ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸದಾಶಿವ ಆಯೋಗ ವರದಿ ತಿರಸ್ಕರಿಸಿ’

ಭೋವಿ, ಲಂಬಾಣಿ, ಕೊರಚ, ಚಲವಾದಿ, ಗಂಟಿಚೋರ, ಸಿಳ್ಳಿಕ್ಯಾತ, ಕಿಳ್ಳಿಕ್ಯಾತರಿಂದ ಪ್ರತಿಭಟನೆ
Last Updated 24 ಜನವರಿ 2017, 7:10 IST
ಅಕ್ಷರ ಗಾತ್ರ

ಹಾವೇರಿ: ‘ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು’ ಎಂದು ಆಗ್ರಹಿಸಿ ಲಂಬಾಣಿ, ಭೋವಿ, ಕೊರಚ, ಚಲವಾದಿ, ಸುಡುಗಾಡು ಸಿದ್ಧರು, ಗಂಟಿಚೋರ, ಕಿಳ್ಳಿಕ್ಯಾತರ, ಸಿಳ್ಳಿಕ್ಯಾತರ ಮತ್ತಿತರ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಉಡುಪು, ವೃತ್ತಿಯನ್ನು ಪ್ರತಿಬಿಂಬಿಸುವ ಮೂಲಕ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. 

ಇದಕ್ಕೂ ಮೊದಲು ಪುರಸಿದ್ಧೇಶ್ವರ ಗುಡಿಯಿಂದ ಮೆರವಣಿಗೆಯಲ್ಲಿ ಬಂದ ಸಮುದಾಯದ ಜನರು, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ತಮ್ಮ ವೇಷಭೂಷಣಗಳು, ವೃತ್ತಿಯ ಪ್ರದರ್ಶನದ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯು ಅವೈಜ್ಞಾನಿಕವಾಗಿದ್ದು, ತಿರಸ್ಕರಸಿಬೇಕು ಎಂದು ಆಗ್ರಹಿಸಿದ ಅವರು, ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ರವಿ ಪೂಜಾರ ಮಾತನಾಡಿ, ‘ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯು ದಲಿತ ಸಮುದಾಯಗಳ ನಡುವೆ ಒಡಕು ಮೂಡಿಸುತ್ತಿದೆ. ಸಂವಿಧಾನದ ಮೂಲ ಉದ್ದೇಶಗಳನ್ನು ಕಡೆಗಣಿಸಿದೆ’ ಎಂದು ಆರೋಪಿಸಿದರು.
 
ಲಂಬಾಣಿ (ಬಂಜಾರ) ಸಮಾಜದ ಮುಖಂಡ ಈರಪ್ಪ ಲಮಾಣಿ ಮಾತನಾಡಿ, ‘ಜಿಲ್ಲಾ ಕೇಂದ್ರಗಳಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರ ಜೊತೆ ಸಭೆ ನಡೆಸುವ ಮೂಲಕ ನ್ಯಾ. ಸದಾಶಿವ ಆಯೋಗವು ವರದಿ ಸಿದ್ಧಪಡಿಸಿದೆ. ಆದರೆ, ಭೋವಿ (ವಡ್ಡರ), ಲಂಬಾಣಿ, ಕೊರಚ, ಕೊರಮ, ಚಲವಾದಿ, ಸುಡುಗಾಡು ಸಿದ್ಧರು, ಗಂಟಿಚೋರ, ಕಿಳ್ಳಿಕ್ಯಾತರ ಸಮುದಾಯಗಳು ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದಾರೆ. ಕೂಲಿಗಾಗಿ ವಲಸೆ ಹೋಗುತ್ತಿದ್ದಾರೆ. ಕಲ್ಲು ಒಡೆಯುವುದು, ಕಟ್ಟಿಗೆ ಮಾರುವುದು, ರಸ್ತೆ ಕಾಮಗಾರಿಗಳ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಒಂದು ಸಮುದಾಯದ ಹಿತಾಸಕ್ತಿಗಾಗಿ ನೂರಕ್ಕೂ ಹೆಚ್ಚು ಸಮುದಾಯಗಳ ಒಳಿತು ಕಡೆಗಣಿಸುವುದು ಸೂಕ್ತವಲ್ಲ. ನ್ಯಾ.ಸದಾಶಿವ ಆಯೋಗ ವರದಿ ಜಾರಿಗೊಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು.  ರಾಜಕೀಯ ಪಾಠ ಕಲಿಸಲಾಗುವುದು’ ಎಂದರು.

ಪ್ರತಿಭಟನೆಯಲ್ಲಿ ಲಂಬಾಣಿ ಜನಾಂಗದ ಮಹಿಳೆಯರು ಕಟ್ಟಿಗೆ ಹೊತ್ತು, ಪುರುಷರು ದೋಲ್ ಬಾರಿಸುತ್ತ,  ಸುಡಗಾಡ ಸಿದ್ಧರು ಹಾಗೂ ಕಿಳ್ಳಿಕ್ಯಾತರು ತಮ್ಮ ವೇಷಭೂಷಣ ಧರಿಸಿಕೊಂಡು ಶಂಖ ಊದುತ್ತಾ ಪ್ರತಿಭಟನೆ ನಡೆಸಿದರು. ಬಾಲಹನುಮಂತ, ರಾಮಾಯಣ, ಮಹಾಭಾರತ ಪಾತ್ರಧಾರಿಗಳು ಗಮನ ಸೆಳೆದರು.

ನುಲಿಯ ಚನ್ನಯ್ಯ ಪೀಠದ ವೃಷಭೇಂದ್ರ ಸ್ವಾಮೀಜಿ, ಬಂಜಾರ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿ, ಡಾ.ಸುರೇಶ ಯಳ್ಳತ್ತಿ, ವೆಂಕಟೇಶ ಬಿಜಾಪುರ, ರಾಮಣ್ಣ ಬಾದಗಿ, ಕರಬಸಪ್ಪ ದೊಡ್ಡಮನಿ, ಭೋವಿ ಸಮಾಜದ ಮುಖಂಡ ಜಗದೀಶ ಮಲಗೋಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT