ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣರಂತೆ ನಿಂದನೆ ಎದುರಿಸಿ ಬದುಕಿ’

ಬ.ಬಾಗೇವಾಡಿ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
Last Updated 24 ಜನವರಿ 2017, 7:39 IST
ಅಕ್ಷರ ಗಾತ್ರ

ಬಸವನಬಾಗೇವಾಡಿ:  ಶರಣ ಸಾಹಿತ್ಯ ತಿಳಿದುಕೊಂಡವರು ಆತ್ಮಹತ್ಯೆಗೆ ಶರಣಾಗುವುದಿಲ್ಲ. ರೈತರು  ಜೀವನದಲ್ಲಿ ಜಿಗುಪ್ಸೆ ಹೊಂದದೆ ಶರಣರ ವಿಚಾರ ಗಳನ್ನು ತಿಳಿದುಕೊಂಡು ಧೈರ್ಯದಿಂದ ಜೀವನ ನಡೆಸಬೇಕು ಎಂದು ಕಲಬುರ್ಗಿಯ ನಿವೃತ್ತ ಪ್ರಾಚಾರ್ಯ ನೀಲಮ್ಮ ಕತ್ನಳ್ಳಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಭಾನುವಾರ ಸಂಜೆ  ಶಾಂತಾಬಾಯಿ ಮೇಟಿ,  ಶಾಂತಾಬಾಯಿ ಕೊಟ್ಲಿ ಅವರ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸದಲ್ಲಿ ‘ಶರಣರು ಎದುರಿಸಿದ ಸವಾಲುಗಳು ’ ವಿಷಯ ಕುರಿತು ಅವರು ಮಾತನಾಡಿದರು.

‘ಅಂದಿನ ಸಂಪ್ರದಾಯಸ್ಥ ಸಮಾಜದಲ್ಲಿ ಶರಣರು ಸಾಕಷ್ಟು ಸವಾಲುಗಳನ್ನು ಎದುರಿಸಿದರು. ತಮ್ಮ ಕಾಯಕದೊಂದಿಗೆ ಸಮಾಜ ಅಂಕು ಡೊಂಕುಗಳನ್ನು ತಿದ್ದಲು ಯತ್ನಿಸಿದರು. ಶರಣರಲ್ಲಿ ಸ್ವಾವಲಂಬನೆ, ಸ್ವಾಭಿಮಾನ ಇತ್ತು. ಶರಣರಂತಹ ಮಹಾತ್ಮರಿಗೂ ಲೋಕದ ನಿಂದೆ ತಪ್ಪಲ್ಲಿಲ್ಲ. ಸಮಾಜದಲ್ಲಿ ಕೆಲವರು ನಿಂದಿಸುತ್ತಾರೆ ಎಂದ ಮಾತ್ರಕ್ಕೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಿಲ್ಲ. ನಿಂದನೆಯನ್ನು ಎದುರಿಸಿ ಸನ್ಮಾರ್ಗದತ್ತ ನಡೆಯಬೇಕು’ ಎಂದು ಹೇಳಿದರು.

‘ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಮೌಲ್ಯ ತಿಳಿಯುತ್ತದೆ. ನಾವು ಮಾಡುವ ಕಾಯಕದೊಂದಿಗೆ ಶರಣರ ಉನ್ನತ ವಿಚಾರಗಳನ್ನು ತಿಳಿದುಕೊಳ್ಳಬೇಕು. ಮನೆಯಲ್ಲಿ ಮಕ್ಕಳಿಗೆ ಅವರ ವಿಚಾರ ಗಳನ್ನು ತಿಳಿಸಿಕೊಟ್ಟಾಗ ಮಾತ್ರ ಅವರು ಗುರು, ಹಿರಿಯರಿಗೆ ಗೌರವ ಕೊಡುವುದ ರೊಂದಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಾರೆ’ ಎಂದರು.

ಸಾಹಿತಿ ಜಂಬುನಾಥ ಕಂಚ್ಯಾಣಿ ಮಾತನಾಡಿ,  ಸಮಾನತೆ, ಸಹಬಾಳ್ವೆಯೇ ನಿಜವಾದ ಧರ್ಮ. ಪ್ರತಿಯೊಬ್ಬರೂ ಮಾನವೀಯ ಮೌಲ್ಯ ಗಳನ್ನು ಅರಿತುಕೊಂಡು ಅದರಂತೆ ನಡೆದುಕೊಂಡಾಗ ಸಮಾಜದಲ್ಲಿ ಸಾಮರಸ್ಯ ಹೆಚ್ಚಿ ಶರಣರ ಚಿಂತನೆಗಳನ್ನು ಪಾಲಿಸಿದಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ  ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ವೀರಣ್ಣ ಮರ್ತುರ ಇತರರು ಮಾತನಾಡಿದರು.  ಎಂ.ಎಸ್‌.ಕೊಟ್ಲಿ, ಎಫ್‌.ಡಿ.ಮೇಟಿ, ವಿಶ್ವನಾಥ ಡೋಣೂರ  ಇದ್ದರು. ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ದ್ದರು.  ಎಚ್‌.ಎಸ್‌.ಬಿರಾದಾರ ಸ್ವಾಗತಿಸಿ, ಶಿಕ್ಷಕಿ ಗಿರಿಜಾ ಪಾಟೀಲ ನಿರೂಪಿಸಿದರು. ಎಸ್‌.ಕೆ.ಸೋಮನಕಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT