ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಸೋಲಾರ್‌ ಆಟೊ

Last Updated 24 ಜನವರಿ 2017, 19:30 IST
ಅಕ್ಷರ ಗಾತ್ರ

ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಪೆಟ್ರೋಲ್‌, ಡೀಸೆಲ್‌.   ವಾಹನಗಳು ಉಗುಳುವ  ಹೊಗೆಯಿಂದ ಉಂಟಾಗುವ ವಾಯುಮಾಲಿನ್ಯ.  ಇಂಧನ ಮೂಲ ಮುಗಿದು ಹೋಗುವ ಭೀತಿ!

ಈ ಎಲ್ಲ ಸಮಸ್ಯೆಗಳಿಂದ  ಮುಕ್ತಿ  ಹೊಂದುವ ಪ್ರಯತ್ನವಾಗಿಯೇ ಜಗತ್ತು ಸೌರಶಕ್ತಿ, ಗಾಳಿಶಕ್ತಿ, ಜಲಶಕ್ತಿಯಂತಹ ನೈಸರ್ಗಿಕ ಮತ್ತು ಪುನರ್‌ ಬಳಕೆಯ  ಇಂಧನ ಮೂಲಗಳತ್ತ ಮುಖ ಮಾಡಿದೆ. 

ಪರ್ಯಾಯ ಇಂಧನ ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳೂ ನಡೆಯುತ್ತಿವೆ. ಈ ಪ್ರಯತ್ನದ ಫಲವೇ ಪರಿಸರ ಸ್ನೇಹಿ ಸೋಲಾರ್ ಆಟೊ  ಅವಿಷ್ಕಾರ.

ಕೇರಳದ ಕೊಲ್ಲಂ ಜಿಲ್ಲೆಯ ಅಮೃತಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ. ಗಣೇಶ್ ಉಡುಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ತಂತ್ರಜ್ಞಾನ ಬಳಸಿಕೊಂಡು ಸೋಲಾರ್‌ ಆಟೊ ಅಭಿವೃದ್ಧಿಪಡಿಸಿದ್ದಾರೆ.

ಅಮೃತ ಸೂರ್ಯವಾಹಿನಿ
‘ಅಮೃತ ಸೂರ್ಯವಾಹಿನಿ’ ಹೆಸರಿನ ಮೂರು ಗಾಲಿಗಳ ವಿನೂತನ  ಆಟೊಗೆ  ಪೆಟ್ರೋಲ್‌, ಡೀಸೆಲ್‌ ತುಂಬಿಸುವ ಜಂಜಡವಿಲ್ಲ. ನಿರ್ವಹಣಾ  ವೆಚ್ಚವಿಲ್ಲ.   ಹಣ ಖರ್ಚು ಮಾಡಬೇಕಿಲ್ಲ. ಹೊಗೆ ಉಗುಳುವುದಿಲ್ಲ, ವಾಯು ಮಾಲಿನ್ಯದ ತಲೆನೋವಿಲ್ಲ.

ಒಮ್ಮೆ ನಾಲ್ಕೈದು ತಾಸು ಪೂರ್ತಿ ಚಾರ್ಜ್‌ ಮಾಡಿದರೆ ಸುಮಾರು 80–110 ಕಿಲೋ ಮೀಟರ್‌ ದೂರದವರೆಗೆ ನಿಶ್ಚಿಂತವಾಗಿ ಆಟೊ  ಓಡಿಸಬಹುದು. ಸಾಮಾನ್ಯವಾಗಿ ಪ್ರತಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಚಲಿಸುವ ಆಟೊ, ಗರಿಷ್ಠ ಗಂಟೆಗೆ 50 ಕಿ.ಮೀ. ವೇಗದಲ್ಲಿ ಓಡುತ್ತದೆ.  

ಎರಡು ಸೌರ ಫಲಕ 
ಆಟೊ ಎರಡು ಸೌರ ತಟ್ಟೆಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಒಂದು  (100 ವಾಟ್‌ ರೂಫ್‌ ಪ್ಯಾನೆಲ್‌) ಮತ್ತು  ಹಿಂಭಾಗದಲ್ಲಿ ಒಂದು ಫಲಕ ಅಳವಡಿಸಲಾಗಿದೆ.

ಮೇಲ್ಭಾಗದಲ್ಲಿ  ಫಲಕಕ್ಕೆ ಸ್ಲೈಡಿಂಗ್‌ ವ್ಯವಸ್ಥೆ  ಮಾಡಲಾಗಿದ್ದು ಚಾರ್ಜ್‌ ಮಾಡುವಾಗ ಹೊರಗಡೆ ಎಳೆಯಬಹುದು.  ಬೇಡವಾದಾಗ ಫಲಕಗಳನ್ನು  ಒಂದರ ಒಳೊಗೊಂದು ಸೇರಿಸಬಹುದು.

ಸೂರ್ಯನ ಬೆಳಕಿನಲ್ಲಿ ಆಟೊ ನಿಲ್ಲಿಸಿದರೆ ಸಾಕು ಬ್ಯಾಟರಿ ತನ್ನಿಂದ ತಾನಾಗಿಯೇ ಚಾರ್ಜ್ ಆಗುತ್ತದೆ. ಬ್ಯಾಟರಿಯಿಂದ ಎರಡು ಕಿಲೋ ವಾಟ್‌ ಸಾಮರ್ಥ್ಯದ  ಮೋಟರ್‌ಗಳಿಗೆ ಶಕ್ತಿ ಪೂರೈಕೆಯಾಗುತ್ತದೆ.  ಚಾಲಕ ಮತ್ತು ಮೂವರು ಪ್ರಯಾಣಿಕರು ಸೇರಿ ಒಟ್ಟು ನಾಲ್ವರನ್ನು (300 ಕೆ.ಜಿ.) ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಸ್ಟೇನ್‌ಲೆಸ್‌ ಸ್ಟೀಲ್‌ ಬಳಸಿ ಚಾಸಿ ಮತ್ತು  ಕಾರ್ಬನ್‌ ಫೈಬರ್‌ನಿಂದ (ಎಫ್‌ಆರ್‌ಪಿ) ಬಾಡಿ ತಯಾರಿಸಲಾಗಿದೆ.  ಇದು ಅತ್ಯಂತ ಗಟ್ಟಿ ಮತ್ತು ಅಷ್ಟೇ ಹಗುರವಾಗಿದ್ದು, ದೀರ್ಘ ಬಾಳಿಕೆ ಬರುತ್ತದೆ.

ಹಲವಾರು ಪರೀಕ್ಷೆ, ಮಾರ್ಪಾಡುಗಳ ನಂತರ ಗುಣಮಟ್ಟದ ಡಿಸ್ಕ್‌ ಬ್ರೇಕ್‌, ಸಸ್ಪೆನ್ಷನ್‌ ವ್ಯವಸ್ಥೆ ಅಳವಡಿಸಲಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.  ಬಿ.ಇ. ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳಾದ ಜೋಶ್‌ ಫ್ರೀಮನ್‌,    ವಿಕಾಸ್‌ ನಿಂಬೆವಾಲ್‌, ರಾಜೇಶ್‌ ಕುಮಾರ್‌ ಚೌಧರಿ, ಸ್ವರೂಪ್‌ ಶಶಿಕುಮಾರ್‌, ಶ್ರೀರಾಜ್‌ ನಯ್ಯರ್‌ ಅವರ ತಂಡದ  ಸತತ ಎರಡು ವರ್ಷಗಳ  ಶ್ರಮದ ಫಲವಾಗಿ ಸೋಲಾರ್‌ ಆಟೊ ಜನ್ಮ ಪಡೆದಿದೆ. 

ಮುಂದಿನ ದಿನಗಳಲ್ಲಿ ಆಟೊದ ವಿನ್ಯಾಸವನ್ನು ಮತ್ತಷ್ಟು ಸುಧಾರಿಸುವ ಮೂಲಕ  ಇನ್ನೂ ಅಗ್ಗದ ದರದಲ್ಲಿ  ಜನಸಾಮಾನ್ಯರ ಬಳಕೆಗೆ  ಆಟೊ ಬಿಡುಗಡೆ ಮಾಡುವ ಇರಾದೆ ವಿದ್ಯಾರ್ಥಿಗಳ ತಂಡಕ್ಕಿದೆ. ಇಂಧನ ದರ ಮತ್ತು ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಈ ಸಮಯದಲ್ಲಿ ಸೋಲಾರ್‌ ಆಟೊ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ.
ಇಮೇಲ್ ವಿಳಾಸ: ganesh@am.amrita.edu
ಮೊಬೈಲ್ ನಂಬರ್: +91 9447490902  

ವೈಶಿಷ್ಟ್ಯಗಳು

*ಗರಿಷ್ಠ  ವೇಗ: 50 ಕಿ.ಮೀ
*ಸಾಮಾನ್ಯ ವೇಗ: 30 ಕಿ.ಮೀ
*ಬ್ಯಾಟರಿ ಪೂರ್ಣ ಚಾರ್ಜ್‌ ಮಾಡಲು ತಗಲುವ ಸಮಯ: 5 ಗಂಟೆ
*ಪೂರ್ತಿ ಬ್ಯಾಟರಿ ಚಾರ್ಜ್ ಮಾಡಿದರೆ ಕ್ರಮಿಸುವ ಒಟ್ಟು ದೂರ: 80–120 ಕಿ.ಮೀ
*ಆಟೊದ ಒಟ್ಟು ತೂಕ: 220 ಕೆ.ಜಿ.
*ಆಟೊ ನಿರ್ಮಾಣಕ್ಕೆ ತಗುಲಿದ ವೆಚ್ಚ: ₹80 ಸಾವಿರ –₹1  ಲಕ್ಷ 
*ಸೋಲಾರ್‌ ಆಟೊ ರಿಕ್ಷಾ ನಿರ್ವಹಣೆಗೆ  ತಗಲುವ ವೆಚ್ಚ: ಒಂದು ಕಿಲೋ ಮೀಟರ್‌ಗೆ  ₹1 ಗಿಂತ ಕಡಿಮೆ.
*ಮೋಡ ಮುಸುಕಿದಾಗ ಕರೆಂಟ್ ಪ್ಲಗ್ ಮೂಲಕವೂ ಚಾರ್ಜ್ ಮಾಡಬಹುದು. 
*ಆಟೊದಲ್ಲಿ ಮೊಬೈಲ್‌ ಚಾರ್ಜ್‌ ಮಾಡುವ ಸೌಲಭ್ಯ

*
ವಾಯುಮಾಲಿನ್ಯ ಕಡಿಮೆ ಮಾಡುವ ದೃಷ್ಟಿಯಿಂದ ಪರಿಸರ ಸ್ನೇಹಿ ಸೋಲಾರ್‌ ಆಟೊ ಆವಿಷ್ಕರಿಸಲಾಗಿದೆ.
–ಡಾ. ಗಣೇಶ್ ಉಡುಪ , ಪ್ರಾಧ್ಯಾಪಕ

*
ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಪರ್ಯಾಯ ಇಂಧನ ಚಾಲಿತ  ಆಟೊ ಅಭಿವೃದ್ಧಿಪಡಿಸಲಾಗಿದೆ
–ಮೆಕ್ಯಾನಿಕಲ್‌ ವಿಭಾಗದ
ವಿದ್ಯಾರ್ಥಿಗಳ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT