ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಂತ್ಯಕ್ಕೆ ವೈಟಿಪಿಎಸ್‌ ವಾಣಿಜ್ಯಿಕ ಉತ್ಪಾದನೆ ಆರಂಭ

ಕೆಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಜಿ. ಕುಮಾರ
Last Updated 24 ಜನವರಿ 2017, 9:17 IST
ಅಕ್ಷರ ಗಾತ್ರ

ರಾಯಚೂರು: ‘ಯರಮರಸ್‌ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ವೈಟಿಪಿಎಸ್‌) ಮೊದಲ ಘಟಕದಲ್ಲಿ ವಾಣಿಜ್ಯಿಕ ಉತ್ಪಾದನೆಯು ಈ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಭರವಸೆ ಇದೆ’ ಎಂದು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಕಾರ್ಯನಿರ್ವಾಹಕ ನಿರ್ದೇಶಕ ಜಿ.ಕುಮಾರ ನಾಯಕ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟಕದಲ್ಲಿ 72 ಗಂಟೆ ನಿರಂತರವಾಗಿ ವಿದ್ಯುತ್‌ ಉತ್ಪಾದನೆಯಾದರೆ ವಾಣಿಜ್ಯ ಬಳಕೆಯ ಅಧಿಕೃತ ಘೋಷಣೆ (ಸಿಒಡಿ) ಮಾಡಲಾಗುತ್ತದೆ. ವೈಟಿಪಿಎಸ್‌ 2ನೇ ಘಟಕದ ವಿದ್ಯುತ್ ಉತ್ಪಾದನೆ ಅಣಿಗೊಣಿಸಲು ಇನ್ನೂ ಕೆಲ ಕಾಮಗಾರಿಗಳು ನಡೆಯಬೇಕು’ ಎಂದರು.

‘ಕಲ್ಲಿದ್ದಲು ಬಿಲ್‌ ಬಾಕಿ ಪಾವತಿಸಲು ಮುಖ್ಯಮಂತ್ರಿ ಅವರು ₹500 ಕೋಟಿ ಬಿಡುಗಡೆ ಮಾಡಿದ್ದಾರೆ. ಈಗ ನಿರಂತರವಾಗಿ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಇನ್ನೂ ಹೆಚ್ಚಿನ ಅನುದಾನದ ಕೋರಿಕೆಗೆ ಪೂರಕ ಸ್ಪಂದನೆ ದೊರೆತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮಹಾರಾಷ್ಟ್ರದಲ್ಲಿ ಗಣಿ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವುದರಿಂದ ತೀರ್ಪು ಬಂದ ನಂತರ ಸರ್ಕಾರದ ವತಿಯಿಂದ ಕಲ್ಲಿದ್ದಲು ಗಣಿಗಾರಿಕೆ ನಡೆಸುವ ಬಗ್ಗೆ  ನಿರ್ಧಾರ ಕೈಗೊಳ್ಳಲಾಗುತ್ತದೆ. ವೈಟಿಪಿಎಸ್‌ಗೆ ಕಲ್ಲಿದ್ದಲು ಪೂರೈಕೆಗೆ ಇನ್ನೂ ಒಂದು ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಒಟ್ಟು ಆರು ರಾಜ್ಯಗಳ ಇಂತಹ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದಿದೆ’ ಎಂದರು.

ಬರಪೀಡಿತ ಘೋಷಣೆ: ಸರ್ಕಾರದ ಹಂತದಲ್ಲಿ ತೀರ್ಮಾನ: ರಾಯಚೂರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಸಂಬಂಧಿಸಿದಂತೆ ಸಚಿವ ಎಚ್.ಕೆ.ಪಾಟೀಲ ಅವರ ಸೂಚನೆ ಮೇರೆಗೆ ಇನ್ನೊಂದು ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಕಳುಹಿಸಿದ್ದು, ಸರ್ಕಾರದ ಹಂತದಲ್ಲಿ ಕ್ರಮ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಜಿ.ಕುಮಾರ ನಾಯಕ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಭೆ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 47 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನವಾಗುತ್ತಿದೆ. ಕೌಶಲ ಇಲ್ಲದವರು ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಕೌಶಲ ಇರುವವರು ಹೆಚ್ಚಿನ ಆದಾಯ ನಿರೀಕ್ಷೆಯಿಂದ ಗುಳೆ ಹೋಗುತ್ತಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಬೇಸಿಗೆಯಲ್ಲಿ ಕುಡಿಯುವ ನೀರು, ವಿದ್ಯುತ್‌ ಹಾಗೂ ಕೂಲಿಕಾರರಿಗೆ ಕೆಲಸದ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ಜ.13ರಿಂದ ಟಿಎಲ್‌ಬಿಸಿ ಮೂಲಕ ಜಿಲ್ಲೆಗೆ ನೀರು ಹರಿಸಲಾಗುತ್ತಿದೆ. ತಿಂಗಳ ಕೊನೆಯವರೆಗೆ ನೀರು ಹರಿಸಲಾಗುತ್ತಿದ್ದು, ಜಲಾಶಯ ಹಾಗೂ ಕೆರೆಗಳನ್ನು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.  ಸಿಇಒ ಎಂ.ಕೂರ್ಮಾರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT