ಮಕ್ಕಳ ಕೈಗೊಂದು ವಾಚ್

ಪುಟ್ಟ ಮಕ್ಕಳು ಮನೆಯಿಂದ ಹೊರಗೆ ಹೋದಾಗ ಅವರು ಎಲ್ಲಿದ್ದಾರೆಂದು ಸೂಚಿಸುವ ಹಾಗೂ ಅಗತ್ಯಬಿದ್ದರೆ ಅವರನ್ನು ಕರೆಯುವ ಒಂದು ವಾಚ್  ಇದು.

ಮಕ್ಕಳ ಕೈಗೊಂದು ವಾಚ್

ಒಂದಾನೊಂದು ಕಾಲದಲ್ಲಿ ಮಕ್ಕಳು ಬೆಳಿಗ್ಗೆ ಮನೆಯಿಂದ ಶಾಲೆಗೆ ಹೋದರೆ ಸಾಯಂಕಾಲ ಅವರು ಶಾಲೆ ಬಿಟ್ಟ ಮೇಲೆ ಹೊಳೆಯಲ್ಲಿ ಈಜಿ, ಮರಹತ್ತಿ ಹಣ್ಣು ಕೊಯಿದು ತಿಂದು, ದಾರಿಯಲ್ಲಿ ಆಟವಾಡಿ ರಾತ್ರಿಯಾಗುವ ಹೊತ್ತಿಗೆ ಮನೆಗೆ ತಲುಪುತ್ತಿದ್ದರು. ಮನೆಯವರೂ ಮಕ್ಕಳು ಎಲ್ಲಿ ಕಳೆದುಹೋಗಿರಬಹುದೆಂದು ಚಿಂತಿಸುತ್ತಿರಲಿಲ್ಲ. ಆದರೆ ಈಗ ಕಾಲ ಹಾಗಿಲ್ಲ. 4:30ಕ್ಕೆ ಶಾಲೆ ಬಿಟ್ಟರೆ 5:15ಕ್ಕೆ ಶಾಲಾ ವ್ಯಾನ್ ಮನೆ ಮುಂದೆ ಬಂದು ಮಗು ಅದರಿಂದ ಇಳಿಯದಿದ್ದರೆ ಮನೆಯವರಿಗೆಲ್ಲ ತಲೆಬಿಸಿಯಾಗುತ್ತದೆ. 

ವ್ಯಾನ್ ಬಂದೂ ಮಗು ಬರಲಿಲ್ಲವೆಂದರೆ ಇನ್ನಷ್ಟು ತಲೆಬಿಸಿ. ಶಾಲೆಗೆ ಫೋನಾಯಿಸುತ್ತಾರೆ. ಮನೆಯಿಂದ ಕೇವಲ 250 ಮೀಟರ್ ದೂರದಲ್ಲಿ ಮಗುವನ್ನು ಇಳಿಸಿ ವ್ಯಾನ್ ಹೋಗುವಾಗ ಆ ಹೊತ್ತಿಗೆ ಅಲ್ಲಿ ಪೋಷಕರು ಇಲ್ಲವಾದಲ್ಲಿ ಮಗು ನಡೆದುಕೊಂಡು ಬರುವಾಗ ದಾರಿ ತಪ್ಪಿದರೆ, ಯಾರಾದರೂ ಹೊತ್ತುಕೊಂಡು ಹೋದರೆ, ಹೀಗೆಲ್ಲ ಯೋಚಿಸಿ ತಲೆಕೆಡಿಸಿಕೊಳ್ಳುತ್ತಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಟೋಗ್ರ್ ವಾಚ್ ಬಂದಿದೆ.

ಪುಟ್ಟ ಮಕ್ಕಳ ಕೈಗೆ ಜಿಪಿಎಸ್ ಸೌಲಭ್ಯವಿರುವ ವಾಚ್‌ಗಳನ್ನು ಕಟ್ಟಿ ಅದರ ಮೂಲಕ ಅವರು ಎಲ್ಲಿದ್ದಾರೆ ಎಂದು ತಿಳಿಯಬಹುದು. ಮಾರುಕಟ್ಟೆಯಲ್ಲಿ ಇಂತಹ ಹಲವು ವಾಚ್‌ಗಳು ಲಭ್ಯವಿವೆ. ಅಂತಹ ಒಂದು ವಾಚ್ ಟೋಗ್ರ್. ಇದನ್ನು ತಯಾರಿಸಿದವರು ನಮ್ಮ ಬೆಂಗಳೂರಿನ ಮಾಗ್ನಾಸಾಫ್ಟ್ ಕಂಪೆನಿಯವರು. ಈ ಟೋಗ್ರ್ ವಾಚ್ ನಮ್ಮ ಈ ವಾರದ ಗ್ಯಾಜೆಟ್. ಇದು ಮಕ್ಕಳ ಮಾಮೂಲಿ ವಾಚಿನಂತೆ ಕಂಡುಬರುತ್ತದೆ.

ನೋಡಲು ಮುದ್ದಾಗಿದೆ. ಸ್ವಲ್ಪ ದೊಡ್ಡವೇ ಎನ್ನುವಂತಿದೆ. ಇದರ ವಿನ್ಯಾಸ ಯಾವ ರೀತಿಯಿದೆ ಎಂದರೆ, ಇದನ್ನು ಸಪೂರ ಕೈ ಇರುವ ಮಕ್ಕಳು ಮಾತ್ರ ಕಟ್ಟಬಹುದಾಗಿದೆ. ಮಕ್ಕಳಲ್ಲೂ ಅಲ್ಲೊಮ್ಮೆ ಇಲ್ಲೊಮ್ಮೆ ಅತಿ ದಪ್ಪ ದೇಹದವರಿರುತ್ತಾರೆ. ಅವರ ಕೈಗೆ ಇದನ್ನು ಕಟ್ಟಲು ಕಷ್ಟ. ಈ  ವಾಚ್ ಮೂರು ಬಣ್ಣಗಳಲ್ಲಿ ಲಭ್ಯ. ವಾಚಿನಲ್ಲಿ ರಿಚಾರ್ಜೆಬಲ್ ಬ್ಯಾಟರಿ ಇದೆ. ಒಮ್ಮೆ ಚಾರ್ಜ್ ಮಾಡಿದರೆ ಒಂದು ದಿನ ಕೆಲಸ ಮಾಡುತ್ತದೆ.

ಬ್ಯಾಟರಿ ಬಾಳಿಕೆ ಇನ್ನೂ ಸ್ವಲ್ಪ ಹೆಚ್ಚಿದ್ದರೆ ಉತ್ತಮವಿತ್ತು. 2ಜಿ, 3ಜಿ ಅಥವಾ 4ಜಿ ಸಿಮ್ ಕಾರ್ಡ್ ಹಾಕಬಹುದು. ಆದರೆ ರಿಲಯನ್ಸ್ ಜಿಯೋ ಸಿಮ್ ಕೆಲಸ ಮಾಡಲಾರದು. ವಾಚಿನಲ್ಲಿ ಜಿಪಿಎಸ್ ಇದೆ. ಅದರ ಮೂಲಕ ತಾನು ಇರುವ ಸ್ಥಳವನ್ನು ಪತ್ತೆಹಚ್ಚಿ ತಿಳಿಸುತ್ತದೆ.

ವಾಚಿನ ಪೂರ್ತಿ ಉಪಯೋಗ ಮಾಡಬೇಕಾದರೆ ವಾಚಿನ ಕಂಪೆನಿಯವರೇ ತಯಾರಿಸಿದ ಕಿರುತಂತ್ರಾಂಶವನ್ನು (ಆ್ಯಪ್) ಗೂಗಲ್‌ ಪ್ಲೇ ಸ್ಟೋರಿನಿಂದ ಹಾಕಿಕೊಳ್ಳಬೇಕು. ಆಪಲ್ ಐಫೋನ್‌ಗೂ ಈ ಕಿರುತಂತ್ರಾಂಶ ಲಭ್ಯವಿದೆ. ಈ ಕಿರುತಂತ್ರಾಂಶದಲ್ಲಿ ಕೆಲವು ಪ್ರಮುಖ ಸೌಲಭ್ಯಗಳಿವೆ.

ನಿಮ್ಮ ಹೆಸರು, ಮಗುವಿಗೆ ನೀವು ಏನು ಆಗಬೇಕು ಎಂದು ನಮೂದಿಸಬೇಕು. ತಂದೆ, ತಾಯಿ, ಅಣ್ಣ, ಹೀಗೆ ಒಂದಕ್ಕಿಂತ ಹೆಚ್ಚು ಸಂಬಂಧಿಕರ ಫೋನ್ ಸಂಖ್ಯೆ ಸೇರಿಸಬಹುದು.  ಮಗುವಿನ ಹೆಸರು, ಫೋಟೊ ಎಲ್ಲ  ಸೇರಿಸಬೇಕು.

ಈ ಕಿರುತಂತ್ರಾಂಶದ ಒಂದು ಸಣ್ಣ ಸಮಸ್ಯೆ ಎಂದರೆ ಎಲ್ಲ ವ್ಯಕ್ತಿಗಳ ಫೋಟೊ ಸೇರಿಸದಿದ್ದಲ್ಲಿ ಅದು ಮುಂದೆ ಹೋಗುವುದೇ ಇಲ್ಲ. ಕಿರುತಂತ್ರಾಂಶವನ್ನು ಪೂರ್ತಿಯಾಗಿ ಇನ್‌ಸ್ಟಾಲ್ ಮಾಡಲು ವಾಚಿನ ಅಡಿಭಾಗದಲ್ಲಿ ನೀಡಿರುವ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಬೇಕು. ಕಿರುತಂತ್ರಾಂಶದ ಶಕ್ತಿ ಇರುವುದು ಅದು ವಾಚ್ ಧರಿಸಿದ ಮಗು ಎಲ್ಲಿದೆ ಎಂಬುದನ್ನು ತೋರಿಸುವುದರಲ್ಲಿ. ಜಿಪಿಎಸ್ ಬಳಸಿ ಮ್ಯಾಪ್‌ನಲ್ಲಿ ಮಗು, ಅಂದರೆ ವಾಚ್ ಎಲ್ಲಿದೆ ಎಂದು ತೋರಿಸುತ್ತದೆ. ವಾಚಿನಲ್ಲಿ ಸಿಮ್ ಇರುವ ಕಾರಣ ಅದಕ್ಕೆ ಕರೆಯನ್ನೂ ಮಾಡಬಹುದು. ಅದಕ್ಕೂ ಕಿರುತಂತ್ರಾಂಶದಲ್ಲಿ ಸೌಲಭ್ಯವಿದೆ.

ಮಗು ಸಾಮಾನ್ಯವಾಗಿ ಹೋಗುವ ಎಲ್ಲ ಸ್ಥಳಗಳನ್ನು ಮೊಬೈಲಿನ ಕಿರುತಂತ್ರಾಂಶದಲ್ಲಿ ದಾಖಲಿಸಬೇಕು. ನಂತರ ಅವುಗಳಿಗೆ ಹೆಸರು ನೀಡಬೇಕು. ಅವು ಶಾಲೆ, ಟ್ಯೂಷನ್, ಪಾರ್ಕ್ ಇತ್ಯಾದಿ ಇರಬಹುದು. ಇಲ್ಲೂ ಒಂದು ಸಣ್ಣ ಸಮಸ್ಯೆ ನನಗೆ ಕಂಡುಬಂತು. ಮನೆಯಿಂದ 250 ಮೀಟರ್ ದೂರದ ಒಳಗೇ ಇರುವ ಇನ್ನೊಂದು ಸ್ಥಳವನ್ನು ಅದು ಬೇರೆ ಸ್ಥಳ ಎಂದು ಸೇರಿಸಲು ಒಪ್ಪುವುದಿಲ್ಲ.

ಈ ಸ್ಥಳ ಈಗಾಗಲೆ ಮನೆ ಎಂದು ದಾಖಲಾಗಿದೆ ಎಂದು ಪ್ರತಿಭಟಿಸುತ್ತದೆ. ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿ ಪಾರ್ಕ್ ಇದ್ದಲ್ಲಿ ಅದರಲ್ಲಿ ಮಗುವನ್ನು ಆಡಲು ಬಿಟ್ಟರೆ ಅದು ನಿಮ್ಮ ಮನೆ ಎಂದೇ ತೋರಿಸುತ್ತದೆ.

ವಾಚಿನಲ್ಲಿ ಒಂದು ವಿಶೇಷ ಬಟನ್ ಇದೆ. ಅದನ್ನು ಮಗು ಒತ್ತಿದರೆ ವಾಚಿನಲ್ಲಿರುವ ಸಿಮ್ ಬಳಸಿ ಅದು ಪೋಷಕರಿಗೆ ಕರೆ ಮಾಡುತ್ತದೆ. ಕಿರುತಂತ್ರಾಂಶದಲ್ಲಿ ದಾಖಲಾಗಿರುವ ಮೂರು ಸಂಖ್ಯೆಗಳಿಗೆ ಒಂದಾದ ನಂತರ ಒಂದರಂತೆ ಕರೆ ಮಾಡಲು ಪ್ರಯತ್ನಿಸುತ್ತದೆ. ಮಗು ಅಪಾಯದಲ್ಲಿದ್ದರೆ ಮನೆಯವರನ್ನು ಸಂಪರ್ಕಿಸಲು ಇದು ಸಹಾಯಕಾರಿ. ಈ ಸೌಲಭ್ಯ ಈ ವಾಚಿನ ಪ್ರಮುಖ ಆಕರ್ಷಣೆ ಮತ್ತು ಇದಕ್ಕೋಸ್ಕರವೇ ಇದನ್ನು ಕೊಳ್ಳಬೇಕು.

ವಾಚಿನ ಬಲಭಾಗದಲ್ಲಿ ಮೂರು ಬಟನ್‌ಗಳಿವೆ. ಮಧ್ಯದ ಬಟನ್ ಆನ್/ಆಫ್ ಬಟನ್. ಅದರ ಕೆಳಗಡೆ ಇರುವುದು ಮನೆಯವರನ್ನು ತುರ್ತು ಸಂದರ್ಭದಲ್ಲಿ ಕರೆ ಮಾಡಿ ಸಂಪರ್ಕಿಸಲು ಇರುವ ಬಟನ್. ಮೇಲ್ಭಾಗದಲ್ಲಿ ಇರುವ ಬಟನ್, ಕರೆ ಬಂದರೆ ಸ್ವೀಕರಿಸಲು ಇರುವುದು. ಈ ವಾಚಿನಲ್ಲಿ ಸಿಮ್  ಕಾರ್ಡ್ ಇರುವ ಕಾರಣ ಮನೆಯವರು ಅಗತ್ಯವಿದ್ದಲ್ಲಿ ಅದರ ಸಂಖ್ಯೆಗೆ ಕರೆ ಮಾಡಬಹುದು.

ವಾಚಿನಲ್ಲಿ ಮಾತನಾಡಲು ಅಗತ್ಯವಿರುವ ಸ್ಪೀಕರ್ ಮತ್ತು ಮೈಕ್ರೋಫೋನ್‌ಗಳಿವೆ. ಮಗು ಎಷ್ಟು ಹೆಜ್ಜೆ ನಡೆದಿದೆ ಎಂದು ಕೂಡ ವಾಚ್ ತೋರಿಸುತ್ತದೆ. ಆದರೆ ಈ ಮಾಹಿತಿಯನ್ನು ಕಿರುತಂತ್ರಾಂಶಕ್ಕೆ ವರ್ಗಾಯಿಸಿ ಅದನ್ನು ಒಂದು ಕೋಷ್ಟಕವನ್ನಾಗಿ ನೋಡಲು ಸಾಧ್ಯವಿಲ್ಲ.

ಈ ವಾಚಿನ ಬೆಲೆ ₹2499 (www.toggrworld.com). ಈ ಬೆಲೆಗೆ ವಾಚಿನ ಜೊತೆ 6 ತಿಂಗಳ ಸದಸ್ಯತ್ವ ದೊರೆಯುತ್ತದೆ. 6 ತಿಂಗಳ ನಂತರ ಪ್ರತಿ 6 ತಿಂಗಳಿಗೆ ₹599 ನೀಡಿ ಸದಸ್ಯತ್ವ ಪಡೆದುಕೊಳ್ಳಬೇಕು. ಈ ಸದಸ್ಯತ್ವವಿಲ್ಲದಿದ್ದರೆ ವಾಚ್ ಅನ್ನು ಬಳಸಬಹುದು, ಅದಕ್ಕೆ ಕರೆ ಮಾಡಬಹುದು. ಆದರೆ ಮಗು ಎಲ್ಲಿದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ.

ವಾರದ ಆ್ಯಪ್ - ಟೊರೆಂಟ್  ಹುಡುಕಿ
ಟೊರೆಂಟ್ ಎಂದರೆ ಏನು ಎಂದು ಹಿಂದಿನ ಸಂಚಿಕೆಯಲ್ಲಿ ವಿವರಿಸಲಾಗಿದೆ. ಟೊರೆಂಟ್ ಎಂದ ತಕ್ಷಣ ಬಹುಮಂದಿಗೆ ಸಿನಿಮಾಗಳನ್ನು ಡೌನ್‌ಲೋಡ್ ಮಾಡುವುದು ನೆನಪಾಗಬಹುದು. ಆದರೆ ಟೊರೆಂಟ್ ಅಂದರೆ ಕಾನೂನುಬಾಹಿರವಾಗಿ ಸಿನಿಮಾ ಡೌನ್‌ಲೋಡ್ ಮಾತ್ರ ಆಗಬೇಕಾಗಿಲ್ಲ. ಬಹುತೇಕ ಮುಕ್ತ ತಂತ್ರಾಂಶಗಳು ಟೊರೆಂಟ್ ಮೂಲಕ ದೊರೆಯುತ್ತವೆ. ಅಂತರಜಾಲದಲ್ಲಿ ಹುಡುಕಲು ಹಲವು ಶೋಧಕಗಳು (ಉದಾ –ಗೂಗಲ್) ಇರುವಂತೆ ಟೊರೆಂಟ್‌ಗಳನ್ನು ಹುಡುಕಲೂ ಶೋಧಕಗಳಿವೆ. ಟೊರೆಂಟ್ ಶೋಧಕ ಕಿರುತಂತ್ರಾಂಶವೂ (ಆ್ಯಪ್) ಇದೆ.

ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Torrent Search Engine ಎಂದು ಹುಡುಕಬೇಕು ಅಥವಾ bit.ly/gadgetloka263  ಜಾಲತಾಣಕ್ಕೆ ಭೇಟಿ ನೀಡಬೇಕು. ಟೊರೆಂಟ್ ಹುಡುಕಲು ಹಲವು ಆಯ್ಕೆಗಳನ್ನು ನಿಗದಿಮಾಡಿ ನಂತರ ಹುಡುಕುವ ಸವಲತ್ತು ಇದೆ. ಟೊರೆಂಟ್ ಹುಡುಕಿದ ನಂತರ ಅದನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ, ಟೊರೆಂಟ್ ಮೂಲಕ ಡೌನ್‌ಲೋಡ್ ಮಾಡುವ ಇನ್ನೊಂದು ಕಿರುತಂತ್ರಾಂಶಕ್ಕೆ (ಕಳೆದ ವಾರ ಅದನ್ನು ನೀಡಲಾಗಿತ್ತು) ದಾಟಿಸಬಹುದು.

ಗ್ಯಾಜೆಟ್‌ ಸುದ್ದಿ - ಲೆಗೊ ಬೂಸ್ಟ್
ಲೆಗೊವನ್ನು ಎಷ್ಟು ಜನ ಆಡಿದ್ದೀರಾ? ಬೇರೆ ಬೇರೆ ನಮೂನೆಯ ಇಟ್ಟಿಗೆಗಳನ್ನು ಜೋಡಿಸಿ ಹಲವು ಮಾದರಿಗಳನ್ನು ಮಾಡುವ ಒಂದು ಉತ್ತಮ ಆಟವಿದು. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವಾಗುವಂಥದ್ದು. ಲೆಗೊ ಟೆಕ್ನಿಕ್ಸ್ ನನಗೆ ತುಂಬ ಇಷ್ಟವಾದುದು. ಅದರಲ್ಲಿರುವ ಪುಟಾಣಿ ಅಂಗಗಳನ್ನು ಜೋಡಿಸಿ ಹಲವು ನಮೂನೆಯ ವಾಹನಗಳನ್ನು ಮಾಡಬಹುದು. ಈಗ ಅದರ ಮುಂದುವರಿಕೆಯ ಭಾಗವಾಗಿ ಲೆಗೊ ಬೂಸ್ಟ್ ಬರುತ್ತಿದೆ.

ಇದರ ಹೆಚ್ಚುಗಾರಿಕೆಯೆಂದರೆ ಇದರಲ್ಲಿರುವ ಅಂಗಗಳನ್ನು ಜೋಡಿಸಿ ರೋಬೊ ಅಥವಾ ಇನ್ಯಾವುದೇ ಸಾಧನ ತಯಾರಿಸುವುದು ಮಾತ್ರವಲ್ಲ, ಅದರ ಜೊತೆ ದೊರೆಯುವ ಕಿರುತಂತ್ರಾಂಶವನ್ನು ಟ್ಯಾಬ್ಲೆಟ್‌ನಲ್ಲಿ ಹಾಕಿಕೊಂಡು ಅದನ್ನು ಪ್ರೋಗ್ರಾಮ್ ಮಾಡಬಹುದು. ರೋಬೊ ಅನ್ನು ಟ್ಯಾಬ್ಲೆಟ್‌ಮೂಲಕ ನಿಯಂತ್ರಿಸಬಹುದು ಕೂಡ. ಲೆಗೊ ಬೂಸ್ಟ್ 2017ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರಲಿದೆ.

ಗ್ಯಾಜೆಟ್‌ ಸಲಹೆ - ಸುಬ್ರಹ್ಮಣ್ಯರ ಪ್ರಶ್ನೆ: ರೆಡ್‌ಮಿ ನೋಟ್ 3 ಮತ್ತು ನೋಟ್ 4 –ಇವುಗಳಲ್ಲಿ ಯಾವುದು ಉತ್ತಮ?
ಉ: 
ರೆಡ್‌ಮಿ ನೋಟ್ 4

ಗ್ಯಾಜೆಟ್‌ ತರ್ಲೆ - ಮನೆಯಿಂದ/ರೂಮಿನಿಂದ ಹೊರಗೆ ಹೊರಡುವ ಸಮಯವನ್ನು ನಿರ್ಧರಿಸುವುದು ನಿಮ್ಮ ಮೊಬೈಲಿನ ಚಾರ್ಜರ್. 100% ಆದಾಗಲೇ ಹೊರಡುವುದು.

Comments
ಈ ವಿಭಾಗದಿಂದ ಇನ್ನಷ್ಟು
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

15 Mar, 2018
ಕಡಿಮೆ ಬೆಲೆಯ ಸಾಧನಗಳು

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಸಾಧನಗಳು

8 Mar, 2018
ನೋಟ್ 4ನ ಉತ್ತರಾಧಿಕಾರಿ

ಗ್ಯಾಜೆಟ್ ಲೋಕ
ನೋಟ್ 4ನ ಉತ್ತರಾಧಿಕಾರಿ

1 Mar, 2018
ಒಂದು ಉತ್ತಮ ಫೋನ್

ಗ್ಯಾಜೆಟ್ ಲೋಕ
ಒಂದು ಉತ್ತಮ ಫೋನ್

22 Feb, 2018
ಟಿ.ವಿ.ಯನ್ನು  ಸ್ಮಾರ್ಟ್ ಮಾಡಿ

ಗ್ಯಾಜೆಟ್ ಲೋಕ
ಟಿ.ವಿ.ಯನ್ನು ಸ್ಮಾರ್ಟ್ ಮಾಡಿ

15 Feb, 2018