ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರಗಳಿಂದ ಬದುಕು ಶ್ರೀಮಂತ

ರುದ್ರಮುನಿ ಶಿವಾಚಾರ್ಯರ 43 ಪುಣ್ಯಾರಾಧನೆ ಮಹೋತ್ಸವ: ರಂಭಾಪುರಿ ಶ್ರೀಗಳು ಅಭಿಮತ
Last Updated 24 ಜನವರಿ 2017, 7:15 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಮಾನವನ ಬದುಕು ಸಂಸ್ಕಾರ, ಸಂಸ್ಕೃತಿಗಳಿಂದ ಶ್ರೀಮಂತವಾಗಿದೆ. ಅದು ಬಂಗಾರ, ಬೆಳ್ಳಿ ಅವಲಂಬಿಸಿಲ್ಲ. ನೆಲ, ಜಲ ಗಾಳಿ, ಬೆಳಕನ್ನು ಅವಲಂಬಿಸಿದೆ. ಅದರ ನಿಜ ಅರ್ಥವನ್ನು ಅರ್ಥೈಸಿಕೊಳ್ಳಬೇಕಿದೆ’ ಎಂದು ಬಾಳೆಹೊನ್ನೂರ ರಂಭಾಪುರಿಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಅರಳೆಲೆಮಠದ ಆವರಣದಲ್ಲಿ ಲಿಂಗೈಕ್ಯ ರುದ್ರಮುನಿ ಶಿವಾಚಾರ್ಯರ 43 ಪುಣ್ಯಾರಾಧನೆ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ನಡೆದ ಸದ್ಭೋದನ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲದಿದ್ದರೂ ಬದುಕು ನಮ್ಮ ಕೈಯಲ್ಲಿದೆ. ಮನುಷ್ಯ ಊರು, ಮನೆ ಹಾಗೂ ಇಡೀ ಸಮಾಜ ಬದಲಿಸಬಹುದು. ಆದರೆ ಮನುಷ್ಯ ತನ್ನನ್ನು ತಾನು ಪರಿವರ್ತಿಸಿಕೊಳ್ಳದಿದ್ದರೆ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿಲ್ಲ. ಹೀಗಾಗಿ ಹೂವು ಹರಿಯುವುದನ್ನು ಕಲಿತಂತೆ ಹೂವಿನಂತೆ ಬಾಳುವುದನ್ನೂ ಕಲಿಯಬೇಕು. ಅದರಿಂದ ಬದುಕು ಯಶಸ್ವಿಯಾಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ವಿನಯ್‌ ಅರಳೆಲೆಮಠ ಉಪನ್ಯಾಸ ನೀಡಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ  ಪ್ರಸಕ್ತ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿದರು. ನಗೆಯ ನುಡಿ ಪತ್ರಿಕೆಯನ್ನು ಹಾವೇರಿ ಸದಾಶಿವ ಸ್ವಾಮೀಜಿ ಬಿಡುಗಡೆ ಮಾಡಿದರು. ಅರಳೆಲೆಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸಿದ್ದರು.

ಮುಕ್ತಿಮಂದಿರದ ವಿಮಲರೇಣುಕ ಶ್ರೀಗಳು, ಕಣ್ವಕುಪ್ಪೆ ಶಾಂತಲಿಂಗ ಶ್ರೀಗಳು,  ಕರ್ಜಗಿ ಶಿವಯೋಗಿ ಶ್ರೀಗಳು, ಹುಕ್ಕೇರಿ ಚಂದ್ರಶೇಖರ ಶ್ರೀಗಳು, ಮಳಲಿ ನಾಗಭೂಷಣ ಶ್ರೀಗಳು, ರಾಣೆಬೆನ್ನೂರ ಶಿವಯೋಗಿ ಶ್ರೀಗಳು, ಶಾಂತಪುರದ ಶಿವಾನಂದ ಶ್ರೀಗಳು, ಮಂಗಳೂರ ಸಿದ್ದಲಿಂಗ ಶ್ರೀಗಳು, ಕೂಡಲದ ಮಹೇಶ್ವರ ಶ್ರೀಗಳು, ಅಕ್ಕಿಆಲೂರ ಚಂದ್ರಶೇಖರ ದೇವರು, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮತ್ತಿತರರು ಇದ್ದರು.

ಡಾ.ಆರ್.ಎಸ್‌.ಅರಳೆಲೆಮಠ ಸ್ವಾಗತಿಸಿದರು. ಗಂಗಾಧರಯ್ಯ ಕಲ ಗೊಂದಿ ನಿರೂಪಿಸಿದರು. ಮುಖ್ಯಶಿಕ್ಷಕ ಎಂ.ಬಿ.ಉಂಕಿ ವಂದಿಸಿದರು.

ಅದ್ಧೂರಿ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಲಿಂಗೈಕ್ಯ ಶ್ರೀಗಳ ಭಾವಚಿತ್ರದ ಮೆರವಣಿಗೆ ಸಡಗರದಿಂದ ನಡೆಯಿತು.
ಅರಳಲೆಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ  ಮೆರವಣಿಗೆಗೆ ಚಾಲನೆ  ನೀಡಿದರು. ಬಾಳೆಹೊನ್ನೂರಿನ ರಂಭಾಪುರಿಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.  ಬೆಳಿಗ್ಗೆ ವೀರಭದ್ರದೇವರ ಗುಗ್ಗಳ ಮಹೋತ್ಸವ, ಶ್ರೀಗಳ ಗದ್ಗುಗೆಗೆ ಮಹಾರುದ್ರಾಭಿಷೇಕ, ಮಹಾಗಣರಾದನೆ, ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಶ್ರೀಗಳ  ಭಾವಚಿತ್ರ ಮೆರವಣಿಗೆ  ಕರಡಿ ಕುಣಿತ, ಭಜನೆ, ಝಾಂಜಮೇಳ, ಗೊಬ್ಬೆಗಳ ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ಕಲಾ ಮೇಳಗಳೂಂದಿಗೆ ವೈಭವಯುತವಾಗಿ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ಡಾ.ಆರ್‌.ಎಸ್‌. ಅರಳೆಲೆಮಠ ಸೇರಿದಂತೆ ನೂರಾರು ಭಕ್ತ ಸಮೂಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT