ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಕೆಗಳನ್ನು ತ್ಯಜಿಸಿ ಧನ್ಯವಾದ ಅರ್ಪಿಸಿ

Last Updated 24 ಜನವರಿ 2017, 19:30 IST
ಅಕ್ಷರ ಗಾತ್ರ

ಒಂದು ಶುಭದಿನ ಕೂರತ್ತಾಳ್ವಾನ್‌ ಧನ–ಕನಕ, ಆಸ್ತಿ–ಪಾಸ್ತಿ ಎಲ್ಲವನ್ನೂ ತ್ಯಜಿಸಿ ಕಂಚಿಪುರದಿಂದ ಶ್ರೀರಂಗಂನತ್ತ ಹೊರಟ. ಆತನ ಪತ್ನಿ ಆಂಡಾಳಮ್ಮ ಸಹ ಆತನ ಹಿಂದೆ ಹೊರಟಳು.

ದಟ್ಟ ಕಾಡಿನ ಮಧ್ಯೆ ಹೋಗುತ್ತಿದ್ದಾಗ  ತಮ್ಮ ಮೇಲೆ ಯಾರಾದರೂ ದಾಳಿ ನಡೆಸಿ ದೋಚಬಹುದು ಆಂಡಾಳಮ್ಮ ಎಂದು ಹೇಳಿದಳು.  ನಮ್ಮ ಮೇಲೆ ಯಾರಾದರೂ ಏಕೆ ದಾಳಿ ಮಾಡುತ್ತಾರೆ? ನಮ್ಮ ಬಳಿ ಯಾವುದೇ ಸಂಪತ್ತು ಇಲ್ಲವಲ್ಲ ಎಂದು ಕೂರತ್ತಾಳ್ವಾನ್‌ ಮೃದುವಾಗಿ ಹೇಳಿದ. ಕೂರತ್ತಾಳ್ವಾನ್‌ ಬಾಲ್ಯದಿಂದ ಆಹಾರ ಸೇವಿಸುತ್ತಿದ್ದ ಚಿನ್ನದ ತಟ್ಟೆಯನ್ನು ತನ್ನೊಂದಿಗೆ ತಂದಿರುವುದಾಗಿ ಆಂಡಾಳಮ್ಮ ಹೇಳಿದಳು.

‘ಅದನ್ನು ಎಸೆದುಬಿಡು, ನಿನ್ನ ಭಯವೆಲ್ಲ ಹೋಗುತ್ತದೆ’ ಎಂದು ಕೂರತ್ತಾಳ್ವಾನ್‌  ಹೇಳಿದ. ಆಂಡಾಳಮ್ಮ ಕೂಡಲೇ ಅದನ್ನು ಎಸೆದು­ಬಿಟ್ಟಳು. ಅವಳ ಭಯವೂ ಓಡಿ­ಹೋಯಿತು. ಆಕೆ ಹಗುರ ಹೃದಯ­ದಿಂದ ನಿರಾಳವಾಗಿ ಹೆಜ್ಜೆ ಹಾಕಿದಳು.

ಬಯಕೆಗಳಿಂದ ಬದುಕು ಶ್ರೀಮಂತವಾಗುವು­ದಿಲ್ಲ.  ತನ್ನ ಗಂಡ ಚಿಕ್ಕಂದಿನಿಂದ ಬಳಸುತ್ತಿದ್ದ  ತಟ್ಟೆಯನ್ನು ತನ್ನೊಂದಿಗೆ ಒಯ್ಯಬೇಕೆಂಬ ಆಸೆ ಆಂಡಾಳಮ್ಮನ ಮನದಲ್ಲಿ ಭಯದ ಭೀತಿ ಬಿತ್ತಿತು.

ಬಯಕೆಯು ಮನಸ್ಸಿನಲ್ಲಿ ಭಯವನ್ನು ಬಿತ್ತುತ್ತದೆ. ಸ್ವಾರ್ಥವು ಅಸೂಯೆಯನ್ನು ಹುಟ್ಟು­ಹಾಕುತ್ತದೆ. ಸ್ಪರ್ಧೆ, ಸಿಟ್ಟು, ಆತಂಕ, ಅಭದ್ರತೆ ಎಲ್ಲವನ್ನೂ ಹುಟ್ಟುಹಾಕುತ್ತದೆ. ಬದುಕನ್ನು ಇದು ಸಂಕುಚಿತವಾಗಿಸುತ್ತದೆ; ಉಸಿರುಗಟ್ಟಿಸುವಂತೆ ಮಾಡುತ್ತದೆ; ಅನಾರೋಗ್ಯಕರವಾಗಿ ಮಾಡುತ್ತದೆ.

ಅಂತಹ ಭಾವನೆಗಳು ನಮ್ಮ ಮುಖಭಾವವನ್ನು ಮಂಕುಗೊಳಿಸುತ್ತವೆ. ಮನ­ಸ್ಸನ್ನು ದುರ್ಬಲಗೊಳಿಸುತ್ತವೆ. ಆವಾಗ ಎಲ್ಲರಿಂದಲೂ ಎಲ್ಲವುಗಳಿಂದಲೂ ಭಯ ಹುಟ್ಟುತ್ತದೆ.

ಬಯಕೆ ತುಂಬಿದ ಮನಸ್ಸು ಜಾಡಿಯೊಳಗಿನ ವಸ್ತುವನ್ನು ತೆಗೆಯಲು ಕೈ ಸಿಲುಕಿಸಿಕೊಂಡ ಕೋತಿಯ ಮನಸ್ಸಿನಂತೆ ಇರುತ್ತದೆ. ಆ ವಸ್ತುವನ್ನು ಬಿಟ್ಟರೆ ಕೋತಿಯ ಕೈ  ಹೊರಕ್ಕೆ ಬರುತ್ತದೆ. ಕೋತಿಗೆ ಈ ಪರಿಕಲ್ಪನೆ ಅರ್ಥವಾಗಲಿಕ್ಕಿಲ್ಲ. ಆದರೆ, ಮನುಷ್ಯಬುದ್ಧಿಗೆ ಈ ತರ್ಕ ಅರ್ಥವಾಗುತ್ತದೆ. ನಾವು ಬಯಕೆಗಳನ್ನೆಲ್ಲ ಹೀಗೆ ಬಿಟ್ಟುಬಿಡಬೇಕು.

ಮೊದಲು ಬಯಕೆಯನ್ನು ಪರಿತ್ಯಜಿಸುವ ಸಾಧ್ಯತೆಯನ್ನು ಅಪ್ಪಿಕೊಳ್ಳಿ.  ಬಯಕೆಗಳನ್ನು ಪರಿತ್ಯಜಿಸಿದಾಗ ಆರೋಗ್ಯಕರವಾಗಿ ಬದುಕಬಹುದು ಎನ್ನುವುದನ್ನೂ ಅರ್ಥ ಮಾಡಿಕೊಳ್ಳಿ. ವಿವೇಕಾನಂದರು ಹೇಳಿದ್ದೂ ಇದನ್ನೇ.

ದಯವಿಟ್ಟು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ತ್ಯಜಿಸುವುದು, ಬಿಟ್ಟು­ಬಿಡುವುದು ಎಂದರೆ ಸುಂದರ­ವಾದದ್ದು, ಉತ್ತಮವಾದದ್ದನ್ನು ಬಿಟ್ಟು­ಬಿಡುವುದಲ್ಲ, ಬದುಕಿಗೆ ಅತ್ಯಗತ್ಯವಾದದ್ದನ್ನು ಬಿಟ್ಟುಬಿಡುವುದಲ್ಲ.

ನಮ್ಮ ಬದುಕಿಗೆ ಅನಗತ್ಯವಾದದ್ದು, ಅತೃಪ್ತಿ ತರುವುದನ್ನು ಬಿಡುವುದು. ಶಾಂತಿಗಾಗಿ, ಆರೋಗ್ಯಕ್ಕಾಗಿ ಕೆಟ್ಟ ಭಾವನೆಗಳನ್ನು ಬಿಡುವುದು. ಎಲ್ಲ ರೀತಿಯ  ಭಯ, ಅಸೂಯೆಗಳನ್ನು ಬಿಟ್ಟು ಇತರರ ಯಶಸ್ಸನ್ನು ಆನಂದಿಸುವುದು.

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಬೆಲೆ ಕೊಡುವುದು. ನಾನು ಇತರರಿಗಿಂತ ಮೇಲು ಅಥವಾ ಕೀಳು ಎಂದು ಭಾವಿಸದೇ ಈ ಸೃಷ್ಟಿಯ ಸಕಲ ಜೀವಜಂತುಗಳಲ್ಲಿ, ಮಾನವಸಾಗರದಲ್ಲಿ ನಾನೂ ಒಂದು ಬಿಂದು ಎಂದು ಮಾತ್ರವೇ ಪರಿಗಣಿಸುವುದು. ಬದುಕನ್ನು ಸ್ಪರ್ಧಾತ್ಮಕವಾದ ರೇಸ್‌ ಎಂದು ಪರಿಗಣಿಸಿದೇ ಹಗುರವಾದ ಆಂತರಿಕ ಪಯಣ ಎಂದು ಅಂದುಕೊಳ್ಳುವುದು.

ಹೆಚ್ಚೆಚ್ಚು ಕೃತಜ್ಞತೆ, ಧನ್ಯವಾದ ಅರ್ಪಿಸುತ್ತ ಹೋಗುವುದು. ಕೃತಜ್ಞತಾಪೂರ್ವಕವಾಗಿ ಬದುಕಿದಾಗ ಅನಗತ್ಯ ಬಯಕೆಗಳೆಲ್ಲ ಕರಗಿಹೋಗುತ್ತವೆ.
ಬಯಕೆಯನ್ನು ತ್ಯಜಿಸಿದಾಗ ಬದುಕಿನೊಳಗಿನ ಖಾಲಿತನ, ಭಯ, ಸ್ವಾರ್ಥ ಎಲ್ಲವೂ ಕರಗಿಹೋಗುತ್ತವೆ.  ಕೃತಜ್ಞತೆ ನಮ್ಮೊಳಗೆ ಪೂರ್ಣತ್ವ, ಸಂತಸ ಎಲ್ಲವನ್ನೂ ತುಂಬುತ್ತ ಹೋಗುತ್ತದೆ.

ನನ್ನ ಸ್ನೇಹಿತೆ ಮುಕು ಹೇಳಿಕೊಟ್ಟ ಸುಂದರ ಮಂತ್ರ ಹೀಗಿದೆ. ಇದಕ್ಕಿಂತ ಉತ್ತಮ ಸನ್ನಿವೇಶವಿರಲು ಸಾಧ್ಯವೇ ? (How does it get better than this..!) ಇದು ಪ್ರಶ್ನೆಯಲ್ಲ; ವಿಸ್ಮಯಭರಿತ  ಉದ್ಗಾರ.

ಹೀಗೆ ನಾವು ಮನತುಂಬಿ ಉದ್ಗರಿಸಿದಾಗ ಪವಾಡ ನಡೆಯುತ್ತದೆ. ಪಾರ್ಕಿಂಗ್‌ ಸ್ಥಳ ತುಂಬಿದ್ದರೆ ತಾನಾಗಿಯೇ ನಮ್ಮ ಕಾರಿಗೆ ಜಾಗ ಸಿಗುತ್ತದೆ. ಏಕಾಂತದಲ್ಲಿ ಕುಳಿತು ಹೀಗೆ ಹೇಳಿದಾಗ ಆಂತರಿಕ ಗೊಂದಲಗಳೆಲ್ಲ ಕರಗಿ ಮನಸ್ಸು ಶಾಂತವಾಗುತ್ತದೆ. ಹೊಸ ದಾರಿ ಗೋಚರವಾಗುತ್ತದೆ.

ಸಾಧಾರಣವಾದ ತಿಂಡಿ, ತಿನಿಸುಗಳು ಹೊಟ್ಟೆಗೆ ಸಂತೃಪ್ತಿ ನೀಡುತ್ತವೆ. ನಿಮ್ಮಿಂದ ಸದಾ ದೂರವಿರುವ ಸಂಗಾತಿ ಸ್ನೇಹಿತನಂತೆ ವರ್ತಿಸತೊಡಗುತ್ತಾನೆ.
ಇದಕ್ಕಿಂತ ಉತ್ತಮ ಸನ್ನಿವೇಶವಿರಲು ಸಾಧ್ಯವೇ?

ಇದು ಕೃತಜ್ಞತೆಯ ಮಂತ್ರ. ಇದನ್ನು ದೊಡ್ಡದಾಗಿ ಹೇಳಿಕೊಳ್ಳಬೇಕಿಲ್ಲ. ಮನಸ್ಸಿನಲ್ಲಿಯೇ ಈ ಮಂತ್ರವನ್ನು ಹಲವು ಬಾರಿ ಹೇಳಿಕೊಳ್ಳಿ. ನಿಮ್ಮ ಹಳೆಯ ಮಾನಸಿಕ ನೋವುಗಳನ್ನು ಇದು ಗುಣಪಡಿಸುತ್ತದೆ. ವರ್ತಮಾನವನ್ನು ಸುಂದರವಾಗಿಸುತ್ತದೆ ಮತ್ತು ಭವಿಷ್ಯವನ್ನು ಮತ್ತಷ್ಟು ಸ್ಪಷ್ಟವಾಗಿಸುತ್ತದೆ.

ಮನಸ್ಸಿಗೆ ಸಮಸ್ಯೆಗಳು, ಕಿರಿಕಿರಿಗಳು, ಅಳು ಯಾವುದೂ ಬೇಕಿರುವುದಿಲ್ಲ. ನಾನು ಅರ್ಧಗಂಟೆಯಿಂದ ಬಸ್‌ಗೆ ಕಾಯುತ್ತಿದ್ದರೆ, ಇದೇ ಮಂತ್ರವನ್ನು ಹೇಳಿಕೊಳ್ಳುತ್ತೇನೆ. ಆಗ ನನ್ನ ಮನಸ್ಸು ಮುಕ್ತವಾಗಿರುತ್ತದೆ;  ಉಲ್ಲಸಿತವಾಗಿರುತ್ತದೆ. ಬಸ್ಸು ಬಂದಿಲ್ಲ – ಎಂದು ಗೊಣಗುತ್ತ ಇರುವುದಿಲ್ಲ. ಬಸ್ಸು ಬಂದಿಲ್ಲ ಎನ್ನುವ ಬೇಸರದಿಂದ ಶಪಿಸುತ್ತ ಕುಳಿತುಕೊಂಡಲ್ಲಿ ನಾವು ನಕಾರಾತ್ಮಕ ಧೋರಣೆ ಪ್ರದರ್ಶಿಸುತ್ತ ಇರುತ್ತೇವೆ. ಆ ವಿಶ್ವಶಕ್ತಿಗೂ ಇದೇ ಸಂದೇಶವನ್ನು ಕೊಡುತ್ತ ಇರುತ್ತೇವೆ.

ಇದಕ್ಕಿಂತ ಉತ್ತಮ ಸನ್ನಿವೇಶವಿರಲು ಸಾಧ್ಯವೇ ? ಎಂದು ಕೇಳಿಕೊಂಡಾಗ ಸನ್ನಿವೇಶದೊಂದಿಗೆ ನೀವು ಸೌಹಾರ್ದ ಸಾಧಿಸುತ್ತೀರಿ. ನಿಮ್ಮ ಬದುಕಿನೊಳಗೆ ಸೌಹಾರ್ದ ತುಂಬಿಕೊಂಡಾಗ ನಿಸರ್ಗದ ನಿಯಮದೊಂದಿಗೆ ನೀವು ಬದುಕುತ್ತೀರಿ. ನಿಮ್ಮೊಳಗೆ ವಿಶ್ವಚೈತನ್ಯ ಹರಿಯತೊಡಗುತ್ತದೆ.

ಸ್ವಾರ್ಥ ತುಂಬಿದ ಬಯಕೆಗಳು ನಿಮ್ಮೊಳಗೆ ಇಳಿಯಲು ಬಿಡಬೇಡಿ. ಅವು ನಿಮ್ಮ ಬದುಕನ್ನು ಸಂಕುಚಿತಗೊಳಿಸುತ್ತವೆ. ಅದರ ಬದಲು ಕೃತಜ್ಞತೆ ನಿಮ್ಮ ಮೈಮನದಲ್ಲಿರಲಿ.

ಒಮ್ಮೆ ಸಂತರೊಬ್ಬರು ತಮ್ಮ ಶಿಷ್ಯರಿಗೆ ಹೇಳಿದರು. ಮಕ್ಕಳೇ ಸುಂದರ ವಸ್ತುಗಳು ಯಾವಾಗಲೂ ಪೂರ್ಣವಾಗಿರುವುದಿಲ್ಲ. ಆದರೆ, ಪೂರ್ಣತ್ವ ತುಂಬಿದ್ದೆಲ್ಲ ಸುಂದರವಾಗಿಯೇ ಇರುತ್ತದೆ.

ಆದರೆ, ಶಿಷ್ಯನೊಬ್ಬ ಪ್ರಶ್ನಿಸಿದ. ‘ಹಾಗಾದರೆ ನಮಗೆ ಬಯಕೆಗಳೇ ಇರಬಾರದೇ? ನಾವು ವಸ್ತುಗಳನ್ನು ಹಿಡಿದುಕೊಳ್ಳಲಿ ಎನ್ನುವ ಕಾರಣಕ್ಕೆ ನಮಗೆ ಕೈ ನೀಡಲಾಗಿದೆ ಅಲ್ಲವೇ?’ ಎಂದು ಆತ ಪ್ರಶ್ನಿಸಿದ.

ಆ ಸಂತರು ಮುಗುಳ್ನಗುತ್ತ ಉತ್ತರಿಸಿದರು: ‘ಮಗು, ಆಯ್ಕೆ ನಿನ್ನ ಮುಂದಿದೆ. ಕೈಯಿಂದ ಕಸಿದುಕೊಳ್ಳಲೂಬಹುದು ಅಥವಾ ಕೈಯಿಂದ ದಾನ ಮಾಡಲೂಬಹುದು.’

ಇದಕ್ಕಿಂತ ಉತ್ತಮ ಸನ್ನಿವೇಶವಿರಲು ಸಾಧ್ಯವೇ?
-ಭರತ್‌ ಮತ್ತು ಶಾಲನ್‌ ಸವೂರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT