ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಮಿನೇಟ್ ಮಾಡಲು ಸಿದ್ಧ

ಬಜಾಜ್ ಡಾಮಿನರ್‌
Last Updated 25 ಜನವರಿ 2017, 19:30 IST
ಅಕ್ಷರ ಗಾತ್ರ

ಬಜಾಜ್ ಕಂಪೆನಿಯು ಸ್ಕೂಟರ್‌ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಬೈಕ್‌ಗಳನ್ನು ಮಾತ್ರ ತಯಾರಿಸುವುದಾಗಿ ಪ್ರಕಟಿಸಿದ್ದು ಕಂಪೆನಿಗೆ ಒಳ್ಳೆಯ ನಿರ್ಧಾರವಾಯಿತು. ಈಗ ಬಜಾಜ್‌ ಕಂಪೆನಿಯು ಬೈಕ್‌ ಉತ್ಪಾದನೆಯಲ್ಲಿ ಭಾರತದಲ್ಲಿ ನಂ. 1 ಆಗಿದೆ.

ಈ ಸ್ಥಾನ ಪಡೆಯಲು ಸಹಾಯ ಮಾಡಿದ್ದು ಬಜಾಜ್‌ ಪಲ್ಸರ್‌. 150 ಸಿಸಿಯಿಂದ ಆರಂಭವಾಗಿ ಈಗ 220 ಸಿಸಿ ಸಾಮರ್ಥ್ಯದವರೆಗಿನ ಪಲ್ಸರ್‌ಗಳು ಈಗ ಕಂಪೆನಿಯ ಬತ್ತಳಿಕೆಯಲ್ಲಿವೆ. ಇದಕ್ಕೂ ಅಧಿಕ ಸಾಮರ್ಥ್ಯದ ಪಲ್ಸರ್‌ಗಳನ್ನು ಹೊರಬಿಡಬೇಕೆಂಬ ಕಂಪೆನಿಯ ಆಲೋಚನೆಯಲ್ಲಿ ಕೊಂಚ ಬದಲಾಗಿ, ಹೊಸ ಹೆಸರಿನಲ್ಲಿ ಬೈಕ್‌ ಹೊರ ಬಂದಿದೆ. ಅದೇ ಪಲ್ಸರ್ ‘ಡಾಮಿನರ್‌’.

ಹೊಸತನ ಇರುವ ಸಂಪೂರ್ಣ ಹೊಸ ಬೈಕ್‌ ಅನ್ನು ಹೊರಬಿಡುವುದು ಈಗ ಸುಲಭದ ಕೆಲಸವಲ್ಲ. ಏಕೆಂದರೆ, ವಿಮರ್ಶೆಯ ಅನೇಕ ಮಾಧ್ಯಮಗಳೇ ಈಗ ಹುಟ್ಟಿಕೊಂಡಿವೆ. ಬೈಕ್‌ ಪರಿಣತರು ಈಗ ಹೆಚ್ಚಾಗಿದ್ದಾರೆ. ಆದರೆ, ‘ಡಾಮಿನರ್‌’ ಅನ್ನು ಸಂಪೂರ್ಣ ಹೊಸ ಬೈಕ್‌ ಎಂದು ಹೇಳಬಹುದು. ಸಂಪೂರ್ಣ ಹೊಸ ವಿನ್ಯಾಸ, ತಂತ್ರಜ್ಞಾನದ ದೇಹ, ಹೊಸ ಎಂಜಿನ್‌ ಇದರ ವಿಶೇಷ. ಈ ಹೊಸ ಬೈಕ್‌ನ ಕಿರು ಪರಿಚಯ ಇಲ್ಲಿದೆ.

ವಿನ್ಯಾಸವೇ ವಿಶೇಷ
ಹೆಸರೇ ಹೇಳುವಂತೆ ಬೈಕ್‌ನ ವಿನ್ಯಾಸ ಗಮನಸೆಳೆಯುವಂತಿದೆ. ರಸ್ತೆಯನ್ನು ಆಳುವ ಪ್ರಾಬಲ್ಯದ ವಿನ್ಯಾಸ ಇದರದ್ದು. ಇದಕ್ಕೆ ಕಂಪೆನಿಯು ಲಿಯೋ ಸ್ಟ್ಯಾನ್ಸ್ ಎಂದು ಹೆಸರಿಟ್ಟಿದೆ. ಅಂದರೆ, ಸಿಂಹ ಕಟಿಯ ದೇಹ ಇದಕ್ಕಿದೆ. ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ನಿಂದ ಹಿಡಿದು, ದೇಹದ ಬಹುತೇಕ ಮುಂಭಾಗ ಹೆಚ್ಚು ಪ್ರಮುಖವಾಗಿ ಕಾಣುತ್ತದೆ. ಎಂಜಿನ್‌ ತೆರೆದುಕೊಂಡಿದ್ದು, (ನೇಕೆಡ್‌ ವಿನ್ಯಾಸ) ಬೈಕ್‌ನ ಫ್ರೇಂ ಕಾಣುವಂತಿರುವುದು ವಿಶೇಷ.

ಇದಕ್ಕೆ ತಾಂತ್ರಿಕವಾಗಿ ಬೀಂ ಟೈಪ್‌ ಪೆರಿಮೀಟರ್‌ ಫ್ರೇಂ ಎಂದು ಕರೆಯಲಾಗಿದೆ. ಎಷ್ಟೇ ದೂರದ ಪ್ರಯಾಣವೂ ಈ ಬೈಕ್‌ನಲ್ಲಿ ಕಷ್ಟವಾಗದೇ ಇರುವುದು ವಿಶೇಷ ಎನ್ನಬಹುದು. ಅರ್ಧ ಅಲ್ಯೂಮಿನಿಯಂ ಅಲಾಯ್‌, ಬಾಕಿ ಅರ್ಧ ಉಕ್ಕಿನಿಂದ ಈ ಫ್ರೇಂ ತಯಾರಾಗಿದೆ.

ಮುಂಭಾಗದ ಬಹು ವಿಶಾಲವಾದ ಡಿಸ್ಕ್‌ ಬ್ರೇಕ್‌ (320 ಎಂ.ಎಂ) ಬೈಕ್‌ಗೆ ವಿಭಿನ್ನವಾದ ನೋಟವನ್ನು ನೀಡಿದೆ. 17 ಇಂಚಿನ ಚಕ್ರ ಹೊಸತೇನಲ್ಲ; ಪಲ್ಸರ್‌ನ ಬಹುತೇಕ ಎಲ್ಲ ಅವತರಣಿಕೆಗಳಲ್ಲೂ 17 ಇಂಚಿನ ಚಕ್ರಗಳೇ ಇವೆ. ಫ್ರೇಂಗೆ ಹೊಂದಿಕೊಂಡಂತೆಯೇ ಇರುವ ‘ಎಕ್ಸಾಸ್ಟ್‌ ಸಿಸ್ಟಂ’ ಚೆನ್ನಾಗಿದೆ.

ಎಂಜಿನ್‌ ಸಾಮರ್ಥ್ಯ
ಉತ್ತಮ ಶಕ್ತಿಯ ಎಂಜಿನ್‌ ಡಾಮಿನರ್‌ನಲ್ಲಿದೆ. 373.3 ಸಿ.ಸಿ.ಯ 4 ವಾಲ್ವ್‌ಗಳ ಡಿಟಿಎಸ್‌–ಐ, ಫ್ಯೂಯೆಲ್‌ ಇಂಜೆಕ್ಷನ್‌, ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದು. ಇದಕ್ಕೆ ತಕ್ಕಂತೆ, 35 ಪಿಎಚ್‌ ಶಕ್ತಿ (8,000 ಆರ್‌ಪಿಎಂ) ಹಾಗೂ 35 ಎನ್‌ಎಂ ಟಾರ್ಕ್‌ (6,500 ಆರ್‌ಪಿಎಂ) ಇದೆ. ಹಾಗಾಗಿ, ಸೊನ್ನೆಯಿಂದ ನೂರು ಕಿಲೋಮೀಟರ್‌ ವೇಗವನ್ನು ಕೇವಲ 8 ಸೆಕೆಂಡ್‌ಗಳಲ್ಲಿ ಬೈಕ್‌ ಮುಟ್ಟುತ್ತದೆ. 6 ಸ್ಪೀಡ್‌ಗಳ ಸ್ಲಿಪರ್‌ ಕ್ಲಚ್‌ ಇದ್ದು, ನಯವಾದ ಗಿಯರ್‌ ಬದಲಾವಣೆ ಇದರಿಂದ ಸಾಧ್ಯವಾಗುತ್ತದೆ.

ಸುರಕ್ಷೆಗೆ ಹೆಚ್ಚಿನ ಆದ್ಯತೆ: ಎರಡೂ ಬದಿಗಳಲ್ಲೂ ಡಿಸ್ಕ್‌ ಬ್ರೇಕ್‌ ಇರುವುದು ಸುರಕ್ಷೆಗೆ ಆದ್ಯತೆ ನೀಡಿದಂತೆ ಆಗಿದೆ. ಈಗಿನ ಬಹುತೇಕ ಪ್ರೀಮಿಯಂ ಬೈಕ್‌ಗಳಲ್ಲಿ ಹಿಂಬದಿ ಹಾಗೂ ಮುಂಬದಿಯಲ್ಲಿ ಡಿಸ್ಕ್‌ ಬ್ರೇಕ್‌ ಇದ್ದೇ ಇರುತ್ತದೆ. ಆದರೆ, ಇದಿಷ್ಟೇ ಈ ಬೈಕ್‌ನ ವಿಶೇಷವಲ್ಲ. ‘ಡಾಮಿನರ್‌’ನಲ್ಲಿ ‘ಎಬಿಎಸ್’ (ಆ್ಯಂಟಿ ಲಾಕ್ ಬ್ರೇಕಿಂಗ್‌ ಸಿಸ್ಟಂ) ಇದೆ. ಇದರಿಂದ ವೇಗದ ಚಾಲನೆಯಲ್ಲಿ ಬ್ರೇಕ್‌ ಬಳಸಿದಾಗ ಸುರಕ್ಷೆಯಿಂದ ಚಾಲನೆ ಮಾಡುವುದು ಸಾಧ್ಯವಾಗುತ್ತದೆ.

ಈ ಸೌಲಭ್ಯ ಇಲ್ಲದ ಸಾಧಾರಣ ಅವತರಣಿಕೆಯೂ ಸಿಗುತ್ತದೆ. ಆದರೆ, ಡಿಸ್ಕ್‌ ಬ್ರೇಕ್‌ ಇದ್ದೇ ಇರುತ್ತದೆ. ಮುಂಬದಿಯಲ್ಲಿ 320 ಎಂ.ಎಂ ಹಾಗೂ ಹಿಂಬದಿಯಲ್ಲಿ 230 ಎಂ.ಎಂ ಡಿಸ್ಕ್‌ಗಳಿವೆ. ಮುಂಬದಿ 110/70, ಹಿಂಬದಿ 150/60 ಟೈರ್‌ಗಳಿದ್ದು ಉತ್ತಮ ರಸ್ತೆ ಹಿಡಿತ ಇದೆ. ಎಬಿಎಸ್‌ ಸೌಲಭ್ಯ ಬೇಕೆಂದರೆ ಗ್ರಾಹಕ ₹ 20 ಸಾವಿರ ಹೆಚ್ಚನ್ನು ಪಾವತಿಸಬೇಕಾಗುತ್ತದೆ.

ಇದರ ಜತೆಗೆ, ಹೆಡ್‌ಲೈಟ್‌ನಲ್ಲಿ ಸಂಪೂರ್ಣ ‘ಎಲ್‌ಇಡಿ’ (ಲೈಟ್‌ ಎಮಿಟಿಂಗ್ ಡಯಾಡ್‌) ದೀಪಗಳನ್ನು ಅಳವಡಿಸಲಾಗಿದೆ. ರಸ್ತೆಯನ್ನು ಬೆಳಗಿಸುವಲ್ಲಿ ಇವು ಸಹಾಯ ಮಾಡುತ್ತವೆ. ಇವು ಎಲ್‌ಇಡಿ ದೀಪಗಳಾಗಿರುವ ಕಾರಣ, ಎದುರು ಬರುವ ವಾಹನಗಳ ಚಾಲಕರಿಗೆ ಕಣ್ಣಿಗೆ ಕುಕ್ಕುವುದಿಲ್ಲ. ಹಾಗಾಗಿ, ಅವರಿಗೆ ಕಣ್ಣುಕತ್ತಲೆಯಾಗುವ ಸಾಧ್ಯತೆ ಕಡಿಮೆ. ಜತೆಗೆ ಆಟೊ ಎಲ್‌ಇಡಿ ದೀಪಗಳಿವೆ. ಕತ್ತಲಾಗುತ್ತಿದ್ದಂತೆ ತನಗೆ ತಾನೇ ದೀಪಗಳು ಹೊತ್ತಿಕೊಳ್ಳುತ್ತವೆ. ಇದನ್ನು ಮ್ಯಾನ್ಯುಯಲ್‌ ಮಾಡಿಕೊಳ್ಳುವ ಅವಕಾಶವೂ ಇದೆ. ಹಿಂಬದಿಯಲ್ಲಿ ಎರಡು ಎಲ್‌ಇಡಿ ದೀಪಗಳಿವೆ.

ಈ ಬೈಕ್‌ಗೆ ಪೈಪೋಟಿ ನೀಡುವ ಮತ್ತೊಂದು ಬೈಕ್‌ ಸದ್ಯಕ್ಕೆ ಬೇರಾವ ಕಂಪೆನಿಯಲ್ಲೂ ಇಲ್ಲ. ರಾಯಲ್‌ ಎನ್‌ಫೀಲ್ಡ್‌ನಲ್ಲಿ ಮುಂಚೆಯಿಂದಲೂ 350 ಸಿಸಿ ಮೇಲ್ಪಟ್ಟ ಬೈಕ್‌ಗಳು ಇವೆ. ಅದನ್ನು ಬಿಟ್ಟರೆ ಬಜಾಜ್‌ ಮಾರುಕಟ್ಟೆ ನೋಡಿಕೊಳ್ಳುತ್ತಿರುವ ಕೆಟಿಎಂನಲ್ಲಿ ಪೈಪೋಟಿ ನೀಡುವ ಬೈಕ್‌ ಇವೆ.

ಹೀರೊ ಮೋಟೊ ಕಾರ್ಪ್‌ ಶೀಘ್ರವೇ 350 ಸಿ.ಸಿ.ಯ ಬೈಕ್‌ ಹೊರಬಿಡುವುದಾಗಿ ಹೇಳಿಕೊಂಡಿದೆ. ಅಲ್ಲಿಯವರೆಗೂ ಭಾರತೀಯ ನಿರ್ಮಾಣದ, ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ಬೈಕ್‌ ಇದೊಂದೇ. ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನವನ್ನೇ ಬಳಸಿಕೊಂಡು ಉತ್ತಮ ಬೈಕ್‌ ನೀಡಿರುವುದಕ್ಕೆ ಪ್ರಶಂಸಿಸಲೇಬೇಕು.

ಮೈಲೇಜ್‌ ಸಾಧಾರಣ: ಈ ರೀತಿಯ ಬೈಕ್‌ಗಳಿಂದ ಯಾರೂ ಹೆಚ್ಚಿನ ಮೈಲೇಜ್‌ ನಿರೀಕ್ಷಿಸುವುದಿಲ್ಲ. 393 ಸಿ.ಸಿ.ಯ ಈ ಬೈಕ್‌ ಕನಿಷ್ಠ 25 ಕಿಲೋಮೀಟರ್‌ ಮೈಲೇಜ್‌ ಕೊಡುತ್ತದೆ. ಅತ್ಯುತ್ತಮ ಚಾಲನಾ ಪರಿಸ್ಥಿತಿಗಳಲ್ಲಿ 35 ಕಿಲೋಮೀಟರ್‌ವರೆಗಿನ ಮೈಲೇಜ್‌ ಅನ್ನು ನಿರೀಕ್ಷಿಸಬಹುದು. 13 ಲೀಟರ್ ಪೆಟ್ರೋಲ್ ತುಂಬಿಸಬಲ್ಲ ಟ್ಯಾಂಕ್‌ ಇದೆ. ಈ ಬೈಕ್‌ನ ಬೆಂಗಳೂರು ಎಕ್ಸ್ ಶೋರೂಂ ಬೆಲೆ 1.37 ಲಕ್ಷ (ಎಬಿಎಸ್‌ ರಹಿತ), 1.51 ಲಕ್ಷ (ಎಬಿಎಸ್ ಸಹಿತ) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT