ತಂದಿರುವುದು ವಿಶೇಷ. ಗ್ರಾಮ ಪಂಚಾಯ್ತಿಯ ಸಭಾಂಗಣದಲ್ಲಿ ಬ್ಯಾಂಕ್‌ನ ರೀತಿಯಲ್ಲಿ ಕಂಪ್ಯೂಟರ್‌ನಲ್ಲಿ ನಿರ್ವಹಿಸಲಾಗುತ್ತಿದೆ. 8 ಕಂಪ್ಯೂಟರ್‌ಗಳಿವೆ. ಅಂತರ್ಜಾಲದ ಸೌಲಭ್ಯವಿದೆ. ನಾಲ್ವರು ಸ್ವಚ್ಛತಾ ಸಿಬ್ಬಂದಿ ಸೇರಿ ಒಟ್ಟು 15 ನೌಕರರಿದ್ದಾರೆ.

ಇಲ್ಲಿ ಗಣಕೀಕೃತ ಪಹಣಿಪತ್ರ ಮೊದಲಾದ ದಾಖಲೆಗಳನ್ನು ಇಲ್ಲಿ ಒದಗಿಸಲಾಗುತ್ತಿದೆ. ಸರ್ಕಾರದ ವಿವಿಧ ವಸತಿ ಯೋಜನೆಗೆ ಸಂಬಂಧಿಸಿದ ಫಲಾನುಭವಿಗಳಿಗೆ ಗಣಕೀಕೃತ ಉತಾರಗಳನ್ನು (ಆರ್‌ಟಿಸಿ) ನೀಡಲಾಗುತ್ತಿದೆ. ಇದಕ್ಕಾಗಿ ಶುಲ್ಕವನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿಯು ನಗದು ರೂಪದಲ್ಲಿ ಪಡೆಯುವುದಿಲ್ಲ. ಪ್ರತ್ಯೇಕ ತಂತ್ರಾಂಶ ಸಿದ್ಧಪಡಿಸಿ ರೂಪಿಸಿರುವ ಬ್ಯಾಂಕ್‌ನ ಚಲನ್‌ ನೀಡುತ್ತಾರೆ. ಸಂಬಂಧಿಸಿದವರು ಶುಲ್ಕವನ್ನು ಗ್ರಾಮದಲ್ಲಿರುವ ಬ್ಯಾಂಕ್‌ ಶಾಖೆಯಲ್ಲಿಯೇ ಪಾವತಿಸಬೇಕು.

ಗ್ರಾಮ ಪಂಚಾಯ್ತಿ ವತಿಯಿಂದ ಕೆಲಸ ಮಾಡಿದರೆ ಕೂಲಿಕಾರ್ಮಿಕರಿಗೂ ಚೆಕ್‌ ಮೂಲಕವೇ ಕೂಲಿ ಪಾವತಿಸಲಾಗುತ್ತದೆ. ಕುಡಿಯುವ ನೀರು ಖರೀದಿಗೂ ಕಾರ್ಡ್‌ ನೀಡಲಾಗಿದೆ. ಆ ಕಾರ್ಡ್‌ ರೀಡಿಂಗ್‌ ಮಾಡಿ ಹಣ ಪಾವತಿಸಲಾಗುತ್ತದೆ. ಕಾರ್ಡ್‌ಗೆ ಇಂತಿಷ್ಟು ರೀಚಾರ್ಜ್‌ ಮಾಡಿಕೊಳ್ಳಬಹುದಾದ ವ್ಯವಸ್ಥೆ ಇಲ್ಲಿದೆ.

ಈ ಮೂಲಕ ಪಂಚಾಯ್ತಿಯಲ್ಲಿ ಹಿಂದಿನಿಂದಲೇ ನಗದುರಹಿತ ವ್ಯವಹಾರ ನಡೆಸಲಾಗುತ್ತಿದೆ. ಭ್ರಷ್ಟಾಚಾರ, ಅವ್ಯವಹಾರ ತಡೆಯಲು ನಗದುರಹಿತ ವ್ಯವಹಾರ ಸಹಕಾರಿಯಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಮದ ಬಾಳಾ ಗೌಂಡಿ ಹಾಗೂ ಸದಸ್ಯ ರಾಮಗೌಡ ಪಾಟೀಲ.

ಅಂಕಿ–ಅಂಶದಲ್ಲಿ ಗ್ರಾಮ
ಶಿರಗುಪ್ಪಿಯಲ್ಲಿ  7 ಸಾರ್ವಜನಿಕ ಶೌಚಾಲಯ, 9 ಅಂಗನವಾಡಿಗಳು, 4 ಸರ್ಕಾರಿ ಶಾಲೆ, 2 ಅನುದಾನರಹಿತ ಶಾಲೆ, 1 ಸರ್ಕಾರಿ ಪ್ರೌಢಶಾಲೆ, 2 ಅನುದಾನಿತ ಪ್ರೌಢಶಾಲೆ, 1 ಖಾಸಗಿ ಕಾಲೇಜು, 1 ಸರ್ಕಾರಿ ಆರೋಗ್ಯ ಕೇಂದ್ರ, 14 ಖಾಸಗಿ ಆಸ್ಪತ್ರೆ, 1 ಪಶುವೈದ್ಯಕೀಯ ಕೇಂದ್ರ, 54 ಸ್ವಸಹಾಯ ಸಂಘಗಳು, 5 ಯುವಕ ಮಂಡಳಗಳು, 23 ಕೈಪಂಪು, 1 ಕೆರೆ, 25 ನೀರಾವರಿ ಸಂಘ, 37 ಕಿರಾಣಿ ಅಂಗಡಿ, 9 ಹೋಟೆಲ್‌,

12 ಹಿಟ್ಟಿನ ಗಿರಣಿ, 4 ಸ್ವೀಟ್‌ ಮಾರ್ಟ್‌, 4 ಬಟ್ಟೆ ಅಂಗಡಿ, 11 ಸ್ಟೇಷನರಿಗಳು, 7 ಔಷಧಿ ಅಂಗಡಿಗಳು, 2 ಪೆಟ್ರೋಲ್‌ ಬಂಕ್, 3 ಕೋಳಿ ಫಾರಂ, 7 ಸಮುದಾಯ ಭವನಗಳು, 24 ದೇವಸ್ಥಾನಗಳು, 7 ಸ್ಮಶಾನ, 3 ಕಂಪ್ಯೂಟರ್‌ ದುರಸ್ತಿ ಕೇಂದ್ರ, 12 ಕೌರದಂಗಡಿ, 4 ಮೊಬೈಲ್‌ ಟವರ್‌, 2 ಕೃಷಿ ಸೇವಾ ಕೇಂದ್ರ... ಹೀಗೆ ಜನರಿಗೆ ಏನೇನು ಅಗತ್ಯವೋ ಅದಕ್ಕೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಈ ಗ್ರಾಮ ಹೊಂದಿದೆ.

ಗ್ರಾಮದಲ್ಲಿ ಏನೇನಿದೆ, ಬಡವರೆಷ್ಟು, ಶ್ರೀಮಂತರೆಷ್ಟು, ಶೌಚಾಲಯ ಹೊಂದಿರುವವರೆಷ್ಟು, ಕೃಷಿ ಪ್ರದೇಶವೆಷ್ಟು... ಹೀಗೆ ಎಲ್ಲ ಆಯಾಮಗಳಲ್ಲೂ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಕಬ್ಬು, ದ್ರಾಕ್ಷಿ, ಬಾಳೆಹಣ್ಣು, ಪಪ್ಪಾಯ, ಅರಿಶಿಣ, ಹೂವಿನ ಬೆಳೆಗಳನ್ನು ಈ ಗ್ರಾಮದಲ್ಲಿ ಮುಖ್ಯವಾಗಿ ಬೆಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT