ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಂಜಲಿ ಫುಡ್‌ಪಾರ್ಕ್‌ ಸ್ಥಾಪನೆಗೆ ಚಿಂತನೆ

Last Updated 24 ಜನವರಿ 2017, 9:26 IST
ಅಕ್ಷರ ಗಾತ್ರ

ಕುಷ್ಟಗಿ:  ರೈತರಿಂದ ಕೃಷಿ ಉತ್ಪನ್ನಗಳನ್ನು ನೇರವಾಗಿ ಯೋಗ್ಯ ಬೆಲೆಗೆ ಖರೀದಿಸುವ ಜೊತೆಗೆ ಮೌಲ್ಯವರ್ಧನೆಗೊಳಿಸುವ ಸಲುವಾಗಿ ರಾಜ್ಯದಲ್ಲಿ ಫುಡ್‌ಪಾರ್ಕ್‌ ಸ್ಥಾಪನೆಗೆ ಪತಂಜಲಿ ಯೋಗಪೀಠದ ಗುರು ಬಾಬಾ ರಾಮದೇವ ಚಿಂತನೆ ನಡೆಸಿದ್ದಾರೆ ಎಂದು ಯೋಗಪೀಠದ ಕರ್ನಾಟಕದ ಪ್ರಭಾರಿ ಭವರಲಾಲ್‌ ಆರ್ಯ ಹೇಳಿದರು.

ಪಟ್ಟಣದಲ್ಲಿ ನಡೆದ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರನ್ನು ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಹೊರತರುವ ಜೊತೆಗೆ ಆಹಾರ ಉತ್ಪನ್ನಗಳನ್ನು ಸಂಸ್ಕರಿಸಿ ಪತಂಜಲಿ ಮಾರಾಟ ವ್ಯವಸ್ಥೆ ಮೂಲಕ  ಸಾರ್ವಜನಿಕರಿಗೆ ತಲುಪಿಸಲಾಗುವುದು ಎಂದರು.

ಪಾರ್ಕ್‌ಗೆ ಸ್ಥಾಪನೆಗೆ ಯೋಗ್ಯದರದಲ್ಲಿ ಜಮೀನು ಖರೀದಿಸಲು ಯೋಚಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಾಬಾ ರಾಮದೇವ ನೇತೃತ್ವದ ನಿಯೋಗ ಜನವರಿ ಕೊನೆ ವಾರದಲ್ಲಿ ರಾಜ್ಯಕ್ಕೆ ಬರಲಿದೆ. ಈ ವಿಷಯದಲ್ಲಿ ಸರ್ಕಾರದ ಸ್ಪಂದನೆ ಅಗತ್ಯ ಎಂದು ಹೇಳಿದರು.

ರಾಜ್ಯದಾದ್ಯಂತ ಪತಂಜಲಿ ಯೋಗಪೀಠ ಸಹಯೋಗ ಶಿಕ್ಷಕರ ತರಬೇತಿ ಶಿಬಿರ ಹಮ್ಮಿಕೊಳ್ಳುತ್ತಿದೆ. 26 ಜಿಲ್ಲೆಗಳಲ್ಲಿ ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರಿಗೂ ಯೋಗ ಶಿಕ್ಷಣ ಪಡೆಯುವುದಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಕೊಪ್ಪಳದಲ್ಲಿ ಶೀಘ್ರ ಬಾಬಾ ರಾಮದೇವ ಗುರೂಜಿ ಅವರಿಂದ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿ ಮಧುಮೇಹ ಮತ್ತು ಬೊಜ್ಜು ನಿವಾರಣೆ ಶಿಬಿರ ಹಮ್ಮಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿ, ಮಾನಸಿಕ ನೆಮ್ಮದಿಗಿಂತ ಸಂಪತ್ತು ಸಂಗ್ರಹಿಸುವುದಕ್ಕೆ ಮನುಷ್ಯ ಹೆಚ್ಚು ಮಹತ್ವ ನೀಡುತ್ತಿದ್ದಾನೆ.  ಯೋಗ ಅಭ್ಯಾಸ ಮನುಷ್ಯನನ್ನು ಉತ್ತಮ ಮಾರ್ಗದತ್ತ ಕರೆದೊಯ್ಯಬಲ್ಲದು ಎಂದರು.

ಸಾನ್ನಿಧ್ಯ ವಹಿಸಿದ್ದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಯೋಗ ಜ್ಞಾನ ಹೊಂದಿ ಆರೋಗ್ಯವಂತರಾಗಿ ನೆಮ್ಮದಿ ಬದುಕು ಹೊಂದಬೇಕು ಎಂದರು.

ಪತಂಜಲಿ ಯೋಗ ಪೀಠದ ರಾಜ್ಯ ಸಮಿತಿ ಸದಸ್ಯ ಡಾ.ಎಸ್.ಬಿ.ಹಂದ್ರಾಳ , ಜಿಲ್ಲಾ ಪ್ರಭಾರಿ ವೀರೇಶ ಬಂಗಾರಶೆಟ್ಟರ ಮಾತನಾಡಿದರು. ದೇವೇಂದಪ್ಪ ಬಳೂಟಗಿ, ಶರಣಪ್ಪ ಕಾರಟಗಿ, ಮೀನಾಕ್ಷಿ ಕಾರಟಗಿ, ಮಲ್ಲಿಕಾರ್ಜುನ ನೂಲಿ, ಸಂಗಣ್ಣ ತೆಂಗಿನಕಾಯಿ, ಬಿ.ಎಂ.ಶಿರೂರು, ಶಕೀಲಾ ಶೆಟ್ಟಿ, ಡಾ.ಯಮನಪ್ಪ ಶಿರವಾರ, ಕುಸಮಕ್ಕ ಶ್ಯಾಟಿ, ಕುಮಾರ ಬಡಿಗೇರ,  ಅಚಲಾರಾಂ, ಮೋತಿರಾಂ ತೇಲಕರ, ಲತಾ ಸ್ಥಾವರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT