ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಬಾಗಿಲು ತೆರೆದು

Last Updated 25 ಜನವರಿ 2017, 19:30 IST
ಅಕ್ಷರ ಗಾತ್ರ

ಮದ್ಯಪಾನವಿರೋಧಿ ಹೋರಾಟದಲ್ಲಿ ತೊಡಗಿಕೊಂಡಿರುವ ಹರ್ಮನ್ ಸಿಂಗ್ ಸಿಂಧು ಎಂಬ ಸಾಧಕನ ಕಥೆ ಇದು. 20 ವರ್ಷಗಳ ಹಿಂದೆ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ಮಾಡಬಾರದು ಎಂಬ ಆಂದೋಲನ ಆರಂಭಿಸಿದ್ದರು. ಅವರ ಸತತ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಸರ್ಕಾರ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲು ಮುಂದಾಗಿದೆ. ಹರ್ಮನ್ ಅವರ ಈ ಆಂದೋಲನದ ಹಿಂದೆ ಒಂದು ಮನಕಲಕುವ ಕಥೆ ಇದೆ!

ಭಾರತೀಯರಾದ ಹರ್ಮನ್ ಹುಟ್ಟಿ ಬೆಳೆದದ್ದು ಕೆನಡಾದಲ್ಲಿ. ಪದವಿ ಮುಗಿದ ಬಳಿಕ ಅಲ್ಲಿನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ ವೃತ್ತಿ ಜೀವನ ಆರಂಭಿಸಿದರು. ದೇಹ ಕೆನಡಾದಲ್ಲಿದ್ದರೂ ಮನಸು  ಭಾರತದತ್ತ ತುಡಿಯುತ್ತಿತ್ತು. 1996ರ ಅಕ್ಟೋಬರ್ ತಿಂಗಳಲ್ಲಿ ಸಂಬಂಧಿಕರನ್ನು ನೋಡಲು ಹರ್ಮನ್ ಹಿಮಾಚಲ ಪ್ರದೇಶಕ್ಕೆ ಬರುತ್ತಾರೆ. ಸಂಬಂಧಿಗಳನ್ನು ಕಂಡು ಅವರ ಜತೆಯಲ್ಲಿ ಬೆರೆತು ಸಂಭ್ರಮಿಸುತ್ತಾರೆ.

ಒಂದು ದಿನ   ಸಂಬಂಧಿಕರೊಟ್ಟಿಗೆ ಕಾರಿನಲ್ಲಿ ಇಟಾನಗರಕ್ಕೆ ತೆರಳುತ್ತಿದ್ದಾಗ ಅಪಘಾತಕ್ಕೆ ತುತ್ತಾಗುತ್ತಾರೆ. ಹರ್ಮನ್ ಅವರ ಬೆನ್ನು ಮೂಳೆ ಮುರಿದಿದ್ದರಿಂದ ಅವರ ಜೀವನ ಪೂರ್ತಿ ಗಾಲಿಕುರ್ಚಿಯಲ್ಲೇ ಕಳೆಯುವಂತಾಗಿದೆ. ಚಾಲಕ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎಂಬುದು ಹರ್ಮನ್‌ಗೆ ನಂತರ ಗೊತ್ತಾಯಿತು.

ಈ ಘಟನೆ ಬಳಿಕ ಹರ್ಮನ್ ಮತ್ತೆ ಕೆನಡಾಗೆ ಹೋಗಲಿಲ್ಲ. ಹೆದ್ದಾರಿಗಳಲ್ಲಿ ಸುಲಭವಾಗಿ ಮದ್ಯ ದೊರೆಯುವುದನ್ನು ಗಮನಿಸಿದ್ದರು. ನಂತರ, ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧಿಸುವ ಆಂದೋಲನ ಆರಂಭಿಸಿದರು. ಇದಕ್ಕೆ ನೂರಾರು ಸಂಘಟನೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ನೀಡಿದವು. ಅಂತಿಮವಾಗಿ ಹರ್ಮನ್ ತಂಡ ಸುಪ್ರೀಂ ಕೋರ್ಟ್ ಮೊರೆ ಹೋಗಿ ಮದ್ಯ ನಿಷೇಧಿಸುವಲ್ಲಿ ಯಶಸ್ವಿಯಾಯಿತು. ಜೀವನದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದೆ ಎಂಬ ಧನ್ಯತಾ ಭಾವ ನನ್ನಲ್ಲಿದೆ ಎನ್ನುತ್ತಾರೆ ಹರ್ಮನ್.
www.facebook.com/harman.sidhu.arrivesafe

*
ನಿಖಿಲ್ ಮತ್ತು ಮಧುವಂತಿ
ವಿಭಿನ್ನ ಆಲೋಚನೆಯ ಮೂಲಕ ಹೊಸ ಬದುಕು ಕಟ್ಟಿಕೊಂಡ ನಿಖಿಲ್ ಮತ್ತು ಮಧುವಂತಿಯ ಸಾಧನೆಯ ಕಥೆ ಇದು. ನಿಖಿಲ್ ಮತ್ತು ಮಧುವಂತಿ ಕೇರಳ ರಾಜ್ಯದವರು. ಇವರು ಪರಿಚಿತರಾಗಿದ್ದು ಫೈನ್ ಆರ್ಟ್ಸ್ ಓದುವಾಗ! ಪರಿಚಯದಿಂದ ಗೆಳೆತನವಾಗಿ, ಗೆಳೆತನ ಪ್ರೀತಿಗೆ ತಿರುಗಿ ಮದುವೆಯಾದ ಈ ಜೋಡಿ ‘ದಿ ಪೋಸ್ಟ್‌ಬಾಕ್ಸ್‌’ ಎಂಬ ಸ್ಟಾರ್ಟ್ಅಪ್ ಆರಂಭಿಸಿದೆ. ಎರಡು ವರ್ಷಗಳ ಹಿಂದಷ್ಟೇ ಆರಂಭವಾದ ದಿ ಪೋಸ್ಟ್‌ಬಾಕ್ಸ್‌ ವಹಿವಾಟು ಇಂದು 40 ಲಕ್ಷ ರೂಪಾಯಿ ದಾಟಿದೆ.

ನಿಖಿಲ್ ಮತ್ತು ಮಧುವಂತಿ ಆಚಾರ-ವಿಚಾರ, ಉಡುಗೆ-ತೊಡುಗೆ, ಆಹಾರ ಸೇರಿದಂತೆ ಬದುಕಿನ ಎಲ್ಲ ಸ್ತರಗಳಲ್ಲೂ ದೇಶಿ ಸಂಸ್ಕೃತಿ ಇರಬೇಕು ಎಂಬ ನಿಲುವಿನವರು! ಭಾರತೀಯರ ಬದುಕು ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ದಿ ಪೋಸ್ಟ್‌ಬಾಕ್ಸ್‌ ಪ್ರಾರಂಭ ಮಾಡಲಾಯಿತು ಎನ್ನುತ್ತಾರೆ ನಿಖಿಲ್.

ದೇಶದಾದ್ಯಂತ ಸುಮಾರು 300 ಕಲಾವಿದರು ಕೆಲಸ ಮಾಡುತ್ತಿದ್ದು, ಎಲ್ಲ ಧರ್ಮ ಮತ್ತು ಜಾತಿಗಳ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳು ಮತ್ತು ಗೃಹಬಳಕೆಯ ವಸ್ತುಗಳು ದಿ ಪೋಸ್ಟ್‌ಬಾಕ್ಸ್‌ನಲ್ಲಿ ದೊರೆಯುತ್ತವೆ. ಬ್ಯಾಗ್, ಮಗ್, ಟೀ ಲೋಟ, ಸಾಸರ್, ಆಟಿಕೆಗಳು, ಆಲಂಕಾರಿಕ ಕಲಾಕೃತಿಗಳು, ಏಸು, ರಾಮ, ಕೃಷ್ಣರ ಮೂರ್ತಿಗಳು, ಶಿಲ್ಪಗಳು, ಪೇಂಟಿಂಗ್ ಸೇರಿದಂತೆ ಎಲ್ಲ ವಿಧವಾದ ಕಲಾಕೃತಿಗಳನ್ನು ದಿ ಪೋಸ್ಟ್‌ಬಾಕ್ಸ್‌ನಲ್ಲಿ ನೋಡಬಹುದು ಎನ್ನುತ್ತಾರೆ ಮಧುವಂತಿ.

ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ ಕಲಾಕೃತಿಗಳನ್ನು ರಚನೆ ಮಾಡಲಾಗುತ್ತದೆ. ಗ್ರಾಹಕರು ಬಯಸಿದ ಕಲಾಕೃತಿಗಳು ಮತ್ತು ಉಡುಗೊರೆಗಳನ್ನು ಅವರು ಕೇಳಿದ ಸಮಯಕ್ಕೆ ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ದಿ ಪೋಸ್ಟ್‌ಬಾಕ್ಸ್‌ ಮಾಡುತ್ತಿದೆ. ಬಂಗಾಳ, ಕೇರಳ, ತಮಿಳುನಾಡು ಮತ್ತು ರಾಜಸ್ತಾನದಲ್ಲಿ ದಿ ಪೋಸ್ಟ್‌ಬಾಕ್ಸ್‌ ಉತ್ಪನ್ನಗಳು ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲ ಮಹಾನಗರಗಳಿಗೂ ವಹಿವಾಟನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ನಿಖಿಲ್ ಹೇಳುತ್ತಾರೆ. www.thepostbox.in/

*
ವಿಥಿಕಾ ಯಾದವ್
ಜಗತ್ತಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವವರು ಮಹಿಳೆಯರು! ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಅಸಮಾನತೆ, ಹೀಗೆ ಶೋಷಣೆಯ ಕೂಪದಲ್ಲಿ ಸಿಲುಕಿ ನರಳುತ್ತಿರುವ ಮಹಿಳೆಗೆ ವಿಮೋಚನೆ ಇಲ್ಲವೇನೋ ಎಂದು ನೊಂದು ನುಡಿಯುತ್ತಾರೆ ವಿಥಿಕಾ ಯಾದವ್.

ರಾಜಸ್ತಾನದವರಾದ 36ರ ಹರೆಯದ ವಿಥಿಕಾ ಯಾದವ್ ಮಾನವ ಹಕ್ಕುಗಳ ಹೋರಾಟಗಾರ್ತಿ. ವಿದೇಶದಲ್ಲಿ ವ್ಯಾಸಂಗ ಮಾಡಿ, ನೆದರ್ಲೆಂಡ್ ರೇಡಿಯೊ ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸೇವಾಕರ್ತೆಯಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಭಾರತದಲ್ಲಿ ಮಹಿಳಾ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಲವ್ ಮ್ಯಾಟರ್ಸ್ ಎಂಬ ವೆಬ್ ಪೋರ್ಟಲ್ ವೇದಿಕೆ ತೆರೆದಿರುವ ವಿಥಿಕಾ, ನೊಂದ ಯುವತಿಯರು ಮತ್ತು ಮಹಿಳೆಯರಿಗೆ ಸಾಂತ್ವಾನ ಹೇಳುವ ಮೂಲಕ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ನೊಂದ ಮಹಿಳೆಯರು ಲವ್ ಮ್ಯಾಟರ್ಸ್ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ತಮ್ಮ ಸಮಸ್ಯೆಗಳನ್ನು ವಿಥಿಕಾ ಸೇರಿದಂತೆ ಕಾನೂನು ತಜ್ಞರು, ಆಪ್ತಸಮಾಲೋಚಕರು ಮತ್ತು ಮಾನಸಿಕ ತಜ್ಞರ ಜೊತೆ ಹಂಚಿಕೊಳ್ಳಬಹುದು. ತಜ್ಞರು ಸಮಸ್ಯೆಗಳನ್ನು ಆಲಿಸಿದ ಬಳಿಕ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸುವುದರ ಜತೆಗೆ ಕಾನೂನು ನೆರವನ್ನು ನೀಡುತ್ತಾರೆ.

ಪ್ರತಿ ನಿತ್ಯ ಹತ್ತಾರು ಮಹಿಳೆಯರು ಲವ್ ಮ್ಯಾಟರ್ಸ್ ವೇದಿಕೆಗೆ ಬಂದು ಸಮಸ್ಯೆಗಳನ್ನು ತೋಡಿಕೊಳ್ಳುತ್ತಾರೆ. ಇವರಲ್ಲಿ ಪ್ರೀತಿಸಿ ಮೋಸ ಹೋದವರೇ ಹೆಚ್ಚು ಎನ್ನುತ್ತಾರೆ ವಿಥಿಕಾ.

ಕೌಟುಂಬಿಕ ದೌರ್ಜನ್ಯ ಮತ್ತು ವಿಚ್ಛೇದನ ಪ್ರಕರಣಗಳಿಗೆ ಕಾನೂನು ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಆದರೆ ಪ್ರೇಮ ಪ್ರಕರಣಗಳಲ್ಲಿ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಕಾನೂನು ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ವಿಥಿಕಾ ನುಡಿಯುತ್ತಾರೆ. ಒಟ್ಟಿನಲ್ಲಿ ವಿಥಿಕಾ ನೊಂದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಮೂಲಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
 lovematters.in/en

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT