ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮುಚ್ಚದಿರಲು ಆಗ್ರಹ

ನಗರದಲ್ಲಿ ಸರಣಿ ಪ್ರತಿಭಟನೆ: ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ದಸಂಸ ಕಾರ್ಯಕರ್ತರ ಒತ್ತಾಯ
Last Updated 24 ಜನವರಿ 2017, 6:51 IST
ಅಕ್ಷರ ಗಾತ್ರ

ಬಳ್ಳಾರಿ: ನಗರವು ಸೋಮವಾರ ಸರಣಿ ಪ್ರತಿಭಟನೆಗೆ ಸಾಕ್ಷಿಯಾಯಿತು. ಪ್ರಮುಖ ರಸ್ತೆಯೊಂದಕ್ಕೆ ನೇತಾಜಿ ಸುಭಾಷ್‌ ಚಂದ್ರ ಬೋಸ್ ಹೆಸರಿಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ರಸ್ತೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸದಸ್ಯರು ಪ್ರತಿಭಟನೆ ಕೈಗೊಂಡರು.

ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕು. ಶಿಕ್ಷಕರ ಹೊರೆ ತಗ್ಗಿಸಬೇಕು. ಕೇಂದ್ರೀಯ ವಿದ್ಯಾಲಯಗಳ ಗುಣಮಟ್ಟಕ್ಕೆ ಅವುಗಳನ್ನು ಏರಿಸಬೇಕು. ಶಾಲೆಗಳ ನಿರ್ವಹಣೆಗೆ ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ನಡೆಸಬೇಕು ಎಂದು ಕೋರಿದರು.

ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಂಪ್ಲಿ ಹೋಬಳಿ ವ್ಯಾಪ್ತಿಯ ಹುಲಿಗೆಮ್ಮ ಕ್ಯಾಂಪಿನ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಈವರೆಗೂ ನಿವೇಶನ ವಿತರಿಸಲು ಪುರಸಭೆ ಮುಂದಾಗಿಲ್ಲ. ಕೂಡಲೇ ನಿವೇಶನ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ನೇತಾಜಿ ಹೆಸರಿಡಲು ಆಗ್ರಹ: ಇಲ್ಲಿನ ಗಡಿಗಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಕಾರ್ಮಿಕ ಸಂಘಟನೆಯ ಸದಸ್ಯರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸುಭಾಷ ಚಂದ್ರ ಬೋಸ್ ಹೆಸರಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ: ನೇತಾಜಿ ಸುಭಾಷಚಂದ್ರ ಬೋಸ್ ಅವರ 120ನೇ ಜನ್ಮದಿನದ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಯುವ ಸಂಘಟನೆ ಸಹಯೋಗದಲ್ಲಿ ಕೈಗೊಂಡ ಪ್ರತಿಭಟನೆಯಲ್ಲಿ ನಗರದ ಬೆಂಗಳೂರು ರಸ್ತೆಗೆ ಬೋಸ್ ಅವರ ಹೆಸರಿಡಬೇಕು ಎಂದು ಆಗ್ರಹಿಸಲಾಯಿತು.

ಮೀನಾಕ್ಷಿ ವೃತ್ತಕ್ಕೆ ನೇತಾಜಿ ವೃತ್ತವೆಂದು ನಾಮಕರಣ ಮಾಡಬೇಕು. ಆ ವೃತ್ತದಲ್ಲಿ ನೇತಾಜಿ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದರು.

ಸಂಘಟನೆಗಳ ಪದಾಧಿಕಾರಿಗಳಾದ ಡಾ.ಪ್ರಮೋದ್, ಎಂ.ಗೋವಿಂದ, ಸುರೇಶ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ರಮೇಶ ಗೋನಾಳು, ಟಿ.ದುರುಗಪ್ಪ, ತಳವಾರ ತಾಯಪ್ಪ, ಎ.ಕೆ.ಗಂಗಾಧರ, ಚಿಕ್ಕ ಗಾದಿಲಿಂಗಪ್ಪ, ಮೆಹಬೂಬ್, ಡಿ.ಚಿದಾನಂದಪ್ಪ, ವೀರೇಶ, ನರೇಶಕುಮಾರ್ ಇದ್ದರು.

ಆಲ್‌ ಇಂಡಿಯಾ ಫಾರ್ವರ್ಡ್ ಬ್ಲಾಕ್‌ ಸಂಘಟನೆ: ನಗರದ ಸಂಘಟನೆ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 120ನೇ ಜನ್ಮದಿನವನ್ನು ಆಚರಿಸಲಾಯಿತು. ಮುಖಂಡ ಯು.ಉರುಕುಂದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮಂಜುನಾಥ ಹೆಗಡೆ, ಶ್ರೀಧರಬಾಬು, ಮಲ್ಲಿಕಾರ್ಜುನ, ಮಕ್‍ಬುಲ್  ಟಿ.ರಾಮಾಂಜಿನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT