ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಲ್ಲಿ ಆತಂಕ ತಂದ ಭೂ ಕೊರೆವ ಯಂತ್ರ

ಭೂಮಿಯೊಳಗಿನ ಸಮಗ್ರ ಮಾಹಿತಿ ಪತ್ತೆಗೆ ಯಂತ್ರ ಅಳವಡಿಕೆ
Last Updated 24 ಜನವರಿ 2017, 9:19 IST
ಅಕ್ಷರ ಗಾತ್ರ

ಕವಿತಾಳ: ‘ಸಮೀಪದ ಪಾತಾಪುರ, ಕಲಂಗೇರಿ, ಬುಳ್ಳಾಪುರ, ದೇವತಗಲ್‌, ಹಿರೇಬಾದರದಿನ್ನಿ ಮತ್ತು ಚಿಕ್ಕಬಾದರದಿನ್ನಿ ಗ್ರಾಮಗಳ ಸುತ್ತಮುತ್ತಲ ಜಮೀನಿನಲ್ಲಿ ಕೆಲ ದಿನಗಳಿಂದ ಅಪರಿಚಿತ ವ್ಯಕ್ತಿಗಳು ಕೊಳವೆಬಾವಿ ಕೊರೆಯುತ್ತಿದ್ದು, ಭೂಮಿಯೊಳಗೆ ಯಂತ್ರ ಅಳವಡಿಸುತ್ತಿದ್ದಾರೆ’ ಎಂದು ಈ ಭಾಗದ ರೈತರು ದೂರಿದ್ದಾರೆ.

‘ತೆಲಂಗಾಣ ನೋಂದಣಿ ಸಂಖ್ಯೆ ಹೊಂದಿದ 8–10 ಯಂತ್ರಗಳಿಂದ, ಜಮೀನಿನಲ್ಲಿ ಅಂದಾಜು 75 ಅಡಿ ಆಳಕ್ಕೆ ರಂಧ್ರ ಕೊರೆದು ಅದರಲ್ಲಿ ಎಲೆಕ್ಟ್ರಿಕ್‌ ತಂತಿಯನ್ನು ಬಿಡಲಾಗುತ್ತಿದೆ. ತಂತಿಯ ತುದಿಯಲ್ಲಿ ನೀಲಿ ಬಣ್ಣದ ಎಲ್‌ಇಡಿ ಆಕಾರದ ಕೆಲ ವಸ್ತುಗಳನ್ನು ಜೋಡಿಸಲಾಗಿದೆ. ಈ ಕುರಿತು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಜಮೀನಿನಲ್ಲಿ ಯಂತ್ರ ಅಳವಡಿಸಲು ತಮ್ಮ ಒಪ್ಪಿಗೆ ಪಡೆದಿಲ್ಲ’ ಎಂದು ರೈತರಾದ ಯಂಕಪ್ಪ, ಗೋವಿಂದರಾಜ, ಪಂಪನಗೌಡ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ‘ರೈತರು ಯಂತ್ರಗಳ ಚಾಲಕರೊಂದಿಗೆ ವಾಗ್ವಾದ ನಡೆಸಿದ್ದು, ಅವರಿಗೆ ಕನ್ನಡ ಮಾತನಾಡಲು ಬಾರದ ಕಾರಣ ತಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿ, ಯಂತ್ರ ಅಳವಡಿಕೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಯಂತ್ರ ಏಕೆ ಅಳವಡಿಸುತ್ತಿದ್ದಾರೆ’ ಎಂಬ ಆತಂಕ ಎದುರಾಗಿದೆ ಎಂದು ವೆಂಕಟೇಶ ಶಂಕ್ರಿ, ಯಲ್ಲಪ್ಪ ಮಡಗಿನ ಮತ್ತು ಕರಿಯಪ್ಪ ಶಂಕ್ರಿ ಹೇಳುತ್ತಾರೆ.

ಸ್ಪಷ್ಟನೆ: ಇದಕ್ಕೆ ಪ್ರತಿಕ್ರಿಯಿಸಿರುವ ಆಲ್ಪಾಜಿಯೋ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ಕುಲ್ಕರ್ಣಿ, ‘ಭೂಮಿಯಲ್ಲಿನ ಸಮಗ್ರ ಮಾಹಿತಿ ಕಲೆಹಾಕಲು, 50 ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಆಧರಿಸಿ ಕೇಂದ್ರ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ವತಿಯಿಂದ ಆಲ್ಪಾಜಿಯೋ ಇಂಡಿಯಾ ಲಿಮೆಟೆಡ್‌ ಕಂಪೆನಿ 2–ಡಿ ಸರ್ವೆ ಕೈಗೊಂಡಿದೆ. 

ಪ್ರತಿ 3ಕಿ.ಮೀ ಅಂತರದಲ್ಲಿ 200 ಅಡಿ ಆಳ ಕೊಳವೆಬಾವಿ ಕೊರೆದು ಯಂತ್ರವನ್ನು ಬಿಡಲಾಗುತ್ತಿದೆ. ಇದರಿಂದ ಭೂಮಿಯಲ್ಲಿನ ಸಮಗ್ರ ಮಾಹಿತಿ ತಿಳಿಯಲು ಸಹಾಯವಾಗುತ್ತದೆ. ಈ ಹಂತದಲ್ಲಿ ಸೂಕ್ತ ಅಂಶಗಳು ಲಭ್ಯವಾದಲ್ಲಿ 3–ಡಿ ಸರ್ವೇ ಮೂಲಕ ನಿರೀಕ್ಷಿತ ಅಂಶಗಳನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತದೆ. ಈ ಕುರಿತು ರೈತರ ಒಪ್ಪಿಗೆ ಪಡೆದು ಜಮೀನಿನಲ್ಲಿ ಯಂತ್ರ ಅಳವಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT