ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿ: ನಿರಾಶೆ ತಂದ ದಾಖಲೆ

Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಾಪತ್ತೆಯಾಗಿ 72 ವರ್ಷಗಳಾದರೂ  ಅವರು ಏನಾದರು ಎಂಬ ಚರ್ಚೆ ಇಂದಿಗೂ ಜೀವಂತವಾಗಿದೆ. ನೇತಾಜಿ ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ಮೃತರಾದರು ಎಂಬುದನ್ನು ಒಪ್ಪಲು ದೇಶ ಸಿದ್ಧವಿಲ್ಲ. ಹಾಗಿದ್ದರೆ ಮತ್ತೆಲ್ಲಿಗೆ ಹೋದರು? ಐಎನ್ಎ ನಿಧಿ ಏನಾಯಿತು? ಅವರು ರಷ್ಯಾದಲ್ಲಿ ಬಂದಿಯಾಗಿದ್ದರೇ? ಅಲ್ಲಿ ಕಿರುಕುಳದಿಂದ ಸತ್ತರೇ? ಗುಮ್ನಾಮಿ ಬಾಬಾ ವೇಷದಲ್ಲಿ ಫೈಜಾಬಾದ್‌ನಲ್ಲಿ ಇದ್ದರೇ?

ಸಂಶೋಧಕರು, ಪತ್ರಕರ್ತರು, ನೇತಾಜಿ ಕುಟುಂಬದವರು, ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರು ನೇತಾಜಿ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು 1945ರಿಂದಲೂ ಮಾಡುತ್ತಿದ್ದಾರೆ. ಆದರೆ ಆರ್‌ಟಿಐ ಅಡಿ ಪಡೆದ ಮಾಹಿತಿ, ತನಿಖಾ ಆಯೋಗಗಳು, ನ್ಯಾಯಾಲಯದ ವಿಚಾರಣೆಗಳು ಯಾವ ನಿರ್ಣಾಯಕ ಉತ್ತರವನ್ನೂ ನೀಡಿಲ್ಲ. ಷಾ ನವಾಜ್ ಸಮಿತಿ ಹಾಗೂ ಜಸ್ಟೀಸ್ ಖೋಸ್ಲಾ ಆಯೋಗವು ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟರು ಎಂದು ಹೇಳಿವೆ.

ಪ್ರಧಾನಿ ಜವಾಹರಲಾಲ್ ನೆಹರೂ ಇದನ್ನು ಒಪ್ಪಿ, ನೇತಾಜಿ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕವಾಗಿ ಘೋಷಿಸಿದರು. ನೇತಾಜಿಯವರ ಅಣ್ಣ ಸುರೇಶ್‌ಚಂದ್ರ ಬೋಸ್ ಇದನ್ನು ವಿರೋಧಿಸಿ, ಸ್ಪಷ್ಟ ಸಾಕ್ಷ್ಯಾಧಾರ ನೀಡುವಂತೆ ನೆಹರೂ ಅವರಿಗೆ ಕಾಗದ ಬರೆದರು. ಇದಕ್ಕೆ ಉತ್ತರವಾಗಿ 1962ರ ಮೇ 13ರಂದು ನೆಹರೂ ಬರೆದ ಪತ್ರದಲ್ಲಿ ‘ಅಂತಹ ಯಾವುದೇ ಸ್ಪಷ್ಟ ಸಾಕ್ಷ್ಯಾಧಾರ ನನ್ನ ಹತ್ತಿರ ಇಲ್ಲ’ ಎಂದು ಒಪ್ಪಿಕೊಂಡರು.

‘ನೇತಾಜಿ ಮೃತಪಟ್ಟಿಲ್ಲ, ಸರ್ಕಾರ ಸೂಕ್ತ ತನಿಖೆ ನಡೆಸಬೇಕು’ ಎಂದು ನೇತಾಜಿ ಕುಟುಂಬದವರು ಪದೇ ಪದೇ ಕೋರಿರುವುದನ್ನು ನೋಡಿದರೆ, ಅವರು ಬದುಕಿದ್ದಾರೆಂಬ ದೃಢನಂಬಿಕೆ ಅವರಲ್ಲಿತ್ತು ಎಂದು ತಿಳಿಯುತ್ತದೆ. 2005ರಲ್ಲಿ ಮುಖರ್ಜಿ ಆಯೋಗ, ಹಿಂದಿನ ಆಯೋಗದ ವರದಿಗಳನ್ನು ನಿರಾಕರಿಸಿ, ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲವೆಂದು ಹೇಳಿತು. ಆದರೆ ಅವರು ಏನಾದರು ಎಂಬುದರ ತನಿಖೆ ಮುಂದುವರಿಸಲು ಸರ್ಕಾರ ಸಹಕಾರ ನೀಡಲಿಲ್ಲ.

ಮಮತಾ ಬ್ಯಾನರ್ಜಿ 2015ರಲ್ಲಿ ನೇತಾಜಿಗೆ ಸಂಬಂಧಿಸಿದ 64 ಕಡತಗಳನ್ನು ಬಹಿರಂಗಪಡಿಸಿದರು. ಇವು ಯಾವುದೇ ಹೊಸ ವಿಚಾರ ತಿಳಿಸದಿದ್ದರೂ, ಅದಾಗಲೇ ತಿಳಿದಿದ್ದ ಹಾಗೂ ಅನುಮಾನದ ರೂಪದಲ್ಲಿದ್ದ ವಿಚಾರಗಳಿಗೆ ಪುಷ್ಟಿ ನೀಡಿದವು. 1945ರಿಂದಲೂ ನೇತಾಜಿ ಕುಟುಂಬದ ಚಲನವಲನಗಳ ಮೇಲೆ ನಿಗಾ ಇರಿಸಿದ್ದುದು ಈ ದಾಖಲೆಗಳಿಂದ ದೃಢಪಟ್ಟಿತು. ಅಲ್ಲದೆ ಹಲವು ಮಹತ್ವದ ದಾಖಲೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತು.

2016ರ ಜನವರಿ 23ರಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೇತಾಜಿಗೆ ಸಂಬಂಧಿಸಿದ ಸಾವಿರಾರು ಪುಟಗಳನ್ನು ಒಳಗೊಂಡ 303 ಕಡತಗಳನ್ನು ಬಹಿರಂಗಗೊಳಿಸಿತು. ಅವುಗಳನ್ನು ಈಗ ರಾಷ್ಟ್ರೀಯ ಪತ್ರಾಗಾರಕ್ಕೆ ವರ್ಗಾಯಿಸಲಾಗಿದೆ.

ಈ ಕಡತಗಳಲ್ಲಿ ಜಪಾನಿನ ರೆಂಕೋಜಿ ದೇವಸ್ಥಾನದಲ್ಲಿರುವ ‘ನೇತಾಜಿ’ಯವರ ಅಸ್ಥಿ, ನೇತಾಜಿ ಪತ್ನಿ ಎಮಿಲಿ ಷೆನ್ಕಲ್, ಮಗಳು ಅನಿತಾ ಅವರ ಬಗೆಗಿನ ಮಾಹಿತಿ,  ‘ನೇತಾಜಿ’ಯವರ ಅಸ್ಥಿಯನ್ನು ಭಾರತಕ್ಕೆ ತರಲು ಎಮಿಲಿಯವರ ಅನುಮತಿ ಕೋರಿರುವುದು, ಸಂಸತ್‌ನಲ್ಲಿ ನಡೆದ ಚರ್ಚೆಗಳು, ನೇತಾಜಿ ನಾಪತ್ತೆ ವಿಷಯವಾಗಿ ರಚಿಸಲಾಗಿದ್ದ  ಮೂರು ವಿಚಾರಣಾ ಆಯೋಗಗಳು, ಹೊರದೇಶಗಳಲ್ಲಿನ  ದಾಖಲೆಗಳನ್ನು ಭಾರತಕ್ಕೆ ವರ್ಗಾಯಿಸುವುದು ಮತ್ತು  ಆರ್‌ಟಿಐ ಅರ್ಜಿಗಳ ಬಗ್ಗೆ ಮಾಹಿತಿ ಇದೆಯೇ ಹೊರತು ನೇತಾಜಿ ಏನಾದರೆಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ನೇತಾಜಿ ರಷ್ಯಾದ ಕಾರಾಗೃಹದಲ್ಲಿ ಬಂದಿಯಾಗಿದ್ದರು, ಅಲ್ಲಿ ಕಿರುಕುಳಕ್ಕೆ ಒಳಗಾಗಿ ಮೃತಪಟ್ಟಿರಬಹುದು ಎಂಬ ಇನ್ನೊಂದು ಬಲವಾದ ನಂಬಿಕೆಯೂ ಇದೆ. 1945ರ ನಂತರ ಅವರು ರಷ್ಯಾದಲ್ಲಿ ಇದ್ದರು ಎಂಬ ಮಾಹಿತಿ ನೀಡಿದವರು ಪ್ರೊ. ಪುರಭಿ ರಾಯ್. ಜಾಧವಪುರ ವಿಶ್ವವಿದ್ಯಾಲಯದಲ್ಲಿ ರಷ್ಯನ್‌ ಭಾಷೆಯ ಪ್ರಾಧ್ಯಾಪಕಿ ಆಗಿದ್ದ ಪುರಭಿ ಅವರನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ರಷ್ಯಾದ ಪತ್ರಾಗಾರದಲ್ಲಿರುವ ಮಾಹಿತಿ ಸಂಗ್ರಹಿಸಲು 1995ರಲ್ಲಿ ಮಾಸ್ಕೊಗೆ ವಿದ್ವಾಂಸರ ತಂಡದ ಜೊತೆ ಕಳುಹಿಸಲಾಗಿತ್ತು. ನೇತಾಜಿಗೆ ಸಂಬಂಧಿಸಿದಂತೆ ರಷ್ಯಾದಲ್ಲಿರುವ ದಾಖಲೆ, ಸಾಕ್ಷ್ಯಾಧಾರಗಳ ಪಟ್ಟಿಯನ್ನು ಪುರಭಿ ಅವರು ಮುಖರ್ಜಿ ಆಯೋಗಕ್ಕೆ ಕೊಟ್ಟಿದ್ದರು.

1946ರಲ್ಲಿ ಮುಂಬೈನಲ್ಲಿದ್ದಂತಹ  ರಷ್ಯಾ ಗೂಢಚರ ಸಂಸ್ಥೆ ಕೆಜಿಬಿಯ ಗೂಢಚಾರನೊಬ್ಬ ರಷ್ಯಾಗೆ ಕಳುಹಿಸಿದ ಮಾಹಿತಿ ಆ ದಾಖಲೆಗಳಲ್ಲಿ ಇತ್ತು. ‘ನೆಹರೂ ಮತ್ತು ಗಾಂಧಿಯವರ ಜೊತೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ನಾವು ಸುಭಾಷರನ್ನು ಉಪಯೋಗಿಸಿಕೊಳ್ಳಬೇಕು’ ಎಂಬುದು ಗೂಢಚಾರ ಕಳುಹಿಸಿದ ಸಂದೇಶ. ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ ಎನ್ನಲಾದ ನೇತಾಜಿ ಬಗ್ಗೆ ಕೆಜಿಬಿ ಕಾರ್ಯಕರ್ತರು ಈ ಸೂಚನೆ ನೀಡಿದ್ದೇಕೆ?

‘ವಾರ್ಸಾ ಒಪ್ಪಂದದಲ್ಲಿ ಕೆಲಸ ಮಾಡಿದ್ದ ರಷ್ಯಾದ ನಿವೃತ್ತ ಮೇಜರ್ ಜನರಲ್ ಅಲೆಕ್ಸಾಂಡರ್ ಕಲೆಶ್ನಿಕೋವ್ ಅವರು ನೇತಾಜಿಗೆ ಸಂಬಂಧಿಸಿದ 1946ರ ಒಂದು ಕಡತವನ್ನು ತಾವು ಕಂಡಿದ್ದಾಗಿ ನನಗೆ ಹೇಳಿದರು. ನೇತಾಜಿಯವರನ್ನು ರಷ್ಯಾದಲ್ಲಿ ಇರಿಸಿಕೊಳ್ಳಬೇಕೇ ಎಂದು ಸ್ಟಾಲಿನ್ ಮತ್ತು ಇನ್ನಿಬ್ಬರು ಚರ್ಚಿಸಿದ್ದ ಮಾಹಿತಿ ಅದರಲ್ಲಿತ್ತು. ಹಾಗೆಯೇ ರಷ್ಯಾದ ಗೂಢಚರ ಸಂಸ್ಥೆಯ ಕಡತವೊಂದರಲ್ಲಿ, 1945–49ರ ಸಮಯದಲ್ಲಿ ನೇತಾಜಿಯವರನ್ನು ರಷ್ಯಾದ ಗುಲಾಗ್‌ನಲ್ಲಿ (ಅಪರಾಧಿ, ರಾಜಕೀಯ ಕೈದಿಗಳ ಕಾರ್ಮಿಕ ಶಿಬಿರ) ಇರಿಸಿದ್ದ ಮಾಹಿತಿ ಇರುವ ಬಗ್ಗೆ ಅವರು ನನಗೆ ಹೇಳಿದ್ದರು’ ಎಂದು ಪುರಭಿ ಹೇಳಿದ್ದಾರೆ.

‘ಮುಖರ್ಜಿ ಆಯೋಗ ಪರಿಶೀಲಿಸಿದ, ರಷ್ಯಾದಿಂದ ಬಂದ ಅನೇಕ ಮಹತ್ವದ ಮಾಹಿತಿಗಳ ಡಿಜಿಟಲ್‌ ಪ್ರತಿಗಳು ಈಗ ಬಹಿರಂಗಗೊಂಡಿರುವ ಕಡತಗಳಲ್ಲಿ ಕಾಣುತ್ತಿಲ್ಲ. 1945ರ ನಂತರವೂ ನೇತಾಜಿ ಸೋವಿಯತ್‌ ಒಕ್ಕೂಟದಲ್ಲಿ ಜೀವಂತವಾಗಿದ್ದರು ಎಂಬುದಕ್ಕೆ  ಬಲವಾದ ದಾಖಲೆಗಳನ್ನು ಮುಖರ್ಜಿ ನನಗೆ ತೋರಿಸಿದ್ದರು. ಈ ಡಿಜಿಟಲ್‌ ಪ್ರತಿಗಳು ಕೈಸೇರಿದ ಮೇಲೆ  ಮುಖರ್ಜಿ ತನಿಖೆಗೆಂದು ರಷ್ಯಾಗೆ ಭೇಟಿ ನೀಡಿದಾಗ, ಈ ದಾಖಲೆಗಳ ಮೂಲ ಪ್ರತಿಗಳು ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದವು’ ಎಂದು ಪುರಭಿ ಹೇಳುತ್ತಾರೆ.

ನೇತಾಜಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಹಿರಂಗಪಡಿಸಿ, ರಾಷ್ಟ್ರೀಯ ಪತ್ರಾಗಾರಕ್ಕೆ ವರ್ಗಾಯಿಸಲಾಗಿದೆ ಎಂದು ನನ್ನ ಆರ್‌ಟಿಐ ಅರ್ಜಿಗೆ ಗೃಹ ಸಚಿವಾಲಯ ಉತ್ತರ ನೀಡಿತು. ಎಲ್ಲ ದಾಖಲೆಗಳು ಬಹಿರಂಗಗೊಂಡಿದ್ದರೆ, ರಷ್ಯಾದಿಂದ ಬಂದ ಡಿಜಿಟಲ್‌ ಪ್ರತಿಗಳು ಏನಾದವು? ಕೆಲ ಅಮೂಲ್ಯ ದಾಖಲೆಗಳನ್ನು ನಾಶಗೊಳಿಸಲಾಗಿದೆ ಎನ್ನುವ ಸಂದೇಹ ಮೂಡಿದೆ. ಚಂದ್ರಶೇಖರ್ ನೇತೃತ್ವದ ಕೇಂದ್ರ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಸುಬ್ರಮಣಿಯನ್‌ ಸ್ವಾಮಿ ‘ನೇತಾಜಿಗೆ ಸಂಬಂಧಿಸಿದ ದಾಖಲೆಗಳನ್ನು ನಾನು ನೋಡಿದ್ದೇನೆ. ದಾಖಲೆಗಳನ್ನು ಕಾಂಗ್ರೆಸ್ ಸರ್ಕಾರ ನಾಶ ಮಾಡಿರುವ ಬಗ್ಗೆ ತಿಳಿದಿದೆ’ ಎಂದು ಹೇಳಿದ್ದಾರೆ.

ಅಲ್ಲೊಮ್ಮೆ ಇಲ್ಲೊಮ್ಮೆ ಎಷ್ಟೇ ಒತ್ತಾಯ ಕೇಳಿಬಂದರೂ ನಂತರದ ಸರ್ಕಾರಗಳು ಸತ್ಯಶೋಧನೆಯ ಆಗ್ರಹಗಳನ್ನು ನಿರ್ಲಕ್ಷಿಸಿದವು. ಸ್ವಾತಂತ್ರ್ಯ ಸೇನಾನಿಯ ಬಗ್ಗೆ ಮಾಹಿತಿ ಕೇಳಿದವರನ್ನು ನಿಕೃಷ್ಟವಾಗಿ ಕಂಡವು. ಪ್ರಧಾನಿ ಕಚೇರಿ ಸಿಬ್ಬಂದಿಯು  ನೇತಾಜಿ ಬಗ್ಗೆ ಪ್ರಶ್ನಿಸಿದವರನ್ನು ಹೀಯಾಳಿಸಿದ ಪತ್ರಗಳು ಈಗ ಬಹಿರಂಗವಾಗಿರುವ ದಾಖಲೆಗಳಲ್ಲಿ ಇವೆ.

ನೇತಾಜಿಗೆ ಏನಾಯಿತು ಎಂಬ ಸತ್ಯವನ್ನು ಕಾತರದಿಂದ ಎದುರು ನೋಡುತ್ತಿರುವ ಭಾರತದ ಜನರಿಗೆ, ಬಹಿರಂಗಗೊಂಡಿರುವ ದಾಖಲೆಗಳು ನಿರಾಶೆ ತಂದಿವೆ. ಸತ್ಯ ಹೊರಬರಬೇಕಾದರೆ ನಾವು ರಷ್ಯಾ, ಬ್ರಿಟನ್, ಅಮೆರಿಕ ಹಾಗೂ ಇತರ ದೇಶಗಳ ಬಾಗಿಲು ಬಡಿಯಬೇಕಾಗಿದೆ. ಇದಕ್ಕೆ ಪ್ರಬಲ ರಾಜಕಿಯ ಇಚ್ಛಾಶಕ್ತಿ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT