ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಗ್ರಸ್ತ ಪಶು ಆಸ್ಪತ್ರೆಗೆ ಬೇಕಾಗಿದೆ ಚಿಕಿತ್ಸೆ

ಗಜೇಂದ್ರಗಡ: ಕಾಯಂ ವೈದ್ಯರಿಲ್ಲದ ಚಿಕಿತ್ಸಾಲಯ, 15 ಗ್ರಾಮಗಳ ರೈತರ ಜಾನುವಾರಗಳಿಗೆ ತಪ್ಪದ ಸಂಕಷ್ಟ
Last Updated 24 ಜನವರಿ 2017, 7:24 IST
ಅಕ್ಷರ ಗಾತ್ರ

ಗಜೇಂದ್ರಗಡ:  ಇಲ್ಲಿಯ ಪಶು ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು, ಮೂಲ ಸೌಲಭ್ಯ ಮತ್ತು ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಹೀಗಾಗಿ ಅದಕ್ಕೆ ತುರ್ತು ಚಿಕಿತ್ಸೆ ಬೇಕಾಗಿದೆ.

ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ 14 ಹಳ್ಳಿಗಳು ಬರುತ್ತಿದ್ದರೂ ಇಂದಿಗೂ ಇಲ್ಲಿ ಪಶುಗಳಿಗೆ ಚಿಕಿತ್ಸೆ ನೀಡಲು ಕಾಯಂ ವೈದ್ಯರೇ ಇಲ್ಲ. ನಿತ್ಯವೂ ಈ ಆಸ್ಪತ್ರೆಗೆ 20–30 ಜಾನುವಾರುಗಳು, ಹಲವಾರು ಕುರಿಗಳನ್ನು ಚಿಕಿತ್ಸೆಗೆ ಕರೆತರಲಾಗುತ್ತದೆ. ಆದರೆ ಇಲ್ಲಿ ಅಗತ್ಯವಿರುವ ಆರು ಜನ ಸಿಬ್ಬಂದಿಯ ಬದಲು ಕೇವಲ ಇಬ್ಬರು ಮಾತ್ರ ಇದ್ದಾರೆ.

ಸಹಾಯಕ ವೈದ್ಯರೊಬ್ಬರು ಮತ್ತು ಅಟೆಂಡರ್‌ ಒಬ್ಬರನ್ನು ಹೊರತು ಪಡಿಸಿದರೆ ಇಲ್ಲಿ ಯಾರೂ ಇಲ್ಲ. ಆದರೆ ಈ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಇಲ್ಲ.
‘ಪಟ್ಟಣ ಸೇರಿದಂತೆ ಸುತ್ತಮುತ್ತಲಿನ 14 ಗ್ರಾಮಗಳಲ್ಲಿ 4690 ದನ, 1397 ಎಮ್ಮೆ, 7254 ಕುರಿ ಮತ್ತು 2260 ಆಡುಗಳು ಇವೆ’ ಎಂದು ಪಶು ಸಂಗೋ ಪನಾ ಇಲಾಖೆಯ ವರದಿ ಹೇಳುತ್ತದೆ.

ಸೂಡಿ ಗ್ರಾಮದ ವೈದ್ಯರು ಇಲ್ಲಿ ಎರವಲು ಸೇವೆಯಲ್ಲಿದ್ದಾರೆ. ಅವರು ಎರಡೂ ಕಡೆ ಕೆಲಸ ಮಾಡುವುದರ ಜೊತೆಗೆ ಪಕ್ಕದ ಹಳ್ಳಿಗಳಿಗೆ ಕೂಡಾ ಭೇಟಿ ನೀಡಬೇಕಾಗುತ್ತದೆ. ಈ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದರಿಂದ ಅದನ್ನು ನೆಲಸಮ ಮಾಡಿ, ಸಣ್ಣ ಕಟ್ಟಡದಲ್ಲಿ ಆಸ್ಪತ್ರೆ ನಡೆಸಲಾಗುತ್ತಿದೆ. ಈ ಹಿಂದೆ ಗುಡ್ಡದ ಬದಿಯಲ್ಲಿ ನೂತನ ಕಟ್ಟಡ ನಿರ್ಮಿಸುವ ಸಲುವಾಗಿ ಸ್ಥಳೀಯ ಶಾಸಕರು ಭೂಮಿ ಪೂಜೆ ಮಾಡುತ್ತಾರೆ ಎನ್ನುವಷ್ಟರಲ್ಲಿಯೇ, ಜಾಗ ಸರಿ ಇಲ್ಲವೆಂದು ಅದನ್ನು ಕೈಬಿಡಲಾಯಿತು.

ಕಟ್ಟಿ ಬಸವೇಶ್ವರ ರಂಗಮಂದಿರದ ಬದಿಯಲ್ಲಿರುವ ಹಳೆಯ ಕಟ್ಟಡ ಕೆಡವಿ ಸುತ್ತಲೂ ಕಾಂಪೌಂಡ್‌ ಕಟ್ಟಿ, ವಿಶಾಲವಾಗಿರುವ ಜಾಗೆಯಲ್ಲಿ ಕಟ್ಟಡ ನಿರ್ಮಿಸಲು ಸುಮಾರು ₹ 20 ಲಕ್ಷ ಮೀಸಲಿಡಲಾಗಿದೆ.

‘ಹಳೆಯ ಕಟ್ಟಡ ಕೆಡವಿ ಮೂರು ತಿಂಗಳಾದರೂ ಅದು ಮೇಲೆಳುವ ಲಕ್ಷಣಗಳು ಕಾಣುತ್ತಿಲ್ಲ. ತಾಲ್ಲೂಕಿನ ಶಾಸಕರು ಅನುಮತಿ ನೀಡಿದರೆ ಕಟ್ಟಡ ಆರಂಭಿಸುವುದಾಗಿ ಗುತ್ತಿಗೆದಾರರು ಹೇಳುತ್ತಾರೆ’ ಎಂದು ಕಟ್ಟಿ ಬಸವೇಶ್ವರ ಸಂಘದ ಅಧ್ಯಕ್ಷ, ಪುರಸಭೆ ಸದಸ್ಯ ಪ್ರಭು ಚವಡಿ ಆರೋಪಿಸುತ್ತಾರೆ.

‘ಈಗ ಇರುವ ಸಣ್ಣ ಕಟ್ಟಡವೂ ಶಿಥಿಲಗೊಂಡಿದೆ. ಈ ದವಾಖಾನೆಯನ್ನು ಜಾನುವಾರುಗಳಿಂದ ಕೂಡಿದ ಈ ಭಾಗದಲ್ಲಿ ಜನಪ್ರಿಯಗೊಳಿಸಬೇಕು. ಸರ್ಕಾರ ಜನರಿಗೆ ಆಸ್ಪತ್ರೆ ಸೌಲಭ್ಯ ನೀಡದಿದ್ದರೂ ಪರವಾಯಿಲ್ಲ. ಆದರೆ ಮೂಕ ಪ್ರಾಣಿಗಳ ಜೀವ ರಕ್ಷಣೆ ಮಾಡಬೇಕು. ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎನ್ನುತ್ತಾರೆ ಪುರಸಭೆ ಸದಸ್ಯ ಎಂ.ಎಸ್. ಹಡಪದ.

‘ಇಲ್ಲಿನ ವೈದ್ಯರ ಕೊರತೆ ನೀಗಿಸಲು, ಕಟ್ಟಡ ನಿರ್ಮಾಣ ಬೇಗ ನಿರ್ಮಿಸಲು ಅನಿವಾರ್ಯವಾಗಿ ಹೋರಾಟ ಮಾಡುವ ಸ್ಥಿತಿ ಬಂದಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಬಸವರಾಜ ಹೊಸಮನಿ ಎಚ್ಚರಿಸಿದ್ದಾರೆ.

‘ಜಾನುವಾರುಗಳ ನೆರವಿಗೆ ಬಾರದ ಸರ್ಕಾರ, ಇಂತಹ  ರೋಗಪೀಡಿತ ಆಸ್ಪತ್ರೆ ಹೊಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸುತ್ತಲಿನ ಕೃಷಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ನಮ್ಗೂ ಸಾಕಾಗಿ ಹೋಗೈತಿ. ದನಾ ಹಿಡ್ಕೊಂಡು ಬಂದ್ರ ... ದವಾಖಾನಿ ಬಾಗ್ಲಾ ಯಾವಾಗ್ಲೂ ಕೀಲಿ ಹಾಕಿರತೈತಿ. ಡಾಕ್ಟ್ರು, ಇತರ ಸಿಬ್ಬಂದಿ ನೇಮಿಸಿ, ಮೂಕ್‌ ಪ್ರಾಣಿಗೊಳ್‌ ಸೇವಾ ಮಾಡ್ಬೇಕು...’ ಎಂದು ರೈತರಾದ ದೇವಪ್ಪ ಕಮ್ಮಾರ, ರಾಜು ಹಾಳಕೇರಿ ಮತ್ತು ಕಾರ್ಮಿಕ ಮುಖಂಡ ಮಾರುತಿ ಚಿಟಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಇತ್ತೀಚಿಗಿ ಎ.ಪಿ.ಎಂ.ಸಿ ಇಲೆಕ್ಷನ್‌ ಇದ್ದಾಗ ಬಂದವ್ರು, ಈಗ ಈ ಕಡಿ ಬರವಲ್ಲರು. ಯಾರೂ ಈ ದವಾಖಾನಿ ಸಲುವಾಗಿ ಕಾಳಜಿ ಮಾಡವಲ್ಲರು’ ಎಂದು ಅವರು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT