ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ಟ್‌ ಅಪ್‌ಗಳಿಗೆ ‘ಇಂಡಿಕ್ಯೂಬ್‌’ ನೆರವು

Last Updated 24 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು ಸಾಫ್ಟ್‌ವೇರ್ ರಾಜಧಾನಿಯಾಗಿ ದಾಪುಗಾಲು ಹಾಕುತ್ತ ದಿನೇ ದಿನೇ ಬೆಳೆಯುತ್ತಲೇ ಇದೆ. ಎಲೆಕ್ಟ್ರಾನಿಕ್‌ ಸಿಟಿ, ಐಟಿಪಿಎಲ್‌  ಮತ್ತಿತರ ಕಡೆಗಳಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ  ಬೃಹತ್‌ ಕಟ್ಟಡ ನಿರ್ಮಾಣಗಾರರು ಕಚೇರಿ ಸ್ಥಳಾವಕಾಶಗಳನ್ನೆಲ್ಲ ವ್ಯವಸ್ಥಿತವಾಗಿ ಒದಗಿಸುತ್ತಾರೆ ಇಲ್ಲವೇ ಸಂಸ್ಥೆಗಳೆ ಬಂಡವಾಳ ತೊಡಗಿಸಿ ತಮ್ಮ ಅಗತ್ಯಗಳನ್ನೆಲ್ಲ ಈಡೇರಿಸಿಕೊಳ್ಳುತ್ತಿವೆ.

ಇಂತಹ ಕಡೆಗಳಲ್ಲಿ ಬ್ರ್ಯಾಂಡೆಡ್‌ ಕಚೇರಿ ಸ್ಥಳಾವಕಾಶಕ್ಕೇನೂ ಕೊರತೆ ಇಲ್ಲ.  ಹೊಸದಾಗಿ ಉದ್ಯಮ ಆರಂಭಿಸುವ ನವೋದ್ಯಮಿಗಳು ಮತ್ತು ಇತರ ಸಣ್ಣ ಉದ್ದಿಮೆದಾರರಿಗೆ ಕಚೇರಿಯ ಮೂಲ ಸೌಕರ್ಯಗಳೆಲ್ಲ ಸಿದ್ಧ ರೂಪದಲ್ಲಿ ದೊರೆಯುವ ಬ್ರ್ಯಾಂಡೆಡ್‌ ಕಚೇರಿ ಸ್ಥಳಾವಕಾಶಕ್ಕೆ ಮಾತ್ರ ನಗರದಲ್ಲಿ ತೀವ್ರ ಕೊರತೆ ಇದೆ.  ಆ ದೊಡ್ಡ ಕಂದರವನ್ನು ಇಂಡಿಕ್ಯೂಬ್‌ ತುಂಬಿ ಕೊಡುವ ಪ್ರಯತ್ನ ಮಾಡುತ್ತಿದೆ.

ಸಂಸ್ಥೆಯು ಕಚೇರಿ ಸ್ಥಳಾವಕಾಶದ ಮೂಲ ಸೌಕರ್ಯಗಳನ್ನೆಲ್ಲ ವೃತ್ತಿಪರತೆಯಿಂದ ನಿರ್ವಹಿಸುತ್ತಿದೆ.  ಯಾವುದೇ ಒಂದು ನವೋದ್ಯಮವು ತನ್ನ ಕಂಪ್ಯೂಟರ್‌ / ಲ್ಯಾಪ್‌ಟಾಪ್‌ ಪರಿಕರಗಳನ್ನು ತಂದು ಅವುಗಳ ನಿರ್ವಹಣೆ ಮತ್ತು ತಾಂತ್ರಿಕ ಗೋಜುಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಅತಿ ಸುಲಭವಾಗಿ ಇಲ್ಲಿ ಕಚೇರಿ ಕೆಲಸಗಳಿಗೆ ಚಾಲನೆ ನೀಡಬಹುದಾಗಿದೆ.

ಸಣ್ಣ ಗಾತ್ರದ  ಸಂಸ್ಥೆಗಳು  ಕಾಲ ಕ್ರಮೇಣ ಬೆಳೆಯುತ್ತಿದ್ದಂತೆ ಅವುಗಳಿಗೆ ಇತರ ಹೆಚ್ಚುವರಿ ಸೌಲಭ್ಯಗಳೂ ಬೇಕಾಗುತ್ತವೆ. ಇದಕ್ಕಾಗಿ ಸಂಸ್ಥೆಗಳು ಹೆಚ್ಚುವರಿ ಸೌಲಭ್ಯಗಳ ನಿರೀಕ್ಷೆಯಲ್ಲಿ ಕಚೇರಿ ಸ್ಥಳಾಂತರಿಸುವ ತಲೆನೋವಿಲ್ಲದೇ ಇದ್ದಲ್ಲಿಯೇ ಸಕಲ ಸೌಲಭ್ಯಗಳನ್ನು ಒದಗಿಸಲೂ ಇಂಡಿಕ್ಯೂಬ್‌ ನೆರವಾಗುತ್ತಿದೆ.

ಇಂಡಿಕ್ಯೂಬ್‌ ನೆರವಿನಿಂದಾಗಿ, ನವೋದ್ಯಮಿಗಳು ಕಚೇರಿ ಆರಂಭಿಸಲು ಬಂಡವಾಳ ಹೂಡಿಕೆ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅದೇ ಬಂಡವಾಳವನ್ನು ಉದ್ದಿಮೆ ಬೆಳವಣಿಗೆಗೆ ಬಳಸಿಕೊಳ್ಳಬಹುದು.

ಸ್ಟಾರ್ಟ್‌ಅಪ್‌ಗಳ ಅಗತ್ಯಗಳಿಗೆ ತಕ್ಕಂತೆ ಕಚೇರಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದೂ ಇಂಡಿಕ್ಯೂಬ್‌ನ ಇನ್ನೊಂದು ವಿಶೇಷತೆಯಾಗಿದೆ. ಬರೀ ಕಚೇರಿ ಸ್ಥಳಾವಕಾಶ ಒದಗಿಸಿ ಕೊಡುವುದಷ್ಟಕ್ಕೆ ಇದರ ಕೆಲಸ ಸೀಮಿತವಾಗಿಲ್ಲ. ಸಿಬ್ಬಂದಿಯ ಸಾರಿಗೆ ಅಗತ್ಯ, ತಿಂಡಿ, ಊಟದ ಅಗತ್ಯ ಪೂರೈಸುವ ಕೆಫೆಟೇರಿಯಾ, ದೈಹಿಕ ಕಸರತ್ತು ನಡೆಸಲು ಜಿಮ್‌ ಸೌಲಭ್ಯಗಳ ಜತೆಗೆ, ಸಿಬ್ಬಂದಿ ನೇಮಕಾತಿ, ಹಣಕಾಸು, ಲೆಕ್ಕಪತ್ರ, ಕಾನೂನು, ಡಿಜಿಟಲ್ ಮಾಧ್ಯಮ, ಸಾರ್ವಜನಿಕ ಸಂಪರ್ಕ ಮತ್ತಿತರ ಸೇವೆಗಳನ್ನೂ  ಒದಗಿಸುತ್ತಿದೆ. ಇಂತಹ ಸಂಸ್ಥೆಗಳಿಗೆ ಪ್ರತಿ ತಿಂಗಳಿಗೆ  ಸಿಬ್ಬಂದಿ ಸಂಖ್ಯೆಯ ಆಧಾರದ ಮೇಲೆ ರೂ 7 ಸಾವಿರದಿಂದ ರೂ 10 ಸಾವಿರದವರೆಗೆ ಬಾಡಿಗೆ ವಿಧಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬೃಹತ್‌ ಉದ್ದಿಮೆ ಸಂಸ್ಥೆಗಳ ಸರಾಸರಿ ಕಚೇರಿ ಗಾತ್ರ ಕಡಿಮೆಯಾಗುತ್ತಿದೆ. ಈ ಸಂಸ್ಥೆಗಳು ತಮ್ಮ ಅಗತ್ಯಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಈಡೇರಿಸಿಕೊಳ್ಳುತ್ತಿವೆ. ಹೀಗಾಗಿ ಹೊಸ, ಹೊಸ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅಸ್ತಿತ್ವಕ್ಕೆ ಬರುತ್ತಿವೆ.  ಇವುಗಳ ಕಚೇರಿ ಅಗತ್ಯದ ಬೇಡಿಕೆಯೂ ಗಮನಾರ್ಹವಾಗಿ ಹೆಚ್ಚುತ್ತಿದೆ. ಆ ಬೇಡಿಕೆ ಪೂರೈಸಲೂ ಇಂಡಿಕ್ಯೂಬ್‌ ಶ್ರಮಿಸುತ್ತಿದೆ. ಬ್ರ್ಯಾಂಡೆಡ್  ಕಚೇರಿ ಸ್ಥಳಾವಕಾಶಕ್ಕೆ  ದೇಶದಾದ್ಯಂತ 40 ಲಕ್ಷ ಚದರ ಅಡಿ  ಪ್ರದೇಶಕ್ಕೆ ಬೇಡಿಕೆ ಇದೆ. ಇದರಲ್ಲಿ ಬೆಂಗಳೂರಿನಲ್ಲಿಯೇ ಶೇ 16ರಷ್ಟು ಬೇಡಿಕೆ ಇದೆ.

ಐಐಟಿ ರೂರ್ಕಿಯ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವೀಧರರಾಗಿರುವ ರಿಷಿ ದಾಸ್‌  ಅವರು 1999ರಲ್ಲಿ  ಟಾಟಾ ಇನ್ಫೊಟೆಕ್‌ನಲ್ಲಿನ ಉದ್ಯೋಗ ತೊರೆದಿದ್ದರು. ಇನ್ಫೊಸಿಸ್‌ ಕೆಲಸ ಬಿಟ್ಟು ಬಂದ ಸೋದರನ ಜತೆ ಸೇರಿ   ಪ್ರತಿಭಾವಂತರ ನೇಮಕಾತಿಗೆ ನೆರವಾಗುವ ಕರಿಯರ್‌ ನೆಟ್‌ ಕನ್ಸಲ್ಟಿಂಗ್‌  (CareerNet Consulting) ಸಂಸ್ಥೆಯನ್ನು ಸ್ಥಾಪಿಸಿದ್ದರು. ಉದ್ಯೋಗಿಗಳ ನೇಮಕಾತಿ ವಿಷಯದಲ್ಲಿ ಈ ಸಂಸ್ಥೆ ವಿಭಿನ್ನವಾಗಿಯೇ ಬೆಳೆದು ನಿಂತಿದೆ.

ಇದರ ಯಶಸ್ಸಿನ ನಂತರ ಸೋದರರಿಬ್ಬರೂ ನವೋದ್ಯಮಿಗಳಿಗೆ ಸುಸಜ್ಜಿತ ಕಚೇರಿ ಸ್ಥಳಾವಕಾಶ ಒದಗಿಸುವ ಸ್ಟಾರ್ಟ್‌ಅಪ್‌ ಆರಂಭಿಸುವ ಕಡೆಗೆ ಗಮನ ಕೇಂದ್ರೀಕರಿಸಿದ್ದರು. ಉದ್ಯಮಶೀಲರ ಆರಂಭಿಕ ಅಗತ್ಯಗಳನ್ನು ಪೂರೈಸಿ ಅವರ ಬೆಳವಣಿಗೆಗೆ ಸಹಾಯ ಹಸ್ತ ಒದಗಿಸುವುದು  ಅವರ ಆಶಯವಾಗಿತ್ತು.  ಈ ಕಮಸು  ಸಾಕಾರಗೊಳಿಸಲು 2015ರ ಜನವರಿಯಲ್ಲಿ ಇಂಡಿಕ್ಯೂಬ್‌ ಸಂಸ್ಥೆಯನ್ನು ಹುಟ್ಟು ಹಾಕಿದರು.

‘ನಗರದ ಹೊರ ವರ್ತುಲ ರಸ್ತೆಯಲ್ಲಿ 1.50 ಲಕ್ಷ ಚದರ ಅಡಿಗಳಷ್ಟು  ಕಟ್ಟಡದಲ್ಲಿ ಇಂಡಿಕ್ಯೂಬ್‌ (IndiQube) ಎರಡು ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿತು. ಇಲ್ಲಿ ಲಭ್ಯ ಇರುವ ಸ್ಥಳಾವಕಾಶವು ಐದಾರು ತಿಂಗಳಲ್ಲಿ ಭರ್ತಿಗೊಂಡಿತು. ನವೋದ್ಯಮಿಗಳಿಂದ ಕಂಡು ಬಂದ ಇಂತಹ ಬೇಡಿಕೆಯು, ಈ ಸ್ಟಾರ್ಟ್‌ಅಪ್‌ ಬೆಳೆಸಲು ಇನ್ನಷ್ಟು ಉತ್ತೇಜನ ನೀಡಿತು’ ಎಂದು ರಿಷಿ ದಾಸ್‌ ಹೇಳುತ್ತಾರೆ.

‘ಉತ್ಸಾಹಿ ಉದ್ಯಮಶೀಲರು ಆರಂಭದಲ್ಲಿ ಸಂಸ್ಥೆ ಕಟ್ಟಿ ಬೆಳೆಸಲು ಪಡುವ ಕಷ್ಟ ಕಾರ್ಪಣ್ಯ ಗಳೆಲ್ಲವನ್ನು ನಾನು ಕೂಡ  ಅನುಭವಿಸಿದ್ದೆ. ಹೀಗಾಗಿ ಹೊಸಬರು ಅಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಉದ್ಯಮದಲ್ಲಿ ಗಟ್ಟಿಯಾಗಿ ನೆಲೆಯೂರಲು ನೆರವಾಗುವ ಉದ್ದೇಶದಿಂದ ಈ ಇಂಡಿಕ್ಯೂಬ್‌ ಸ್ಥಾಪಿಸಲಾಯಿತು.

‘ಸ್ಟಾರ್ಟ್‌ಅಪ್‌ಗಳು ಮತ್ತು ಪ್ರವರ್ಧಮಾನಕ್ಕೆ ಬರುವ ಸಂಸ್ಥೆಗಳಿಗೆ ನೆರವಾಗಲು ಈ ವಹಿವಾಟಿಗೆ ಕೈಹಾಕಲಾಗಿತ್ತು. ನವೋದ್ಯಮಗಳ ಬೆಳವಣಿಗೆಯಲ್ಲಿ ಪಾಲುದಾರರಾಗುವುದು ನಮ್ಮ ಉದ್ದೇಶವಾಗಿದೆ’ ಎಂದು ದಾಸ್‌ ಹೇಳುತ್ತಾರೆ.

ಇತರರ ಭಾವನೆ ಮತ್ತು  ಅನುಭವಗಳನ್ನು ಗ್ರಹಿಸುವ  ಇವರಲ್ಲಿನ ವಿಶಿಷ್ಟ ಮನೋಭಾವ ಮತ್ತು ವಿವೇಚನಾ ಶಕ್ತಿಯ ಕಾರಣಕ್ಕೆ ನಾಸ್ಕಾಂ, ಭಾರತೀಯ ಕೈಗಾರಿಕಾ  ಒಕ್ಕೂಟ (ಸಿಐಐ) ಮತ್ತಿತರ ಕಡೆಗಳಲ್ಲಿ ಇವರನ್ನು ಉಪನ್ಯಾಸಕ್ಕೂ ಆಹ್ವಾನಿಸಲಾಗುತ್ತಿದೆ.

ಬ್ರ್ಯಾಂಡೆಡ್‌ ಕಚೇರಿ ಸ್ಥಳಾವಕಾಶದ  ಬೇಡಿಕೆ ಈಡೇರಿಸುವಲ್ಲಿ  ಬೆಂಗಳೂರಿನಲ್ಲಿ ಸಾಕಷ್ಟು ಅನಿಶ್ಚಿತತೆ ಮತ್ತು ಕೆಲ ಸಮಸ್ಯೆಗಳೂ ಇವೆ. ಕಟ್ಟಡ ಮಾಲೀಕರಿಂದ ಕಚೇರಿ ಬಾಡಿಗೆ ಪಡೆದರೂ, ಕಟ್ಟಡದ ಇತರ ಸ್ಥಳವನ್ನು ಮಾಲೀಕರು ತಮ್ಮ ಇಷ್ಟದ ಪ್ರಕಾರ ಬಾಡಿಗೆ ನೀಡುವುದರಿಂದ ನವೋದ್ಯಮಿಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇಂಡಿಕ್ಯೂಬ್‌ನಲ್ಲಿ ಅಂತಹ ಯಾವುದೇ ಸಮಸ್ಯೆ ಎದುರಾಗದು. ಇಲ್ಲಿ  ಸಿಬ್ಬಂದಿಯ ಅಗತ್ಯಗಳನ್ನೆಲ್ಲ ಪೂರೈಸುವ  ಸೌಲಭ್ಯಗಳೆಲ್ಲ ಸಿದ್ಧ ರೂಪದಲ್ಲಿ ಲಭ್ಯ ಇರುತ್ತವೆ.

ಕೆಲವು ಸ್ಟಾರ್ಟ್‌ಅಪ್‌ಗಳಿಗೆ ನಿಯಮಿತವಾಗಿ ಬೋರ್ಡ್‌ರೂಂ ಮತ್ತು ತರಬೇತಿ ಕೋಣೆ ಮತ್ತು ಸಭಾಂಗಣಗಳ ಅಗತ್ಯ ಇರುವುದಿಲ್ಲ. ಅಗತ್ಯ ಎನಿಸಿದಾಗ ಮಾತ್ರ ಅವುಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸುವುದರಿಂದ ನವೋದ್ಯಮಗಳ ಮೇಲಿನ ಹೊರೆ ಸಾಕಷ್ಟು ಕಡಿಮೆಯಾಗುತ್ತದೆ.

  ಸದ್ಯಕ್ಕೆ ಸಂಸ್ಥೆಯ ಬಳಿ 5 ಲಕ್ಷ ಚದರ ಅಡಿಗಳಷ್ಟು ಕಚೇರಿ ಸ್ಥಳಾವಕಾಶ ಇದೆ. ಇನ್ನೂ 5 ಲಕ್ಷ ಚದರ ಅಡಿ ಮುಂದಿನ ಒಂದೂವರೆ ವರ್ಷದದಲ್ಲಿ  ಲಭ್ಯವಾಗಲಿದೆ. ಬೆಂಗಳೂರಿನ ವಿವಿಧ ಕಡೆಗಳಲ್ಲಿ ಈ  ಸುಸಜ್ಜಿತ ಕಚೇರಿ ಸ್ಥಳಾವಕಾಶವು ಲಭ್ಯವಾಗಲಿದೆ.

ಸ್ವಂತ ಹಣ ಹಾಕಿ ಕರಿಯರ್‌ ನೆಟ್‌ವರ್ಕ್‌ ಆರಂಭಿಸಿದ್ದ ರಿಷಿ ದಾಸ್‌ ಅವರು ಇದುವರೆಗೆ ಬ್ರ್ಯಾಂಡೆಡ್‌ ಕಚೇರಿ ಸ್ಥಳಾವಕಾಶ ಒದಗಿಸುವ ವಹಿವಾಟಿನಲ್ಲಿ  ರೂ 40 ಕೋಟಿಗಳಷ್ಟು ಬಂಡವಾಳ ಹೂಡಿಕೆ ಮಾಡಿದ್ದಾರೆ.

‘ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ಕಚೇರಿ ಸ್ಥಳಾವಕಾಶ ಮಾರುಕಟ್ಟೆ ವಿಸ್ತರಣೆಗೆ ವಿಪುಲ ಅವಕಾಶ ಇದೆ. ಮುಂಬರುವ ದಿನಗಳಲ್ಲಿ ಹೈದರಾಬಾದ್‌, ಪುಣೆ ಮತ್ತಿತರ ನಗರಗಳಲ್ಲಿ ವಹಿವಾಟು ವಿಸ್ತರಿಸುವ ಉದ್ದೇಶ ಇದೆ’ ಎಂದು ದಾಸ್  ಹೇಳುತ್ತಾರೆ.

5ರಿಂದ 10  ಸಿಬ್ಬಂದಿಯಿಂದ ಸಂಸ್ಥೆ ಆರಂಭಿಸಿದವರು ನಂತರದ ದಿನಗಳಲ್ಲಿ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿ ಯಶಸ್ವಿಯಾದ ಹಲವಾರು ನಿದರ್ಶನಗಳು ಇಂಡಿಕ್ಯೂಬ್‌ನಲ್ಲಿ ಇವೆ.

‘ಆರು ತಿಂಗಳ ಹಿಂದೆ ಸ್ಟಾರ್ಟ್‌ಅಪ್‌ ಭರಾಟೆ ತೀವ್ರವಾಗಿತ್ತು. ಬಂಡವಾಳ ಹೂಡಿಕೆದಾರರು ಪೈಪೋಟಿ ಮೇಲೆ ಹಣ ಹೂಡಿಕೆ ಮಾಡಿದ್ದರು. ಸದ್ಯಕ್ಕೆ ಅಂತಹ ಅತ್ಯುತ್ಸಾಹ ಕಡಿಮೆಯಾಗಿದೆ.  ಕೆಲ ಮಟ್ಟಿಗೆ ಸ್ಥಿರತೆ ಕಾಣುತ್ತಿದೆ. ಹೂಡಿಕೆದಾರರ  ಅಸಕ್ತಿ, ಮುನ್ನುಗ್ಗುವಿಕೆಗೆ ಕಡಿವಾಣ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರೆಯಲಾರದು.

ಶೀಘ್ರದಲ್ಲಿಯೇ ಮತ್ತೆ ಪುನಶ್ಚೇತನಗೊಳ್ಳಲಿದೆ’ ಎಂದು ದಾಸ್ ಅವರು ಸ್ಟಾರ್ಟ್‌ಅಪ್‌ಗಳ ಬಗ್ಗೆ ಭರವಸೆಯ ಮಾತು ಆಡುತ್ತಾರೆ ಸ್ಟಾರ್ಟ್‌ಅಪ್‌ಗಳ ಪೂರ್ವಾಪರ ವಿಚಾರಿಸಿ ಭರವಸೆದಾಯಕ ಸಂಸ್ಥೆಗಳ ಬೆನ್ನಿಗೆ ನಿಲ್ಲುವ ಪ್ರಯತ್ನವನ್ನೂ ಇಂಡಿಕ್ಯೂಬ್‌ ಮಾಡುತ್ತದೆ. ಅಂತಹ ಸಂಸ್ಥೆಗಳಿಗೆ ಬಾಡಿಗೆ ಹಣ ಮತ್ತಿತರ ವಿಷಯಗಳಲ್ಲಿ  ಕೆಲ ರಿಯಾಯ್ತಿಗಳನ್ನೂ ನೀಡಲಾಗುತ್ತಿದೆ.

ಕಚೇರಿ ಸ್ಥಳಾವಕಾಶದ ಆಚೆಗೂ ಮೂಲ ಸೌಕರ್ಯಗಳನ್ನು ಒದಗಿಸುವುದರ ಜತೆಗೆ ನವೋದ್ಯಮಗಳು ತಮ್ಮ ಗುರಿ ಸಾಧನೆ ಎಡೆಗೆ ಗಮನ ಕೇಂದ್ರಿಕರಿಸಿ ಮುನ್ನಡೆಯಲು ಇಂಡಿಕ್ಯೂಬ್‌ ನೆರವಿನ ಹಸ್ತ ಚಾಚುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT