ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಬಾಂಬ್‌ ಪತ್ತೆಗೆ ಡ್ರೋನ್

Last Updated 24 ಜನವರಿ 2017, 19:30 IST
ಅಕ್ಷರ ಗಾತ್ರ

ನೆಲಬಾಂಬ್‌ಗಳನ್ನಿಟ್ಟು ಸ್ಫೋಟಿಸುವ ಕೃತ್ಯವು ದೇಶದ ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಉಗ್ರರ ಇಂತಹ ಕೃತ್ಯವನ್ನು ಸುಲಭವಾಗಿ ಕಂಡುಹಿಡಿಯಲಾಗುವುದಿಲ್ಲ. ಸ್ಫೋಟ ಸಂಭವಿಸಿದಾಗ ಅಪಾರ ಪ್ರಮಾಣದಲ್ಲಿ ಸಾವು ನೋವು ಆಗುತ್ತದೆ.  ಈ ರೀತಿ ಆಗುವುದನ್ನು ತಡೆಯಬಹುದೇ ಎಂದು ಆಲೋಚಿಸಿದ ವಿದ್ಯಾರ್ಥಿ ಯೊಬ್ಬನ ಶ್ರಮ ಈಗ ಫಲ ನೀಡಿದೆ.

ಗುಜರಾತ್‌ನ  ಹರ್ಷವರ್ಧನ್‌ ಝೇಲಾ (14) ಈಗ ದೇಶದಾದ್ಯಂತ ತನ್ನ ಸಂಶೋಧನೆಯಿಂದ ಪ್ರಸಿದ್ಧಿಯಾಗಿದ್ದಾನೆ. ಈತನ ಅನ್ವೇಷಣೆ ಇತ್ತೀಚೆಗೆ ಅಹಮದಾಬಾದ್‌ನಲ್ಲಿ  ಜ.10 ರಿಂದ 17ರವರೆಗೆ ನಡೆದ   ಗುಜರಾತ್‌ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ  ಪ್ರದರ್ಶನಗೊಂಡು ಗಮನ ಸೆಳೆದಿತ್ತು. ನೆಲಬಾಂಬ್‌ ಪತ್ತೆ ಮಾಡುವ ಡ್ರೋನ್‌ ಅರೆ ಸೇನಾಪಡೆಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರೋಟೊಟೈಪ್‌ ಮಾದರಿ
ಹರ್ಷವರ್ಧನ್‌ ತಯಾರು ಮಾಡಿರುವುದು ಪ್ರೋಟೊಟೈಪ್‌ ಮಾದರಿಯ ಡ್ರೋನ್‌. 2016 ರಿಂದಲೇ  ಈತ ಇದರ ತಯಾರಿಯ ಕಾರ್ಯ ಆರಂಭಿಸಿದ್ದು. ಇದರ ವೆಚ್ಚ ₹5 ಲಕ್ಷವಾಗಿತ್ತು. ಇದಕ್ಕೆ ಸರ್ಕಾರವೂ ಸ್ವಲ್ಪಮಟ್ಟಿಗಿನ ಹಣಕಾಸು ನೆರವು ಮಾಡಿತ್ತು.

ಹರ್ಷವರ್ಧನ ತಯಾರು ಮಾಡಿರುವ ನೆಲಬಾಂಬ್‌ ಪತ್ತೆ ಡ್ರೋನ್‌ಗೆ ಪ್ರೇರಣೆ ನೀಡಿದ್ದೇ ಟೆಲಿವಿಷನ್‌. ಒಮ್ಮೆ ಟಿ.ವಿ ನೋಡುತ್ತಿದ್ದಾಗ ನೆಲಬಾಂಬ್‌ ಸ್ಫೋಟದಿಂದ ಹಲವು ಯೋಧರು ಮೃತಪಟ್ಟಿದ್ದನ್ನು ಈತ ಗಮನಿಸಿದ. ನೆಲದೊಳಗೆ ಅಡಗಿರುವ ಬಾಂಬ್ ಅನ್ನು ಕಂಡುಹಿಡಿದರೆ ಅಮಾಯಕ ಸೈನಿಕರು ಸಾವನ್ನಪ್ಪುವುದು ತಪ್ಪುತ್ತದೆ ಎಂದು ಈತ ಆಲೋಚನೆ ಮಾಡಿದ. ಅದೇ ಡ್ರೋನ್‌ ತಯಾರಿಯ ಮೊದಲ ಹೆಜ್ಜೆಯಾಯಿತು.

ಡ್ರೋನ್‌ನಲ್ಲಿ ಏನೇನು ಇದೆ: ಈ ಡ್ರೋನ್‌ನಲ್ಲಿ ಇನ್ಫ್ರಾರೆಡ್‌, ಆರ್‌ಜಿಬಿ ಸೆನ್ಸರ್‌ ಮತ್ತು ಥರ್ಮಲ್ ಮೀಟರ್‌ ಇದೆ. 21 ಮೆಗಾಪಿಕ್ಸಲ್‌ನ ಕ್ಯಾಮೆರಾ ಹಾಗೂ ಮೆಕ್ಯಾನಿಕಲ್ ಷಟರ್‌ ಒಳಗೊಂಡಿದೆ. ಇದರಲ್ಲಿನ ಕ್ಯಾಮೆರಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಲ್ಲದು. ಇದಿಷ್ಟೇ ಅಲ್ಲದೆ 50 ಗ್ರಾಂ ತೂಕದ ಬಾಂಬ್‌ ಅನ್ನೂ ಇದು ಹೊತ್ತೊ ಯ್ಯಬಲ್ಲದು. ಇದನ್ನು ನೆಲಬಾಂಬ್‌ ಸ್ಫೋಟಿಸಲು ಬಳಸಬಹುದಾಗಿದೆ.

ಭೂಮಿಯಿಂದ ಎರಡು ಅಡಿ ಎತ್ತರದಲ್ಲಿ ಹಾರಾಡುತ್ತಾ ಇರುವಾಗ ಈ ಡ್ರೋನ್‌ ಎಂಟು ಚದರ ಮೀಟರ್‌ ದೂರದವರೆಗೆ  ಇರಬಹುದಾದ ಬಾಂಬ್‌ ಬಗ್ಗೆ ಸಂದೇಶಗಳನ್ನು ರವಾನಿಸುತ್ತದೆ.

ಸೇನೆಯದಕ್ಕಿಂತ ಕಡಿಮೆ ವೆಚ್ಚ: ‘ನಾನು ಕಂಡುಹಿಡಿದಿರುವ ಡ್ರೋನ್‌ ಸೇನೆಯಲ್ಲಿ ಬಳಸುತ್ತಿರುವುದಕ್ಕಿಂತ  ಕಡಿಮೆ ವೆಚ್ಚದ್ದು’ ಎನ್ನುತ್ತಾನೆ ಹರ್ಷ ವರ್ಧನ. ತನ್ನದೇ ಕಂಪೆನಿಯೊಂದನ್ನು ಸ್ಥಾಪಿಸಿದ್ದಾನೆ. ತನ್ನನ್ನು ‘ರೋಬೊಟಿಕ್ಸ್‌ ಅಭಿವೃದ್ಧಿಪಡಿಸಿದವ, ಡ್ರೋನ್ ತಯಾ ರಕ’ ಎಂದು ಕರೆದುಕೊಂಡಿದ್ದಾನೆ.

ಅಮೆರಿಕದಲ್ಲಿನ ಗೂಗಲ್‌ ಮುಖ್ಯಕಚೇರಿಗೆ ಭೇಟಿ ನೀಡಿದಾಗ ಇತರ ಸಂಶೋಧಕರ ಜತೆ ತನ್ನ ಅನ್ವೇಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ. ಇದೀಗ ತನ್ನ ಕಂಪೆನಿಯನ್ನೂ ಗೂಗಲ್‌ ಇಲ್ಲವೇ ಆ್ಯಪಲ್‌ಗಿಂತ ದೊಡ್ಡದಾಗಿ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದಾನೆ. ಅಕೌಂಟೆಂಟ್‌ ಆಗಿರುವ ತಂದೆ ಮತ್ತು ಗೃಹಿಣಿಯಾಗಿರುವ ತಾಯಿ ಈತನ ಎಲ್ಲ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದಾರೆ.

ಹಕ್ಕುಸ್ವಾಮ್ಯಕ್ಕೆ ನೋಂದಣಿ: ಹರ್ಷವರ್ಧನ್‌ ಈಗಾಗಲೇ ತನ್ನ ಸಂಶೋಧನೆಗೆ ಪೇಟೆಂಟ್‌ ಪಡೆಯುವ ಸಲುವಾಗಿ ನೋಂದಣಿ ಮಾಡಿಸಿಕೊಂಡಿದ್ದಾನೆ. ‘ಹಕ್ಕು ಸ್ವಾಮ್ಯ ಸಿಕ್ಕಿದ ನಂತರ ಇತರ ಹಲವು ಸಂಶೋಧನೆಗಳನ್ನು ಮಾಡಲು ಮುಂದಾಗುತ್ತೇನೆ’ ಎಂದು   ಹೇಳಿದ್ದಾನೆ.

ಐದು ಕೋಟಿ ಒಪ್ಪಂದಕ್ಕೆ ಸಹಿ
ಹರ್ಷವರ್ಧನ್‌ ಸಂಶೋಧನೆಗೆ ಎಷ್ಟೊಂದು ಮಹತ್ವ ಇದೆ ಎಂಬುದು ಗುಜರಾತ್ ಸರ್ಕಾರಕ್ಕೆ ಮನವರಿಕೆ ಯಾಗಿದೆ. ಆದ್ದರಿಂದಲೇ ಡ್ರೋನ್ ತಯಾರಿಕೆಗೆ ಈತನೊಂದಿಗೆ ₹5 ಕೋಟಿ ಮೊತ್ತದ ಒಪ್ಪಂದವನ್ನು ಮಾಡಿ ಕೊಂಡಿದೆ. ಇದರಿಂದ ಡ್ರೋನ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿ ಕೊಳ್ಳಬಹುದಾಗಿದೆ.

*
‘ನಾನು ಮೊದಲಿಗೆ ನೆಲಬಾಂಬ್‌ ಪತ್ತೆಹಚ್ಚುವ ರೊಬೋಟ್‌ ಕಂಡುಹಿಡಿಯಲು ಮುಂದಾದೆ. ಅದರ ತೂಕ ಹೆಚ್ಚಿಗೆ ಇರುವುದರಿಂದ ಡ್ರೋನ್‌ ತಯಾರಿಕೆಗೆ ಮುಂದಾದೆ. ಇದರ ನೆರವಿನಿಂದ ದೂರದಿಂದಲೇ ನೆಲ ಬಾಂಬ್‌ ಪತ್ತೆಹಚ್ಚಿ  ಅವುಗಳನ್ನು ನಿಷ್ಕ್ರೀಯಗೊಳಿಸಬಹುದು.
–ಹರ್ಷವರ್ಧನ್‌ ಝೇಲಾ,
ನೆಲಬಾಂಬ್‌ ಪತ್ತೆ ಡ್ರೋನ್‌ ಅನ್ವೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT