ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀನ್ಸ್‌ ಜೀನಿಯಸ್

Last Updated 24 ಜನವರಿ 2017, 19:30 IST
ಅಕ್ಷರ ಗಾತ್ರ

ಕಾಲೇಜು ಹೈಕಳಷ್ಟೇ ಅಲ್ಲ, ಎಲ್ಲಾ ವಯೋಮಾನದವರು ಇಷ್ಟಪಟ್ಟು ತೊಡುವ ಬಟ್ಟೆ ಜೀನ್ಸ್‌. ವರ್ಷಗಟ್ಟಲೆ ಅದನ್ನೇ ತೊಟ್ಟು ಸವೆಸಿದರೂ ಹರಿಯದ ಗಟ್ಟಿ ಬಟ್ಟೆ ಇದು. ಅನೇಕ ವರುಷಗಳ ಕಾಲ ಇದನ್ನು ತೊಟ್ಟು ಮೂಲೆ ಸೇರಿಸುವಾಗಲೂ ಮನಸ್ಸು ಮರುಗುತ್ತದೆ. ಜೀನ್ಸ್‌ ಅನ್ನು ಬೇರೆಯವರಿಗೆ ನೀಡಲೂ ಮನಸ್ಸು ಒಪ್ಪದು. ಇಂತಿಪ್ಪ ಜೀನ್ಸ್‌ ಅನ್ನು ಇನ್ನಷ್ಟು ಕಾಲ ಬಳಸಲು ಸಾಧ್ಯವಾಗುವಂತೆ ಇಲ್ಲೊಂದಿಷ್ಟು ಉಪಾಯಗಳಿವೆ. ಒಂದಿಷ್ಟು ಸಮಯ, ಸೃಜನಶೀಲ ಮನಸ್ಸು ಮತ್ತು ಆಸಕ್ತಿ ಯನ್ನು ಒಟ್ಟಾಗಿ ಹೆಣೆದರೆ ಹಳೆಯ ಜೀನ್ಸ್‌ನಲ್ಲಿ ಏನೆಲ್ಲಾ ಮಾಡಬಹುದು ಗೊತ್ತಾ?

ಪಾಕೆಟ್‌ ಆರ್ಗನೈಸರ್‌, ಬ್ಯಾಗ್‌, ಕುಶನ್‌ ಕವರ್‌, ಏಪ್ರಾನ್‌, ಪೆನ್‌ ಹೋಲ್ಡರ್‌, ಬಾಕ್ಸ್‌, ಮ್ಯಾಟ್‌, ಚಮಚ, ಹುಟ್ಟು ಕತ್ತರಿ ಇಡುವ ಹೋಲ್ಡರ್‌, ಜಾಕೆಟ್‌, ಹೂಗಿಡಗಳನ್ನಿಡುವ ಪಾಟ್‌ ಹೀಗೆ ನಾನಾ ಬಗೆಯಲ್ಲಿ ಸಿಂಗರಿಸಿ ಇಟ್ಟುಕೊಳ್ಳಬಹುದು. ಕೆಲವನ್ನು ಗೃಹೋಪಯೋಗಿಯಾಗಿಯೂ ಬಳಸಿಕೊಳ್ಳಬಹುದು. ಸೃಜನಶೀಲತೆಯ ಜೊತೆಗೆ ಕೌಶಲವನ್ನೂ ಸೇರಿಸಿದರೆ ಇವುಗಳಿಗೆ ಶ್ರೀಮಂತ ಲುಕ್‌ ನೀಡಿ ಬಳಸಬಹುದು, ಧರಿಸಲೂಬಹುದು.

ಬಹೂಪಯೋಗಿ
ಮನೆಯಲ್ಲಿ ಮಕ್ಕಳಿದ್ದರೆ ಎಷ್ಟೇ ಜಾಗ ವಿದ್ದರೂ ಸಾಲದು. ಪೆನ್ನು, ಪೆನ್ಸಿಲ್‌, ರಬ್ಬರ್‌, ಸ್ಕೆಚ್‌ಪೆನ್‌ಗಳು, ಸ್ಕೇಲ್‌, ಕಂಪಾಸ್‌, ಅವರ ಚಿಕ್ಕಪುಟ್ಟ ಆಟದ ಸಾಮಾನುಗಳ ರಾಶಿ ರಾಶಿಯೇ ಇರುತ್ತವೆ. ಇವುಗಳನ್ನು ಇಡುವುದೆಲ್ಲಿ ಎನ್ನುವ ಚಿಂತೆಗೆ ನಿಮ್ಮದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು.

ಹಳೆಯ ಜೀನ್ಸ್‌ ಅನ್ನು ಕತ್ತರಿಸಿ ಅವುಗಳಿಗೆ ಹತ್ತಾರು ಬಣ್ಣಬಣ್ಣದ ಕಿಸೆಗಳನ್ನು ಜೋಡಿಸಬಹುದು. ಗೋಡೆಯಲ್ಲಿ ಅದನ್ನು ನೇತು ಹಾಕಬಹುದು. ಅದರಲ್ಲೇ ಮಕ್ಕಳ ಎರೇಸರ್ ಮುಂತಾದವುಗಳನ್ನು ಇಟ್ಟುಕೊಳ್ಳುವಂತೆ ಅವರಿಗೇ ಮನವರಿಕೆ ಮಾಡಿಕೊಡಬಹುದು. ಇನ್ನು ಎಂಥ ವಸ್ತುಗಳನ್ನಿಡಬೇಕು ಎನ್ನುವುದರ ಮೇಲೆ ಕಿಸೆಯ ಗಾತ್ರವನ್ನು ಹಿಗ್ಗಿಸಬಹುದು.

ತೊಳೆಯುವ ಬಟ್ಟೆಗಳನ್ನು ತುಂಬಿಡುವ ಬಾಸ್ಕೆಟ್‌ಗಳ ರೂಪವನ್ನೂ ಅವುಗಳಿಗೆ ನೀಡಬಹುದು. ಅಥವಾ ಮಕ್ಕಳ ಆಟಿಕೆ ವಸ್ತುಗಳನ್ನು ತುಂಬಿಡಲೂ ಅವುಗಳನ್ನು ಬಳಸಿಕೊಳ್ಳಬಹುದು. ಅಥವಾ ಮನೆಗೆ ಬಂದ ಲೆಟರ್‌, ಬಿಲ್‌ಗಳನ್ನು ಹಾಕಿಡುವ ಹೋಲ್ಡರ್‌ ಆಗಿಯೂ ಬಳಸಿಕೊಳ್ಳಬಹುದು. ಪೆನ್‌ ಹೋಲ್ಡರ್‌ಗಳನ್ನಾಗಿಯೂ ವಿನ್ಯಾಸ ಮಾಡಿಕೊಳ್ಳಬಹುದು.

ಬಗೆಬಗೆ ಸ್ಟೈಲ್‌
ಜೀನ್ಸ್‌ ಹಳತಾಯಿತು, ಗಿಡ್ಡವಾಯಿತು ಎಂದಾದರೆ ಕೆಳಗೆ ಲೇಸ್‌ ಜೋಡಿಸಿ ಧರಿಸಿಕೊಳ್ಳಬಹುದು. ಇದು ಇಂದಿನ ಟ್ರೆಂಡ್‌ ಕೂಡ ಹೌದು. ನೀವು ಆಧುನಿಕ ದಿರಿಸು ತೊಟ್ಟುಕೊಳ್ಳುವವರಾಗಿದ್ದರೆ ಹಳೆಯ ಜೀನ್ಸ್‌ಗೆ ತ್ರೀ ಫೋರ್ತ್‌ ಇಲ್ಲವೇ ಶಾರ್ಟ್ಸ್‌ ರೂಪ ಕೊಡಬಹುದು. ಅದಕ್ಕೂ, ಅಂಚಿನಲ್ಲಿ ಲೇಸ್‌ ಸೇರಿಸಿಕೊಂಡರೆ ಶ್ರೀಮಂತ ಲುಕ್‌ ದೊರೆಯುತ್ತದೆ. ಅಲ್ಲದೆ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಜೀನ್ಸ್‌ನಿಂದ ಬಗೆಬಗೆ ದಿರಿಸು ಮಾಡಬಹುದು.

ಅಡುಗೆ ಮನೆಗೊಂದು ಶೋಭೆ
ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಅದಕ್ಕೊಂದು ಚೆಂದದ ಲುಕ್‌ ನೀಡುವುದು ಯಾವಾಗಲೂ ಕಷ್ಟವೇ. ಆಗೊಂದು ಈಗೊಂದು ಎಂದು ಅಲ್ಲಿ ವಸ್ತುಗಳು ಸೇರುತ್ತಲೇ ಇರುತ್ತವೆ. ಅವುಗಳನ್ನು ಎಲ್ಲಿ ಇಡಬೇಕು ಎನ್ನುವ ಗೊಂದಲವೇ ಹೆಚ್ಚು. ಕೆಲವೊಮ್ಮೆ ಅಡುಗೆ ಕಟ್ಟೆಯ ಮೇಲೆಯೇ ಅವುಗಳು ಹರಡಿಕೊಂಡಿರುತ್ತವೆ. ಇಂಥ ಸಂದರ್ಭದಲ್ಲಿ ಹಳೆಯ ಜೀನ್ಸ್‌ಗಳನ್ನು ಅಡುಗೆ ಮನೆಯಲ್ಲಿ ಬಳಸಿಕೊಳ್ಳಬಹುದು. 

ಪಾಕೆಟ್‌ ಆರ್ಗನೈಸರ್‌ ರೀತಿಯಲ್ಲಿ ಅದಕ್ಕೆ ವಿನ್ಯಾಸ ನೀಡಬಹುದು. ಇಲ್ಲವೆ ಆಯಾತಾಕಾರದಲ್ಲಿ ಜೀನ್ಸ್‌ ಬಟ್ಟೆಯನ್ನು ಕತ್ತರಿಸಿ ಮೇಲಿಂದ ಇನ್ನೊಂದು ಬಟ್ಟೆಯನ್ನು ಜೋಡಿಸಬೇಕು. ಮಧ್ಯೆ ಮಧ್ಯೆ ಅವುಗಳನ್ನು ಜೋಡಿಸಿದರೆ ಚಮಚ, ಲೈಟರ್‌, ಕತ್ತರಿಗಳನ್ನು ಇಡಬಹುದು. ಗೋಡೆಗೆ ಇದನ್ನು ತೂಗು ಹಾಕುವುದರಿಂದ ವಸ್ತುಗಳನ್ನು ಇಡುವುದು ಹಾಗೂ ತೆಗೆಯುವುದು ಸುಲಭ. ಅಡುಗೆ ಮನೆಯನ್ನೂ ಆದಷ್ಟೂ ಸ್ವಚ್ಛವಾಗಿ ಕಾಣುವಂತೆ ಇಟ್ಟುಕೊಳ್ಳಬಹುದು.

ಇನ್ನೂ ಬಗೆಬಗೆ
ಇಷ್ಟೇ ಅಲ್ಲ, ಜೀನ್ಸ್‌ ಬಟ್ಟೆ ಬಳಸಿ, ಹೇರ್‌ ಬ್ಯಾಂಡ್‌, ಹೂವು, ಸೋಫಾ ಕವರ್, ಜಾಕೆಟ್‌, ಮಕ್ಕಳ ದಿರಿಸು, ಆಟವಾಡುವ ಗೊಂಬೆ, ಕಿವಿಯೋಲೆ, ಬ್ರೇಸ್‌ಲೈಟ್‌, ಬೆಲ್ಟ್‌, ಸರ, ಕಾಲೊರೆಸು ಚಾರ್ಜರ್‌ ಹೋಲ್ಡರ್‌, ವಾಲ್‌ ಹ್ಯಾಂಗಿಂಗ್‌ ಮುಂತಾದವುಗಳನ್ನೂ ವಿನ್ಯಾಸಗೊಳಿಸಬಹುದು.

ರೂಪು, ವಿನ್ಯಾಸಗಳನ್ನು ಬಳಸುತ್ತಾ ಜೀನ್ಸ್‌ ಬಳಕೆಯ ದಾರಿಯನ್ನೂ ಹಿರಿದಾಗಿಸಿಕೊಳ್ಳಬಹುದು. ಹರಿದ ಅಥವಾ ಹಳೆಯ ಜೀನ್ಸ್‌ಗಳನ್ನು ಎಸೆಯುವ ಬದಲು ಕಲಾತ್ಮಕತೆಯ ಮೆರುಗು ನೀಡಿ ಆನಂದಿಸಿ.

ಬ್ಯಾಗ್‌ ಮೋಡಿ
ಅಲ್ಪಸ್ವಲ್ಪ ಹೊಲಿಗೆ ತಂತ್ರಗಳು ನಿಮಗೆ ಗೊತ್ತಿದ್ದರೆ,  ಜೀನ್ಸ್‌ನ್ನು ಬಹೂಪಯೋಗಿ ಮಾಡಿಕೊಳ್ಳುವುದು ಸುಲಭ. ಅವುಗಳಿಗೆ ವಿವಿಧ ಗಾತ್ರದ ಚೆಂದದ ಬ್ಯಾಗ್‌ ರೂಪು ಕೊಡಲು ಸಾಧ್ಯವಿದೆ. ಇವುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಜೀನ್ಸ್‌ನಿಂದ ತಯಾರಿಸಿದ ಪರ್ಸ್‌ಗಳೂ ಆಕರ್ಷಕವಾಗಿರುತ್ತವೆ. ಮೇಲೆ ಎಂಬ್ರಾಯ್ಡರಿ ಅಥವಾ ಪೇಂಟ್‌ನಿಂದ ಚಿತ್ತಾರ ಮೂಡಿಸಿಯೂ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT