ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯಕ ಅನುಭಾವಿ ಚೌಡಯ್ಯ’

Last Updated 24 ಜನವರಿ 2017, 7:08 IST
ಅಕ್ಷರ ಗಾತ್ರ

ಹಾನಗಲ್: ‘ಬಸವಣ್ಣನವರ ಅನುಭವ ಮಂಟಪದ ಶರಣರ ಪೈಕಿ ಅಂಬಿಗರ ಚೌಡಯ್ಯನವರು ಕ್ರಾಂತಿಕಾರಿ ಶರಣರಾಗಿದ್ದರು ಎನ್ನುವುದು ಅವರ ವಚನಗಳ ಮೂಲಕ ತಿಳಿಯುತ್ತದೆ’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ನುಡಿದರು.

ಸೋಮವಾರ ಇಲ್ಲಿನ ಎಪಿಎಂಸಿ ಹಿಂಭಾಗದ ಮೈದಾನದಲ್ಲಿ ಗಂಗಾಮತ ಸಮಾಜದ ತಾಲ್ಲೂಕು ಘಟಕ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಬೃಹತ್‌ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

‘ಅಂಬಿಗರ ಚೌಡಯ್ಯನವರು ತಮ್ಮ ಮೊನಚಾದ ವಚನಗಳ ಮೂಲಕ ಸಾಮಾಜಿಕ ಅನಿಷ್ಠಗಳು ಮತ್ತು ಡೊಂಗಿಗಳಿಗೆ ಬುದ್ದಿ ಕಲಿಸುವ ಕೆಲಸ ಮಾಡಿದ ಮಹಾತ್ಮ’ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ‘ಕಾಯಕವೇ ಎಲ್ಲಕ್ಕಿಂತ ಶ್ರೇಷ್ಠ ಎಂಬುದನ್ನು ತಮ್ಮ ವಚನಗಳ ಮೂಲಕ ಸಾರಿದ ಅಂಬಿಗರ ಚೌಡಯ್ಯನವರು ಅದರಂತೆ ನಡೆದುಕೊಂಡ ಸಾಧಕರು’ ಎಂದರು.

ಗಂಗಾಮತ ಸಮಾಜದ ತಾಲ್ಲೂಕು ನಾಯಕ ಚಂದ್ರಪ್ಪ ಜಾಲಗಾರ ಮಾತ ನಾಡಿ, ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿರುವ  ಗಂಗಾಮತ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಜನರನ್ನು ಸಂಘಟಿಸಲಾಗುತ್ತಿದೆ’ ಎಂದರು.

ನರಸೀಪೂರ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖಂಡ ಅನಂತವಿಕಾಸ ನಿಂಗೋಜಿ, ಮಾಜಿ ಸಚಿವ ಸಿ.ಎಂ.ಉದಾಸಿ ಮಾತನಾಡಿದರು.

ಗಂಗಾಮತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಶಕುಂತಲಾ ಚೌಗಲಾ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಮತ್ತಿತರರು ಹಾಜರಿದ್ದರು.

ಅದ್ಧೂರಿ ಮೆರವಣಿಗೆ:ಇದಕ್ಕೂ ಮೊದಲು ಗುರುಪೀಠ ಅಲಂಕರಿಸಿದ ನಂತರ ಮೊದಲ ಬಾರಿಗೆ ಪಟ್ಟಣಕ್ಕೆ ಭೇಟಿ ನೀಡಿದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯನ್ನು ಇಲ್ಲಿನ ಆನಿಕೆರೆ ಭಾಗದಿಂದ ಸ್ವಾಗತಿಸಲಾಯಿತು. ಮೊದಲಿಗೆ ಬೈಕ್‌ ಮೆರವಣಿಗೆ, ನಂತರ ಸಾವಿರ ಕುಂಬ ಹೊತ್ತ ಮಹಿಳೆಯರು, ವಿವಿಧ ವಾಧ್ಯ ವೈಭವ, ಕಲಾ ತಂಡಗಳ ಮೆರವಣಿಗೆ ಮೂಲಕ ಶ್ರೀಗಳನ್ನು ಮೈಲಾರಲಿಂಗೇಶ್ವರ ದೇವಸ್ಥಾನದಿಂದ ವಿಜೃಂಭಣೆಯ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು.

ಅಪರೂಪ: ಜಯಂತಿಯ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಭಿಕರ ಆಸನಗಳಲ್ಲಿ ಅಕ್ಕಪಕ್ಕ ಕುಳಿತಿದ್ದ ಶಾಸಕ ಮನೋಹರ ತಹಸೀಲ್ದಾರ್‌ ಮತ್ತು ಮಾಜಿ ಸಚಿವ ಸಿ.ಎಂ.ಉದಾಸಿ ನೆರೆದಿದ್ದವರ ಅಚ್ಚರಿಗೆ ಕಾರಣವಾದರು.

ಇಬ್ಬರೂ ಕಳೆದ 40 ವರ್ಷಗಳಿಂದ ರಾಜಕೀಯ ರಂಗದಲ್ಲಿ ಪ್ರತಿಸ್ಪರ್ಧಿಗಳು. ಇಬ್ಬರು ಅಪರೂಪ ಎಂಬಂತೆ ಒಂದೆಡೆ ಕುಳಿತಿದ್ದರಿಂದ ನೆರೆದವರು ಅವರೊಂದಿಗೆ ಭಾವಚಿತ್ರ (ಫೋಟೊ) ತೆಗೆಸಿಕೊಳ್ಳುವ ಪೈಪೋಟಿಯಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT