ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟ ಖಾತ್ರಿ ಇರದ ಉತ್ಪನ್ನಗಳ ಮಾರಾಟ

ರಸ್ತೆ ಬದಿ ಅಂಗಡಿ, ತಳ್ಳುಗಾಡಿಗಳಲ್ಲಿ ಕಳಪೆ ಪ್ರಮಾಣದ ಆಹಾರ ಪೂರೈಕೆ
Last Updated 24 ಜನವರಿ 2017, 10:30 IST
ಅಕ್ಷರ ಗಾತ್ರ

–ಎಸ್. ರುದ್ರೇಶ್ವರ

ರಾಮನಗರ: ಗುಣಮಟ್ಟ ಖಾತ್ರಿಯಿಲ್ಲದ, ಉತ್ಪನ್ನದ ಬಗ್ಗೆ ಮಾಹಿತಿಯೂ ಇರದ ಆಹಾರ ಪದಾರ್ಥ, ತಿಂಡಿ–ತಿನಿಸುಗಳು ನಗರದ ಖಾಸಗಿ ಬಸ್‌ ನಿಲ್ದಾಣ, ಬೀದಿ ಬದಿಯ ತಳ್ಳುಗಾಡಿ ಹೋಟೆಲ್‌ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ  ಮಾರಾಟವಾಗುತ್ತಿವೆ ಎಂಬ ದೂರು ಕೇಳಿಸಿದೆ.

ರಸ್ತೆ ಬದಿ ವ್ಯಾಪಾರಿಗಳು, ಗೃಹ ಆಧಾರಿತ ಕ್ಯಾಂಟೀನ್‌ ಮಾಲೀಕರು ಸೇರಿದಂತೆ ಆಹಾರ ತಯಾರಿಕೆ, ಸರಬರಾಜು ಹಾಗೂ ಮಾರಾಟ ಮಾಡುವ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಆಹಾರ ತಿನಿಸುಗಳ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ’ಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಹೀಗಿದ್ದರೂ ಆಹಾರ ತಯಾರಕರು ಹಾಗೂ ಮಾರಾಟಗಾರರು ಕಾಯ್ದೆ ಉಲ್ಲಂಘಿಸಿ, ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ.

ಎಲ್ಲೆಲ್ಲಿ ಮಾರಾಟ?:  ರೈಲ್ವೆ ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಪ್ರೌಢಶಾಲೆ, ಕಾಲೇಜು ಮೈದಾನದ ಸುತ್ತಮುತ್ತ, ಎಪಿಎಂಸಿ ಮಾರುಕಟ್ಟೆ, ಹಳೆ ಬಸ್‌ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ, ರಸ್ತೆ ಬದಿ ಹಾಗೂ ತಳ್ಳುವ ಗಾಡಿ ಹೋಟೆಲ್‌ಗಳಲ್ಲಿ ಕಡಿಮೆ ಗುಣಮಟ್ಟದ ತಿಂಡಿ–ತಿನಿಸುಗಳನ್ನು ಮಾರಲಾಗುತ್ತಿದೆ. 

ಯಾವ ತಿನಿಸು?: ‘ನಗರದ ಕೆಲ ಗೃಹ ಆಧಾರಿತ ಕ್ಯಾಂಟೀನ್‌, ಗುಡಿ ಕೈಗಾರಿಕೆ (ಮನೆ ತಿಂಡಿ ತಯಾರಕರು), ಬೇಕರಿಗಳಲ್ಲಿ ತಯಾರಾಗುವಂತಹ ಬ್ರೆಡ್‌, ಚಕ್ಕುಲಿ, ಸಿಹಿ ತಿನಿಸು ಹಾಗೂ ರಸ್ತೆ ಬದಿಯ ಹೋಟೆಲ್‌ಗಳ ತಿನಿಸುಗಳು ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ ಎನ್ನುತ್ತಾರೆ ಕುರುಬರಹಳ್ಳಿ ಸುರೇಶ್‌.

ಹಳೆ ಬಸ್‌ನಿಲ್ದಾಣದ ಬಹುತೇಕ ಅಂಗಡಿಗಳಲ್ಲಿ ಗುಣಮಟ್ಟವಿಲ್ಲದ ಬ್ರೆಡ್‌ ಅನ್ನು ಸಾಮಾನ್ಯ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಹಲವು ದಿನ ಸಂಗ್ರಹಿಸಿಟ್ಟು ಮಾರಲಾಗುತ್ತಿದೆ. ಯಾವ ತಿನಿಸಿನ ಪೊಟ್ಟಣದ ಮೇಲೂ ಆಹಾರ ತಯಾರಿಕೆ ದಿನ ಹಾಗೂ ಅವಧಿ ಮೀರಿದ ದಿನದ ಬಗ್ಗೆ ಮಾಹಿತಿ ಇಲ್ಲ. ‘ಬೇರೆ ಬೇರೆ ಊರುಗಳಿಗೆ ಹೋಗುವ ಧಾವಂತದಲ್ಲಿರುವ ಪ್ರಯಾಣಿಕರು ಅವನ್ನೇ ಖರೀದಿಸಿ, ತಿನ್ನುತ್ತಾರೆ. ಇದರಿಂದ ಅನಾರೋಗ್ಯ ಕಾಡಬಹುದು’ ಎನ್ನುತ್ತಾರೆ.

‘ಸುರಕ್ಷಿತವಾದ ಆಹಾರವನ್ನು ಸಾರ್ವಜನಿಕರಿಗೆ ಒದಗಿಸಲು ಎಲ್ಲ ಆಹಾರ ಪದಾರ್ಥಗಳಿಗೆ ವೈಜ್ಞಾನಿಕ ಆಧಾರಿತ ಗುಣಮಟ್ಟವನ್ನು ನಿಗದಿ ಪಡಿಸಲಾಗಿದೆ. ಅಲ್ಲದೆ ಆಹಾರ ಸುರಕ್ಷತೆ ಕಾಪಾಡಿಕೊಳ್ಳಲು ಅನೇಕ ಕಾನೂನುಗಳಿವೆ. ಅವುಗಳು ಪರಿಣಾಮಕಾರಿ­ಯಾಗಿ ಅನುಷ್ಠಾನ ವಾಗುತ್ತಿಲ್ಲ. ಪ್ರಸ್ತುತ ಆಹಾರ ಪದಾರ್ಥ ತಯಾ­ರಿಕೆ, ಸಂಗ್ರಹ, ವಿತರಣೆ, ಮಾರಾಟ ಮತ್ತು ಆಮದಿನಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡ­ಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ಕಡಿಮೆ ಬೆಲೆಗೆ ಮಾರಾಟ: ‘ರಸ್ತೆ ಬದಿಯ ಹೋಟೆಲ್‌ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಮಾರಾಟವಾಗುವ ತಿಂಡಿ–ತಿನಿಸುಗಳಲ್ಲಿ ಗುಣಮಟ್ಟ ಕೇಳುವಂತಿಲ್ಲ. ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಅವುಗಳನ್ನು ಖರೀದಿಸಿ, ತಿನ್ನುವವರಲ್ಲಿ ಬಹುತೇಕರು ಬಡವರಾಗಿರುತ್ತಾರೆ’ ಎನ್ನುತ್ತಾರೆ ಖಾಸಗಿ ಬಸ್‌ವೊಂದರ ಏಜೆಂಟ್‌ ಕುಮಾರ್‌.

ಶುಚಿತ್ವ ಅಗತ್ಯ: ‘ಗುಣಮಟ್ಟವಿಲ್ಲದ ಆಹಾರ ತಯಾರಕರ ಕ್ಯಾಂಟೀನ್‌ಗಳ ಮೇಲೆ ಹಾಗೂ ಶುಚಿತ್ವವಿಲ್ಲದ ಹೋಟೆಲ್‌ಗಳ ಮೇಲೆ ದಾಳಿ ಮಾಡಿ, ಮಾಲೀಕರಿಗೆ ಎಚ್ಚರಿಕೆ ನೀಡಿ ಆಹಾರ ಸುರಕ್ಷತಾ ಕಾಯ್ದೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಆನಂತರವೂ ಎಚ್ಚೆತ್ತುಕೊಳ್ಳದಿದ್ದರೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ಜಿಲ್ಲಾ ಅಂಕಿತ ಪ್ರಭಾರ ಅಧಿಕಾರಿ ಡಿ. ಅನಸೂಯ.

‘ಆಹಾರ ತಯಾರಿಕೆ, ಮಾರಾಟ ಮಾಡುವ ಸ್ಥಳವನ್ನೂ ಶುಚಿಯಾಗಿಡಬೇಕು. ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಕಲಬೆರಕೆ ಇರಬಾರದು. ಗ್ರಾಹಕರು ಸೇವಿಸುವ ಆಹಾರದಿಂದ ಆರೋಗ್ಯದಲ್ಲಿ ತೊಂದರೆ ಕಂಡುಬಂದರೆ ಆಹಾರ ತಯಾರಿಸಿದ ಹಾಗೂ ಪೂರೈಸಿದ ವ್ಯಕ್ತಿ ಅಥವಾ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸುತ್ತಾರೆ ಅವರು.

ಮೂರು ವರ್ಷಗಳವರೆಗೆ ಶಿಕ್ಷೆ: ‘ವೈಜ್ಞಾನಿಕ ಗುಣಮಟ್ಟ ಆಧರಿಸಿ ಆಹಾರ ತಯಾರಿಕೆ, ದಾಸ್ತಾನು, ಪ್ಯಾಕಿಂಗ್, ಸಾಗಣೆ, ಹಂಚಿಕೆ, ಮಾರಾಟ ಮತ್ತು ಆಮದು ಮತ್ತಿತರ ವಿಚಾರದಲ್ಲಿ ತಪಾಸಣೆ ನಡೆಸಲಾಗುತ್ತದೆ. ನಿಯಮ ಉಲ್ಲಂಘಿಸಿದವರಿಗೆ ನ್ಯಾಯಾಲಯ ಕನಿಷ್ಠ 6 ತಿಂಗಳ ಶಿಕ್ಷೆ, ಗರಿಷ್ಠ ಮೂರು ವರ್ಷ ಶಿಕ್ಷೆ ವಿಧಿಸಬಹುದು. ಅಸುರಕ್ಷಿತ ಆಹಾರದಿಂದ ತೊಂದರೆ ಅನುಭವಿಸಿದವರಿಗೆ ಸಂಬಂಧಿಸಿದ ಉದ್ದಿಮೆದಾರರು ₹ 5ಲಕ್ಷದವರೆಗೆ ಪರಿಹಾರ ನೀಡಬೇಕಾಗುತ್ತದೆ’ ಎಂದು ಅವರು ಕಾಯ್ದೆಯ ಮಾಹಿತಿ ನೀಡಿದರು.

‘ಬೀದಿಬದಿ ಮಾರಾಟಗಾರರಿಂದ ಹಿಡಿದು ದೊಡ್ಡ ಆಹಾರ ಉದ್ದಿಮೆದಾರರು, ಹಾಲು ಉತ್ಪಾದಕರು, ಮಾಂಸ, ಸಸ್ಯಾಹಾರ, ತಂಪು ಪಾನೀಯ, ನೀರು ಮಾರಾಟಗಾರರು, ಅಕ್ಕಿ, ಸಕ್ಕರೆ, ಎಣ್ಣೆ, ಬೇಕರಿ ಪದಾರ್ಥ ತಯಾರಕರು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ’ ಎಂದರು.

ದೂರು ನೀಡಿ: ‘ಬೀದಿ ಬದಿಯ ಆಹಾರದಿಂದ ತೊಂದರೆ ಅನುಭವಿಸಿದರೆ, ಇಲ್ಲವೇ ಆಹಾರ ಸೇವಿಸುವ, ಮಾರಾಟ ಮಾಡುವ ಸ್ಥಳದಲ್ಲಿ ಶುಚಿತ್ವದ ಕೊರತೆ, ನಿರ್ಲಕ್ಷ್ಯ ಕಂಡುಬಂದರೆ ಸಾರ್ವಜನಿಕರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಬಹುದು. ದೂರು ಬಂದ ತಕ್ಷಣ ಆಹಾರದ ಮಾದರಿಯನ್ನು  ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಡಿ. ಅನಸೂಯ ತಿಳಿಸಿದರು. ಆಸಕ್ತರು ದೂರವಾಣಿ: 080– 27273664 ಸಂಖ್ಯೆಗೆ ದೂರು ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT