ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಆರೋಗ್ಯ ಮಾರ್ಗದರ್ಶಿ

Last Updated 25 ಜನವರಿ 2017, 6:06 IST
ಅಕ್ಷರ ಗಾತ್ರ

‘ಇದೆಂಥಾ ಚಳೀನಪ್ಪಾ... ಬೆಳಿಗ್ಗೆ ಏಳೋದಿಕ್ಕೆ ಮನಸಾಗೋದಿಲ್ಲ. ಚರ್ಮವೆಲ್ಲಾ ಒಣಗಿ ಯಾವಾಗ್ಲೂ ಒಂಥರಾ ನವೆ, ತುರಿಕೆ; ಅವೆಲ್ಲಕ್ಕಿಂತ ಹೆಚ್ಚಾಗಿ ಮುಂಜಾನೆ ಎದ್ದು ಅರ್ಧಗಂಟೆಯೊಳಗೆ ಹೊಟ್ಟೆ ತಾಳ ಹಾಕೋಕೆ ಶುರು ಮಾಡುತ್ತೆ, ತಿನ್ನದೇ ಹೋದರೆ ಹುಳಿ ತೇಗು ಬೇರೆ!’ ಎಂಬ ಉದ್ಗಾರ ಸರ್ವೇ ಸಾಮಾನ್ಯವಾಗಿ ಈಗ ಎಲ್ಲರಿಂದಲೂ ಕೇಳಿ ಬರುತ್ತದೆ.   

‘ಭೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ...’ಎಂದು ಜೆ.ಪಿ. ರಾಜರತ್ನಂ ಅವರು ತಮ್ಮ ಕವನದಲ್ಲಿ ಹೇಮಂತದ ಮಂಜನ್ನು ಬಣ್ಣಿಸುತ್ತಾರೆ. ದೀರ್ಘವಾದ ರಾತ್ರಿ, ಭೂಮಿಯನ್ನು ತಬ್ಬಿದ ಮೋಡಗಳು, ಚಂದ್ರ ರಶ್ಮಿಯಿಂದ ಬೆಳ್ಳಗಾದ ನೆಲ ಮನಸ್ಸಿಗೆ ಮುದ ನೀಡುವುದರಲ್ಲಿ ಯಶಸ್ವಿಯಾದರೆ, ತಂಪಾಗಿ ಬೀಸುವ ತಂಗಾಳಿ ಶರೀರದ (ಜಠರಾಗ್ನಿಯ) ಉಷ್ಣತೆಯನ್ನು ಹೊರ ಹೋಗದಂತೆ ರಕ್ಷಿಸಿ ವ್ಯಕ್ತಿಯಲ್ಲಿ ಹುದುಗಿರುವ ಬಲವನ್ನು ಹೆಚ್ಚಿಸುತ್ತದೆ.

ದೇಹದಲ್ಲಿ ಜಾಠರಾಗ್ನಿ ಬಲವು ವೃದ್ಧಿಸುವುದರಿಂದ ಹಸಿವೆ ಹೆಚ್ಚಾಗುತ್ತದೆ. ಜೀರ್ಣವಾಗಲು ಹೆಚ್ಚಿನ ಸಮಯವನ್ನು ತೆಗೆದು ಕೊಳ್ಳುವಂತಹ ಸಿಹಿ, ಜಿಡ್ಡಿನ ಪದಾರ್ಥಗಳೂ ಬೇಗನೆ ಪಚನಗೊಳ್ಳುತ್ತವೆ. ಹಾಗಾಗಿ ಸರಿಯಾದ ಸಮಯ ಹಾಗೂ ಪ್ರಮಾಣದಲ್ಲಿ ಆಹಾರ ಸೇವನೆ ಮಾಡದೇ ಇದ್ದಲ್ಲಿ ಅಗ್ನಿಯು ರಸ, ರಕ್ತಾದಿ ದೇಹ ಧಾತುಗಳನ್ನೇ ಜೀರ್ಣಿಸಲಾರಂಭಿಸಿ ವಾತ ಪ್ರಕೋಪಕ್ಕೆ ಕಾರಣೀಭೂತವಾಗುತ್ತದೆ.

ಈ ಕಾಲದಲ್ಲಿ ಸೇವಿಸುವ ಆಹಾರವು ಸ್ನಿಗ್ಧಾಂಶವನ್ನು ಅಧಿಕವಾಗಿ ಹೊಂದಿರುವುದಲ್ಲದೇ ಗುಣ ಸ್ವಭಾವದಲ್ಲಿಯೂ ಉಷ್ಣತೆಯನ್ನು ಹೊಂದುವ ಕಾರಣ ದೇಹಬಲವನ್ನೂ, ಆರೋಗ್ಯವನ್ನೂ ವೃದ್ಧಿಸುತ್ತದೆ. ಆದರೆ ಕಫ ದೋಷ ಪ್ರಕೋಪಕ್ಕೆ ಕಾರಣವಾಗುವ ಆಹಾರ, ವಿಹಾರಗಳನ್ನು ಅನುಸರಿಸುವುದರಿಂದ ಶೀತ, ಕೆಮ್ಮು, ಅತಿನಿದ್ರತೆ, ಅಗ್ನಿಮಾಂದ್ಯತೆ, ಉಬ್ಬಸದಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

ಆಹಾರ: ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿದ ಬಳಿಕ ಬಾದಾಮಿ ಹಾಲು, ಸಿಹಿ ತಿನಿಸು (ಮಿತವಾಗಿ)ಗಳನ್ನು ಸೇವಿಸಬಹುದು. ಹೊಸಕ್ಕಿ ಊಟ, ಮೊಸರನ್ನ, ಸಿಹಿ, ಹುಳಿ ರಸ ಪ್ರಧಾನವಾಗಿರುವ ಪದಾರ್ಥಗಳು, ಪಾಯಸ, ಸಿಹಿ, ಖಾರ ಪೊಂಗಲ್, ಎಳ್ಳಿನ ಚಿಗಳಿ, ಎಳ್ಳುಂಡೆ, ಬೆಲ್ಲ ಮುಂತಾದವುಗಳ ಹಿತಮಿತವಾದ ಸೇವನೆ ಒಳಿತು.

ಖರ್ಜೂರ, ದ್ರಾಕ್ಷಿ, ಬಾದಾಮಿ, ಗೋಡಂಬಿ, ಅಂಜೂರ ಮುಂತಾದ ಒಣಹಣ್ಣುಗಳು, ನೆಲ್ಲಿಕಾಯಿ, ಕಿತ್ತಳೆ, ದಾಳಿಂಬೆ ಮೊದಲಾದ ಹಣ್ಣುಗಳ ಬಳಕೆ, ಊಟದಲ್ಲಿ ಎರಡು ಚಮಚ ತುಪ್ಪ, ದೋಸೆ, ಇಡ್ಲಿಗೆ ಬೆಣ್ಣೆಯನ್ನು ಸವರಿ ಮಕ್ಕಳಿಗೆ ನೀಡಿದಲ್ಲಿ, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿ. ಧಾನ್ಯಗಳಲ್ಲಿ ಗೋಧಿ, ಜೋಳ, ಉದ್ದು; ಮಾಂಸಾಹಾರಿಗಳಾದರೆ, ಮೀನು, ಕೋಳಿ, ಮೊಲ, ಆಡು ಮುಂತಾದ ವು ಗಳನ್ನು ಸೇವಿಸಬಹುದು.

ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ಸಿಹಿತಿನಿಸುಗಳಾದ ಖೀರು, ಪೇಡಾ, ಶ್ರೀಖಂಡ, ಪನೀರ್, ಗಿಣ್ಣು ಇತ್ಯಾದಿ, ಕಬ್ಬಿನ ಹಾಲು, ಬಿಸಿನೀರಿನ ಸೇವನೆ ಉತ್ತಮ. 

ಹೀಗೆ ಮಾಡಿ: ತಲೆಗೆ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಹಚ್ಚಿ, ಇಡೀ ದೇಹಕ್ಕೆ ಕೊಂಚ ಬಿಸಿ ಮಾಡಿದ ಎಳ್ಳೆಣ್ಣೆಯ ಅಭ್ಯಂಜನವನ್ನು ಮಾಡುವುದರಿಂದ ಚರ್ಮ ಒಣಗುವಿಕೆ, ಒಡೆಯುವಿಕೆ, ಸುಕ್ಕುಗುಟ್ಟುವುದು ದೂರವಾಗುತ್ತದೆ ಮಾತ್ರವಲ್ಲದೇ ದೇಹದ ಎಲ್ಲಾ ಅಂಗಾಂಗಗಳಿಗೂ ರಕ್ತ ಸಂಚಾರ ಹೆಚ್ಚಿ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ನಿಯಮಿತವಾದ ವ್ಯಾಯಾಮವು ಆಲಸ್ಯವನ್ನು ದೂರಗೊಳಿಸಿ ಲವಲವಿಕೆಯಿಂದಿರಲು ಸಹಕಾರಿ.

ಬಿಸಿನೀರಿನ ಸ್ನಾನವು ದೇಹದ ಜಡತೆಯನ್ನು ನಿವಾರಿಸುತ್ತದೆ. ಆದರೆ ತಲೆಗೆ ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಶೌಚಕರ್ಮಗಳಿಗೂ ಬಿಸಿನೀರಿನ ಬಳಕೆ ಉತ್ತಮ. ಮುಂಜಾನೆಯ ವಾಕಿಂಗ್, ಪ್ರಯಾಣ ಇತ್ಯಾದಿ ಸಂದರ್ಭಗಳಲ್ಲಿ ಉಣ್ಣೆಯಿಂದ ತಯಾರಿಸಿದ ವಸ್ತ್ರ ಧಾರಣೆ, ಶಯನಕ್ಕೆ ದಪ್ಪನೆಯ ಬ್ಲಾಂಕೆಟಗಳನ್ನು ಹೊದಿಕೆಗಳಾಗಿ ಬಳಸುವುದು ಉತ್ತಮ.

ವರ್ಜಿಸಬೇಕಾದುದು: ಹಗಲು ನಿದ್ರೆ, ಖಾರ, ಕಹಿ, ಒಗರು ಪ್ರಧಾನವಾದ ಆಹಾರ, ಅತಿಯಾದ ಕಾಫಿ, ಚಹಾ ಸೇವನೆ, ತಣ್ಣೀರಿನ ಸ್ನಾನ- ಪಾನ, ತಂಪು ಪಾನೀಯ, ಐಸ್ ಕ್ರೀಂ, ಚಳಿಗಾಳಿಗೆ ಮೈ ಒಡ್ಡುವುದು.

ಕೇವಲ ಚೆನ್ನಾಗಿ ತಿನ್ನುವುದು ಮಾತ್ರವಲ್ಲದೇ ಚೆನ್ನಾಗಿ ದುಡಿಯುವುದರ ಮೂಲಕ ಕಾಲದ ಉತ್ತಮ ಸದುಪಯೋಗ ಪಡೆಯಬಹುದು ಅಲ್ಲದೇ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.
-ಎನ್. ಸ್ವಾತಿ ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT