ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾ ವಸೂಲಿ ಮತ್ತು ಹೊಸ ಸಿನಿಮಾ

Last Updated 25 ಜನವರಿ 2017, 19:30 IST
ಅಕ್ಷರ ಗಾತ್ರ

ಕಾಲೇಜು ದಿನಗಳಲ್ಲಿ ಅದ್ಯಾಕೋ ಏನೋ ಪಾಕೆಟ್ ಮನಿ ಸಾಲುತ್ತಲೇ ಇರಲಿಲ್ಲ. ಇದು ನನ್ನೊಬ್ಬನ ಸಮಸ್ಯೆ ಇರಬಹುದಾ? ಎಂದು ಯೋಚಿಸಿದರೆ, ಊಹುಂ ನನ್ನ ಜೊತೆಯಲ್ಲಿದ್ದ ಐದು ಮಂದಿ ಗೆಳೆಯರದೂ ಇದೇ ಪಡಿಪಾಟಲು.

ಊರಿನಿಂದ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಕಾಲೇಜಿಗೆ ಹೋಗಿ ಬರಲು ದಿನವೊಂದಕ್ಕೆ ವಿದ್ಯಾರ್ಥಿ ರಿಯಾಯಿತಿಯಂತೆ 6 ರೂಪಾಯಿಗಳು ಸಾಕಿತ್ತು. ಮನೆಯಲ್ಲೋ 10 ರೂಪಾಯಿಗಿಂತ ಒಂದು ರೂಪಾಯಿಯೂ ಜಾಸ್ತಿ ಕೊಡುತ್ತಿರಲಿಲ್ಲ. ಆ ಫೀಜು ಈ ಫೀಜು ಎಂದು ಸುಳ್ಳು ಹೇಳಿದರೂ ಅದರಿಂದ ಸಿಗುವ ಎಕ್ಷ್ಟ್ರಾ ಐದೋ ಹತ್ತೋ ರೂಪಾಯಿ ಬಾಬಣ್ಣನ ಅಂಗಡಿಯಲ್ಲಿ ಅರ್ಧ ಪ್ಲೇಟ್ ಚಿತ್ರನ್ನಾಕ್ಕೂ ಸರಿ ಹೋಗದೆ ಜೇಬು ಮತ್ತೆ ಖಾಲಿ ಹೊಡೆಯುತ್ತಿತ್ತು.

ಹೀಗಿರಬೇಕಾದರೆ ಕಾಲೇಜಿನಿಂದ 15 ಕಿಲೋಮೀಟರ್ ದೂರದ ತೀರ್ಥಹಳ್ಳಿಯಲ್ಲಿ ಫಿಲ್ಮ್ ನೋಡಬೇಕೆನ್ನುವ ಖಯಾಲಿ ನಮ್ಮೊಲೊಬ್ಬನಿಗೆ ಮೂಡಿತು. ಅವನ ಐಡಿಯಾ ನಮಗೂ ಸರಿ ಕಂಡಿತು. ಹುಡುಗಿಯರ ಎದುರಿಗೆ ಕಾಲೇಜಿಗೆ ಬಂಕ್ ಹಾಕಿ ಸಿನಿಮಾ ನೋಡಿಕೊಂಡು ಬರುವುದು ಅಲ್ಲದೆ ಅವರೆದುರಿಗೆ ಥರೇವಾರಿ ಡೈಲಾಗ್ ಹೊಡೆದು ಹೀರೊ ಅನಿಸಿಕೊಳ್ಳುವುದನ್ನು ಯಾರು ತಾನೇ ವಿರೋಧಿಸಲು ಸಾಧ್ಯ.

ಆದರೆ ನಿಜವಾದ ಸಮಸ್ಯೆ ಎದುರಾದದ್ದು ಹಣವನ್ನು ಒಟ್ಟುಗೂಡಿಸುವುದರಲ್ಲಿ. ನಮ್ಮ ಪಾಕೇಟ್ ಮನಿಯೋ ದೇವರಿಗೇ ಪ್ರೀತಿ!. ಇಂತಹ ಸಂದರ್ಭದಲ್ಲಿ ಸ್ನೇಹಿತನೊಬ್ಬ ಖತರ್ನಾಕ್ ಐಡಿಯಾ ಉಸುರಿದ. ಕಾಲೇಜು ಹುಡುಗಿಯರಿಂದಲೇ ಹಣಹೊಂದಿಸುವುದೆಂದು. ಅಂದ ಹಾಗೆ ಕಾಲೇಜಿನ ಹಿಂಬದಿಯ ನಾಗರಬನದಲ್ಲಿ ಕಾರ್ತಿಕ ದೀಪೋತ್ಸವ ನಡೆಯುವುದಿತ್ತು.

ನಾವು ಸ್ನೇಹಿತರು ಮೊದಲೇ ಅಂದುಕೊಂಡಂತೆ ದೀಪೋತ್ಸವಕ್ಕೆ ಚಂದಾವಸೂಲಿ ಶುರು ಮಾಡಿದೆವು. ದೇವರು ಎಂದ ಮೇಲೆ ಹುಡುಗಿಯರಿಗೆ ಅಧಿಕ ಭಯ ಭಕ್ತಿ. ಇದನ್ನೇ ಉಪಯೋಗಿಸಿಕೊಂಡು 300 ರೂಪಾಯಿಗಳ ಆಸುಪಾಸು ಚಂದಾವಸೂಲಿ ಮಾಡಿದೆವು. ಕೆಲವು ಹುಡುಗರೂ ಹೌದಿರಬಹುದೆಂದು ಅಷ್ಟೋ ಇಷ್ಟೋ ಕೊಟ್ಟರು.

ದೇವರ ಹೆಸರಿನ ಹಣವಾದ್ದರಿಂದ ಹೆದರಿಕೆಯೂ ಇತ್ತೆನ್ನಿ. ಆದರೆ ವಯಸ್ಸು ಅಂಥದ್ದು. ನಾವೆಲ್ಲಾ ಸೀದಾ ನಾಗರಬನಕ್ಕೆ ಹೋಗಿ ಹುಂಡಿಗೆ 100 ರೂಪಾಯಿ ತಪ್ಪು ಕಾಣಿಕೆಯನ್ನಾಗಿ ಹಾಕಿ ತೀರ್ಥಹಳ್ಳಿಯ ಬಸ್ಸನ್ನೇರಿ ನಮ್ಮ ಪಾಕೆಟ್ ಮನಿಯನ್ನೂ ಕೂಡಿಸಿ ‘ನಿನಗಾಗಿ’ ಚಿತ್ರವನ್ನು ನೋಡಿಕೊಂಡು ಬಂದೆವು.

ಅದಷ್ಟೆ ಅಲ್ಲ, ಆ ಚಿತ್ರದ ಪ್ರೇರಣೆಯಿಂದ ಪ್ರೀತಿ ಪ್ರೇಮಗಳು ಇನ್ನಿಲ್ಲದಂತೆ ಕಾಡಲು ಶುರುವಾಗಿ, ಕಾಲೇಜಿನ ವಾರದ ಶಾರದ ಪೂಜೆಗೆ, ಗಣಪತಿ ಹಬ್ಬಕ್ಕೆ, ಲೆಕ್ಚರ್ ಇಲ್ಲವೆಂದು ಮುಷ್ಕರಕ್ಕೆ, ವೆಲ್ ಕಮ್ ಹಾಗೂ ಸೆಂಡಾಫ್‌ ಡೇ ಹೀಗೆ ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಂಥ ಸಂದರ್ಭಗಳಲ್ಲಿ ಚಂದಾ ವಸೂಲಿ ಮಾಡಿ ಶುಕ್ರವಾರ ಹೊಸ ಸಿನಿಮಾ ನೋಡಿಬರುತ್ತಿದ್ದೆವು.

ಕೊನೆ ಕೊನೆಗೆ ಉಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ,ಲೆಕ್ಚರರ್‌ಗಳಿಗೆ ನಮ್ಮ ಬಗ್ಗೆ ಅನುಮಾನ ಮೂಡಲು ಪ್ರಾರಂಭವಾಯಿತು. ಆದರೂ ಹೇಗೋ ಅಡ್ಜಸ್ಟ್ ಮಾಡಿಕೊಂಡು ಅವರಿವರ ಬಳಿ ಲೈಟಾಗಿ ಉಗಿಸಿಕೊಂಡು ಎರಡು ವರ್ಷಗಳ ಪಿಯುಸಿ ಮುಗಿಸಿದೆವು. ಅಂತೂ ಕೊನೆಯ ಸೆಂಡಾಫ್ ಕಾರ್ಯಕ್ರಮದಲ್ಲಿ ಅನಿಸಿಕೆಯಾಗಿ ಇವೆಲ್ಲವನ್ನು ನಾನು ಹೇಳಿದಾಗ ಕಾಲೇಜು ತೊರೆದು ಹೊರಡಲಿದ್ದ ಸಹಪಾಠಿಗಳ ಅಳು ಮೊಗದಲ್ಲೂ ಸಂತಸವರಳಿ ನಗೆಯ ಬುಗ್ಗೆಯೊಂದು ಎದ್ದಿತ್ತು. ಪ್ರಾಂಶುಪಾಲರು ಮತ್ತು ಉಪನ್ಯಾಸಕರು ನಮ್ಮನ್ನು ಕಳ್ಳರೆಂಬಂತೆ ನೋಡಿ ಮುಸಿನಕ್ಕರು.

ಚಂದಾವಸೂಲಿಯ ಮೂಲಕ ಹೊಸ ಸಿನಿಮಾಗಳನ್ನು ನೋಡಿಯೂ, ಇನ್ನಿಲ್ಲದೆ ಕೀಟಲೆ ಮಾಡಿಯೂ ಉತ್ತಿರ್ಣರಾಗಿದ್ದು ನನಗೆ ಇನ್ನೂ ಅಚ್ಚರಿಯಂತೆ ಆಗಾಗ್ಗೆ ಕಾಡುತ್ತಿರುತ್ತದೆ..
–ರಮೇಶ್ ನೆಲ್ಲಿಸರ ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT