ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನೋಟು ಊಟವಿಲ್ಲದಂತೆ ಮಾಡಿತು

Last Updated 25 ಜನವರಿ 2017, 19:30 IST
ಅಕ್ಷರ ಗಾತ್ರ

ಅವತ್ತು ಬೆಳಗಾವಿ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಹಿಂದಿನ ದಿನ. ನಾನು ಮತ್ತು ನನ್ನ ಗೆಳೆಯ ಅಧಿವೇಶನದಲ್ಲಿ ವಿದ್ಯಾರ್ಥಿ ವರದಿಗಾರಿಕೆಗೆ ಸುವರ್ಣ ಸೌಧದ ಒಳಗಡೆ ಹೋಗಲು ಅನುಮತಿ ಪಾಸ್ ತೆಗೆದುಕೊಂಡು ಬರೋಣ ಅಂತ ಬೆಳಿಗ್ಗೆ ಬೈಕ್ ತೆಗೆದುಕೊಂಡು ಬೆಳಗಾವಿ ಕಡೆ ಪ್ರಯಾಣ ಮಾಡಿದ್ವಿ. ಹೋಗುವಾಗ ಬೈಕಲ್ಲಿ ಲೀಟರ್ ಪೆಟ್ರೋಲ್ ಬಿಟ್ಟರೆ ಕಿಸೆಯೊಳಗೆ ಒಂದು ರೂಪಾಯಿಲ್ಲ.

ಏನೋ ನಮ್ಮ ಗೆಳೆಯನ ಹತ್ರ ಇದೆ ಎಂದು ಯೋಚನೆ ಮಾಡದೆ ಇಬ್ಬರು ಸುಮ್ಮನೆ ಪ್ರಯಾಣ ಮಾಡಿದ್ವಿ. ಆದರೆ ಬೆಳಿಗ್ಗೆ ಹೊಟ್ಟೆಯಲ್ಲಿ ಏನೂ ಹಾಕದೆ ಹೋಗಿದ್ದು ನನ್ನ ಗ್ರಹಚಾರವೋ ಏನೋ ಗೊತ್ತಿಲ್ಲ, ಕಿತ್ತೂರು ಹತ್ತಿರ ಬರುತ್ತಿದ್ದಂತೆ ಕರುಳು ಕಿರುಚಾಡಲು ಆರಂಭಿಸಿತು.

ಗೆಳೆಯನ ಹತ್ತಿರ ಹಣವಿರಬಹುದೆಂದು ತಿಳಿದು ಹೈವೇ  ಪಕ್ಕದಲ್ಲಿನ ಹೋಟೆಲ್ ಹತ್ತಿರ ಬೈಕ್ ನಿಲ್ಲಿಸಿದೆ. ದಿಢೀರನೆ ಗೆಳೆಯ ‘ಯಾಕೋ’ ಅಂದ?. ‘ತಿಂಡಿಗೆ’ ಅಂದೆ. ಅಷ್ಟರಲ್ಲಿ ‘ನಿನ್ನ ಹತ್ತಿರ ದುಡ್ಡು ಎಷ್ಟು ಅದಾವು’ ಅಂತ ಒಂದ ಮಾತು ಕೇಳಿದ್ದೇ ತಡ, ಪಾಪ ಮುಖವನ್ನು ಕೆಳಗಿಳಿಸಿದ. ಹೋ ಇವ್ನ ಹತ್ರನ ಗಾಂಧಿ ಹಾಳೆ ಇಲ್ಲ ಎಂಬುದು ಖಾತ್ರಿಯಾಯಿತು. ರೊಕ್ಕ ಇರುವ ಮೆಷಿನ್ ಹುಡುಕಬೇಕಾದ ಪರಿಸ್ಥಿತಿ ಬಂತು.

ಇರೋ ಒಂದು ಲೀಟರ್ ಪೆಟ್ರೋಲ್ ಎಲ್ಲಿ ಕೈ ಕೊಡುತ್ತೋ ಎಂದು ಅಲ್ಲೇ ಗಾಡಿ ಇಟ್ಟು ಕಿತ್ತೂರು ಒಳಗೆ ಹೋಗಿ ಒಂದು ರೊಕ್ಕದ ಮೆಷಿನ್ ಹುಡುಕಿದ್ದು. ಅಂತು ಇಂತೂ ಕಾಣದ ಜಾಗದಲ್ಲಿ ರೊಕ್ಕದ ಮೆಷಿನ್ ಕಣ್ಣಿಗೆ ಬಿದ್ದಿದ್ದೇ ತಡ ಒಳ ನುಗ್ಗಿ ಸರಕ್ಕನೆ ಕಾರ್ಡ್ ಒಳಗೆ ಹಾಕಿ ಪಿನ್ ನಂಬರ್ ಹೊಡೆಯೋಣ ಅಂದರೆ ಎದುರಿಗೆ ‘ಟೂ ಥೌಸಂಡ್‌ ರುಪೀಸ್‌ ನೋಟ್ ಓನ್ಲಿ’ ಅಂತ ಬೋರ್ಡ್ ನೇತಾಡುತಿತ್ತು.

ಖಾತೆಯಲ್ಲಿರುವುದು ₹2700 ಅಷ್ಟೇ. ಹಿಂದೆ ಮುಂದೆ ನೋಡದೆ ಪಿನ್ ನಂಬರ್ ಕೊಟ್ಟ ಮೇಲೆ, ನಗುತ್ತಿರುವ ಗಾಂಧಿಯವರ ಕೆಂಪು ನೋಟು ಹೊರಗೆ ಬಂತು. ಮತ್ತೆ ಅದೇ ಹೊಟೇಲ್‌ಗೆ ಮರಳದ್ವಿ. ಇನ್ನೇನು ತಿಂಡಿ ಆರ್ಡರ್ ಮಾಡೋಣವೆನ್ನುವಷ್ಟರಲ್ಲಿ ಹೋಟೆಲ್ ಮಾಲೀಕರು ಒಂದು ಆಜ್ಞೆ ಹೊರಡಿಸಿಬಿಟ್ಟರು. ಅದೇನೆಂದರೆ ‘₹2000 ನೋಟು ಇದ್ದವರಿಗೆ ತಿಂಡಿ ಕೊಡಬೇಡಿ’ ಎಂದು. ಇದನ್ನ ಕೇಳಿದ್ದೇ ಸೀದಾ ಮಾಲೀಕರ ಮುಂದೆ ಹೋಗಿ ‘ನಮ್ಮಲ್ಲಿ ಇರೋದೇ ₹2000 ನೋಟು ಸರ್’ ಅಂದೆ. ಅವರು ‘ದಯಮಾಡಿ ಆ ನೋಟಿಗೆ ಹತ್ತಿರ ಚಿಲ್ಲರೆ ಇಲ್ಲ’ ಅಂತ ಹೇಳಬಿಟ್ರು.

ಬಹಳ ಹಸಿವು. ಎಷ್ಟೇ ಕಾಡಿಬೇಡಿದ್ರು ಮಾಲೀಕರು ಜಪ್ಪಯ್ಯ ಅನ್ನಲಿಲ್ಲ. ನಂತರ ಪರಿಸ್ಥಿತಿ ಹೇಳಿದ ಮೇಲೆ ಎರಡು ಪ್ಲೇಟ್ ಪೂರಿಬಾಜಿ ಕೊಟ್ಟರು. ವಾಪಸ್‌ ಬರುವಾಗ ನಿಮ್ಮ ಹಣ ನೀಡುತ್ತೇವೆ ಎಂದು ಪ್ರಯಾಣ ಬೆಳೆಸಿದೆವು. ವಾಪಸ್ ಬರುವಾಗ ದುಡ್ಡು ನೀಡಿ ಧಾರವಾಡಕ್ಕೆ ಮುಟ್ಟಿದ್ದೇ ದೊಡ್ಡ ಅನುಭವ. 
–­ ಶಿವಕುಮಾರ ಓಲೇಕಾರ ಧಾರವಾಡ

*
ದಕ್ಷಿಣೆಗೂ ನೋಟು ಅಡ್ಡಿ ಬಂತು
ಆ ದಿನ ದೇವಸ್ಥಾನದಲ್ಲಿದ್ದೆವು. ನನ್ನ ಮಗ ಬೆಂಗಳೂರಿನಿಂದ ಫೋನ್ ಮಾಡಿ ‘500, 1000 ಮುಖಬೆಲೆಯ ನೋಟ್‌ಗಳು ರದ್ದಾಗಿವೆ. ನಿಮ್ಮಲ್ಲಿದ್ದ ಹಣವನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಿ’ ಎಂದು ತಿಳಿಸಿದ. ನಾವು ಹಿಂದಿನ ದಿನವಷ್ಟೇ ಮನೆ ಬಾಡಿಗೆ ಮತ್ತು ಮಗನ ವ್ಯಾಸಂಗ ವೆಚ್ಚಕ್ಕೆಂದು  15 ಸಾವಿರ  ಡ್ರಾ ಮಾಡಿದ್ದೆವು. ನಮ್ಮ ಬಳಿ ಇದ್ದ ₹1000 ನೋಟುಗಳನ್ನು ಮನೆ ಮಾಲೀಕರಿಗೆ ಕೊಡಲು ಹೋದರೆ ‘ಈ ದಿನ ಬೇಡ ಮುಂದಿನ ತಿಂಗಳು ಒಟ್ಟಿಗೆ ಸೇರಿ ಕೊಟ್ಟರೆ ಆಯಿತು’ ಎಂದರು.

ಅಂಗಡಿ ಮಾಲೀಕರಿಗೆ ದಿನಸಿಯ ಬಾಕಿ ಹಣ ಕೊಡಲು ಹೋದರೆ, ‘ಇರಲಿ ಬಿಡಿ ಸಾರ್ ನೀವೇನು ಅಪರಿಚಿತರಲ್ಲ ಮುಂದಿನ ತಿಂಗಳು ಕೊಟ್ಟರೆ ಅಯಿತು’ ಎಂದು ಹೇಳುವುದೇ!. ನಿಜಕ್ಕೂ ಆಶ್ಚರ್ಯವೆನಿಸಿತು. ಮನೆ ಮಾಲೀಕರ ಹೆಂಡತಿ ಮನೆಗೆ ಬಂದು ಅಕೌಂಟ್‌ಗೆ ಹಣ ಹಾಕಲು ತಿಳಿಸಿ ಖಾತೆ ನಂಬರ್ ನೀಡಿದರು. ಮರು ದಿನ  ಬ್ಯಾಂಕ್‌ಗೆ ಹೋಗಿ  ಹಣ ವರ್ಗಾವಣೆ  ಮಾಡಿದ್ದಾಯಿತು. 

ಬ್ಯಾಂಕ್ ಕ್ಯೂನಲ್ಲಿ ಏಜೆಂಟರುಗಳ ಹಾವಳಿ ಬೇರೆ. ₹1000 ವಿನಿಮಯಕ್ಕೆ ₹ 20 ಕಮೀಷನ್ ಎಂದು ಗುಟ್ಟಾಗಿ ಹೇಳುತ್ತಿದ್ದರು. ನಮ್ಮ ಬಳಿ ಉಳಿದಿದ್ದ 2 ಸಾವಿರಗಳ 500ರ ನೋಟುಗಳನ್ನು ಸಂಬಂಧಿಕರ ಮದುವೆಗಳಲ್ಲಿ ಉಡುಗೊರೆಯಾಗಿ ಕವರ್‌ಗಳಲ್ಲಿ ಹಾಕಿಕೊಟ್ಟೆವು.

ಮತ್ತೊಂದು ಘಟನೆ. ಸಂಬಂಧಿಯೊಬ್ಬರ ಮದುವೆಯ ಕಾರ್ಯಕ್ರಮದಲ್ಲಿ ಪೂಜೆ ಮಾಡಲು ಬಂದಿದ್ದ ಪುರೋಹಿತರು ದಕ್ಷಿಣೆಗಾಗಿ ನೀಡಿದ್ದ 1000 ನೋಟು ಬದಲಾವಣೆ ಮಾಡಿಕೊಡುವಂತೆ ಸೂಚಿಸಿ ಅಲ್ಲೇ ಕುಳಿತಿದ್ದರು.

ಮದುವೆ ಮನೆಯಲ್ಲಿ ಎಲ್ಲರ ಊಟ ಮುಗಿದರೂ ಪುರೋಹಿತರು ಮಾತ್ರ ಅಲ್ಲೇ ಕುಳಿತಿದ್ದನ್ನು ನೋಡಿ ಪ್ರಶ್ನಿಸಿದಾಗ ‘ಸಾವಿರ ರೂಪಾಯಿ ನೋಟು ಬದಲಾಯಿಸಿ ನೂರರ ನೋಟು ತರಲು ತಿಳಿಸಿದ್ದೆ ಆದರೆ ಇನ್ನೂ ಬರಲಿಲ್ಲ’ ಎಂದರಂತೆ. ನಂತರ ವಿಚಾರಿಸಿದಾಗ, ನೋಟು ವಿನಿಮಯಕ್ಕೆ ಹೋದ ಆಸಾಮಿ ಕಾಣೆಯಾಗಿದ್ದರು. ಬೇರೆಯವರಿಂದ ನೂರರ ನೋಟು ಪಡೆದು ಪುರೋಹಿತರಿಗೆ ಒಪ್ಪಿಸಿದ್ದಾಗಿತ್ತು.
–ಎಸ್‌. ಈ. ಗಾಯತ್ರಿ ಪಾಟೀಲ್ ಶಿವಮೊಗ್ಗ

*
ಕಷ್ಟದ ಬೆಲೆಯ ನೆನೆಯುವಂತೆ ಮಾಡಿತು
ನಮ್ಮ ಮನೆಯಲ್ಲಿ ತುಂಬಾ ಕಷ್ಟವಿತ್ತು. ಅಪ್ಪ ಅಮ್ಮ ನನ್ನನ್ನು ಮುದ್ದಿನಿಂದ ಸಾಕಿ ಬೆಳೆಸಿದ್ದರು. ನಾನು ಓದುತ್ತಿದ್ದಾಗ, ಅಪ್ಪ ನನಗೆ ಪ್ರತಿ ದಿನ ನೂರು ರೂಪಾಯಿ ಕೊಟ್ಟು ಕಾಲೇಜಿಗೆ ಕಳುಹಿಸುತ್ತಿದ್ದರು. ಅಪ್ಪ ಆ ಹಣ ಸಂಪಾದನೆಗೆ ತುಂಬಾ ಕಷ್ಟಪಡುತ್ತಿದ್ದರು. ಆದರೆ ಅಪ್ಪ ಪಡುತ್ತಿದ್ದ ಕಷ್ಟವನ್ನು ನಾನು ಲೆಕ್ಕಿಸುತ್ತಿರಲಿಲ್ಲ. ಒಂದು ದಿನ ಹಣ ನೀಡದಿದ್ದರೆ ನಾನು ಕಾಲೇಜಿಗೇ ಹೋಗುತ್ತಿರಲಿಲ್ಲ. ಪೂರ್ತಿ ದಿವಸ ಊಟವನ್ನೇ ಮಾಡುತ್ತಿರಲಿಲ್ಲ. ಆದರೂ ಅಪ್ಪ, ಅಮ್ಮ ನನ್ನ ಮೇಲೆ ಕೋಪಿಸಿಕೊಳ್ಳದೇ, ನಾನು ನೀಡುವ ಕಷ್ಟವನ್ನೆಲ್ಲಾ ಸಾವರಿಸಿಕೊಂಡು ಹೊಂದಾಣಿಕೆ ಮಾಡಿಕೊಂಡು ಪ್ರತಿ ದಿನ ದುಡ್ಡು ಕೊಡುತ್ತಿದ್ದರು. 

ನಾನು ಜಾಲಿಯಾಗಿ ತಿರುಗಾಡಿಕೊಂಡು ರಾತ್ರಿ ಮನೆಗೆ ಹೋಗುತ್ತಿದ್ದೆ. ರಾತ್ರಿಯೂ ಮನೆಯಲ್ಲಿ ಊಟ ಮಾಡುತ್ತಿರಲಿಲ್ಲ. ಈ ರೀತಿ ಜವಾಬ್ದಾರಿ ಇಲ್ಲದೇ ಬೆಳೆದವನು ನಾನು. ವಿದ್ಯೆಯಂತೂ ತಲೆಗೆ ಹತ್ತುತ್ತಿರಲಿಲ್ಲ. ದ್ವಿತೀಯ ಬಿ.ಎ ಗೆ ಕಾಲೇಜು ಬಿಟ್ಟೆ. ಅಪ್ಪ ಅಮ್ಮ ನನಗೆ ಎಷ್ಟು ದಿನದವರೆಗೆ ಸಾಕಿಯಾರು? ನನಗೂ 25 ವರ್ಷವಾಗಿತ್ತು. ಅಪ್ಪನಿಗೂ ವಯಸ್ಸಾಗಿತ್ತು.  ಸಂಬಂಧಿಕರ ಬಲವಂತದಿಂದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ.

ಕೆಲಸಕ್ಕೆ ಬೆಳಿಗ್ಗೆ ಹೋದರೆ ರಾತ್ರಿಯವರೆಗೂ ದುಡಿಯಬೇಕು. 2000 ರೂಪಾಯಿ ಸಂಬಳ. ಆಗಲೇ ಅಪ್ಪನ ಕಷ್ಟ ನನಗೆ ಅರಿವಾಗಿದ್ದು. ಕೆಲಸಕ್ಕೆ ಸೇರಿ ನನಗೆ ಮೊದಲ ಸಂಬಳ ಸಿಕಿದ್ದು ಗರಿ ಗರಿ ₹500 ನೋಟುಗಳು. ನೆನಪಿಗೆಂದು ಈ ನೋಟೊಂದನ್ನು ಹಾಗೇ ಕಾಪಾಡಿಕೊಂಡು ಬಂದಿದ್ದೆ. ಈ ಹಳೆಯ ₹500 ನೋಟುಗಳು ರದ್ದಾದ ಕಾರಣ, ಹಾಗೇ ಇಟ್ಟುಕೊಂಡಿದ್ದ ನೋಟುಗಳಿಗೆ ವಿದಾಯ ಹೇಳಲೇಬೇಕಾಗಿದೆ.
–ಸಂದೀಪ್ ಜಿ ಕಳಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT