ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಲು ಉತ್ಪಾದಕರಿಗೆ ವಿಮೆ ಸೌಲಭ್ಯ ಶೀಘ್ರ’

Last Updated 24 ಜನವರಿ 2017, 10:05 IST
ಅಕ್ಷರ ಗಾತ್ರ

ಬಿಡದಿ: ‘ಹಾಲು ಉತ್ಪಾದಕ ರೈತ ಮೃತಪಟ್ಟರೆ ₹1 ಲಕ್ಷ ವಿಮೆ ಪರಿಹಾರ ನೀಡಲು ಯೋಜನೆ ಜಾರಿಗೊಳಿಸಲಾಗುತ್ತಿದ್ದು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಹೇಳಿದರು.

ರೋಟರಿ ಕ್ಲಬ್ ಬಿಡದಿ ಸೆಂಟ್ರಲ್‌ ಮತ್ತು ಗೋಪಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ ಚೌಕಿಮಠದ ಬಯಲಿನಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.

‘ಹೈನುಗಾರಿಕೆ ಉತ್ತೇಜನಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರು ಇನ್ನು ಹೆಚ್ಚಿನ ರೀತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು 18 ರಿಂದ 70 ವರ್ಷ ವಯಸ್ಸಿನ ರೈತರು ಮರಣ ಹೊಂದಿದಲ್ಲಿ ₹1 ಲಕ್ಷ ವಿಮಾ ಪರಿಹಾರ, ಅಪಘಾತದಲ್ಲಿ ಮೃತಪಟ್ಟರೆ ₹2 ಲಕ್ಷ ನೀಡಲಾಗುವುದು’ ಎಂದು ತಿಳಿಸಿದರು.

‘ಬಿಡದಿಯಲ್ಲಿ ಪಶು ಆಹಾರ ಘಟಕ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದ್ದು, ಭೂಮಿಯನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರೊಂದಿಗೆ ಚರ್ಚಿಸಲಾಗುತ್ತಿದೆ’ ಎಂದು ತಿಳಿಸಿದರು.

ರೋಟರಿ ಕ್ಲಬ್ ಬಿಡದಿ ಸೆಂಟ್ರಲ್‌ ಅಧ್ಯಕ್ಷ ಗೋವಿಂದಯ್ಯ ಮಾತನಾಡಿ ‘ಹೈನುಗಾರಿಕೆಯನ್ನೇ ನಂಬಿರುವ ರೈತರನ್ನು ಉತ್ತೇಜಿಸುವ ದೃಷ್ಟಿಯಿಂದ ಕಳೆದ ಎರಡು ವರ್ಷದಿಂದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಎಂಎಫ್ ಸಹಕಾರದೊಂದಿಗೆ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಬಿಡದಿ ಗೋಪಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್, ಸದಸ್ಯರಾದ ಲೋಕೇಶ್, ಬಿ.ಎಂ. ರಮೇಶ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಯೋಗಾನಂದ, ಜಯಕರ್ನಾಟಕ ಸಂಘಟನೆಯ ಮುಖಂಡ ಅರುಣ್‍ ಕುಮಾರ್‌, ಮುಖಂಡರಾದ ಇಟ್ಟಮಡು ಸೋಮಣ್ಣ, ಸ್ಪರ್ಧೆಯ ಮಾರ್ಗದರ್ಶಕರಾದ ಡಾ.ಎನ್. ಶಿವಶಂಕರ್, ಡಾ.ನಾಗೇಶ್, ಡಾ.ಸಯ್ಯದ್ ಖಾದರ್ ಪಾಷಾ, ಸುರೇಶ್, ಬೆಟ್ಟೇಗೌಡ, ಡಾ.ಶ್ರೀನಿವಾಸ್, ಸಮಾಜ ಸೇವಕ ಚಿಕ್ಕಣ್ಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT