ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿಲ್ಲದೇ ಪದ್ಯ ಬರೆಯಲು ಆಗಲಿಲ್ಲ!

ವಿಶೇಷ ಬೋಧನಾ ಕೇಂದ್ರಗಳಲ್ಲಿ ಮಕ್ಕಳ ಕಲಿಕೆಯ ಸ್ಥಿತಿಯ ಸಾಕ್ಷಾತ್ ದರ್ಶನ, ಪರಿಶೀಲನೆ
Last Updated 24 ಜನವರಿ 2017, 7:04 IST
ಅಕ್ಷರ ಗಾತ್ರ

ಬಾಗಲಕೋಟೆ: ಪದ್ಯ ಕಂಠಪಾಠವಾಗಿ­ದ್ದರೂ ಅದನ್ನು ತಪ್ಪಿಲ್ಲದೇ ಬರೆಯಲು ಬಾರದ ಸ್ಥಿತಿ, ಶಿಕ್ಷಕ ಬೋರ್ಡ್‌ ಮೇಲೆ ಬರೆದಿದ್ದನ್ನು ತಪ್ಪಾಗಿ ಬರೆದುಕೊಂಡಿದ್ದ ವಿದ್ಯಾರ್ಥಿ, ವಿಜ್ಞಾನ ಶಿಕ್ಷಕರು ಆಗಷ್ಟೇ ಹೇಳಿ­ಕೊಟ್ಟಿದ್ದ ಅಂತರ್ದಹನ, ಬಹಿ­ರ್ದಹನ ಎಂಜಿನ್‌ಗಳ ಬಗ್ಗೆ ವಿವರಣೆ ನೀಡಲು ಬಾರದ ಸ್ಥಿತಿ..

ಇಲ್ಲಿನ ನವನಗರದ 43ನೇ ಸೆಕ್ಟರ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆರಂಭವಾದ ವಿಶೇಷ ಬೋಧನಾ ಕೇಂದ್ರಕ್ಕೆ ಹಾಜರಾದ ವಿವಿಧ ಶಾಲೆಗಳ ಎಸ್‌ಎಸ್‌ಎಲ್‌ಸಿ ಮಕ್ಕಳ ಪರಿಸ್ಥಿತಿ ಇದು.

ಜಿಲ್ಲಾ ಪಂಚಾಯ್ತಿ ಉಪ­ಕಾರ್ಯ­ದರ್ಶಿ ಅಮರೇಶ ನಾಯಕ ಖುದ್ದಾಗಿ ಶಾಲೆ­ಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಮಾತ­ನಾಡಿಸಿ  ಬುದ್ಧಿಮತ್ತೆ ಪರಿಶೀ­ಲಿಸಿ­ದರು. ಅಲ್ಲಿ ನಡೆದ ವಿಶೇಷ ಬೋಧನಾ ತರಗತಿಗಳಿಗೆ ಕಾಳಿದಾಸ ಶಾಲೆ, ಆದರ್ಶ ವಿದ್ಯಾಲಯ, ಶಾರದಾಂಬ ಪ್ರೌಢಶಾಲೆ ಸೇರಿದಂತೆ ಅದೇ ಶಾಲೆಯ ವಿದ್ಯಾರ್ಥಿ­ಗಳೂ ಹಾಜರಾಗಿದ್ದರು. ತಲಾ 25ರಂತೆ ಎರಡು ತರಗತಿಗಳಲ್ಲಿ 50 ವಿದ್ಯಾರ್ಥಿ­ಗಳಿಗೆ ತರಗತಿ ನಡೆಸಲಾಯಿತು.

ಶಾಲೆಗೆ ಭೇಟಿ ನೀಡಿದ ವೇಳೆ ಮಕ್ಕಳು ಹಾಗೂ ಶಿಕ್ಷಕರಿಗೆ ಕಿವಿಮಾತು ಹೇಳಿದ ಅಮರೇಶ ನಾಯಕ,  ‘ನಿಮಗೆ ವಿಶೇಷ ತರಗತಿ ಏಕೆ ಮಾಡಲಾಗುತ್ತಿದೆ. ನೀವೇಕೆ ಇಲ್ಲಿಗೆ ಆಯ್ಕೆ ಆಗಿದ್ದೀರಿ. ಇಷ್ಟು ದಿನ ಏಕೆ ಕಲಿಯಲಿಲ್ಲ. ನೀವು ದಡ್ಡರಿ­ದ್ದೀರಿ ಎಂದು ಇಲ್ಲಿಗೆ ಆಯ್ಕೆ ಮಾಡಿಲ್ಲ. ಬದ­ಲಾಗಿ ಕಲಿಕೆ ನಿಗದಿತ ಮಟ್ಟದಲ್ಲಿ ಆಗಿಲ್ಲ ಎಂದು ಅವಕಾಶ ನೀಡಲಾಗಿದೆ. ಕೇವಲ ಪಾಸ್‌ ಮಾರ್ಕ್ಸ್‌ಗೆ ಓದದೇ ಹೆಚ್ಚಿನ ಅಂಕ ಪಡೆಯುವತ್ತ ಗಮನ­ಹರಿ­ಸುವಂತೆ’ ಮಕ್ಕಳನ್ನು ಪ್ರೋತ್ಸಾಹಿಸಿದರು.

‘ಮಕ್ಕಳಿಗೆ ಹೊಸದಾಗಿ ಕಲಿಸು­ತ್ತಿದ್ದೇವೆ ಎಂಬ ಭಾವನೆಯಿಂದ ಪಾಠ ಮಾಡಿ. ಆದರೆ ಇಲ್ಲಿ ಬಂದವರಿಗೆ ಎಬಿಸಿಡಿ ಗೊತ್ತಿಲ್ಲ ಎಂಬ ಮನೋಭಾವ ಇಟ್ಟುಕೊಳ್ಳಬೇಡಿ’ ಎಂದು ಶಿಕ್ಷಕರಿಗೆ ಸಲಹೆ ನೀಡಿದ ಅಮರೇಶ ನಾಯಕ, ‘ ಹೆಚ್ಚು ಹೋಂವರ್ಕ್‌ ಕೊಡಿ. ಇಲ್ಲಿ ಅನು­ತ್ತೀ­ರ್ಣರಾದವರನ್ನು ಬಿಡ­ಬೇಡಿ. ಅವ­ರಿಂದ ಹೆಚ್ಚು ಹೆಚ್ಚು ಅಭ್ಯಾಸ ಮಾಡಿಸಿ’ ಎಂದು ತಿಳಿಸಿದರು. ಸರ್ಕಾರಿ ಪ್ರೌಢ­ಶಾಲೆಗೆ ಭೇಟಿ ನೀಡುವ ಮುನ್ನ ಅವರು ನವನಗರದ ಅಂಜುಮನ್ ಶಾಲೆಗೂ ಭೇಟಿ ನೀಡಿ ಅಲ್ಲಿ ವಿಶೇಷ ತರಗತಿಯಲ್ಲಿ ಮಕ್ಕಳ ಕಲಿಕೆಯನ್ನು ಪರಿಶೀಲಿಸಿದರು.

ಪಾಠ ಆರಂಭ...
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ­ದರ್ಶಿ ವಿಕಾಸ ಸುರೋ­ಳಕರ ಅವರು ವಿಶೇಷ ಅಸ್ಥೆಯಿಂದ ಮಿಷನ್–100 ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಗತಿಗೆ ವ್ಯವಸ್ಥೆ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ವರ್ಕ್‌­ಬುಕ್ ಸಿದ್ಧಗೊಳಿಸಿದ್ದು, ಮೊದಲ ದಿನವೇ ಎಲ್ಲಾ ಮಕ್ಕಳಿಗೂ ವರ್ಕ್‌ಬುಕ್‌ಗಳನ್ನು ನೀಡಿ ಪಾಠ ಆರಂಭಿಸಲಾಯಿತು. 87 ವಿಶೇಷ ಬೋಧನಾ ಕೇಂದ್ರ  ಆರಂಭಿಸಲಾಗಿದೆ. 180 ಶಾಲೆಗಳ ಮಕ್ಕಳು ವಿಶೇಷ ತರಗತಿಗೆ ಹಾಜರಾಗುತ್ತಿದ್ದಾರೆ.  4268 ಮಕ್ಕಳಿಗೆ ಲಾಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT